ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠವು ಕಳೆದ ಅರವತ್ತಕ್ಕೂ ಹೆಚ್ಚು ವರ್ಷಗಳಿಂದ ನಿರಂತರವಾಗಿ ಆಚರಿಸಿಕೊಂಡು ಬರುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವವು ಇಂದು ಕೇವಲ ಧಾರ್ಮಿಕ ಉತ್ಸವವಲ್ಲ; ಅದು ಸರ್ವಧರ್ಮ ಸಮನ್ವಯ, ಮಾನವೀಯ ಮೌಲ್ಯಗಳು ಮತ್ತು ಸಾಮಾಜಿಕ ಜಾಗೃತಿಯ ಪ್ರತೀಕವಾಗಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ. ಧರ್ಮದ ಹೆಸರಿನಲ್ಲಿ ವಿಭಜನೆ, ದ್ವೇಷ ಮತ್ತು ಅಶಾಂತಿ ಮಿತಿಮೀರಿರುವ ಇಂದಿನ ಸಂದರ್ಭದಲ್ಲಿ, ಮಾನವೀಯತೆಯ ಸಂದೇಶವನ್ನು ಸಾರುವ ಈ ಮಹೋತ್ಸವವು ದೇಶಕ್ಕೆ ಒಂದು ಆಶಾಕಿರಣವಾಗಿ ಬೆಳಗುತ್ತಿದೆ.
ಭದ್ರಾವತಿಯಲ್ಲಿ 2026ರ ತರಳಬಾಳು ಹುಣ್ಣಿಮೆ ಮಹೋತ್ಸವ
ಈ ವರ್ಷ ತರಳಬಾಳು ಹುಣ್ಣಿಮೆ ಮಹೋತ್ಸವ – 2026 ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ, ಜನವರಿ 24 ರಿಂದ ಫೆಬ್ರವರಿ 1ರ ವರೆಗೆ ನಡೆಯಲಿದೆ. ನಾಡಿನ ಖ್ಯಾತ ಧಾರ್ಮಿಕ, ಸಾಹಿತ್ಯ, ಸಾಂಸ್ಕೃತಿಕ ಹಾಗೂ ರಾಜಕೀಯ ನಾಯಕರು ಪಾಲ್ಗೊಳ್ಳಲಿದ್ದು, ನಿತ್ಯ ಉಪನ್ಯಾಸಗಳು, ಸಾಂಸ್ಕೃತಿಕ ಪ್ರದರ್ಶನಗಳು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗಾಗಿ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿವೆ.

ಇತಿಹಾಸದ ನೆಲೆಯಿಂದ ಹುಟ್ಟಿದ ಮಹಾ ಚಳುವಳಿ
ಈ ಮಹೋತ್ಸವದ ಮೂಲ 12ನೇ ಶತಮಾನದ ಮಹಾನ್ ಸಮಾಜ ಸುಧಾರಕ ವಿಶ್ವಬಂಧು ಮರುಳಸಿದ್ಧರ ಚಿಂತನೆಗಳಲ್ಲಿ ಅಡಕವಾಗಿದೆ. ಬಸವಾದಿ ಶಿವಶರಣರ ಸಮಕಾಲೀನರಾಗಿದ್ದ ಮರುಳಸಿದ್ಧರು, ಅಜ್ಞಾನ, ಅಂಧಶ್ರದ್ಧೆ, ಮೂಢನಂಬಿಕೆ ಮತ್ತು ವಾಮಾಚಾರಗಳ ವಿರುದ್ಧ ಹೋರಾಡಿದ ಮಹಾಮಾನವರು. ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದ ಶೋಷಣೆ ಮತ್ತು ಅಸಮಾನತೆಯ ವಿರುದ್ಧ ಧ್ವನಿ ಎತ್ತಿ, ಮಾನವ-ಮಾನವರ ನಡುವೆ ಯಾವುದೇ ಭೇದಭಾವವಿಲ್ಲದ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು.

ತಮ್ಮ ಹುಟ್ಟೂರಾದ ಉಜ್ಜಯಿನಿಯಲ್ಲಿ ಸದ್ಧರ್ಮ ಪೀಠವನ್ನು ಸ್ಥಾಪಿಸಿ, ‘ತರಳಾ–ಬಾಳು’ ಎಂಬ ಪಂಚಾಕ್ಷರಿ ಮಂತ್ರವನ್ನು ಲೋಕಕ್ಕೆ ನೀಡಿದರು. ಈ ಮಂತ್ರದಲ್ಲಿ ಸರ್ವಜನರ ಕಲ್ಯಾಣ ಅಡಕವಾಗಿದ್ದು, ಆ ಐತಿಹಾಸಿಕ ಘಟನೆಯು ನಡೆದ ಹುಣ್ಣಿಮೆಯ ದಿನವೇ ತರಳಬಾಳು ಹುಣ್ಣಿಮೆ ಎಂದು ಪ್ರಸಿದ್ಧಿಯಾಯಿತು. ಆ ಸದ್ಧರ್ಮ ಪರಂಪರೆಯ ಗುರುಗಳೇ ಇಂದಿಗೂ ಲೋಕಮಾನ್ಯರಾದ ತರಳಬಾಳು ಜಗದ್ಗುರುಗಳು.
ಈ ಮಹಾನ್ ಘಟನೆಗೆ ಸ್ಮರಣಾರ್ಥವಾಗಿ ಪ್ರತಿವರ್ಷ ಮಾಘ ಶುದ್ಧ ಸಪ್ತಮಿಯಿಂದ ಹುಣ್ಣಿಮೆಯವರೆಗೆ ಒಂಬತ್ತು ದಿನಗಳ ಕಾಲ ತರಳಬಾಳು ಹುಣ್ಣಿಮೆ ಮಹೋತ್ಸವವನ್ನು ಆಚರಿಸಲಾಗುತ್ತಿದೆ.

ಸರಳ ಆಚರಣೆಯಿಂದ ನಾಡಹಬ್ಬದವರೆಗೆ
1949ರಲ್ಲಿ 20ನೇ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಸಿರಿಗೆರೆಯಲ್ಲಿ ಮೊದಲ ಬಾರಿಗೆ ಈ ಮಹೋತ್ಸವವನ್ನು ಸರಳವಾಗಿ ಆಚರಿಸುವ ಮೂಲಕ ಭದ್ರವಾದ ಅಡಿಪಾಯ ಹಾಕಿದರು. 1950ರಲ್ಲಿ ಜಗಳೂರಿನಲ್ಲಿ ನಡೆದ ಮಹೋತ್ಸವಕ್ಕೆ ಇಮಾಂ ಸಾಹೇಬರು ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದು, ಈ ಉತ್ಸವದ ಸರ್ವಧರ್ಮ ಸ್ವಭಾವಕ್ಕೆ ಐತಿಹಾಸಿಕ ಸಾಕ್ಷಿಯಾಯಿತು.
ಅಂದು ಪ್ರಾರಂಭವಾದ ಈ ಆಚರಣೆ ಇಂದು ರಾಜ್ಯ, ದೇಶವನ್ನೇ ಮೀರಿ ವಿಶ್ವಮಾನವ ಸಂದೇಶ ಸಾರುವ ನಾಡಹಬ್ಬವಾಗಿ ಬೆಳದಿದೆ.

ಸರ್ವಧರ್ಮ ಸಂಗಮದ ಮಹಾವೇದಿಕೆ
ತರಳಬಾಳು ಹುಣ್ಣಿಮೆ ಮಹೋತ್ಸವದ ಪ್ರಮುಖ ವೈಶಿಷ್ಟ್ಯವೇ ಸರ್ವಧರ್ಮ ಸಮನ್ವಯ. “ಭಗವಂತನನ್ನು ಸೇರುವ ದಾರಿಗಳು ವಿಭಿನ್ನವಾಗಿರಬಹುದು, ಆದರೆ ಗುರಿ ಒಂದೇ” ಎಂಬ ತತ್ವವನ್ನು ಈ ಮಹೋತ್ಸವ ಜೀವಂತವಾಗಿ ಸಾರುತ್ತದೆ. ಪ್ರತಿದಿನ ಸಂಜೆ ವಿವಿಧ ಧರ್ಮಗಳ ಗುರುಗಳು, ಮಠಾಧೀಶರು, ಸಾಹಿತಿಗಳು, ಚಿಂತಕರು, ಜನನಾಯಕರು ಮತ್ತು ಕಲಾವಿದರು ಜ್ಞಾನ ದಾಸೋಹ ನೀಡುತ್ತಾರೆ.
ಇದು ಧಾರ್ಮಿಕ–ಸಾಂಸ್ಕೃತಿಕ–ಸಾಹಿತ್ಯಕ ಸುಗ್ಗಿಯಂತೆ ಪರಿಣಮಿಸಿದ್ದು, ಧರ್ಮದ ಹೆಸರಿನಲ್ಲಿ ನಡೆಯುವ ಸಂಘರ್ಷಗಳು ಮಾನವನ ಕ್ಷುದ್ರ ಬುದ್ಧಿಯ ಪ್ರತಿಫಲ ಎಂಬ ಸತ್ಯವನ್ನು ಜನಮನದಲ್ಲಿ ಗಟ್ಟಿಯಾಗಿ ನೆಲೆಗೊಳಿಸುತ್ತದೆ.

ನಾಡಿನ ನೋವಿಗೆ ಸ್ಪಂದಿಸಿದ ಮಹೋತ್ಸವ
ಈ ಮಹೋತ್ಸವ ಕೇವಲ ಉಪನ್ಯಾಸ ಮತ್ತು ಪೂಜೆಗಳಿಗೆ ಸೀಮಿತವಾಗಿಲ್ಲ. ನಾಡಿಗೆ ಸಂಕಷ್ಟ ಬಂದಾಗಲೆಲ್ಲಾ ಜನರ ನೋವಿಗೆ ಸ್ಪಂದಿಸುವುದೇ ನಿಜವಾದ ಧರ್ಮ ಎಂಬುದನ್ನು ಬೃಹನ್ಮಠ ಕಾರ್ಯರೂಪಕ್ಕೆ ತಂದಿದೆ.
1986ರ ಭೀಕರ ಬರಗಾಲದ ಸಂದರ್ಭದಲ್ಲಿ, ಮಹೋತ್ಸವವನ್ನು ಬರ ಪರಿಹಾರ ಕಾರ್ಯಕ್ರಮವಾಗಿ ಪರಿವರ್ತಿಸಿ ಮೇವು ಮತ್ತು ಧಾನ್ಯಗಳನ್ನು ಹಂಚಲಾಯಿತು.
1993ರಲ್ಲಿ ಜಗಳೂರಿನಲ್ಲಿ, ಸವರ್ಣೀಯರು ಮತ್ತು ಹರಿಜನರ ನಡುವಿನ ಸಂಘರ್ಷ ಪ್ರಕರಣಗಳನ್ನು ರಾಜೀ ಮೂಲಕ ಮುಕ್ತಾಯಗೊಳಿಸಿ ಸಾಮಾಜಿಕ ಸೌಹಾರ್ದತೆ ಕಾಪಾಡಲಾಯಿತು.
2001ರ ಗುಜರಾತ್ ಭೂಕಂಪದ ಸಂದರ್ಭದಲ್ಲಿ, ಅರಸೀಕೆರೆಯ ಮಹೋತ್ಸವದ ಕೊನೆಯ ದಿನದ ಆಚರಣೆಯನ್ನು ರದ್ದುಪಡಿಸಿ, ಪಾದಯಾತ್ರೆ ಮೂಲಕ ಸಂಗ್ರಹಿಸಿದ ಕಾಣಿಕೆಯನ್ನು ಸಂತ್ರಸ್ತರಿಗೆ ಕಳುಹಿಸಲಾಯಿತು.
ಈ ಮಹೋತ್ಸವ ನಡೆದ ಅನೇಕ ಪ್ರದೇಶಗಳಲ್ಲಿ ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ಸಮುದಾಯ ಭವನಗಳು ನಿರ್ಮಾಣವಾಗಿರುವುದು ಇದರ ಸಾಮಾಜಿಕ ಬದ್ಧತೆಯ ಜೀವಂತ ಉದಾಹರಣೆ.

ಶಿಕ್ಷಣ ಕ್ರಾಂತಿಗೆ ಕಾರಣವಾದ ಬೃಹನ್ಮಠ
ಶಿಕ್ಷಣವೇ ಸಮಾಜ ಪರಿವರ್ತನೆಯ ಮೂಲ ಎಂಬ ನಂಬಿಕೆಯಿಂದ, ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು 1946ರಲ್ಲೇ ಸಿರಿಗೆರೆಯಲ್ಲಿ ಪ್ರೌಢಶಾಲೆ ಆರಂಭಿಸಿದರು. 1962ರಲ್ಲಿ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ ಸ್ಥಾಪನೆಯ ಮೂಲಕ ಗ್ರಾಮೀಣ ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿಗೆ ನಾಂದಿ ಹಾಡಿದರು.
ಇಂದು ಪೂಜ್ಯ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಈ ಸಂಸ್ಥೆ ಕರ್ನಾಟಕದಾದ್ಯಂತ 269 ಶಿಕ್ಷಣ ಸಂಸ್ಥೆಗಳನ್ನು ಯಶಸ್ವಿಯಾಗಿ ನಡೆಸುತ್ತಿದೆ. ಜೊತೆಗೆ ಅಣ್ಣನ ಬಳಗ, ಅಕ್ಕನ ಬಳಗ, ತರಳಬಾಳು ಪ್ರಕಾಶನ, ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಕೃಷಿ ವಿಜ್ಞಾನ ಕೇಂದ್ರಗಳ ಮೂಲಕ ಅಸಂಪ್ರದಾಯಿಕ ಶಿಕ್ಷಣವೂ ಹರಡುತ್ತಿದೆ.

ರೈತರ ಬದುಕಿಗೆ ಆಶಾಕಿರಣವಾದ ಏತ ನೀರಾವರಿ
ಕೃಷಿ ಪ್ರಧಾನ ಬಯಲು ಸೀಮೆಯಲ್ಲಿ ಮಳೆಯ ಮೇಲೆ ಅವಲಂಬಿತ ರೈತರ ಬದುಕನ್ನು ಸುಧಾರಿಸಲು, ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಏತ ನೀರಾವರಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ರಾಜನಹಳ್ಳಿ, ರಣಘಟ್ಟ, ಭರಮಸಾಗರ ಮುಂತಾದ ಯೋಜನೆಗಳಿಂದ ಸಾವಿರಾರು ಕೆರೆಗಳು ತುಂಬಿ, ರೈತರ ಬದುಕು ಹಸನಾಗುತ್ತಿದೆ.
ಮಾನವೀಯತೆಯ ಸಂದೇಶ
ಅಶಾಂತಿ ಮತ್ತು ವಿಭಜನೆಯ ನಡುವೆ ದಾರಿ ತಪ್ಪುತ್ತಿರುವ ಸಮಾಜಕ್ಕೆ ದಿಕ್ಕು ತೋರಿಸುವ ಶಕ್ತಿ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿದೆ. ಭೇದಭಾವದ ಗೋಡೆಗಳನ್ನು ಮುರಿದು, ಸೌಹಾರ್ದತೆ ಹಾಗೂ ಸಹಬಾಳ್ವೆಯ ಸಂಸ್ಕೃತಿಯನ್ನು ಉತ್ತೇಜಿಸುವ ಈ ಮಹೋತ್ಸವವು ಭದ್ರಾವತಿಯ ಮೂಲಕ “ಮಾನವೀಯತೆಯೇ ಮಹಾಧರ್ಮ” ಎಂಬ ಶಾಶ್ವತ ಸಂದೇಶವನ್ನು ಮತ್ತೆ ಸಮಾಜಕ್ಕೆ ಅರ್ಪಿಸಲಿದೆ.








