ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಪರಿಶಿಷ್ಟ ಜಾತಿ–ವರ್ಗಗಳಿಗೆ ಘೋಷಣೆ ಉಚಿತ, ದೋಖಾ ಖಚಿತ: ನಂಬಿದವರ ಸರ್ವನಾಶ ನಿಶ್ಚಿತ – ಛಲವಾದಿ ನಾರಾಯಣಸ್ವಾಮಿ ಟೀಕೆ

On: March 7, 2026 3:25 PM
Follow Us:

ಬೆಂಗಳೂರು: ರಾಜ್ಯ ಸರ್ಕಾರ ಮಂಡಿಸಿದ 2026–27ನೇ ಸಾಲಿನ ಬಜೆಟ್‌ ಕುರಿತು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಬಜೆಟ್ ಮೂಲಕ ಇಡೀ ರಾಜ್ಯದ ಜನರಿಗೆ “ಮೂಗಿಗೆ ತುಪ್ಪ ಸವರುವುದು ಉಚಿತ, ಎಲ್ಲರ ತಲೆ ಮೇಲೆ ಸಾಲ ಖಚಿತ, ಜನರಿಗೆ ಸಂಕಷ್ಟ ನಿಶ್ಚಿತ” ಎಂಬ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಆಕ್ಷೇಪಿಸಿದರು.

ಮಲ್ಲೇಶ್ವರದಲ್ಲಿರುವ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾದ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಜನಸಾಮಾನ್ಯರ ನಿರೀಕ್ಷೆಗಳನ್ನು ಭಂಗಪಡಿಸಿದೆ ಎಂದು ಹೇಳಿದರು. ಕಾಂಗ್ರೆಸ್ ಸರ್ಕಾರ “ಉಚಿತ, ಖಚಿತ, ನಿಶ್ಚಿತ” ಎಂಬ ಘೋಷವಾಕ್ಯದಡಿ ಅಧಿಕಾರಕ್ಕೆ ಬಂದಿತ್ತು. ಆದರೆ ಈಗ ಅದೇ ಘೋಷವಾಕ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ “ಘೋಷಣೆ ಉಚಿತ, ದೋಖಾ ಖಚಿತ, ನಂಬಿದವರ ಸರ್ವನಾಶ ನಿಶ್ಚಿತ” ಎನ್ನುವಂತಾಗಿದೆ ಎಂದು ಅವರು ಟೀಕಿಸಿದರು.

ಎಸ್‌ಇಪಿ–ಟಿಎಸ್‌ಪಿ ನಿಧಿ ಬಳಕೆ ಬಗ್ಗೆ ಪ್ರಶ್ನೆ

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗಾಗಿ ಎಸ್‌ಇಪಿ ಮತ್ತು ಟಿಎಸ್‌ಪಿ ಯೋಜನೆಗಳಡಿ ಸರ್ಕಾರ ಮೀಸಲಿಟ್ಟ ಹಣದ ಬಳಕೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಅವರು ಎತ್ತಿದರು. 2023–24ನೇ ಸಾಲಿನಲ್ಲಿ 30,930 ಕೋಟಿ ರೂ., 2024–25ರಲ್ಲಿ 39,122 ಕೋಟಿ ರೂ., 2025–26ರಲ್ಲಿ 42,017 ಕೋಟಿ ರೂ. ಮತ್ತು 2026–27ರಲ್ಲಿ 44,632 ಕೋಟಿ ರೂ. ಮೀಸಲಿಟ್ಟಿರುವುದಾಗಿ ಸರ್ಕಾರ ಘೋಷಿಸಿದೆ. ಒಟ್ಟು ನಾಲ್ಕು ವರ್ಷಗಳಲ್ಲಿ 1,56,701 ಕೋಟಿ ರೂ. ಮೀಸಲಿಟ್ಟಿದ್ದಾಗಿ ಹೇಳಲಾಗುತ್ತಿದೆ ಎಂದು ಅವರು ವಿವರಿಸಿದರು.

ಆದರೆ ಈ ಮೊತ್ತದ ಪೈಕಿ ಶೇ.50ರಷ್ಟು ಹಣವನ್ನು 7C ಅಡಿಯಲ್ಲಿ ಸಾರ್ವಜನಿಕ ಕಾಮಗಾರಿಗಳ ಇಲಾಖೆ, ನೀರಾವರಿ ಇಲಾಖೆ ಸೇರಿದಂತೆ ಇತರ ಇಲಾಖೆಗಳ ಕಾಮಗಾರಿಗಳಿಗೆ ವರ್ಗಾಯಿಸಲಾಗಿದೆ. ಉಳಿದ ಹಣದಲ್ಲೂ ದೊಡ್ಡ ಪ್ರಮಾಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಲಾಗಿದೆ. ಇದುವರೆಗೆ ಸುಮಾರು 53,059 ಕೋಟಿ ರೂ. ಗ್ಯಾರಂಟಿ ಯೋಜನೆಗಳಿಗೆ ತೆಗೆದುಕೊಳ್ಳಲಾಗಿದೆ ಎಂದು ಅವರು ಆರೋಪಿಸಿದರು.

ಎಸ್‌ಸಿ–ಎಸ್‌ಟಿ ಕಲ್ಯಾಣಕ್ಕೆ ಕಡಿಮೆ ಹಣ

ನಾಲ್ಕು ವರ್ಷಗಳಲ್ಲಿ ಘೋಷಿಸಲಾದ 1,56,701 ಕೋಟಿ ರೂ. ಪೈಕಿ ನಿಜವಾಗಿ ಎಸ್‌ಸಿ–ಎಸ್‌ಟಿ ಕಲ್ಯಾಣ ಕಾರ್ಯಕ್ರಮಗಳಿಗೆ ಉಳಿದಿರುವುದು ಕೇವಲ 25,291 ಕೋಟಿ ರೂ. ಮಾತ್ರ ಎಂದು ಅವರು ಹೇಳಿದರು.
“ಇಷ್ಟೊಂದು ದೊಡ್ಡ ಮೊತ್ತ ಘೋಷಿಸಿ, ವಾಸ್ತವದಲ್ಲಿ ಅಭಿವೃದ್ಧಿಗೆ ನೀಡಿರುವುದು ಇಷ್ಟು ಕಡಿಮೆ ಆಗಿದ್ದರೆ, ಇದನ್ನು ನ್ಯಾಯಯುತ ಬಜೆಟ್ ಎಂದು ಹೇಗೆ ಹೇಳಬಹುದು?” ಎಂದು ಅವರು ಪ್ರಶ್ನಿಸಿದರು.

“ನಮ್ಮನ್ನು ಜನರ ಮುಂದೆ ಹರಾಜು ಹಾಕುತ್ತಿದ್ದೀರಾ?”

ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿದ ನಮ್ಮನ್ನು ಜನರ ಮುಂದೆ ಹರಾಜು ಹಾಕುವಂತ ಪರಿಸ್ಥಿತಿ ಸರ್ಕಾರ ನಿರ್ಮಿಸಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
“ಮುಖ್ಯಮಂತ್ರಿಗಳೇ, ಎಸ್‌ಸಿ–ಎಸ್‌ಟಿ ಸಮುದಾಯದ ಜನರಿಗೆ ಯಾಕೆ ಇಷ್ಟೊಂದು ವಂಚನೆ ಮಾಡುತ್ತಿದ್ದೀರಿ? ಯಾಕೆ ಅವರ ಗೌರವಕ್ಕೆ ಧಕ್ಕೆ ತರುತ್ತಿದ್ದೀರಿ?” ಎಂದು ಪ್ರಶ್ನಿಸಿದರು.

ದಲಿತ ಸಂಘಟನೆಗಳಿಗೆ ಪ್ರಶ್ನೆ ಮಾಡುವಂತೆ ಕರೆ

ಈ ವಿಷಯವನ್ನು ದಲಿತ ಹೋರಾಟಗಾರರು ಹಾಗೂ ವಿವಿಧ ದಲಿತ ಸಂಘಟನೆಗಳು ಗಂಭೀರವಾಗಿ ಪರಿಗಣಿಸಿ ಸರ್ಕಾರವನ್ನು ಪ್ರಶ್ನಿಸಬೇಕು ಎಂದು ಅವರು ಸಲಹೆ ನೀಡಿದರು. “ಈ ಅನ್ಯಾಯದ ವಿರುದ್ಧ ಧ್ವನಿ ಎತ್ತದೆ ಇದ್ದರೆ, ನಿಮ್ಮ ತಲೆಯ ಮೇಲೆ ನೀವೇ ಬಂಡೆ ಹಾಕಿಕೊಂಡಂತಾಗುತ್ತದೆ” ಎಂದು ಹೇಳಿದರು.

ವಿವಿಧ ನಿಗಮಗಳಿಗೆ ನೀಡಿದ ಅನುದಾನ

2025–26ರಲ್ಲಿ ವಿವಿಧ ನಿಗಮಗಳಿಗೆ ನೀಡಲಾಗಿರುವ ಅನುದಾನದ ವಿವರಗಳನ್ನು ಅವರು ಪ್ರಸ್ತಾಪಿಸಿದರು.
ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ 125 ಕೋಟಿ, ತಾಂಡಾ ಅಭಿವೃದ್ಧಿ ನಿಗಮಕ್ಕೆ 75 ಕೋಟಿ, ಆದಿ ಜಾಂಬವ ನಿಗಮಕ್ಕೆ 62 ಕೋಟಿ, ಬೋವಿ ನಿಗಮಕ್ಕೆ 68 ಕೋಟಿ, ಸಫಾಯಿ ಕರ್ಮಚಾರಿ ನಿಗಮಕ್ಕೆ 31 ಕೋಟಿ, ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ 156 ಕೋಟಿ ಹಾಗೂ ಲಿಡ್ಕರ್ ನಿಗಮಕ್ಕೆ 43 ಕೋಟಿ ರೂ. ಸೇರಿ ಒಟ್ಟು 562 ಕೋಟಿ ರೂ. ನೀಡಲಾಗಿದೆ ಎಂದು ತಿಳಿಸಿದರು.

ಆದರೆ 2025–26ರಲ್ಲಿ ಎಸ್‌ಇಪಿ–ಟಿಎಸ್‌ಪಿ ಯೋಜನೆಗಳಡಿ ಮೀಸಲಿಟ್ಟ 42,017 ಕೋಟಿ ರೂ. ಪೈಕಿ ಸುಮಾರು 14 ಸಾವಿರ ಕೋಟಿ ರೂ. ಗ್ಯಾರಂಟಿ ಯೋಜನೆಗಳಿಗೆ ತೆರಳಿದೆ. ಸಮಾಜ ಕಲ್ಯಾಣ ಯೋಜನೆಗಳಿಗೆ ಕೇವಲ 7 ಸಾವಿರ ಕೋಟಿ ರೂ. ಮಾತ್ರ ನೀಡಲಾಗಿದೆ. ಅದರಲ್ಲೂ ನಿಗಮಗಳಿಗೆ ಕೇವಲ 562 ಕೋಟಿ ರೂ. ಮಾತ್ರ ಹಂಚಿಕೆಯಾಗಿರುವುದು ದೊಡ್ಡ ಅನ್ಯಾಯ ಎಂದು ಅವರು ಆರೋಪಿಸಿದರು.

ಗ್ಯಾರಂಟಿ ಯೋಜನೆಗಳ ಹಣದ ಬಗ್ಗೆ ಪ್ರಶ್ನೆ

ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ 52 ಸಾವಿರ ಕೋಟಿ ರೂ. ಮೀಸಲಿಟ್ಟಿರುವುದಾಗಿ ಹೇಳಿದೆ. ಈ ಹಣ ಯಾವ ಜಾತಿ ಅಥವಾ ಧರ್ಮಕ್ಕೆ ಸಂಬಂಧಪಟ್ಟದ್ದಲ್ಲ. ಹಾಗಿದ್ದರೆ ದಲಿತ ಸಮುದಾಯಕ್ಕೆ ಅದರಲ್ಲಿ ಯಾಕೆ ಸಮಾನ ಪಾಲು ಇಲ್ಲ ಎಂದು ಅವರು ಪ್ರಶ್ನಿಸಿದರು.

“52 ಸಾವಿರ ಕೋಟಿ ರೂ. ಪ್ರತ್ಯೇಕವಾಗಿ ನೀಡಿದ ನಂತರವೂ ಮತ್ತೆ ಎಸ್‌ಸಿ–ಎಸ್‌ಟಿ ಯೋಜನೆಗಳಿಂದ 14 ಸಾವಿರ ಕೋಟಿ ರೂ. ತೆಗೆದುಕೊಂಡಿರುವುದು ಏಕೆ? ಆ ಹಣ ಎಲ್ಲಿಗೆ ಹೋಗಿದೆ?” ಎಂದು ಅವರು ಪ್ರಶ್ನಿಸಿದರು.

ಕಾಂಗ್ರೆಸ್ ನಾಯಕರು ಉತ್ತರ ಕೊಡಬೇಕು

ಈ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸ್ಪಷ್ಟನೆ ನೀಡಿಲ್ಲ. ಕಾಂಗ್ರೆಸ್ ನಾಯಕರು ಈ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಅವರು ಒತ್ತಾಯಿಸಿದರು.
“ಏನು ಕೇಳಿದರೂ ಉತ್ತರ ಸಿಗದಿದ್ದರೆ, ಈ ಹಣವನ್ನು ಲೂಟಿ ಮಾಡಲಾಗಿದೆ ಎನ್ನುವ ಅನುಮಾನ ಜನರಲ್ಲಿ ಮೂಡುತ್ತದೆ” ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ರುದ್ರಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Leave a Comment