ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಲಿಂ. ಜಗದ್ಗುರು ಶ್ರೀ ಗುರುಬಸವ ಮಹಾಸ್ವಾಮಿಗಳ 114ನೇ ಪುಣ್ಯ ಸ್ಮರಣೋತ್ಸವ: ಜನವರಿ 3, 4 ಮತ್ತು 5, 2026ರಂದು ಶಿವಮೊಗ್ಗದ ಬೆಕ್ಕಿನಕಲ್ಮಠದಲ್ಲಿ ಮೂರು ದಿನಗಳ ಧಾರ್ಮಿಕ–ಸಾಂಸ್ಕೃತಿಕ ಮಹೋತ್ಸವ

On: December 31, 2025 4:41 PM
Follow Us:

556ನೇ ಶಿವಾನುಭವ ಗೋಷ್ಠಿ, ಶರಣ ಸಾಹಿತ್ಯ ಸಮ್ಮೇಳನ, ಭಾವೈಕ್ಯ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನ

ಶಿವಮೊಗ್ಗ: ಮಲೆನಾಡಿನ ಐತಿಹಾಸಿಕ ಹಾಗೂ ಧಾರ್ಮಿಕ ವೈಭವವನ್ನು ಪ್ರತಿಬಿಂಬಿಸುವ ಆನಂದಪುರದ ಶ್ರೀ ಮುರುಘರಾಜೇಂದ್ರ ಮಹಾಸಂಸ್ಥಾನ ಮಠದ ಆಶ್ರಯದಲ್ಲಿ, ಪರಮ ತಪಸ್ವಿ ಲಿಂಗೈಕ್ಯ ಜಗದ್ಗುರು ಶ್ರೀ ಗುರುಬಸವ ಮಹಾಶಿವಯೋಗಿಗಳವರ 114ನೇ ಪುಣ್ಯ ಸ್ಮರಣೋತ್ಸವ, 556ನೇ ಶಿವಾನುಭವ ಗೋಷ್ಠಿ, ಶರಣ ಸಾಹಿತ್ಯ ಸಮ್ಮೇಳನ, ಭಾವೈಕ್ಯ ಸಮ್ಮೇಳನ ಹಾಗೂ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭಗಳು ದಿನಾಂಕ 03, 04 ಮತ್ತು 05 ಜನವರಿ 2026ರಂದು ಶಿವಮೊಗ್ಗ ನಗರದ ಶ್ರೀ ಗುರುಬಸವ ಭವನ, ಶ್ರೀ ಬೆಕ್ಕಿನಕಲ್ಮಠದಲ್ಲಿ ವಿಜೃಂಭಣೆಯಿಂದ ನಡೆಯಲಿದೆ.

ಈ ಮಹತ್ವದ ಕಾರ್ಯಕ್ರಮವನ್ನು ಗುರುಬಸವ ಅಧ್ಯಯನ ಪೀಠ, ಶ್ರೀ ಮುರುಘರಾಜೇಂದ್ರ ಮಹಾಸಂಸ್ಥಾನ ಮಠ ಟ್ರಸ್ಟ್ (ರಿ.), ಶ್ರೀ ಬೆಕ್ಕಿನಕಲ್ಮಠ, ಶಿವಮೊಗ್ಗ ಇವರ ವತಿಯಿಂದ ಆಯೋಜಿಸಲಾಗಿದ್ದು, ಜಗದ್ಗುರು ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಧಾರ್ಮಿಕ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಜರುಗಲಿವೆ.

ಲಿಂ. ಜಗದ್ಗುರು ಶ್ರೀ ಗುರುಬಸವ ಮಹಾಸ್ವಾಮಿಗಳ 114ನೇ ಪುಣ್ಯ ಸ್ಮರಣೋತ್ಸವ ಅಂಗವಾಗಿ ಜಗದ್ಗುರು ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳ ಪತ್ರಿಕಾಗೋಷ್ಠಿ

ಯುವ ಸಮುದಾಯದ ಭವಿಷ್ಯಕ್ಕಾಗಿ ಆತಂಕ: ಮೊಬೈಲ್ ದುಷ್ಪರಿಣಾಮಗಳ ಕುರಿತು ಎಚ್ಚರಿಕೆ

ಇಂದಿನ ಯುವಕರು ಹಾಗೂ ಯುವತಿಯರು ಅತಿಯಾದ ಮೊಬೈಲ್ ಬಳಕೆಗೆ ಒಳಗಾಗುತ್ತಿರುವುದು ಗಂಭೀರ ಚಿಂತನೆಯ ವಿಷಯವಾಗಿದ್ದು, ಇದರ ದುಷ್ಪರಿಣಾಮಗಳು ಮುಂದಿನ ದಿನಗಳಲ್ಲಿ ಆರೋಗ್ಯದ ಮೇಲೆ ಭಾರೀ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆನಂದಪುರದ ಶ್ರೀ ಬೆಕ್ಕಿನಕಲ್ಮಠದ ಜಗದ್ಗುರು ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಆತಂಕ ವ್ಯಕ್ತಪಡಿಸಿದರು.

ಪರಮ ತಪಸ್ವಿ ಲಿಂಗೈಕ್ಯ ಜಗದ್ಗುರು ಶ್ರೀ ಗುರುಬಸವ ಮಹಾಸ್ವಾಮಿಗಳವರ 114ನೇ ಪುಣ್ಯ ಸ್ಮರಣೋತ್ಸವ, 556ನೇ ಶಿವಾನುಭಾವ ಗೋಷ್ಠಿ ಶರಣ ಸಾಹಿತ್ಯ ಸಮ್ಮೇಳನ ಹಾಗೂ ಭಾವೈಕ್ಯ ಸಮ್ಮೇಳನ ಪ್ರಶಸ್ತಿ ಪ್ರದಾನ ಸಮಾರಂಭದ ಅಂಗವಾಗಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಆಧುನಿಕ ಯುಗದಲ್ಲಿ ಎಐ ತಂತ್ರಜ್ಞಾನ ಇಡೀ ಪ್ರಪಂಚವನ್ನು ಆವರಿಸಿಕೊಂಡಿದೆ. ತಂತ್ರಜ್ಞಾನ ಅಗತ್ಯವೇ ಸರಿ, ಆದರೆ ಅದಕ್ಕೆ ಮಿತಿಯಿರಬೇಕು. ಯುವ ಸಮುದಾಯದ ಕಡೆಗೆ ನಾವು ಗಮನ ಹರಿಸದೇ ಹೋದರೆ ಭವಿಷ್ಯದಲ್ಲಿ ಸಮಾಜವೇ ದೊಡ್ಡ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಯುವಕರಿಗೆ ಮೊಬೈಲ್ ಬಳಕೆಯಿಂದ ಉಂಟಾಗುವ ಮಾನಸಿಕ ಒತ್ತಡ, ಆರೋಗ್ಯ ಸಮಸ್ಯೆಗಳು ಹಾಗೂ ಸಾಮಾಜಿಕ ಸಂಪರ್ಕ ಕಡಿಮೆಯಾಗುತ್ತಿರುವ ಸ್ಥಿತಿ ಬಗ್ಗೆ ಅರಿವು ಮೂಡಿಸುವುದು ಇಂದು ಕಷ್ಟಕರವಾಗುತ್ತಿದೆ. ಆದರೂ ಪೋಷಕರು, ಸಮಾಜದ ಹಿರಿಯರು ಮತ್ತು ಧಾರ್ಮಿಕ ಸಂಸ್ಥೆಗಳು ಕೈಜೋಡಿಸಿ ಯುವಕರನ್ನು ಸರಿದಾರಿಗೆ ತರುವ ಪ್ರಯತ್ನ ಮಾಡಬೇಕಾಗಿದೆ ಎಂದು ಅವರು ಹೇಳಿದರು.

ಇದೇ ಉದ್ದೇಶದಿಂದ ಈ ವರ್ಷದ ಮಹೋತ್ಸವದ ಸಂದರ್ಭದಲ್ಲಿ ಯುವ ಸಮುದಾಯವನ್ನು ನಮ್ಮ ಸಂಸ್ಕೃತಿ–ಪರಂಪರೆಯೊಂದಿಗೆ ಜೋಡಿಸುವ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ವಚನ ಗಾಯನ, ಜಾನಪದ ಗೀತೆಗಳ ಗಾಯನ, ರಂಗೋಲಿ ಸ್ಪರ್ಧೆ, ವಚನ ಕಂಠಪಾಠ ಸ್ಪರ್ಧೆ, ಜಿಲ್ಲಾ ಮಟ್ಟದ ಶಿವ ಭಜನಾ ಸ್ಪರ್ಧೆ, ಸರ್ವಧರ್ಮ ಮಹಾಪುರುಷರ ವೇಷಭೂಷಣ ಸ್ಪರ್ಧೆ, ಆನ್‌ಲೈನ್ ಪ್ರಶೋತ್ತರ ಸ್ಪರ್ಧೆ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ ಎಂದು ವಿವರಿಸಿದರು.

ಮೂರು ದಿನಗಳ ಕಾರ್ಯಕ್ರಮಗಳ ವೈಭವ

ಜನವರಿ 3, ಶನಿವಾರ ಬೆಳಿಗ್ಗೆ 10 ಗಂಟೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ, ವಚನ ಗಾಯನ ಹಾಗೂ ವಚನ ಕಂಠಪಾಠ ಸ್ಪರ್ಧೆಗಳು ನಡೆಯಲಿವೆ. ಸಂಜೆ 4 ಗಂಟೆಗೆ 114 ಮಹಿಳೆಯರಿಂದ ಸಾಮೂಹಿಕ ವಚನ ಗಾಯನ ಆಯೋಜಿಸಲಾಗಿದೆ. ಅದೇ ದಿನ ಸಂಜೆ 5 ಗಂಟೆಗೆ 556ನೇ ಶಿವಾನುಭವ ಗೋಷ್ಠಿ ಹಾಗೂ ಗುರುಬಸವಶ್ರೀ ಮತ್ತು ಅಕ್ಕಮಹಾದೇವಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಗುರುಬಸವಶ್ರೀ ಪ್ರಶಸ್ತಿಯನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ.ವೈ. ರಾಘವೇಂದ್ರ ಹಾಗೂ ಅಕ್ಕಮಹಾದೇವಿ ಪ್ರಶಸ್ತಿಯನ್ನು ಖ್ಯಾತ ಸಾಹಿತಿ ಡಾ. ಜಯಶ್ರೀ ದಂಡ ಅವರಿಗೆ ಪ್ರದಾನ ಮಾಡಲಾಗುತ್ತದೆ.

ಜನವರಿ 4, ಭಾನುವಾರ ಬೆಳಿಗ್ಗೆ ರಂಗೋಲಿ ಹಾಗೂ ಜಾನಪದ ಗೀತೆಗಳ ಸ್ಪರ್ಧೆಗಳು ನಡೆಯಲಿದ್ದು, ಮಹಿಳಾ ಸಂಘಟನೆಗಳು, ಶರಣ ಸಾಹಿತ್ಯ ಪರಿಷತ್ತು ಹಾಗೂ ವಿವಿಧ ಸಾಮಾಜಿಕ ಸಂಘಟನೆಗಳ ಸಕ್ರಿಯ ಭಾಗವಹಿಸುವಿಕೆ ಇರಲಿದೆ.

ಜನವರಿ 5, ಸೋಮವಾರ ಬೆಳಿಗ್ಗೆ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ, ಶೂನ್ಯ ಪೀಠಾರೋಹಣ ಕಾರ್ಯಕ್ರಮಗಳು ನಡೆಯಲಿದ್ದು, ಜಿಲ್ಲಾ ಮಟ್ಟದ ಶಿವ ಭಜನಾ ಸ್ಪರ್ಧೆ, ಆನ್‌ಲೈನ್ ಪ್ರಶ್ನೋತ್ತರ ಸ್ಪರ್ಧೆ ಹಾಗೂ ಮಕ್ಕಳಿಗಾಗಿ ಸರ್ವಧರ್ಮ ಮಹಾಪುರುಷರ ವೇಷಭೂಷಣ ಸ್ಪರ್ಧೆಗಳು ನಡೆಯಲಿವೆ.

ಸಂಜೆ 4.30ಕ್ಕೆ ಭಾವೈಕ್ಯ ಸಮ್ಮೇಳನ ನಡೆಯಲಿದ್ದು, ಭಾವೈಕ್ಯತಾ ಪ್ರಶಸ್ತಿ ಗಾಂಧಿ ಬಸಪ್ಪ ಮತ್ತು ಹಳದಮ್ಮ ಪ್ರತಿಷ್ಠಾನ (ರಿ.), ಶಿವಮೊಗ್ಗ ಅವರಿಗೆ ಪ್ರದಾನ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಹೆಚ್.ಕೆ. ಪಾಟೀಲ್ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ.

ಈ ಸಮಗ್ರ ಕಾರ್ಯಕ್ರಮವು ಧರ್ಮ, ಸಾಹಿತ್ಯ, ಸಂಸ್ಕೃತಿ ಹಾಗೂ ಸಾಮಾಜಿಕ ಭಾವೈಕ್ಯತೆಯ ಸಂದೇಶವನ್ನು ಸಮಾಜದ ಎಲ್ಲಾ ವರ್ಗಗಳಿಗೆ ತಲುಪಿಸುವ ಉದ್ದೇಶ ಹೊಂದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ಜಗದ್ಗುರುಗಳು ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಕೆ.ಎಸ್. ತಾರಾನಾಥ್ (ಅಧ್ಯಕ್ಷರು, 114ನೇ ಪುಣ್ಯ ಸ್ಮರಣೋತ್ಸವ ಸಮಿತಿ), ಹರ್ಷ ರುದ್ರೇಗೌಡ (ಪ್ರಚಾರ ಸಮಿತಿ ಅಧ್ಯಕ್ಷರು), ಎಸ್.ಎಸ್. ಜ್ಯೋತಿಪ್ರಕಾಶ್ (ಅಧ್ಯಕ್ಷರು, ಬಸವೇಶ್ವರ ವೀರಶೈವ ಲಿಂಗಾಯತ ಸಮಾಜ), ಎಸ್.ಎನ್. ಮಹಾಲಿಂಗಯ್ಯ ಶಾಸ್ತ್ರಿ (ಪ್ರಧಾನ ಕಾರ್ಯದರ್ಶಿ), ಡಾ. ಸಿ. ರೇಣುಕಾರಾಧ್ಯ (ಸಂಚಾಲಕರು), ಬಿ. ಶಿವರಾಜ್ (ದಾಸೋಹ ಸಮಿತಿ ಅಧ್ಯಕ್ಷರು), ಮಾಜಿ ಪಾಲಿಕೆ ಸದಸ್ಯ ಹೆಚ್.ಸಿ. ಯೋಗೀಶ್, ಶ್ರೀಮತಿ ಶಾಂತ ಆನಂದ, ಶ್ರೀಮತಿ ರತ್ನಮ್ಮ, ವಿ.ಟಿ. ಅರುಣ್ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Leave a Comment