ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಹಿರಿಯರನ್ನು ಗೌರವಿಸುವ ಸಂಸ್ಕಾರವೇ ಎಸ್ಸೆಸ್ ಅವರ ದೀರ್ಘಾಯುಷ್ಯದ ಗುಟ್ಟು : ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

On: December 27, 2025 1:50 PM
Follow Us:

ಅಮೃತ ಪುರುಷ ಶಾಮನೂರು ಶಿವಶಂಕರಪ್ಪನವರ ಧೀಮಂತ ವ್ಯಕ್ತಿತ್ವಕ್ಕೆ ಸಾಕ್ಷಿಯಾದ ಶಿವಗಣಾರಾಧನೆ

ದಾವಣಗೆರೆ: ಅಜಾತಶತ್ರು, ಸಮಾಜದ ಹಿರಿಯ ಗಣ್ಯರು, ಕೊಡುಗೈ ದಾನಿ, ದಣಿವರಿಯದ ದಾವಣಗೆರೆಯ ಧಣಿ ಲಿಂಗೈಕ್ಯ ಶ್ರೀ ಶಾಮನೂರು ಶಿವಶಂಕರಪ್ಪನವರ ಶಿವಗಣಾರಾಧನೆ ಹಾಗೂ ಶ್ರದ್ಧಾಂಜಲಿ ಸಮರ್ಪಣೆ ಕಾರ್ಯಕ್ರಮವು ಭಕ್ತಿಭಾವ, ಗೌರವ ಹಾಗೂ ಅಪಾರ ಜನಸಾಗರದ ನಡುವೆ ಶುಕ್ರವಾರ ದಾವಣಗೆರೆಯಲ್ಲಿ ಅತ್ಯಂತ ಭವ್ಯವಾಗಿ ನಡೆಯಿತು.

ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ, ಶ್ರೀ ಆದಿಚುಂಚನಗಿರಿ ಸಂಸ್ಥಾನ ಮಠದ ಜಗದ್ಗುರು ಪೂಜ್ಯ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಹಾಗೂ ಶ್ರೀ ಸುತ್ತೂರು ಶ್ರೀಗಳು ಸೇರಿ ಅನೇಕ ಹರಗುರು ಚರಮೂರ್ತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿ, ಮಧ್ಯ ಕರ್ನಾಟಕದ ಹೃದಯಭಾಗವಾದ ದಾವಣಗೆರೆಯನ್ನು ವಿದ್ಯಾಕ್ಷೇತ್ರದಲ್ಲಿ ಧವಳಗಿರಿಯಂತೆ ಕಂಗೊಳಿಸುವಂತೆ ಮಾಡಿದ ಮಹನೀಯ ಶಾಮನೂರು ಶಿವಶಂಕರಪ್ಪನವರು. ಅವರ ಶೈಕ್ಷಣಿಕ ಸೇವೆ ಹಿಮಗಿರಿಯ ಉತ್ತುಂಗ ಶಿಖರದಷ್ಟು ಎತ್ತರದಲ್ಲಿದೆ ಎಂದು ಶ್ಲಾಘಿಸಿದರು.

ಬಾಪೂಜಿ ವಿದ್ಯಾಸಂಸ್ಥೆಗಳ ಅಭಿವೃದ್ಧಿಗೆ ಶಾಮನೂರು ಶಿವಶಂಕರಪ್ಪನವರ ಕೊಡುಗೆ ಅಪಾರವಾಗಿದೆ. ಮಠಾಧೀಶರು, ಎಲ್ಲಾ ಪಕ್ಷಗಳ ರಾಜಕೀಯ ನಾಯಕರು ಒಂದೇ ವೇದಿಕೆಯಲ್ಲಿ ಸೇರಿರುವುದು ಕರ್ನಾಟಕದ ರಾಜಕೀಯ–ಸಾಮಾಜಿಕ ಇತಿಹಾಸದಲ್ಲೇ ಅಪರೂಪದ ಘಟನೆ. ಇದು ಶಾಮನೂರು ಅವರ ವ್ಯಕ್ತಿತ್ವಕ್ಕೆ ದೊರೆತ ಗೌರವದ ಪ್ರತೀಕವಾಗಿದೆ ಎಂದರು.

ಇನ್ನೂ, ಶಾಮನೂರು ಶಿವಶಂಕರಪ್ಪನವರು ದೀರ್ಘಕಾಲ ಆರೋಗ್ಯದಿಂದ ಬದುಕಿದುದಕ್ಕೆ ಅವರ ಮನೆಯ ಸಂಸ್ಕಾರವೇ ಮೂಲ ಕಾರಣ. ಹಿರಿಯರನ್ನು ಪ್ರೀತಿಯಿಂದ, ಗೌರವದಿಂದ ನೋಡಿಕೊಳ್ಳುವ ಮಕ್ಕಳು ಮತ್ತು ಮೊಮ್ಮಕ್ಕಳು ಇದ್ದರೆ, ಹಿರಿಯರು ದೀರ್ಘಾಯುಷ್ಯದಿಂದ ಬದುಕಲು ಸಾಧ್ಯ ಎಂಬುದಕ್ಕೆ ಅವರು ಜೀವಂತ ಉದಾಹರಣೆ ಎಂದು ಮಹಾಸ್ವಾಮೀಜಿ ಹೇಳಿದರು.

ರಾಜಕಾರಣಿಗಳ ಕೊರಳಲ್ಲಿ ರುದ್ರಾಕ್ಷಿ – ಸಿರಿಗೆರೆ ಶ್ರೀಗಳ ಹಾಸ್ಯಮಿಶ್ರಿತ ಸಂದೇಶ

ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಸಿರಿಗೆರೆ ಶ್ರೀಗಳು, ರಾಜಕಾರಣಿಗಳ ಕೊರಳಿಗೆ ರುದ್ರಾಕ್ಷಿ ಮಾಲೆ ಹಾಕಿದ್ದನ್ನು ಉಲ್ಲೇಖಿಸಿ ಹಾಸ್ಯಮಿಶ್ರಿತವಾಗಿ ನುಡಿದರು.
“ಎಲ್ಲಾ ರಾಜಕಾರಣಿಗಳಿಗೂ ರುದ್ರಾಕ್ಷಿ ಯಾಕೆ ಹಾಕಲಾಗಿದೆ ಎಂಬುದು ಯಕ್ಷಪ್ರಶ್ನೆ. ರಾಜಕೀಯ ಬಿಟ್ಟು ಮಠ ಸೇರಿಕೊಳ್ಳಿ ಎಂಬ ಸಂದೇಶವೋ, ಇಲ್ಲವೇ ಶಾಂತಿಯಿಂದ ಇರಿ ಎಂಬ ಸೂಚನೆಯೋ ಗೊತ್ತಿಲ್ಲ” ಎಂದು ಮಾರ್ಮಿಕವಾಗಿ ಹೇಳಿದರು.

ಆದರೆ, ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮರೆತು ಜನಸಾಮಾನ್ಯರ ಒಳಿತಿಗಾಗಿ ಶಾಂತಿ, ಸಮಾಧಾನ ಮತ್ತು ಸದ್ಭಾವನೆಯ ಆಡಳಿತ ನೀಡಬೇಕೆಂಬ ಸಂದೇಶವೇ ರುದ್ರಾಕ್ಷಿಯ ಹಿಂದಿರುವ ಆಶಯವಾಗಿರಬಹುದು ಎಂದು ಅಭಿಪ್ರಾಯಪಟ್ಟರು.

ಅಪಾರ ಗಣ್ಯರ ಉಪಸ್ಥಿತಿ

ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶ್ರೀ ಶಿವರಾಜ್ ಪಾಟೀಲ್ ವಹಿಸಿದ್ದರು. ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪ, ಶ್ರೀ ಬಸವರಾಜ ಬೊಮ್ಮಾಯಿ, ಶ್ರೀ ಜಗದೀಶ್ ಶೆಟ್ಟರ್ ಸೇರಿದಂತೆ ಹಲವಾರು ಮಾಜಿ ಹಾಗೂ ಹಾಲಿ ಸಚಿವರು, ಶಾಸಕರು, ಗಣ್ಯರು ಭಾಗವಹಿಸಿದ್ದರು.

ಲಕ್ಷಾಂತರ ಅಭಿಮಾನಿಗಳು, ಹಿತೈಷಿಗಳು ಮತ್ತು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಲಿಂಗೈಕ್ಯ ಶಾಮನೂರು ಶಿವಶಂಕರಪ್ಪನವರಿಗೆ ಭಾವಪೂರ್ಣ ನಮನ ಸಲ್ಲಿಸಿದರು. ಸಂಪೂರ್ಣ ಕಾರ್ಯಕ್ರಮವು ಭಕ್ತಿ, ಗೌರವ ಮತ್ತು ಸಾಮಾಜಿಕ ಏಕತೆಯ ಅಪೂರ್ವ ದೃಶ್ಯವಾಗಿ ಮೂಡಿಬಂದಿತು.

K.M.Sathish Gowda

Join WhatsApp

Join Now

Facebook

Join Now

Read more

ಕರ್ತವ್ಯದ ಜಾಗೃತಿ ಮತ್ತು ಜ್ಞಾನದ ಬೆಳಕು: ತರಳಬಾಳು ಶ್ರೀ ಹಾಗೂ ಬಸವಕೇಂದ್ರ ಶ್ರೀಗಳ ಹೊಸ ವರ್ಷದ ಸಂದೇಶ

ಬುಕ್ಕಾಂಬುಧಿ ಬೆಟ್ಟದಲ್ಲಿ ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳ ಮಂಗಲ ಮೂರ್ತಿಗೆ ಕುಂಭಾಭಿಷೇಕ

ಲಿಂ. ಜಗದ್ಗುರು ಶ್ರೀ ಗುರುಬಸವ ಮಹಾಸ್ವಾಮಿಗಳ 114ನೇ ಪುಣ್ಯ ಸ್ಮರಣೋತ್ಸವ: ಜನವರಿ 3, 4 ಮತ್ತು 5, 2026ರಂದು ಶಿವಮೊಗ್ಗದ ಬೆಕ್ಕಿನಕಲ್ಮಠದಲ್ಲಿ ಮೂರು ದಿನಗಳ ಧಾರ್ಮಿಕ–ಸಾಂಸ್ಕೃತಿಕ ಮಹೋತ್ಸವ

ಲಿಂಗಧಾರಣೆ ಕೇವಲ ಆಚರಣೆ ಅಲ್ಲ, ಅದು ಅರಿವಿನ ಸಾಧನ : ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು

ಸಮಸಮಾಜ ನಿರ್ಮಾಣವೇ ಆದಿ ಜಗದ್ಗುರುಗಳ ಸಂದೇಶ: ಸಿಎಂ ಸಿದ್ದರಾಮಯ್ಯ

ಜನವರಿ 24ರಿಂದ ಫೆಬ್ರವರಿ 1ರವರೆಗೆ ಭದ್ರಾವತಿಯಲ್ಲಿ ಭಾವೈಕ್ಯದ ಬೆಳಕು ತರಳಬಾಳು ಹುಣ್ಣಿಮೆ ಮಹೋತ್ಸವ – 2026

Leave a Comment