ಬೆಂಗಳೂರು: ಮಾಲೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ವೈ. ನಂಜೇಗೌಡ ಅವರ ಆಯ್ಕೆಯನ್ನು ಹೈಕೋರ್ಟ್ ಅಸಿಂಧುಗೊಳಿಸಿದೆ. ಇದೇ ವೇಳೆ ನಾಲ್ಕು ವಾರಗಳೊಳಗೆ ಮರು ಮತ ಎಣಿಕೆ ನಡೆಸಿ, ನಂತರ ಹೊಸ ಫಲಿತಾಂಶ ಪ್ರಕಟಿಸಲು ನ್ಯಾಯಮೂರ್ತಿ ಆರ್. ದೇವದಾಸ್ ಅವರ ನೇತೃತ್ವದ ಹೈಕೋರ್ಟ್ ಪೀಠ ಸೋಮವಾರ ಆದೇಶ ಹೊರಡಿಸಿದೆ.
ಬಿಜೆಪಿ ಪರಾಜಿತ ಅಭ್ಯರ್ಥಿ ಮಂಜುನಾಥಗೌಡ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಬಳಿಕ ಈ ತೀರ್ಪು ಹೊರಬಿದ್ದಿದೆ. ಮತ ಎಣಿಕೆ ವೇಳೆ ಲೋಪವಾಗಿದೆ ಎಂಬ ಕಾರಣದಿಂದಾಗಿ ಶಾಸಕರ ಆಯ್ಕೆ ಅಸಿಂಧುಗೊಳಿಸುವಂತೆ ಮನವಿ ಮಾಡಲಾಗಿತ್ತು. ಕೋರ್ಟ್ ಅದನ್ನು ಪರಿಗಣಿಸಿ ಮರು ಎಣಿಕೆ ನಡೆಸುವಂತೆ ಸೂಚನೆ ನೀಡಿದೆ.
ಮತ ಎಣಿಕೆಯ ವಿಡಿಯೋ ದಾಖಲಾತಿಯನ್ನು ಜಿಲ್ಲಾ ಚುನಾವಣಾ ಅಧಿಕಾರಿ ಸಲ್ಲಿಸದ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಸೂಚಿಸಿದೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಂಜೇಗೌಡ ಅವರು ಬಿಜೆಪಿ ಅಭ್ಯರ್ಥಿ ಮಂಜುನಾಥಗೌಡ ಅವರನ್ನು ಕೇವಲ 248 ಮತಗಳ ಅಂತರದಿಂದ ಸೋಲಿಸಿದ್ದರು. ಈ ಅಂತರ ಅತಿ ಕಡಿಮೆಯಾದ್ದರಿಂದ ಮಂಜುನಾಥಗೌಡ ಅವರು ಮತ ಎಣಿಕೆಯಲ್ಲಿ ತೊಂದರೆ ಉಂಟಾಗಿದೆ ಎಂದು ಆರೋಪಿಸಿದ್ದರು.
ಶಾಸಕ ನಂಜೇಗೌಡ ಪರ ವಕೀಲೆ ನಳಿನಾ ಮಾಯಾಗೌಡ ಅವರು ಹೈಕೋರ್ಟ್ ತೀರ್ಪಿಗೆ ಮಧ್ಯಂತರ ತಡೆ ನೀಡುವಂತೆ ಮನವಿ ಮಾಡಿದ್ದರು. ಕೋರ್ಟ್ ಅದನ್ನು ಅಂಗೀಕರಿಸಿ, 30 ದಿನಗಳ ತಡೆ ನೀಡಿದೆ. ಈ ಅವಧಿಯಲ್ಲಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.