ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ವಿಧಾನಸಭೆ ಇತಿಹಾಸದಲ್ಲೇ ಕರಾಳ ಅಧ್ಯಾಯ: ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಜಯೇಂದ್ರ ಕಿಡಿ

On: March 16, 2026 10:17 PM
Follow Us:

ಬೆಂಗಳೂರು: ರಾಜ್ಯ ವಿಧಾನಸಭೆಯ ಸನ್ಮಾನ್ಯ ಸಭಾಧ್ಯಕ್ಷರು ಸರ್ಕಾರದ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನಕ್ಕೆ ಬೇಸತ್ತು ಸದನದಿಂದ ಹೊರನಡೆದಿರುವ ಘಟನೆ ವಿಧಾನಸಭೆಯ ಇತಿಹಾಸದಲ್ಲೇ ಕರಾಳ ಅಧ್ಯಾಯವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ಅವರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ವಿಜಯೇಂದ್ರ, ಕಾಂಗ್ರೆಸ್ ಸರ್ಕಾರದ ಆಡಳಿತ ಯಂತ್ರ ಎಷ್ಟು ನಿಷ್ಕ್ರಿಯಗೊಂಡಿದೆ ಎಂಬುದಕ್ಕೆ ಈ ಘಟನೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ತಿಳಿಸಿದ್ದಾರೆ. ಶಾಸಕರು ಕೇಳುವ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಲು ವಿಫಲವಾಗಿರುವ ಸರ್ಕಾರ, ಶಾಸನಸಭೆಗೆ ಕನಿಷ್ಠ ಗೌರವವನ್ನೂ ತೋರಿಸದೆ ತನ್ನದೇ ರಾಜಕೀಯ ಲೆಕ್ಕಾಚಾರಗಳಲ್ಲಿ ತೊಡಗಿಕೊಂಡಿದೆ ಎಂದು ಅವರು ಆರೋಪಿಸಿದ್ದಾರೆ.

ಸಭಾಧ್ಯಕ್ಷರು ಸದನದಲ್ಲಿ ನಾಲ್ಕು ಬಾರಿ ಎಚ್ಚರಿಕೆ ನೀಡಿದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಇತರ ಸಚಿವರು ಅದಕ್ಕೆ ಸೂಕ್ತ ಪ್ರತಿಕ್ರಿಯೆ ನೀಡಿಲ್ಲ. ಸಭಾಧ್ಯಕ್ಷರ ಸೂಚನೆಗಳಿಗೆ ಕವಡೆ ಕಾಸಿನ ಕಿಮ್ಮತ್ತನ್ನೂ ನೀಡದಿರುವುದು ರಾಜ್ಯ ಸರ್ಕಾರದ ಆಡಳಿತ ಶೈಲಿಯ ದೌರ್ಬಲ್ಯವನ್ನು ತೋರಿಸುತ್ತದೆ ಎಂದು ವಿಜಯೇಂದ್ರ ಟೀಕಿಸಿದ್ದಾರೆ. ಇದಕ್ಕೆ ಪೂರಕವಾಗಿ ಸರ್ಕಾರದ ಅಧಿಕಾರಿಗಳೂ ಸಹ ಅಸಡ್ಡೆ ತೋರಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ಆಳ್ವಿಕೆಯಲ್ಲಿ ರಾಜ್ಯದಲ್ಲಿ ಸಂವಿಧಾನದ ಆಶಯಗಳು ಜೀವಂತವಾಗಿವೆಯೇ ಎಂಬ ಪ್ರಶ್ನೆ ಈಗ ಶಾಸಕರಲ್ಲದೇ ಜನಸಾಮಾನ್ಯರಲ್ಲೂ ಉದಯಿಸುತ್ತಿದೆ. ಈ ಸರ್ಕಾರ ತನ್ನ ನಿಷ್ಕ್ರಿಯ ಆಡಳಿತದಿಂದ ಕೇವಲ ಸಭಾಧ್ಯಕ್ಷರ ಪೀಠಕ್ಕೆ ಅವಮಾನ ಮಾಡುತ್ತಿಲ್ಲ, ಇದು ಪ್ರಜಾಪ್ರಭುತ್ವದ ದೇಗುಲವಾದ ವಿಧಾನಸಭೆಗೆ ಹಾಗೂ ರಾಜ್ಯದ ಸುಮಾರು ಏಳು ಕೋಟಿ ಜನತೆಗೆ ಮಾಡಿದ ದ್ರೋಹವಾಗಿದೆ ಎಂದು ಅವರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನರ ಸಮಸ್ಯೆಗಳಿಗೆ ಉತ್ತರ ನೀಡಲು ವಿಫಲವಾಗಿರುವ ಈ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕಿಲ್ಲ ಎಂದು ವಿಜಯೇಂದ್ರ ಹೇಳಿದ್ದಾರೆ. ಅನೇಕ ಸಚಿವರು ಸದನಕ್ಕೆ ಹಾಜರಾಗುವುದಿಲ್ಲ; ಹಾಜರಾದರೂ ಶಾಸಕರು ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರಗಳನ್ನು ತರಲು ವಿಫಲವಾಗುತ್ತಾರೆ. ಸರ್ಕಾರದ ಈ ‘ಅಹಂಕಾರದ ಆಡಳಿತ’ವನ್ನು ನೋಡಿ ಶಾಸಕರಷ್ಟೇ ಅಲ್ಲ, ಸಭಾಧ್ಯಕ್ಷರೇ ಬೇಸತ್ತು ಹೋಗಿರುವುದು ವಿಷಾದನೀಯ ಎಂದು ಅವರು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಕೇವಲ ಸಂಧಾನ ಸಭೆ ನಡೆಸುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ತಮ್ಮ ಸಚಿವರ ಅಶಿಸ್ತಿನ ವರ್ತನೆಗಾಗಿ ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕು ಎಂದು ವಿಜಯೇಂದ್ರ ಆಗ್ರಹಿಸಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗವೇ ಸರ್ವೋಚ್ಚ ಸ್ಥಾನ ಹೊಂದಿದೆ. ಆದರೆ ರಾಜ್ಯದಲ್ಲಿ ಕಾರ್ಯಾಂಗವು ಶಾಸಕಾಂಗಕ್ಕೆ ತೋರಿಸುತ್ತಿರುವ ಅಗೌರವಕ್ಕೆ ಕಾಂಗ್ರೆಸ್ ಸರ್ಕಾರವೇ ಸಂಪೂರ್ಣ ಹೊಣೆಗಾರವಾಗಿದೆ ಎಂದು ಅವರು ಹೇಳಿದ್ದಾರೆ. ಈಗಾದರೂ ಸರ್ಕಾರ ತನ್ನ “ಕುಂಭಕರ್ಣ ನಿದ್ರೆಯಿಂದ” ಎಚ್ಚೆತ್ತು ಶಾಸಕರ ಪ್ರಶ್ನೆಗಳಿಗೆ ಲಿಖಿತ ಉತ್ತರಗಳನ್ನು ನೀಡಬೇಕು ಹಾಗೂ ವಿಧಾನಸಭೆಯ ಸಭಾಧ್ಯಕ್ಷರ ಪೀಠದ ಘನತೆಯನ್ನು ಕಾಪಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರ ನೀಡದೆ ಸದನದ ಗೌರವಕ್ಕೆ ಧಕ್ಕೆ ತರುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಹಾಗೂ ಅದರ ದುರ್ಬಲ ಆಡಳಿತದ ವಿರುದ್ಧ ಬಿಜೆಪಿ ಹೋರಾಟ ಮುಂದುವರಿಯಲಿದೆ ಎಂದು ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ.

K.M.Sathish Gowda

Join WhatsApp

Join Now

Facebook

Join Now

Leave a Comment