ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಒಳ ಮೀಸಲಾತಿ ಜಾರಿ ಆಗದಿದ್ದರೆ ಉಗ್ರ ಹೋರಾಟ: ಸರ್ಕಾರಕ್ಕೆ ವಿಜಯೇಂದ್ರ ಎಚ್ಚರಿಕೆ

On: March 4, 2026 3:00 PM
Follow Us:

ಬೆಂಗಳೂರು: ರಾಜ್ಯದಲ್ಲಿ ಆಡಳಿತ ಸಂಪೂರ್ಣವಾಗಿ ದಿಕ್ಕುತೋಚದ ಸ್ಥಿತಿಗೆ ತಲುಪಿದೆ. ಆಡಳಿತ ಪಕ್ಷದ ಶಾಸಕರೇ ಅಸಮಾಧಾನದಿಂದ ದಂಗೆ ಏಳುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ತೀವ್ರ ವಾಗ್ದಾಳಿ ನಡೆಸಿದರು.

ಮಲ್ಲೇಶ್ವರದಲ್ಲಿರುವ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಳ ಮೀಸಲಾತಿಯನ್ನು ಪರಿಗಣಿಸಿ ರಾಜ್ಯದಲ್ಲಿನ ಎಲ್ಲ ಖಾಲಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.

“ಮೀಸಲಾತಿ ಪ್ರಮಾಣವನ್ನು ಶೇ.50ರಿಂದ ಶೇ.56ಕ್ಕೆ ಏರಿಸಲಾಗಿದೆ. ಇದು ಕೇವಲ ಅಂಕಿ-ಅಂಶಗಳ ಆಟವಾಗಬಾರದು. ನೀವು 50 ಸಾವಿರ ಹುದ್ದೆ ಭರ್ತಿ ಮಾಡುತ್ತೀರಾ, ಒಂದು ಲಕ್ಷ ಹುದ್ದೆ ಭರ್ತಿ ಮಾಡುತ್ತೀರಾ ಎಂಬುದು ನಿಮ್ಮ ಇಚ್ಛೆ. ಆದರೆ ಖಾಲಿ ಇರುವ ಪ್ರತಿಯೊಂದು ಹುದ್ದೆಯನ್ನೂ ಭರ್ತಿ ಮಾಡಿ, ಶೋಷಿತ–ಪೀಡಿತ ಸಮುದಾಯಗಳಿಗೆ ನ್ಯಾಯ ನೀಡುವುದು ನಿಮ್ಮ ಕರ್ತವ್ಯ,” ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಸರ್ಕಾರ ಶೇ.56 ಒಳ ಮೀಸಲಾತಿ ನೀಡುವ ಮೂಲಕ ಎಲ್ಲಾ ಸಮುದಾಯಗಳಿಗೆ ನ್ಯಾಯ ಒದಗಿಸುವ ಪ್ರಯತ್ನ ಮಾಡಿತ್ತು. ಅದರ ಆಧಾರದ ಮೇಲೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಯುವಜನತೆಗೆ ಉದ್ಯೋಗದಲ್ಲಿ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪದೇಪದೇ ಶೋಷಿತ ಸಮುದಾಯಗಳ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಿದ್ದಾರೆ. ನ್ಯಾಯಾಲಯದ ನೆಪ ಹೇಳಿ ಉದ್ಯೋಗಾವಕಾಶಗಳನ್ನು ತಡೆಹಿಡಿಯುವುದು ಅನ್ಯಾಯಕರ ಕ್ರಮ ಎಂದು ಅವರು ಕಿಡಿಕಾರಿದರು. “ಪರಿಶಿಷ್ಟ ಜಾತಿ–ಪಂಗಡಗಳ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ದರೆ ತಕ್ಷಣ ನೇಮಕಾತಿ ಪ್ರಕ್ರಿಯೆ ಆರಂಭಿಸಿ,” ಎಂದು ಒತ್ತಾಯಿಸಿದರು.

“ಈ ಸರ್ಕಾರ ತೊಟ್ಟಿಲು ತೂಗುವ ಜೊತೆಗೇ ಮಗುವನ್ನು ಚಿವುಟುವ ಕೆಲಸ ಮಾಡುತ್ತಿದೆ ಎಂದು ತೀವ್ರ ಟೀಕೆ ವ್ಯಕ್ತಪಡಿಸಿದರು.

ಹಳೆಯ ಮೀಸಲಾತಿ ಪ್ರಮಾಣದಡಿ ನೇಮಕಾತಿಗೆ ಮುಂದಾಗಿರುವ ಸರ್ಕಾರ ರಾಜ್ಯದಲ್ಲಿ ಅಶಾಂತಿ ಉಂಟುಮಾಡಲು ಹೊರಟಂತಿದೆ. ಒಳ ಮೀಸಲಾತಿ ಜಾರಿಗೊಳಿಸದೇ ನೇಮಕಾತಿ ಮಾಡಿದರೆ ಮುಂದೆ ಸಂಭವಿಸುವ ಪರಿಣಾಮಗಳಿಗೆ ಸರ್ಕಾರವೇ ಹೊಣೆ ಹೊರುವಂತಾಗುತ್ತದೆ ಎಂದು ಎಚ್ಚರಿಸಿದರು.

“ನೀವು ಎಷ್ಟು ದಿನ ಮುಖ್ಯಮಂತ್ರಿ ಸ್ಥಾನದಲ್ಲಿ ಇರುತ್ತೀರೋ ಗೊತ್ತಿಲ್ಲ. ಆದರೆ ಅಹಿಂದ ಸಮುದಾಯದ ಬೆಂಬಲದಿಂದ ಅಧಿಕಾರಕ್ಕೇರಿದ ಮುಖ್ಯಮಂತ್ರಿಗಳು ಅದೇ ಸಮುದಾಯದ ಸಹನೆಯನ್ನು ಪರೀಕ್ಷಿಸಬಾರದು,” ಎಂದು ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಸಾವಿರಾರು ಯುವಕರು ವಯೋಮಿತಿ ಮೀರುವ ಭೀತಿಯಲ್ಲಿದ್ದಾರೆ. ನ್ಯಾಯಕ್ಕಾಗಿ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಅವರ ಸಹನೆಯ ಕಟ್ಟೆ ಒಡೆಯುವ ಮುನ್ನ ಸರ್ಕಾರ ಎಚ್ಚರಗೊಳ್ಳಬೇಕು ಎಂದು ಹೇಳಿದರು.

ಇದೇ 6ರಿಂದ ಅಧಿವೇಶನ ಆರಂಭವಾಗುತ್ತಿದ್ದು, ಬೆಂಗಳೂರಿನಲ್ಲಿ ಸರಣಿ ಪ್ರತಿಭಟನೆಗಳು ಪ್ರಾರಂಭವಾಗಲಿವೆ ಎಂದು ವಿಜಯೇಂದ್ರ ಘೋಷಿಸಿದರು. “ನುಡಿದಂತೆ ನಡೆದ ಸರ್ಕಾರ ಯಾವುದೇ ಭರವಸೆ ಈಡೇರಿಸಿಲ್ಲ,” ಎಂದು ಆರೋಪಿಸಿದರು.

ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹೋರಾಟಕ್ಕೆ ಸಜ್ಜಾಗಿದ್ದಾರೆ. ಅತಿಥಿ ಉಪನ್ಯಾಸಕರಿಗೆ ನೀಡಿದ ಭರವಸೆ ಈಡೇರಿಸಿಲ್ಲ. ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ನೌಕರರಿಗೆ ಪಿಎಫ್ ಹಾಗೂ ಗ್ರಾಚ್ಯುಟಿ ಪಾವತಿಸದೇ ಅನ್ಯಾಯ ಮಾಡಲಾಗಿದೆ. ಸರ್ಕಾರಿ ಆಸ್ಪತ್ರೆಗಳ ವೈದ್ಯರು ಕೂಡ ಪ್ರತಿಭಟನೆಗೆ ಸಿದ್ಧರಾಗಿದ್ದಾರೆ. 108 ಆಂಬುಲೆನ್ಸ್ ಸೇವೆ ಕುಸಿದಿದೆ, ನೌಕರರಿಗೆ ಸಂಬಳ ಬಾಕಿಯಾಗಿದೆ ಎಂದು ವಿವರಿಸಿದರು.

ಸುಮಾರು 34 ತಿಂಗಳಿನಿಂದ ಸಣ್ಣ ಗುತ್ತಿಗೆದಾರರಿಗೆ 40–45 ಸಾವಿರ ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿರುವ ಸರ್ಕಾರದ ವಿರುದ್ಧ ಈಗಾಗಲೇ ಆತ್ಮಹತ್ಯೆ ಪ್ರಕರಣಗಳೂ ನಡೆದಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಬೆಂಗಳೂರಿನ ಕಸದ ಸಮಸ್ಯೆ ತೀವ್ರವಾಗಿದೆ. ಪೌರಕಾರ್ಮಿಕರ ಹೋರಾಟವೂ ಭುಗಿಲೆದ್ದಿದೆ. ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ ಎಂದು ಅವರು ಆರೋಪಿಸಿದರು.

“ಆಡಳಿತ ಪಕ್ಷದ ಶಾಸಕರನ್ನೇ ಸಮಾಧಾನಪಡಿಸಲು ವಿದೇಶ ಪ್ರವಾಸ ವ್ಯವಸ್ಥೆ ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದರೆ ಆಡಳಿತ ಕುಸಿದಿದೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇರೆ ಇಲ್ಲ. ಅಭಿವೃದ್ಧಿ ಸ್ಥಗಿತಗೊಂಡಿದೆ, ಕಾನೂನು ಸುವ್ಯವಸ್ಥೆ ಹಾಳಾಗಿದೆ. ಆಡಳಿತ ಪಕ್ಷದ ಶಾಸಕರೇ ದಂಗೆ ಏಳುತ್ತಿದ್ದಾರೆ – ಇದು ವಾಸ್ತವಿಕ ಸತ್ಯ,” ಎಂದು ಹೇಳಿದರು.

ಕೇಂದ್ರ ಸರ್ಕಾರವನ್ನು ದೂರುವುದನ್ನು ಬಿಟ್ಟು ರಾಜ್ಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಮುಖ್ಯಮಂತ್ರಿಗಳಿಗೆ ಅವರು ಸವಾಲು ಹಾಕಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ. ಶ್ರೀರಾಮುಲು, ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಹಾಗೂ ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ್ ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Read more

ಯುವಕರು ಸಂಘಟಿತರಾಗಿ ನಾರಾಯಣ ಗುರುಗಳ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲಿ: ಸಚಿವ ಮಧು ಬಂಗಾರಪ್ಪ

ಧರ್ಮ, ಪರಂಪರೆ ಹಾಗೂ ಮಠಮಾನ್ಯಗಳ ಸಂರಕ್ಷಣೆಗೆ ಸಂಘಟಿತ ಪ್ರಯತ್ನ ಅಗತ್ಯ: ಭಿನ್ನಾಭಿಪ್ರಾಯ ಬದಿಗಿಟ್ಟು ಸಮಾಜದ ಹಿತಕ್ಕಾಗಿ ಒಂದಾಗ ಬೇಕು: ವೀರಶೈವ ಲಿಂಗಾಯತ ಸಮಾಜದ ಒಗ್ಗಟ್ಟು ಕಾಪಾಡುವುದು ಎಲ್ಲರ ಜವಾಬ್ದಾರಿ: ಬಿ.ವೈ. ವಿಜಯೇಂದ್ರ

ಭಕ್ತಿಯ ಮಹಾಪ್ರವಾಹದಲ್ಲಿ ಶಿವಮೊಗ್ಗ: ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಗೆ ಲಕ್ಷಾಂತರ ಜನರ ಸಾಕ್ಷಿ! ಕಾಲಿಡಲೂ ಜಾಗವಿಲ್ಲ, ಬಾನಂಗಳದಲ್ಲಿ ಜೈಕಾರ! ಶಿವಮೊಗ್ಗದಲ್ಲಿ ಮೈ ನವಿರೇಳಿಸಿದ ಗಣೇಶೋತ್ಸವದ ಅದ್ಧೂರಿ ಮೆರವಣಿಗೆ!

ಸೆ.26-27ರಂದು ಬೆಂಗಳೂರಿನಲ್ಲಿ ವೀರಶೈವ ಲಿಂಗಾಯತ ಧರ್ಮ ಸಂರಕ್ಷಣಾ ಮಹಾಸಮ್ಮೇಳನ: ಪಂಚಪೀಠಾಧೀಶರ ಸಾನ್ನಿಧ್ಯ

ಶಿವಮೊಗ್ಗ ಹಿಂದೂ ಗಣಪತಿ ಮೆರವಣಿಗೆಗೆ ಭಕ್ತಿಯ ಸಾಥ್: ಐದು ಸಾವಿರ ಭಕ್ತರಿಗೆ ಅನ್ನದಾಸೋಹ: ಮೂರನೇ ವರ್ಷವೂ ಸೇವಾ ಪರಂಪರೆ ಮುಂದುವರಿಸಿದ ಎಸ್‌ಆರ್‌ವಿ ಎಂಟರ್‌ಪ್ರೈಸಸ್ ಗೆಳೆಯರ ಬಳಗ

50 ವರ್ಷಗಳ ದಾಂಪತ್ಯ ಜೀವನ ಸಮಾಜಕ್ಕೆ ಮಾದರಿ: ಸಂಸ್ಕಾರ, ಶಿಕ್ಷಣದೊಂದಿಗೆ ಬದುಕು ಕಟ್ಟಿಕೊಳ್ಳಿ: ತಾಯ್ನಾಡಿಗೆ ಮರಳಿ ಸೇವೆ ಸಲ್ಲಿಸಿ ಎಂದು ವಿದ್ಯಾರ್ಥಿಗಳಿಗೆ ಕೆ.ಈ. ಕಾಂತೇಶ್ ಕರೆ

Leave a Comment