ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

“ರಾಜಕೀಯ ವ್ಯವಸ್ಥೆಯಲ್ಲಿ ಇದು ರಾಜರ ಆಡಳಿತವೇ?”: ಸಿದ್ದರಾಮಯ್ಯ ವಿರುದ್ಧ ಆರ್.ಅಶೋಕ್ ವಾಗ್ದಾಳಿ

On: March 14, 2026 3:44 PM
Follow Us:

ಬೆಂಗಳೂರು: ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಮೂಲದವರು ಮತದಾರರ ಪಟ್ಟಿಗೆ ಸೇರಿದ್ದರೆ ಅದು ದೇಶದ ಭದ್ರತೆಗೆ ಅಪಾಯಕಾರಿಯಾಗಬಹುದು ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಕಳ್ಳ ಓಟುಗಳನ್ನು ಸೇರಿಸಲು ಅವಕಾಶ ನೀಡಬಾರದು ಎಂದು ಹೇಳಿದರು. ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಅನೇಕರು ಕರ್ನಾಟಕಕ್ಕೆ ಬಂದಿದ್ದಾರೆ ಎಂಬ ಮಾಹಿತಿ ಇದೆ. ಅವರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾದರೆ ಮುಂದಿನ ದಿನಗಳಲ್ಲಿ ಖಾಯಂ ನಾಗರಿಕರಾಗುವ ಸಾಧ್ಯತೆ ಇದೆ. ಇದು ದೇಶದ ಭದ್ರತೆಯ ದೃಷ್ಟಿಯಿಂದ ಗಂಭೀರ ವಿಷಯವಾಗಿದ್ದು, ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ವಿಷಯದ ಕುರಿತು ನಡೆದ ಕಾರ್ಯಾಗಾರದಲ್ಲಿ ಚರ್ಚೆ ನಡೆದಿದ್ದು, ನಾನು ಸಹ ಅದರಲ್ಲಿ ಭಾಗವಹಿಸಿದ್ದೇನೆ. ಮತದಾರರ ಪಟ್ಟಿಯ ಪರಿಶುದ್ಧತೆಯನ್ನು ಕಾಪಾಡುವುದು ಅತ್ಯಂತ ಅಗತ್ಯ ಎಂದು ಅವರು ಹೇಳಿದರು.

“ನಾನು ಕುಟುಂಬವಾದಿ ಅಲ್ಲ” ಎನ್ನುವ ಸಿದ್ದರಾಮಯ್ಯ ಹೇಳಿಕೆಗೆ ಆರ್.ಅಶೋಕ್ ಪ್ರಶ್ನೆ.

ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ಟೀಕೆ ನಡೆಸಿದ ಆರ್.ಅಶೋಕ್, “ನಾನು ಸಮಾಜವಾದಿ, ಜಾತಿವಾದಿ ಅಲ್ಲ; ಕುಟುಂಬವಾದಿ ಅಲ್ಲ” ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದರೂ, ತಮ್ಮ ಮಗ ಯತೀಂದ್ರನನ್ನು ಬೆಳೆಸುವಂತೆ ಜನರಿಗೆ ಮನವಿ ಮಾಡಿರುವುದು ಅವರ ಮಾತುಗಳಿಗೆ ವಿರುದ್ಧವಾಗಿದೆ ಎಂದು ಹೇಳಿದರು.

ಇಷ್ಟು ದಿನ ಸಿದ್ದರಾಮಯ್ಯ ಅವರನ್ನು ನೋಡಿಕೊಂಡಿದ್ದೇವೆ. ಈಗ ಅವರ ಮಗನನ್ನೂ ನೋಡಿಕೊಳ್ಳಬೇಕು ಎಂದರೆ ಮುಂದಿನ ದಿನಗಳಲ್ಲಿ ಮೊಮ್ಮಗನನ್ನೂ ನೋಡಿಕೊಳ್ಳಬೇಕು ಎನ್ನುವ ಪರಿಸ್ಥಿತಿ ಬರುತ್ತದೆಯೇ? ರಾಜಕೀಯ ವ್ಯವಸ್ಥೆಯಲ್ಲಿ ಇದು ರಾಜರ ಆಡಳಿತವೇ ಎಂದು ಪ್ರಶ್ನಿಸಿದರು.

ಹಿಂದೆ ರಾಜರು ತಮ್ಮ ನಂತರ ತಮ್ಮ ಮಗನೇ ಉತ್ತರಾಧಿಕಾರಿ ಎಂದು ಘೋಷಿಸುತ್ತಿದ್ದರು. ಯುವರಾಜನ ಪಟ್ಟಾಭಿಷೇಕ ಮಾಡುತ್ತಿದ್ದರು. ಆದರೆ ಪ್ರಜಾಪ್ರಭುತ್ವದಲ್ಲಿ ಜನರ ಮತದಾನದ ಮೂಲಕ ನಾಯಕರು ಆಯ್ಕೆಯಾಗಬೇಕು. ಡಾ. ಬಿ.ಆರ್. ಅಂಬೇಡ್ಕರ್ ಅವರು ರಾಜರ ಆಡಳಿತವನ್ನು ರದ್ದು ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆ ತಂದಿದ್ದಾರೆ. ಆದರೆ ಸಿದ್ದರಾಮಯ್ಯ ಅವರ ನಡೆ ಅಂಬೇಡ್ಕರ್ ಅವರ ತತ್ವಗಳಿಗೆ ವಿರುದ್ಧವಾಗಿದೆ ಎಂದು ಟೀಕಿಸಿದರು.

ರಾಜಕೀಯದಲ್ಲಿ ಯಾರೇ ಆಗಲಿ ಜನರ ವಿಶ್ವಾಸ ಗಳಿಸಿ ಚುನಾವಣೆಯಲ್ಲಿ ಗೆದ್ದು ಬರಬೇಕು. “ನನ್ನ ಮಗನನ್ನು ಬೆಳೆಸಿ, ನನ್ನ ಮೊಮ್ಮಗನನ್ನು ಬೆಳೆಸಿ” ಎನ್ನುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದ್ದು, ಅಂಬೇಡ್ಕರ್ ಅವರ ಸಿದ್ಧಾಂತಕ್ಕೆ ಅಪಚಾರವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಇನ್ನೊಂದೆಡೆ ಎಲ್‌ಪಿಜಿ ಸಿಲಿಂಡರ್ ದುರುಪಯೋಗ ತಡೆಯಲು ಎಸ್ಮಾ ಕಾಯ್ದೆ ಜಾರಿಗೊಳಿಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾಳಸಂತೆ ತಡೆಯುವುದು ರಾಜ್ಯ ಸರ್ಕಾರದ ಹೊಣೆಗಾರಿಕೆಯಾಗಿದೆ ಎಂದು ಹೇಳಿದರು. ಯುದ್ಧದಂತಹ ಪರಿಸ್ಥಿತಿ ಎದುರಾಗಿರುವ ಸಂದರ್ಭಗಳಲ್ಲಿ ಜನರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಆದರೆ ಸಿದ್ದರಾಮಯ್ಯ ಅವರು ಇಂತಹ ಗಂಭೀರ ಸಂದರ್ಭದಲ್ಲೂ ರಾಜಕೀಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

“ಇದು ಡಿನ್ನರ್ ಪಾರ್ಟಿ ಸರ್ಕಾರ”

ರಾಜ್ಯ ಸರ್ಕಾರದ ಕಾರ್ಯವೈಖರಿಯ ಮೇಲೂ ವಾಗ್ದಾಳಿ ನಡೆಸಿದ ಆರ್.ಅಶೋಕ್, ಸಿದ್ದರಾಮಯ್ಯ ಅವರ ತಂಡ ಪ್ರತಿದಿನ ಡಿನ್ನರ್ ಪಾರ್ಟಿ ನಡೆಸಲು ಆದೇಶ ನೀಡಿದೆಯಂತೆ ಎಂಬ ಮಾಹಿತಿ ನನಗೆ ಬಂದಿದೆ ಎಂದು ಹೇಳಿದರು.

ರಾಜ್ಯದ ಜನರು ಅನ್ನ-ಸಾಂಬಾರ್, ಗೊಜ್ಜು ತಿನ್ನುತ್ತಾ ಜೀವನ ಸಾಗಿಸುತ್ತಿರುವಾಗ ಸರ್ಕಾರದವರು ಸಕಲ ಪದಾರ್ಥಗಳೊಂದಿಗೆ ಡಿನ್ನರ್ ಪಾರ್ಟಿಗಳನ್ನು ನಡೆಸುತ್ತಿದ್ದಾರೆ. ಇದು ಜನರ ಸಮಸ್ಯೆಗಳಿಗಿಂತ ಭೋಜನಕ್ಕೆ ಹೆಚ್ಚು ಮಹತ್ವ ನೀಡುವ “ಡಿನ್ನರ್ ಪಾರ್ಟಿ ಸರ್ಕಾರ” ಎಂದು ಅವರು ಆಕ್ಷೇಪಿಸಿದರು.

ರಾಜ್ಯದ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಗಮನವೇ ಇಲ್ಲ. ಬಜೆಟ್ ಕೂಡ ಸಮರ್ಪಕವಾಗಿಲ್ಲ ಎಂದು ಕಾಂಗ್ರೆಸ್ ಪಕ್ಷದವರೇ ಒಳಗೊಳಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ವಿಧಾನಸೌಧದ ಲಾಂಜ್‌ಗಳಲ್ಲೇ ಕಾಂಗ್ರೆಸ್ ಸದಸ್ಯರು ಈ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಅವರು ಹೇಳಿದರು.

K.M.Sathish Gowda

Join WhatsApp

Join Now

Facebook

Join Now

Leave a Comment