ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಕೇಂದ್ರವನ್ನು ಟೀಕಿಸುವುದರಲ್ಲೇ 3 ವರ್ಷ ವ್ಯರ್ಥ: ಕಾಂಗ್ರೆಸ್ ವಿರುದ್ಧ ವಿಜಯೇಂದ್ರ ವಾಗ್ದಾಳಿ

On: March 27, 2026 4:54 PM
Follow Us:

ಬೆಂಗಳೂರು: ದೇಶದ ಸಾಮಾನ್ಯ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರವು ಜನಪರ ಮತ್ತು ಪ್ರಮುಖ ಹೆಜ್ಜೆಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ಅವರು ಅಭಿಪ್ರಾಯಪಟ್ಟಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇಂಧನ ಬೆಲೆ ಏರಿಕೆಯಿಂದ ಜನರ ಮೇಲೆ ಬೀಳುತ್ತಿರುವ ಆರ್ಥಿಕ ಹೊರೆ ಕಡಿಮೆ ಮಾಡಲು ಕೇಂದ್ರ ಸರ್ಕಾರವೇ ಜವಾಬ್ದಾರಿ ತೆಗೆದುಕೊಂಡಿರುವುದು ಶ್ಲಾಘನೀಯವಾಗಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರ ಪರವಾಗಿ ದೃಢ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಿದರು.

ಯುದ್ಧದಂತಹ ಜಾಗತಿಕ ಸಂಕಷ್ಟದ ಸಂದರ್ಭದಲ್ಲೂ ಭಾರತದಲ್ಲಿ ಜನರ ಹಿತವನ್ನು ಕಾಪಾಡುವ ಕ್ರಮ ಕೈಗೊಂಡಿರುವುದಕ್ಕೆ ಪ್ರಧಾನಮಂತ್ರಿಗಳಿಗೆ ಹಾಗೂ ಪೆಟ್ರೋಲಿಯಂ ಸಚಿವಾಲಯಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.

ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ವಿಜಯೇಂದ್ರ, ಕಳೆದ ಮೂರು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರವು ಕೇಂದ್ರ ಸರ್ಕಾರವನ್ನು ಟೀಕಿಸುವುದರಲ್ಲೇ ಕಾಲಹರಣ ಮಾಡಿದೆ. ಆದರೆ, ಜನಪರ ಯೋಜನೆಗಳು ಮತ್ತು ಕಾರ್ಯಕ್ಷಮ ಆಡಳಿತದಲ್ಲಿ ಸಾಧನೆ ತೋರಲು ವಿಫಲವಾಗಿದೆ ಎಂದು ಆರೋಪಿಸಿದರು. ಪ್ರಧಾನಿ ಮೋದಿ ಅವರ ಜನಪರ ಕಾಳಜಿಯನ್ನು ರಾಜ್ಯದ ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದ ಸದಸ್ಯರು ಅರಿತುಕೊಳ್ಳಬೇಕಾಗಿದೆ ಎಂದು ತಿಳಿಸಿದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಧನ ಬೆಲೆ ಏರಿಕೆಯಿಂದ ಅಮೆರಿಕಾ ಮತ್ತು ಆಸ್ಟ್ರೇಲಿಯಾ ದೇಶಗಳಲ್ಲಿ ಶೇ.25 ರಿಂದ 30ರವರೆಗೆ ಜನರ ಮೇಲೆ ಹೊರೆ ಬೀಳುತ್ತಿದೆ. ಆದರೆ ಭಾರತದಲ್ಲಿ ಅಬಕಾರಿ ಸುಂಕ ಕಡಿತದ ಮೂಲಕ ಜನರಿಗೆ ನಿರಾಳತೆ ಒದಗಿಸಲಾಗಿದೆ. ಇದು ಕೇಂದ್ರ ಸರ್ಕಾರದ ಸಮರ್ಥ ಆರ್ಥಿಕ ನಿರ್ವಹಣೆಗೆ ಉದಾಹರಣೆಯಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರದ ವಿರುದ್ಧ ಮತ್ತಷ್ಟು ಟೀಕೆ ಮಾಡಿದ ಅವರು, ತಮ್ಮ ವೈಫಲ್ಯಗಳನ್ನು ಮರೆಮಾಚಲು ಇತರರ ಮೇಲೆ ಆರೋಪ ಮಾಡುವ ಪ್ರವೃತ್ತಿ ಕಾಂಗ್ರೆಸ್‌ಗೆ ಹೊಸದೇನಲ್ಲ. ಕಳೆದ ಮೂರು ವರ್ಷಗಳಲ್ಲಿ ಸರ್ಕಾರ ಯಾವ ಮಹತ್ವದ ಸಾಧನೆ ಮಾಡಿದೆ ಎಂಬುದನ್ನು ಜನತೆ ಕೇಳುತ್ತಿದ್ದಾರೆ ಎಂದು ಹೇಳಿದರು.

ಐಪಿಎಲ್ ಟಿಕೆಟ್ ವಿಚಾರದ ಕುರಿತಾಗಿ ಪ್ರತಿಕ್ರಿಯಿಸಿದ ವಿಜಯೇಂದ್ರ, ಶಾಸಕರು ಅಥವಾ ಜನಪ್ರತಿನಿಧಿಗಳು ತಮ್ಮನ್ನು ವಿಭಿನ್ನವಾಗಿ ಅಥವಾ ವಿಐಪಿ ಎಂದು ತೋರಿಸಿಕೊಳ್ಳುವುದು ಸರಿಯಾದ ಬೆಳವಣಿಗೆ ಅಲ್ಲ. ಸಾರ್ವಜನಿಕರ ವಿಶ್ವಾಸ ಉಳಿಸಿಕೊಳ್ಳುವುದು ಮುಖ್ಯವಾಗಿದ್ದು, ಈ ರೀತಿಯ ಹೇಳಿಕೆಗಳನ್ನು ನಾನು ವೈಯಕ್ತಿಕವಾಗಿ ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಹಿಂದಿನ ಐಪಿಎಲ್ ಸಂದರ್ಭದಲ್ಲಿ ನಡೆದ ಅವಘಡವನ್ನು ಉಲ್ಲೇಖಿಸಿದ ಅವರು, ಆಡಳಿತ ಪಕ್ಷದ ನಿರ್ಲಕ್ಷ್ಯದಿಂದ 11 ಮಂದಿ ನಿರಪರಾಧಿಗಳು ಪ್ರಾಣ ಕಳೆದುಕೊಂಡ ಘಟನೆ ಜನರ ಮನಸ್ಸಿನಲ್ಲಿ ಇನ್ನೂ ಜೀವಂತವಾಗಿದೆ. ಇಂತಹ ಸಂದರ್ಭಗಳಲ್ಲಿ ಜವಾಬ್ದಾರಿಯುತ ನಡೆ ಅವಶ್ಯಕ ಎಂದು ಹೇಳಿದರು.

ಇದೇ ವೇಳೆ, ದಾವಣಗೆರೆ ಮತ್ತು ಬಾಗಲಕೋಟೆಯಲ್ಲಿ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಜೆಡಿಎಸ್ ಭಾಗವಹಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಏಪ್ರಿಲ್ 1ರ ನಂತರ ಸಮಯ ನೀಡುವುದಾಗಿ ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.

K.M.Sathish Gowda

Join WhatsApp

Join Now

Facebook

Join Now

Leave a Comment