ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಸ್ವಚ್ಛ ನಗರ–ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಎಲ್ಲರ ಸಹಕಾರ ಅಗತ್ಯ: ಯುವತಿ ಸಂಜನಾ ಕರೆ

On: April 6, 2026 8:23 PM
Follow Us:

ಶಿವಮೊಗ್ಗ: ನಗರ ಸ್ವಚ್ಛತೆ ಮತ್ತು ಆರೋಗ್ಯಕರ ಜೀವನಶೈಲಿ ಕುರಿತು ಯುವಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪೇಸ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಂಜನಾ ಮಾತನಾಡಿ, “ನಾವು ನಮ್ಮ ಮನೆಯನ್ನಷ್ಟೇ ಅಲ್ಲದೆ ಸುತ್ತಮುತ್ತಲಿನ ಪರಿಸರವನ್ನೂ ಸ್ವಚ್ಛವಾಗಿ, ಸುಂದರವಾಗಿ ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದರೆ ಮಾತ್ರ ಸ್ವಚ್ಛ, ಸುಂದರ ಹಾಗೂ ಸ್ವಾಸ್ಥ್ಯಪೂರ್ಣ ಸಮಾಜವನ್ನು ನಿರ್ಮಿಸಲು ಸಾಧ್ಯ” ಎಂದು ಹೇಳಿದರು.

ಪರೋಪಕಾರಂ, ಸ್ಥಳೀಯ ನಿವಾಸಿಗಳು ಹಾಗೂ ಮಹಿಳಾ ಸಂಘದ ಸಂಯುಕ್ತ ಆಶ್ರಯದಲ್ಲಿ ಸವಳಂಗ ರಸ್ತೆಯ ಫ್ಲೈಓವರ್ ಕೆಳಭಾಗದಲ್ಲಿರುವ ನೇಮೋಜಿರಾವ್ ಲೇಔಟ್‌ನಲ್ಲಿ ಶಿವಾಲಯ ದೇವಸ್ಥಾನದ ಹಿಂಭಾಗದ ಉದ್ಯಾನವನದಲ್ಲಿ ನಡೆದ 978ನೇ “ಬೆಳಗಿನ ಪ್ರೇರಣೆ ಕೂಟ” ಹಾಗೂ ಸ್ವಚ್ಛತಾ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.

ಸ್ವಚ್ಛತೆ ಕೇವಲ ವೈಯಕ್ತಿಕ ಅಭ್ಯಾಸವಲ್ಲ, ಅದು ಸಮಾಜದ ಒಟ್ಟಾರೆ ಆರೋಗ್ಯವನ್ನು ನಿರ್ಧರಿಸುವ ಮಹತ್ವದ ಅಂಶವಾಗಿದೆ. ಪ್ರತಿಯೊಬ್ಬ ನಾಗರಿಕರೂ ತಮ್ಮ ಹಕ್ಕುಗಳೊಂದಿಗೆ ಕರ್ತವ್ಯಗಳನ್ನು ಸಹ ಸಮರ್ಪಕವಾಗಿ ನಿಭಾಯಿಸಬೇಕು. ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡುವುದು ನಮ್ಮೆಲ್ಲರ ಸಹಭಾಗಿತ್ವದ ಜವಾಬ್ದಾರಿ ಎಂದು ಅವರು ಅಭಿಪ್ರಾಯಪಟ್ಟರು.

ಸಾಮಾಜಿಕ ಸೇವೆಯ ಮಹತ್ವವನ್ನು ಒತ್ತಿ ಹೇಳಿದ ಸಂಜನಾ, “ನಿಸ್ವಾರ್ಥ ಸೇವೆಯಿಂದ ಮನಸ್ಸಿಗೆ ಶಾಂತಿ, ದೇಹಕ್ಕೆ ಚೈತನ್ಯ ಮತ್ತು ಆತ್ಮಕ್ಕೆ ಉತ್ಸಾಹ ದೊರೆಯುತ್ತದೆ. ದೈಹಿಕ ಮತ್ತು ಮಾನಸಿಕ ಆರೋಗ್ಯದ ದೃಷ್ಟಿಯಿಂದ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಅಗತ್ಯ. ಜೀವನವನ್ನು ಕೇವಲ ವೈಯಕ್ತಿಕ ವಲಯಕ್ಕೆ ಸೀಮಿತಗೊಳಿಸದೆ, ಸಮಾಜಮುಖಿ ಚಿಂತನೆ ಬೆಳೆಸಿದರೆ ಮಾತ್ರ ಸುಸ್ಥಿರ ಜೀವನಶೈಲಿ ಸಾಧ್ಯ” ಎಂದರು.

ಈ ಸಂದರ್ಭದಲ್ಲಿ ಲೀಲಾಬಾಯಿ ಎನ್.ಎಂ., ಅನಿಲ್ ಹೆಗ್ಗಡೆ, ರಾಘವೇಂದ್ರ ಮಹೇಂದ್ರಕರ್, ನಿವೃತ್ತ ಶಿಕ್ಷಕ ಬಿ. ಪಾಶ್ವನಾಥ್, ಚರಿತ (ಚರ‍್ರಿ) ಪ್ರಶಾಂತ್, ಅಣಜಿ ಬಸವರಾಜ್ ಸೇರಿದಂತೆ ಹಲವು ಗಣ್ಯರು ಹಾಗೂ ಸ್ಥಳೀಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ವಚ್ಛತಾ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಕಾರ್ಯಕ್ರಮವು ಸಾರ್ವಜನಿಕರಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರವಹಿಸಿತು.

K.M.Sathish Gowda

Join WhatsApp

Join Now

Facebook

Join Now

Leave a Comment