ಪಟನಾ: ಬಿಹಾರದ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್‌ನ ಪ್ರಮುಖ ನಾಯಕ ಮತ್ತು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೊಸ ವಿವಾದಕ್ಕೆ ಕಾರಣರಾಗಿದ್ದಾರೆ. ಪ್ರಚಾರ ರ‍್ಯಾಲಿಯಲ್ಲಿ ಮಾತನಾಡಿದ ಅವರು, “ಭಾರತೀಯ ಸೇನೆ ದೇಶದ ಜನಸಂಖ್ಯೆಯ ಶೇಕಡಾ 10ರಷ್ಟು ಜನರ ನಿಯಂತ್ರಣದಲ್ಲಿದೆ” ಎಂದು ಹೇಳಿದ್ದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ, “ದೇಶದ ಜನಸಂಖ್ಯೆಯ ಶೇ. 90 ರಷ್ಟು ಜನರು ದಲಿತರು, ಮಹಾದಲಿತರು, ಹಿಂದುಳಿದವರು, ಅತ್ಯಂತ ಹಿಂದುಳಿದವರು ಹಾಗೂ ಅಲ್ಪಸಂಖ್ಯಾತ ಸಮುದಾಯಗಳಿಂದ ಬಂದವರು. ನಾವು ಶೇ. 90ರಷ್ಟು ಜನರು ಘನತೆ ಮತ್ತು ಸಂತೋಷದಿಂದ ಬದುಕಬಹುದಾದ ಭಾರತವನ್ನು ಬಯಸುತ್ತೇವೆ. ಕಾಂಗ್ರೆಸ್ ಯಾವಾಗಲೂ ಹಿಂದುಳಿದ ವರ್ಗಗಳ ಪರ ಹೋರಾಡಿದೆ,” ಎಂದು ಹೇಳಿದರು.

ಈ ಹೇಳಿಕೆಯ ನಂತರ ಬಿಜೆಪಿ ಮುಖಂಡ ಸುರೇಶ್ ನಖುವಾ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿ, “ರಾಹುಲ್ ಗಾಂಧಿ ಈಗ ಸಶಸ್ತ್ರ ಪಡೆಗಳಲ್ಲಿ ಜಾತಿಯನ್ನು ಹುಡುಕುತ್ತಿದ್ದಾರೆ. ಪ್ರಧಾನಮಂತ್ರಿ ಮೋದಿ ಮೇಲಿನ ದ್ವೇಷದಲ್ಲಿ ಅವರು ಈಗ ಭಾರತವನ್ನೇ ಅವಹೇಳನ ಮಾಡುವ ಮಟ್ಟಕ್ಕೆ ಹೋಗಿದ್ದಾರೆ,” ಎಂದು ಟೀಕಿಸಿದರು.
ರಾಹುಲ್ ಗಾಂಧಿ ಸೇನೆಯ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿರುವುದು ಇದೇ ಮೊದಲಲ್ಲ. ಕಳೆದ ಆಗಸ್ಟ್‌ನಲ್ಲಿ ‘ಭಾರತ್ ಜೋಡೋ ಯಾತ್ರೆ’ ಸಂದರ್ಭದಲ್ಲಿಯೂ ಅವರು, “ಚೀನಾದ ಸೇನೆಯು ಅರುಣಾಚಲ ಪ್ರದೇಶದಲ್ಲಿ ಭಾರತೀಯ ಸೈನಿಕರನ್ನು ಥಳಿಸುತ್ತಿದೆ” ಎಂದು ಹೇಳಿದ್ದರು. ಈ ಹೇಳಿಕೆಯ ಹಿನ್ನೆಲೆ ನಿವೃತ್ತ ರಕ್ಷಣಾ ಅಧಿಕಾರಿ ಒಬ್ಬರು ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಅಲಹಾಬಾದ್ ಹೈಕೋರ್ಟ್ ಮೊಕದ್ದಮೆ ರದ್ದುಗೊಳಿಸಲು ನಿರಾಕರಿಸಿದ ಬಳಿಕ, ಗಾಂಧಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರ ಪೀಠವು, “ನೀವು ನಿಜವಾದ ಭಾರತೀಯರಾಗಿದ್ದರೆ, ಇಂತಹ ಹೇಳಿಕೆ ನೀಡುತ್ತಿರಲಿಲ್ಲ” ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು.
ರಾಹುಲ್ ಗಾಂಧಿಯ ಇತ್ತೀಚಿನ ಹೇಳಿಕೆ ಮತ್ತೆ ರಾಜಕೀಯ ಕಾವನ್ನು ಹೆಚ್ಚಿಸಿದ್ದು, ಬಿಹಾರದ ಚುನಾವಣಾ ಸಮರದಲ್ಲಿ ಹೊಸ ವಿವಾದದ ಕೇಂದ್ರಬಿಂದುವಾಗಿ ಪರಿಣಮಿಸಿದೆ.











