ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

“ವಿಶ್ವ ಅಶಾಂತಿಗೆ ಬಸವತತ್ವವೇ ಔಷಧ”: ಜರ್ಮನಿಯ ನೆಲದಲ್ಲಿ ವಿಶ್ವಶಾಂತಿಯ ಸಂದೇಶ ಸಾರಿದ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿ

On: May 19, 2026 4:33 PM
Follow Us:

ಯುರೋಪ್: ಜರ್ಮನಿಯ ಎರ್ಲಂಗನ್ ನಗರದಲ್ಲಿ ‘ಬಸವ ಸಮಿತಿ ಯುರೋಪ್’ ವತಿಯಿಂದ ಆಯೋಜಿಸಲಾಗಿದ್ದ ಬಸವ ಜಯಂತಿ ಮಹೋತ್ಸವವು ವೈಚಾರಿಕ ಮತ್ತು ಸಾಂಸ್ಕೃತಿಕ ಕಾರಣಗಳಿಗಾಗಿ ಜಾಗತಿಕ ಗಮನ ಸೆಳೆಯಿತು. ಈ ಐತಿಹಾಸಿಕ ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ವಹಿಸಿದ್ದ ಚಿಕ್ಕಮಗಳೂರಿನ ಶ್ರೀ ಬಸವತತ್ವ ಪೀಠ ಹಾಗೂ ಶಿವಮೊಗ್ಗ ಬಸವಕೇಂದ್ರದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿಯವರು ನೀಡಿದ ಆಶೀರ್ವಚನವು ಕೇವಲ ಒಂದು ಧಾರ್ಮಿಕ ಭಾಷಣವಾಗಿರಲಿಲ್ಲ, ಬದಲಿಗೆ ಅದು ಪ್ರಸ್ತುತ ಜಗತ್ತು ಎದುರಿಸುತ್ತಿರುವ ಯುದ್ಧೋನ್ಮಾದ, ಹಿಂಸೆ ಮತ್ತು ಅಸಹನೆಗೆ ಬಸವಣ್ಣನವರ ಕಾಯಕ-ದಾಸೋಹ ಸಂಸ್ಕೃತಿಯೇ ಪರಮ ಔಷಧ ಎಂಬುದನ್ನು ಸಾರುವ ದಿಕ್ಸೂಚಿಯಾಗಿತ್ತು.

​ಪೂಜ್ಯ ಸ್ವಾಮೀಜಿಯವರ ನಡೆ-ನುಡಿಗಳಲ್ಲಿ ಸದಾ ಜಾಗೃತವಾಗಿರುವ ಭಾಷಾ ಪ್ರೇಮ ಮತ್ತು ಅಗಾಧ ಇತಿಹಾಸ ಪ್ರಜ್ಞೆಯು ಜರ್ಮನಿಯ ನೆಲದಲ್ಲೂ ಅತ್ಯಂತ ಸುಂದರವಾಗಿ ಮಿನುಗಿತು. ತಮಗೆ ಜರ್ಮನಿಯ ಈ ಬಸವ ಜಯಂತಿಯಲ್ಲಿ ಭಾಗವಹಿಸಲು ಆ ದೇಶದ ಹೆಮ್ಮೆಯ ಕನ್ನಡಿಗರಾದ ಹೇಮೇಗೌಡ ಅವರು ಭಕ್ತಿಪೂರ್ವಕ ಆಹ್ವಾನ ನೀಡಿದ ತಕ್ಷಣ, ಪೂಜ್ಯ ಶ್ರೀಗಳವರ ಜ್ಞಾನಗಂಗೆಯಲ್ಲಿ ಮೂಡಿದ್ದು ಜರ್ಮನಿ ದೇಶದವರೇ ಆದರೂ ಕನ್ನಡದ ತಪಸ್ವಿಯಂತೆ ಬಾಳಿದ ರೆವರೆಂಡ್ ಫರ್ಡಿನೆಂಡ್ ಕಿಟೆಲ್ ಅವರ ದಿವ್ಯ ಸ್ಮರಣೆ!

​ಕನ್ನಡ ಸಾಹಿತ್ಯ, ಇತಿಹಾಸಗಳಿಗೆ ಅಪಾರ ಕೊಡುಗೆ ನೀಡಿದ ಕಿಟೆಲ್ ಅವರು ಹುಟ್ಟಿನಿಂದ ಜರ್ಮನಿಯವರಾಗಿದ್ದರೂ, ಕನ್ನಡ ಭಾಷೆ ಮತ್ತು ಇತಿಹಾಸಗಳ ಪ್ರಜ್ಞೆಯುಳ್ಳ ಪ್ರತಿಯೊಬ್ಬ ಸೃಜನಶೀಲ ಕನ್ನಡಿಗನ ದೃಷ್ಟಿಯಲ್ಲಿ ಅವರು ಅಪ್ಪಟ ಕನ್ನಡದವರೇ ಆಗಿದ್ದಾರೆ ಎಂಬುದನ್ನು ಶ್ರೀಗಳು ನೆನಪಿಸಿದರು. ಕಿಟೆಲ್ ಅವರು ಕೇವಲ ಕನ್ನಡ ಭಾಷೆಯನ್ನು ಕಲಿತು ಸುಮ್ಮನಾಗಲಿಲ್ಲ; ಬದಲಿಗೆ ಕನ್ನಡದ ವಿಶಿಷ್ಟ ಹಾಗೂ ಪ್ರಸಿದ್ಧ ಛಂದಸ್ಸಾದ ‘ಭಾಮಿನಿ ಷಟ್ಪದಿ’ಯನ್ನು ಆಳವಾಗಿ ಅಭ್ಯಸಿಸಿ, ಅದೇ ಶೈಲಿಯಲ್ಲಿ ‘ಕ್ರಿಸ್ತ ಚರಿತೆ’ಯನ್ನು ಬರೆದ ಮಹಾನ್ ಮೇಧಾವಿ ಎಂಬುದನ್ನು ಶ್ರೀಗಳು ಕೊಂಡಾಡಿದರು.

ಅಷ್ಟೇ ಅಲ್ಲದೆ, ಕಿಟೆಲ್ ಅವರು ಕನ್ನಡ ನಾಡಿಗೆ ನೀಡಿದ ಅತ್ಯಮೂಲ್ಯ ಕೊಡುಗೆಯಾದ ‘ಕನ್ನಡ-ಕನ್ನಡ-ಇಂಗ್ಲಿಷ್ ನಿಘಂಟು’ವಿನ ಮಹತ್ವವನ್ನು ಶ್ರೀಗಳು ಪ್ರಸ್ತಾಪಿಸಿದರು. ಇದುವರೆಗೂ ಕನ್ನಡ ಭಾಷಾ ಲೋಕದಲ್ಲಿ ಬಂದಿರುವ ಕೆಲವೇ ಕೆಲವು ಉತ್ಕೃಷ್ಟ ನಿಘಂಟುಗಳಲ್ಲಿ ಕಿಟೆಲ್ ನಿಘಂಟು ಇಂದಿಗೂ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ ಎಂದು ಅವರ ವಿದ್ವತ್ತಿಗೆ ಶ್ರೀಗಳು ಗೌರವ ನಮನ ಸಲ್ಲಿಸಿದರು.

​ಇದೇ ಸಂದರ್ಭದಲ್ಲಿ ಪ್ರಸ್ತುತ ತಂತ್ರಜ್ಞಾನ ಲೋಕದಲ್ಲಿ ಕನ್ನಡದ ಸೇವೆಯಲ್ಲಿ ತೊಡಗಿಸಿಕೊಂಡಿರುವ ‘ಸಂಚಿ ಫೌಂಡೇಷನ್’ ಸಂಸ್ಥೆಯ ಯುವಕರ ಸಾಧನೆಯನ್ನು ಶ್ರೀಗಳು ಮುಕ್ತಕಂಠದಿಂದ ಶ್ಲಾಘಿಸಿದರು. ಕಿಟೆಲ್ ಅವರ ಕಾಲದಲ್ಲಿ ಮುದ್ರಣಕ್ಕೆ ಬಳಸುತ್ತಿದ್ದ ವಿಶಿಷ್ಟ ಕನ್ನಡ ಅಕ್ಷರಗಳನ್ನು ಇಂದಿನ ಡಿಜಿಟಲ್ ಯುಗಕ್ಕೆ ತಕ್ಕಂತೆ ಯೂನಿಕೋಡ್‌ಗೆ ಅಭಿವೃದ್ಧಿಗೊಳಿಸಿ, ಅದನ್ನು ಎಲ್ಲರ ಬಳಕೆಗೆ ಉಚಿತವಾಗಿ ಮುಕ್ತವಾಗಿಟ್ಟಿರುವ ಯುವಕರ ಕಾರ್ಯವನ್ನು ಶ್ರೀಗಳು ಪ್ರಶಂಸಿಸಿದರು. ಅಲ್ಲದೆ, ಆ ಅಕ್ಷರಗಳಿಗೆ ‘ಕಿಟೆಲ್ ಫಾಂಟ್’ ಎಂದು ಹೆಸರಿಟ್ಟು ಕಿಟೆಲ್ ಅವರ ಕೊಡುಗೆಯನ್ನು ಹೃತ್ಪೂರ್ವಕವಾಗಿ ಸ್ಮರಿಸಿರುವ ಯುವಕರ ಕೃತಜ್ಞತಾ ಭಾವವನ್ನು ಶ್ಲಾಘಿಸಿದ ಉದಾತ್ತ ಮನಸ್ಸು ಪೂಜ್ಯ ಶ್ರೀಗಳದ್ದಾಗಿತ್ತು. ಈ ಹಿನ್ನೆಲೆಯಲ್ಲಿ, ರೆವರೆಂಡ್ ಫರ್ಡಿನೆಂಡ್ ಕಿಟೆಲ್ ಅವರ ತಾಯ್ನಾಡಿನಲ್ಲಿ ಬಸವ ಜಯಂತಿಯ ಆಚರಣೆಯಲ್ಲಿ ಭಾಗವಹಿಸಲು ತಮಗೆ ಅವಕಾಶ ಕಲ್ಪಿಸಿಕೊಟ್ಟ ‘ಬಸವ ಸಮಿತಿ ಯುರೋಪ್’ನ ಪ್ರತಿಯೊಬ್ಬ ಸದಸ್ಯರಿಗೂ ಶ್ರೀಗಳು ತಮ್ಮ ಆಶೀರ್ವಾದಪೂರ್ವಕ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಮರ್ಪಿಸಿದರು.

​ಯಾವುದೇ ಸಂವೇದನಾಶೀಲ ಮತ್ತು ವೈಚಾರಿಕ ಮನಸ್ಸು ಜರ್ಮನಿ ಎಂದಾಕ್ಷಣ ನೆನಪು ಮಾಡಿಕೊಳ್ಳುವ ಇನ್ನೊಂದು ಧೀಮಂತ ಹೆಸರು ಮಾರ್ಟಿನ್ ಲೂಥರ್ ಅವರದ್ದು. ಕ್ರೈಸ್ತ ಧರ್ಮದ ಸುಧಾರಣೆಯಲ್ಲಿ ಮತ್ತು ಮಾನವೀಯ ಮೌಲ್ಯಗಳ ಜಾಗೃತಿಯಲ್ಲಿ ತಮ್ಮ ಬದುಕಿನ ಸಾರ್ಥಕತೆಯನ್ನು ಕಂಡುಕೊಂಡ ಮಹಾನ್ ಚೇತನ ಲೂಥರ್. ಅಂದು ಅತ್ಯಂತ ಕಠಿಣವಾಗಿದ್ದ ಹೀಬ್ರೂ ಭಾಷೆಯಿಂದ ಪವಿತ್ರ ಬೈಬಲ್ಲನ್ನು ಜರ್ಮನ್ ಭಾಷೆಗೆ ಅನುವಾದಿಸಿದ್ದು ಅಂದಿನ ಕಾಲದ ಅತ್ಯಂತ ಕ್ರಾಂತಿಕಾರಿ ಹಾಗೂ ಜನಮುಖಿ ಕಾರ್ಯವಾಗಿತ್ತು ಎಂಬುದನ್ನು ಶ್ರೀಗಳು ನೆನಪಿಸಿದರು.

​ಕ್ರೈಸ್ತ ಧರ್ಮವು ಜಾಗತಿಕವಾಗಿ ಪ್ರಚಾರವಾಗಲು ಮತ್ತು ಸಾಮಾನ್ಯ ಜನರನ್ನು ತಲುಪಲು ಮಾರ್ಟಿನ್ ಲೂಥರ್ ಅವರ ಕೊಡುಗೆಗಳು ಅಪಾರವಾಗಿವೆ. ಕಲ್ಯಾಣದ ಕ್ರಾಂತಿಕಾರಿ ಜಗದ್ಗುರು ಬಸವಣ್ಣನವರಂತೆಯೇ, ಧರ್ಮ ಎಂಬುದು ಕೇವಲ ಆಚರಣೆಯಾಗದೇ ಅದು ಜನಸಾಮಾನ್ಯರ ಅಭ್ಯುದಯಕ್ಕೆ ಮತ್ತು ಸಾಮಾಜಿಕ ಸಮಾನತೆಗೆ ಆಧಾರವಾಗಬೇಕೆಂದು ಬಯಸಿ, ಅದರಲ್ಲಿ ಯಶಸ್ಸು ಕಂಡ ಮಾರ್ಟಿನ್ ಲೂಥರ್ ಅವರನ್ನು ಜರ್ಮನಿಯ ನೆಲದಲ್ಲಿ ಸ್ಮರಿಸಿಕೊಳ್ಳಲೇಬೇಕು ಎಂದು ಶ್ರೀಗಳು ಪ್ರತಿಪಾದಿಸಿದ ವೈಖರಿ ಅವರ ವಿಶಾಲ ಅಂತರರಾಷ್ಟ್ರೀಯ ವೈಚಾರಿಕತೆಗೆ ಹಿಡಿದ ಕನ್ನಡಿಯಾಗಿತ್ತು.

​ಜಗತ್ತನ್ನು ಕಾಡುತ್ತಿರುವ ಅಶಾಂತಿ, ಹಿಂಸೆ ಮತ್ತು ಭಯೋತ್ಪಾದನೆಯ ವಿಕೃತಿಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಲು ಶ್ರೀಗಳು ಬಸವಣ್ಣನವರ ಪ್ರಸಿದ್ಧ ವಚನವನ್ನು ಉಲ್ಲೇಖಿಸಿದರು:

​”ದಯವಿಲ್ಲದ ಧರ್ಮವದೇವುದಯ್ಯಾ?
ದಯವೇ ಬೇಕು ಸರ್ವಪ್ರಾಣಿಗಳೆಲ್ಲರಲ್ಲಿ,
ದಯವೇ ಧರ್ಮದ ಮೂಲವಯ್ಯಾ,
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ.”

​ಈ ದಿವ್ಯ ವಚನದ ಆಶಯವನ್ನು ವಿವರಿಸಲು ಶ್ರೀಗಳು ಬಳಸಿದ ದೃಷ್ಟಾಂತ ಅತ್ಯಂತ ಸೂಕ್ಷ್ಮ ಹಾಗೂ ಪ್ರಭಾವಶಾಲಿಯಾಗಿತ್ತು. 2015ರ ನವೆಂಬರ್ 14ರಂದು ಭಾರತದ ಸನ್ಮಾನ್ಯ ಪ್ರಧಾನಿಗಳಾದ ನರೇಂದ್ರ ಮೋದಿಯವರು ಲಂಡನ್‌ ನಗರದ ಥೇಮ್ಸ್ ನದಿಯ ದಂಡೆಯಲ್ಲಿ ವಿಶ್ವಗುರು ಬಸವಣ್ಣನವರ ಭವ್ಯ ಪುತ್ಥಳಿಯನ್ನು ಅನಾವರಣಗೊಳಿಸಿದರು. ಆದರೆ, ವಿಪರ್ಯಾಸವೆಂದರೆ ಅದರ ಹಿಂದಿನ ದಿನವಷ್ಟೇ, ಅಂದರೆ 2015ರ ನವೆಂಬರ್ 13ರಂದು ಪ್ಯಾರೀಸ್ ನಗರದಲ್ಲಿ ಭೀಕರ ಭಯೋತ್ಪಾದಕ ದಾಳಿಯಾಗಿ ನೂರಾರು ಜನ ಅಮಾಯಕರು ಕ್ರೂರವಾಗಿ ಪ್ರಾಣ ಕಳೆದುಕೊಳ್ಳಬೇಕಾಯಿತು.

​ಈ ಎರಡೂ ಘಟನೆಗಳನ್ನು ಕಂಡು ಮರುಗಿದ ಶಿವಮೊಗ್ಗದ ಖ್ಯಾತ ವ್ಯಂಗ್ಯಚಿತ್ರ ಕಲಾವಿದರಾದ ರಾಮಧ್ಯಾನಿ ಅವರ ಹೃದಯವು ಸೃಷ್ಟಿಸಿದ ಒಂದು ಶಕ್ತಿಶಾಲಿ ವ್ಯಂಗ್ಯಚಿತ್ರವನ್ನು ಶ್ರೀಗಳು ಇಲ್ಲಿ ಮಾರ್ಮಿಕವಾಗಿ ಉಲ್ಲೇಖಿಸಿದರು. ಆ ಚಿತ್ರದಲ್ಲಿ ಲಂಡನ್‌ ನಗರದಲ್ಲಿ ಅನಾವರಣಗೊಂಡ ಬಸವಣ್ಣನವರ ಶಾಂತಮೂರ್ತಿ ಹಾಗೂ ರಕ್ತಸಿಕ್ತವಾಗಿ ಭಯೋತ್ಪಾದಕರ ಹೇಯಕೃತ್ಯಕ್ಕೆ ಸಾಕ್ಷಿಯಾದ ಪ್ಯಾರಿಸ್‌ನ ಐಫೆಲ್ ಟವರ್‌ಗಳನ್ನು ಮುಖಾಮುಖಿಯಾಗಿಸಿ ಚಿತ್ರಿಸಲಾಗಿತ್ತು.

ಆ ಚಿತ್ರದಲ್ಲಿ ಐಫೆಲ್ ಟವರನ್ನು ಆವರಿಸಿಕೊಂಡಿರುವ ವಿಕೃತ ಮುಖವೊಂದು ‘ಭಯವೇ ಧರ್ಮದ ಮೂಲ’ ಎಂದು ಅಹಂಕಾರದಿಂದ ಹೇಳುತ್ತಿರುವಂತೆಯೂ, ಅದಕ್ಕೆ ಪ್ರತಿಯಾಗಿ ಬಸವಣ್ಣನವರ ಪುತ್ಥಳಿಯು ಅತ್ಯಂತ ಕರುಣೆಯಿಂದ ‘ದಯವೇ ಧರ್ಮದ ಮೂಲ’ ಎಂದು ಸಾರುತ್ತಿರುವಂತೆಯೂ ಕಲ್ಪಿಸಲಾಗಿತ್ತು.

ಬಸವಣ್ಣನವರ ‘ದಯವೇ ಧರ್ಮದ ಮೂಲ’ ಎಂಬ ಪವಿತ್ರ ನುಡಿಗಟ್ಟಿನ ವಿಕೃತ ರೂಪವೇ ‘ಭಯವೇ ಧರ್ಮದ ಮೂಲ’ ಎಂಬುದನ್ನು ಭಯೋತ್ಪಾದಕನ ಆ ವಿಕೃತ ಮುಖಭಾವದಲ್ಲಿ ಎದ್ದು ಕಾಣುವಂತೆ ಕಲಾವಿದರು ಚಿತ್ರಿಸಿದ್ದರು. ಕಲಾವಿದ ರಾಮಧ್ಯಾನಿಯವರು ಬಸವಣ್ಣನವರ ಮೂರ್ತಿಯ ಅನಾವರಣ ಮತ್ತು ಭಯೋತ್ಪಾದಕ ಕೃತ್ಯಗಳನ್ನು ಕಂಡು ಬರೆದ ಸಶಕ್ತ ಹಾಗೂ ನೋವಿನ ವ್ಯಾಖ್ಯೆ ಅದಾಗಿತ್ತು ಎಂದು ಶ್ರೀಗಳು ಬಣ್ಣಿಸಿದರು.

ಒಂದೆಡೆ ಧರ್ಮದ ಮೂಲ ದಯೆಯಲ್ಲದೇ ಬೇರೇನೂ ಅಲ್ಲ ಎಂದು ನಂಬಿ ಬಾಳಿದ ಶರಣರ ಪುತ್ಥಳಿಯ ಅನಾವರಣವಾದರೆ, ಅದೇ ಸಂದರ್ಭದಲ್ಲಿ ಇನ್ನೊಂದೆಡೆ ಭಯವನ್ನು ಉತ್ಪಾದಿಸಿ ಧರ್ಮದ ಅಪವ್ಯಾಖ್ಯಾನ ಮಾಡುವ ಕ್ರೂರಿಗಳ ದುಷ್ಕೃತ್ಯದ ಅನಾವರಣವಾಗಿತ್ತು. ಇಡೀ ಜಗತ್ತು ಇಂದು ದಯಾಮೂಲವಾದ ಧರ್ಮಮಾರ್ಗಕ್ಕೆ ವಿಕೃತ ಭಯದ ಅಧರ್ಮ ಮುಖಾಮುಖಿಯಾಗಿ ಸಾಗುತ್ತಿರುವುದರ ಸಂಕೇತವೇ ಆ ವ್ಯಂಗ್ಯಚಿತ್ರವಾಗಿತ್ತು ಎಂದು ಶ್ರೀಗಳು ವಿಶ್ಲೇಷಿಸಿದರು.

‘ಧೃ’ ಎಂಬ ಸಂಸ್ಕೃತದ ಮೂಲ ಧಾತುವಿನಿಂದ ಉತ್ಪತ್ತಿಯಾದ ‘ಧರ್ಮ’ ಪದದ ನೈಜ ಅರ್ಥವೇ ‘ಧಾರಣೆ ಮಾಡುವುದು’ ಅಥವಾ ‘ಎತ್ತಿಹಿಡುವುದು’ ಎಂದಾಗಿದೆ. ಆದರೆ ಇಂದು ಈ ದಿವ್ಯ ಮೌಲ್ಯದ ನಿರ್ದಿಷ್ಟ ಅರ್ಥವೇ ಮರೆಯಾಗಿ, ಹಿಂಸೆ ಮತ್ತು ದ್ವೇಷವನ್ನು ಎತ್ತಿಹಿಡಿಯುವ ವಿಕೃತಿ ಜಗತ್ತಿನಾದ್ಯಂತ ಮೆರೆಯುತ್ತಿದೆ.

ಬಸವಣ್ಣನವರು ಧರ್ಮವನ್ನು ಅದರ ಮೂಲ ಅರ್ಥದಲ್ಲಿ ವ್ಯಾಖ್ಯಾನಿಸಿ ಎಲ್ಲರಲ್ಲೂ ದಯೆಯೇ ಮುಖ್ಯವಾಗಬೇಕು; ದಯೆಯುಳ್ಳದ್ದೇ ಧರ್ಮ, ದಯೆಯಿಲ್ಲದ್ದು ಅಧರ್ಮವೆಂದೇ ಸ್ಪಷ್ಟಪಡಿಸಿದ್ದಾರೆ. ಈ ದಯೆಯು ಕೇವಲ ಮಾನವರಲ್ಲಷ್ಟೇ ಅಲ್ಲ, ಸಕಲ ಜೀವರಾಶಿಗಳಲ್ಲೂ ಇರಬೇಕು ಎಂಬುದು ಬಸವಣ್ಣನವರು ವ್ಯಾಖ್ಯಾನಿಸಿದ ಧರ್ಮದ ಸರ್ವಕಾಲಿಕ ನಿಯಮವಾಗಿದೆ ಎಂದು ಶ್ರೀಗಳು ಹೇಳಿದರು.

​ಇಂದಿನ ಆಧುನಿಕ ಸಮಾಜವನ್ನು ಕಾಡುತ್ತಿರುವ ಅತಿವೇಗ, ಅತ್ಯಾಸೆ ಮತ್ತು ಸಂಯಮರಾಹಿತ್ಯದ ಗುಣಗಳು ಮಾನವನ ಜೀವನವನ್ನು ಅತ್ಯಂತ ಅಸಹನೀಯಗೊಳಿಸಿವೆ. ವ್ಯಕ್ತಿಯ ಮಟ್ಟದಿಂದ ಹಿಡಿದು ಜಾಗತಿಕ ಮಟ್ಟದವರೆಗೆ ಇಡೀ ಸಮಾಜ ಇಂದು ಒಂದು ರೀತಿಯ ಉನ್ಮಾದದಲ್ಲೇ ಬದುಕುತ್ತಿರುವ ಪರಿಸ್ಥಿತಿ ಬಂದೊದಗಿದೆ. ವ್ಯಕ್ತಿಯು ಕೌಟುಂಬಿಕ ಸಾಮರಸ್ಯವನ್ನು ಕಳೆದುಕೊಂಡು ಪರಸ್ಪರ ದ್ವೇಷ, ಅಸೂಯೆಗಳ ಉನ್ಮಾದದಲ್ಲಿದ್ದರೆ, ಜಾಗತಿಕವಾಗಿ ವಿವಿಧ ದೇಶಗಳು ಯುದ್ಧೋನ್ಮಾದದಲ್ಲಿ ಮುಳುಗಿವೆ. ಇವೆರಡರಿಂದಲೂ ದೂರವಿರುವ ಮೂರನೆಯ ವರ್ಗದ ಜನ ಈ ಉನ್ಮಾದಗಳನ್ನೇ ಒಂದು ರೋಚಕತೆಯಾಗಿಸಿಕೊಂಡು, ಉನ್ಮತ್ತರಾಗಿ ಸುಖಿಸುತ್ತಿದ್ದಾರೆ. ಇವಾವುವೂ ಉತ್ತಮ ಮತ್ತು ಆರೋಗ್ಯವಂತ ಸಮಾಜದ ಬೆಳವಣಿಗೆಯ ಲಕ್ಷಣಗಳಲ್ಲ ಎಂದು ಶ್ರೀಗಳು ತೀವ್ರ ಕಳಕಳಿ ವ್ಯಕ್ತಪಡಿಸಿದರು.

​ಎರಡು ಮಹಾಯುದ್ಧಗಳು ಜಗತ್ತಿಗೆ ಉಂಟುಮಾಡಿದ ಅಪಾರ ಸಾವು, ನೋವುಗಳು ಹಾಗೂ ಪ್ರಾಕೃತಿಕ ಮತ್ತು ಸಾಂಸ್ಕೃತಿಕ ವಿನಾಶಗಳು ಮರುಕಳಿಸಬಾರದೆಂಬ ಉದಾತ್ತ ಆಶಯದೊಂದಿಗೆ 1945ರಲ್ಲಿ ಸ್ಥಾಪನೆಯಾದ ವಿಶ್ವಸಂಸ್ಥೆಯ UNESCO ಸಂಸ್ಥೆಯ ಸಂವಿಧಾನದ ಮೊದಲ ಸಾಲುಗಳನ್ನು ಶ್ರೀಗಳು ಜಾಗತಿಕ ವೇದಿಕೆಯಲ್ಲಿ ಉಲ್ಲೇಖಿಸಿದರು:

“Since wars begin in the minds of men, it is in the minds of men that the defences of peace must be constructed” (ಯುದ್ಧಗಳು ಮೊದಲು ಮನುಷ್ಯನ ಮನಸ್ಸಿನಲ್ಲಿ ಪ್ರಾರಂಭವಾಗುವುದರಿಂದ, ಶಾಂತಿಯ ರಕ್ಷಣೆಯನ್ನು ನಿರ್ಮಿಸುವುದು ಕೂಡಾ ಮನುಷ್ಯನ ಮನಸ್ಸಿನಿಂದಲೇ ಆಗಬೇಕು).

ಇದು ನಮಗೆ ಯುದ್ಧವಾಗಲಿ ಅಥವಾ ಶಾಂತಿಯಾಗಲಿ ಪ್ರತಿಯೊಂದೂ ಮಾನವನ ಮನಸ್ಸನ್ನೇ ಅವಲಂಬಿಸಿದೆ ಎಂಬುದನ್ನು ಸ್ಪಷ್ಟವಾಗಿ ಅರ್ಥೈಸುತ್ತದೆ. ಅಂತೆಯೇ ೧೨ನೇ ಶತಮಾನದಲ್ಲೇ ಜಗದ್ಗುರು ಬಸವಣ್ಣನವರು ಸಮಾಜದ ವಿಪ್ಲವಗಳಿಗೆ ಮತ್ತು ಅಶಾಂತಿಗೆ ಕಾರಣರಾಗಿದ್ದ ಕಳ್ಳ, ಕಾಮುಕ, ಕೊಲೆಗಡುಕರೆಲ್ಲರ ಬಾಹ್ಯ ಶಿಕ್ಷೆಗೆ ಒಳಪಡಿಸದೇ ಅವರ ಮನಃಪರಿವರ್ತನೆ ಮಾಡಲು ಶ್ರಮಿಸಿದರು. ಇದರ ಪರಿಣಾಮವಾಗಿಯೇ ಅವರ ಕಾರ್ಯಕ್ಷೇತ್ರವಾದ ‘ಕಲ್ಯಾಣ’ವು ಪರಮ ಶಾಂತಿಯ ಪವಿತ್ರ ಕ್ಷೇತ್ರವಾಯಿತು. ಅಷ್ಟೇ ಅಲ್ಲ, ಕಲ್ಯಾಣ ಚಾಲುಕ್ಯರ ಇಡೀ ರಾಜ್ಯವು ಕೂಡಾ ಶಾಂತಿ ಮತ್ತು ಸೌಹಾರ್ದತೆಗಳ ತಾಣವಾಗಿ ಮಾರ್ಪಟ್ಟಿತು.

ಬಸವಣ್ಣನವರು ಕಲ್ಯಾಣ ಚಾಲುಕ್ಯ ಸಿಂಹಾಸನದ ಚಕ್ರವರ್ತಿಯಾದ ಬಿಜ್ಜಳನ ಮಹಾಪ್ರಧಾನಿಯಾಗಿದ್ದರು. ಅವರು ಪ್ರಧಾನಿಯಾಗಿ ಕಾರ್ಯನಿರ್ವಹಿಸಿದಷ್ಟು ಕಾಲವೂ ಕಲ್ಯಾಣ ಸಾಮ್ರಾಜ್ಯ ಶಾಂತಿಯಿಂದ ಇದ್ದುದಲ್ಲದೇ, ಆ ಕಾಲದಲ್ಲಿ ಯಾವುದೇ ಯುದ್ಧಗಳು ನಡೆಯಲಿಲ್ಲ ಎಂಬ ಐತಿಹಾಸಿಕ ಸಂಗತಿಯನ್ನು ಸ್ವಾಮೀಜಿಯವರು ನೆನಪಿಸಿದರು. ಇದರ ಅರ್ಥವಿಷ್ಟೇ, ಮನಃಶುದ್ಧಿಯುಳ್ಳ ದಿವ್ಯ ಚೇತನಗಳು ಎಲ್ಲಿರುತ್ತಾರೋ ಅಲ್ಲಿ ಶಾಂತಿ ತಾನಾಗಿಯೇ ನೆಲೆಸಿರುತ್ತದೆ ಎಂಬುದನ್ನು ಶ್ರೀಗಳು ಜಗತ್ತಿಗೆ ಮನವರಿಕೆ ಮಾಡಿಕೊಟ್ಟರು.

​ರಾಜಸತ್ತೆಯ ಕಾಲದಲ್ಲೇ ರಾಜನ ಅಧಿಕಾರಕ್ಕಿಂತ ಮೌಲ್ಯಗಳ ಅನುಷ್ಠಾನವೇ ಮುಖ್ಯವೆಂದು ಭಾವಿಸಿ ಬಸವಣ್ಣನವರು ‘ಅನುಭವ ಮಂಟಪ’ವನ್ನು ಸ್ಥಾಪಿಸಿ ಕ್ರಾಂತಿ ಮಾಡಿದರು. ಈ ಅನುಭವ ಮಂಟಪವನ್ನು ಇತ್ತೀಚಿನ ಆಧುನಿಕ ವಿದ್ವಾಂಸರು ಜಗತ್ತಿನ ಪ್ರಜಾಪ್ರಭುತ್ವದ ಅತಿ ಮೊದಲ ಮಾದರಿ (First Model of Democracy) ಎಂದು ಗುರುತಿಸಿದ್ದಾರೆ.

ಆ ಅನುಭವ ಮಂಟಪದ ದಿವ್ಯ ಕಾನೂನಿನನ್ವಯ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಉದರ ಪೋಷಣೆಗಾಗಿ ಕಡ್ಡಾಯವಾಗಿ ದುಡಿಯಲೇಬೇಕು. ಆದರೆ ಆ ದುಡಿಮೆಯು ಕೇವಲ ಸ್ವಾರ್ಥದ್ದಾಗಿರಬಾರದು; ಅದು ಪ್ರಾಮಾಣಿಕತೆ ಮತ್ತು ಭಕ್ತಿಯಿಂದ ಕೂಡಿದ್ದಾಗಿರಬೇಕು. ಅದನ್ನೇ ಶರಣರು ‘ಕಾಯಕ’ ಎಂದು ಕರೆದರು. ಪ್ರತೀ ವ್ಯಕ್ತಿಯೂ ಕಾಯಕ ಮಾಡಲೇಬೇಕೆಂಬ ಕಡ್ಡಾಯ ನಿಯಮವನ್ನು ಅಂದು ಜಾರಿಗೆ ತರಲಾಗಿತ್ತು.

​ಜೊತೆಗೆ ಕಾಯಕದ ಪ್ರತಿಫಲವನ್ನು ಒಬ್ಬನೇ ಅನುಭೋಗಿಸದೇ ಇಡೀ ಸಮಾಜಕ್ಕೆ ಹಂಚಿ ಉಣ್ಣಬೇಕು. ಹಾಗೆ ಹಂಚಿ ಉಣ್ಣುವಾಗಲೂ “ನಾನು ನೀಡಿದೆ, ನಾನೇ ದಾತ” ಎಂಬ ಅಹಂಕಾರದ ಭಾವವನ್ನು ನಿರಸನ ಮಾಡಿಕೊಂಡು, ಅತ್ಯಂತ ವಿನಮ್ರವಾದ ‘ದಾಸೋಹ’ ಭಾವದಲ್ಲಿ ವ್ಯಕ್ತಿ ಇರಬೇಕೆಂಬ ಶ್ರೇಷ್ಠ ನಿಯಮವನ್ನು ಜಾರಿಗೆ ತಂದಿದ್ದರು. ಈ ಮೂಲಕ ಕಾಯಕ ಮತ್ತು ದಾಸೋಹಗಳ ಪರಿಕಲ್ಪನೆಯಡಿ ದುಡಿಮೆ ಮತ್ತು ವಿತರಣೆಗಳನ್ನು ಶರಣರು ದೈವತ್ವದ ಮಟ್ಟಕ್ಕೆ ಏರಿಸಿದ್ದರು. ಅಂತೆಯೇ ‘ಕಾಯಕವೇ ಕೈಲಾಸ’, ‘ದಾಸೋಹವೇ ದೇವಧಾಮ’ ಎಂಬ ಅದ್ಭುತ ನುಡಿಗಟ್ಟುಗಳು ಅಂದಿನಿಂದ ಇಂದಿನವರೆಗೂ ಜನಮಾನಸದಲ್ಲಿ ಅಮರವಾಗಿ ನೆಲೆಸಿವೆ ಎಂದು ಶ್ರೀಗಳು ಶ್ಲಾಘಿಸಿದರು.

​ಪ್ರತಿಯೊಬ್ಬ ಮಾನವನೂ ಕೂಡಾ ನೈಕಿಕ ನೆಲೆಗಟ್ಟಿನಲ್ಲಿ ತನ್ನ ಮೂಲಭೂತ ಅಗತ್ಯಗಳನ್ನು ಗೌರವಯುತವಾಗಿ ಪೂರೈಸಿಕೊಳ್ಳಬೇಕು ಎಂಬುದು ಅನುಭವ ಮಂಟಪದ ಮೂಲ ಸಿದ್ಧಾಂತವಾಗಿತ್ತು. ಅಂತೆಯೇ ಅನುಭವ ಮಂಟಪದ ಈ ಉದಾತ್ತ ಆಶಯಗಳ ಕುರಿತು ಹಿರಿಯ ತರಳಬಾಳು ಜಗದ್ಗುರುಗಳಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಪ್ರಸಿದ್ಧ ನುಡಿಗಟ್ಟನ್ನು ಶ್ರೀಗಳು ಇಲ್ಲಿ ಸ್ಮರಿಸಿದರು:

​ಇದರೊಂದಿಗೆ ಮುಂದುವರಿದು ತಮ್ಮ ದಿವ್ಯ ಚಿಂತನೆಯಿಂದ ಹೊಸದೊಂದು ಮಾತನ್ನು ಜೋಡಿಸಿದ ಪೂಜ್ಯ ಶ್ರೀಗಳು, “ಆತ್ಮವಿದ್ದವನು ಪರಮಾತ್ಮನ ಅನುಸಂಧಾನ ಮಾಡಬೇಕು” ಎಂದರು. ಹೊಟ್ಟೆ, ರಟ್ಟೆ, ನೆತ್ತಿ ಮತ್ತು ಆತ್ಮ ಇವು ಪ್ರತಿಯೊಬ್ಬ ಜೀವಂತ ವ್ಯಕ್ತಿಯಲ್ಲಿ ಇದ್ದೇ ಇರುತ್ತವೆ. ಆದುದರಿಂದ ಇವೆಲ್ಲವುಗಳ ಮೂಲಭೂತ ಅಗತ್ಯಗಳಾದ ಅನ್ನ, ದುಡಿಮೆ, ಅಕ್ಷರ (ಜ್ಞಾನ) ಹಾಗೂ ಪರಮಾತ್ಮನ ಅನುಸಂಧಾನ—ಇವುಗಳನ್ನು ಹೊಂದುವುದು ಪ್ರತಿಯೊಬ್ಬ ಜೀವಂತ ವ್ಯಕ್ತಿಯ ಮೂಲಭೂತ ಹಕ್ಕು ಎಂದು ಅನುಭವ ಮಂಟಪ ಪ್ರತಿಪಾದಿಸಿತ್ತು. ಅಂತೆಯೇ ಕಾಯಕ, ದಾಸೋಹ, ಅಕ್ಷರಾಭ್ಯಾಸ ಹಾಗೂ ಇಷ್ಟಲಿಂಗ ದೀಕ್ಷೆಗಳಂತಹ ಕ್ರಾಂತಿಕಾರಿ ಪರಿಕಲ್ಪನೆಗಳು ಮೂಡಿಬಂದವು. ಜಾತಿ, ವಯಸ್ಸು, ಲಿಂಗ ಭೇದಗಳಿಲ್ಲದೆಯೇ ಈ ಎಲ್ಲ ಶ್ರೇಷ್ಠ ಮೌಲ್ಯಗಳನ್ನು ಸಮಾಜದ ಕೊನೆಯ ವ್ಯಕ್ತಿಗೂ ಸಿಗುವಂತೆ ಮಾಡಿದ ಕೀರ್ತಿ ಅನುಭವ ಮಂಟಪದ್ದು. ಅನುಭವ ಮಂಟಪದ ಈ ಮೌಲ್ಯಗಳು ಅಂದಿಗಿಂತಲೂ ಇಂದಿನ ಜಗತ್ತಿಗೆ ಅತ್ಯಂತ ಅಗತ್ಯ ಮತ್ತು ಅನಿವಾರ್ಯವಾಗಿವೆ ಎಂದು ಶ್ರೀಗಳು ನುಡಿದರು.

​ಅನುಭವ ಮಂಟಪದ ಕಾಲ 12ನೇ ಶತಮಾನ. ಆದರೆ ನಾವಿಂದು ಬಾಳುತ್ತಿರುವುದು ತಂತ್ರಜ್ಞಾನದ 21ನೇ ಶತಮಾನದಲ್ಲಿ. “ಅಂದಿನ ಮೌಲ್ಯಗಳು ಇಂದಿನ ಆಧುನಿಕ ಯುಗಕ್ಕೆ ಹೇಗೆ ಅನ್ವಯಿಸುತ್ತವೆ?” ಎಂಬ ಜಿಜ್ಞಾಸೆಗೆ ಉತ್ತರಿಸುತ್ತಾ, ಪ್ರಖ್ಯಾತ ವಿಮರ್ಶಕರಾದ ಡಾ. ಓ.ಎಲ್. ನಾಗಭೂಷಣಸ್ವಾಮಿ ಅವರ ಮಾತುಗಳನ್ನು ಶ್ರೀಗಳು ಉಲ್ಲೇಖಿಸಿದರು:

​”ವಚನ ಪಠ್ಯಗಳು ತತ್ಕಾಲೀನ ಅಗತ್ಯಗಳಿಗಾಗಿ ರೂಪುಗೊಂಡ ರಚನೆಗಳು ನಿಜ. ಆದರೆ ವೈಯಕ್ತಿಕ ಅನುಭವ ಪ್ರಮಾಣವನ್ನು ಒಳಗೊಂಡಿರುವುದರಿಂದ ಮತ್ತು ಮನುಷ್ಯನ ಅಸ್ತಿತ್ವದ, ಮನುಷ್ಯನ ಮನಸ್ಸಿನ ಮೂಲಭೂತ ವಿಚಾರಗಳ ಮಂಡನೆಯ ಕಾರಣದಿಂದ ವಚನಗಳಿಗೆ ‘ಕಾಲಾತೀತ’ ಗುಣವೂ ಪ್ರಾಪ್ತವಾಗುತ್ತದೆ. ಅಂದರೆ ವಚನ ಪಠ್ಯಗಳೊಡನೆ ನಡೆಸುವ ಸಂವಾದದಿಂದ ಅವುಗಳನ್ನು ಸಮಕಾಲೀನಗೊಳಿಸಿಕೊಳ್ಳಲು ಸಾಧ್ಯವಿದೆ.”

​ಡಾ. ಓ.ಎಲ್.ಎನ್ ಅವರ ಈ ಮಾತು ವಚನಗಳನ್ನು ನಾವು ಪ್ರಸ್ತುತಪಡಿಸಿಕೊಳ್ಳಬೇಕಾದ ನೈಜ ವಿಧಾನವನ್ನು ಮನಗಾಣಿಸುತ್ತದೆ ಎಂದು ಶ್ರೀಗಳು ಅಭಿಪ್ರಾಯಪಟ್ಟರು. ಪ್ರಸ್ತುತ ದಿನಗಳಲ್ಲಿ ಮೌಲ್ಯಗಳ ಅಧಃಪತನವೇ ಸಾಧನೆ ಅಥವಾ ಮೌಲ್ಯವೆಂದು ಭಾವಿಸಿಕೊಳ್ಳುವ ವಿಕೃತ ಹಂತಕ್ಕೆ ಮಾನವ ತಲುಪಿರುವ ಈ ಸಂದರ್ಭದಲ್ಲಿ, ಮೌಲ್ಯಗಳಿಗಾಗಿಯೇ ಬಾಳಿದ, ಮೌಲ್ಯಗಳಿಗಾಗಿಯೇ ಹೋರಾಡಿದ ಬಸವಾದಿ ಪ್ರಮಥರ ವಿಚಾರಧಾರೆಗಳು ಇಂದಿನ ಇಡೀ ಜಗತ್ತಿನ ತುರ್ತು ಅಗತ್ಯವಾಗಿವೆ ಎಂದು ಶ್ರೀಗಳು ಕರೆ ನೀಡಿದರು.

ಮೌಲ್ಯಗಳ ಬಿಕ್ಕಟ್ಟನ್ನು ಎದುರಿಸುತ್ತಿರುವ ಇಂದಿನ ಕಾಲಘಟ್ಟದಲ್ಲಿ, ಶರಣರ ವಿಚಾರಧಾರೆಗಳನ್ನು ಜರ್ಮನಿಯ ತಾಂತ್ರಿಕ ನೆಲದಲ್ಲಿ ಮೊಳಗಿಸಿದ ಪೂಜ್ಯ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿಯವರ ಈ ಜ್ಞಾನಯಾತ್ರೆ ಅತ್ಯಂತ ಶ್ಲಾಘನೀಯ ಹಾಗೂ ಇಡೀ ಭಾರತೀಯ ಸಂಸ್ಕೃತಿಗೆ ಹೆಮ್ಮೆಯ ವಿಷಯ. ಶ್ರೀಗಳವರ ಈ ದಿವ್ಯ ಆಶೀರ್ವಚನ ಇಡೀ ಮಾನವಕುಲದ ಮನಃಶುದ್ಧಿಗೆ ಮತ್ತು ಜಾಗತಿಕ ಶಾಂತಿಗೆ ಹೊಸ ದಿಕ್ಸೂಚಿಯಾಗಲಿ ಎಂಬುದು ಜಗತ್ತಿನಾದ್ಯಂತ ಇರುವ ಭಕ್ತರ ಪ್ರಾರ್ಥನೆಯಾಗಿದೆ.

ಕಾರ್ಯಕ್ರಮಕ್ಕೂ ಮುನ್ನ ಭಾರತೀಯ ಜಾನಪದ ಕಲಾತಂಡಗಳ ಭವ್ಯ ಮೆರವಣಿಗೆಯೊಂದಿಗೆ ವಿಶ್ವಗುರು ಬಸವಣ್ಣನವರ ಭಾವಚಿತ್ರವನ್ನು ಪಲ್ಲಕ್ಕಿಯಲ್ಲಿ ವಿರಾಜಮಾನಗೊಳಿಸಿ ಭಕ್ತಿಪೂರ್ವಕ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಎರ್ಲಾಂಗೆನ್ ನಗರದ ಉಪ ಮೇಯರ್ ಫ್ರೌ ಇವಾ ಲಿನ್ಹಾರ್ಟ್, ಜರ್ಮನಿಯಲ್ಲಿನ ಭಾರತದ ರಾಯಭಾರಿ ಅಜಿತ್ ವಿನಾಯಕ ಗುಪ್ತೆ, ಇಂಡಾಲಜಿಸ್ಟ್ ಹಾಗೂ ದಕ್ಷಿಣ ಏಷ್ಯಾ ಅಧ್ಯಯನಗಳ ಪ್ರಾಧ್ಯಾಪಕರಾದ ಪ್ರೊ. ಡಾ. ರಾಬರ್ಟ್ ಜೆ. ಝೈಡೆನ್ಬೋಸ್, ವಿಶ್ವಹಿಂದೂ ಪರಿಷತ್ ಯುರೋಪ್ ಪ್ರತಿನಿಧಿ ರಾಹುಲ್ ನಾರಾಯಣ, ಚಿಕ್ಕಮಗಳೂರಿನ ಐಸಿರಿ ಫೌಂಡೇಷನ್ ಅಧ್ಯಕ್ಷ ರೋಹನ್ ಭಾರ್ಗವಪುರಿ ಹಾಗೂ ಬಸವ ಸಮಿತಿ ಯುರೋಪ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

“Basava Philosophy is the Remedy for Global Unrest”:

Sri Dr. Basava Marulasiddha Swamiji Spreads the Message of World Peace on German Soil

Europe: The Basava Jayanti celebration organized by Basava Samiti Europe in the city of Erlangen, Germany, attracted global attention for its profound cultural and philosophical significance. The event was graced by the divine presence of His Holiness Sri Dr. Basava Marulasiddha Swamiji, Pontiff of Sri Basavatatwa Peetha, Chikkamagaluru, and Shivamogga Basava Kendra.

The Swamiji’s keynote address was not merely a religious discourse; it emerged as a powerful global message emphasizing that the Kayaka (dignity of labor) and Dasoha (selfless sharing) philosophy of Jagajyoti Basavanna is the ultimate remedy for the violence, intolerance, and war-driven unrest troubling the modern world.


Swamiji’s Love for Kannada Shines in Germany

The Swamiji’s deep love for the Kannada language and his profound historical consciousness beautifully reflected even on German soil. Upon receiving a heartfelt invitation from noted Kannadiga Heme Gowda to participate in the Basava Jayanti celebrations in Germany, the first thought that arose in the Swamiji’s mind was the remembrance of Reverend Ferdinand Kittel — a German by birth, yet a saintly devotee of Kannada culture.


Remembering Ferdinand Kittel: A Symbol of Kannada Devotion

Swamiji recalled that although Ferdinand Kittel was born in Germany, every culturally conscious Kannadiga regards him as one among their own because of his immeasurable contribution to Kannada language and literature.

Kittel did not merely learn Kannada; he deeply mastered Bhamini Shatpadi, one of Kannada’s most celebrated poetic metres, and composed the literary work Krista Charitre in the same style. Swamiji praised him as a rare intellectual who dedicated his life to Kannada heritage.


Kittel’s Monumental Contribution to Kannada

The Swamiji also highlighted Kittel’s priceless contribution to Kannada scholarship — the monumental Kannada-Kannada-English Dictionary. Even today, Kittel’s dictionary continues to remain one of the finest and most authoritative works in Kannada lexicography.


Appreciation for Youth Preserving Kannada in the Digital Age

Swamiji lauded the efforts of the youth associated with Sanchi Foundation, who are serving Kannada in the technological era. He appreciated their work in digitizing and developing Unicode versions of the old Kannada typefaces used during Kittel’s time and making them freely accessible to the public.

He especially praised their gesture of naming the font “Kittel Font” in honor of Ferdinand Kittel, describing it as a beautiful expression of cultural gratitude. Swamiji conveyed his heartfelt blessings and gratitude to every member of Basava Samiti Europe for enabling him to participate in Basava Jayanti celebrations in the homeland of Kittel.


Martin Luther and Basavanna: Reformers with Shared Vision

Another great personality associated with Germany, Swamiji observed, is Martin Luther — the legendary reformer who transformed Christianity through humanitarian values and spiritual awakening.

Swamiji recalled how Luther translated the Holy Bible from the difficult Hebrew language into German, making spiritual wisdom accessible to ordinary people. He noted that, much like Basavanna, Martin Luther believed that religion should not remain confined to rituals but must serve social equality and human welfare.

Swamiji’s comparison between Basavanna and Luther reflected his broad international philosophical outlook.


“Compassion is the Foundation of Dharma”

To explain the violence and unrest haunting the modern world, Swamiji quoted Basavanna’s famous vachana:

“What is religion without compassion?
Compassion toward all living beings is essential.
Compassion itself is the root of Dharma.”

He elaborated that true religion can never exist without compassion.


Paris Terror Attack and Basava Philosophy

Swamiji cited a striking historical contrast. On November 14, 2015, Prime Minister Narendra Modi unveiled the grand statue of Basavanna on the banks of the River Thames in London. Tragically, just a day earlier, on November 13, Paris witnessed horrific terrorist attacks that killed hundreds of innocent people.

Swamiji referred to a powerful cartoon created by renowned Shivamogga cartoonist Ramadhyani, who juxtaposed Basavanna’s peaceful statue in London with the blood-stained Eiffel Tower in Paris.

In the illustration, a distorted face representing terrorism appeared to proclaim, “Fear is the foundation of religion,” while Basavanna’s statue responded compassionately, “Compassion is the foundation of Dharma.”

Swamiji observed that the cartoon brilliantly exposed how terrorism distorts religion into fear and violence, whereas Basavanna envisioned religion as compassion and universal love.


The True Meaning of Dharma

Swamiji explained that the Sanskrit word Dharma originates from the root “Dhṛ,” meaning “to uphold” or “to sustain.” Unfortunately, modern society has forgotten this original meaning and instead glorifies hatred and violence.

Basavanna clearly taught that compassion alone constitutes Dharma, while anything devoid of compassion becomes Adharma. This compassion, Swamiji emphasized, must extend not only toward human beings but toward all living creatures.


A World Lost in Madness Needs Peace

Swamiji expressed concern over the modern world’s obsession with speed, greed, and lack of restraint. From families to nations, he said, humanity is increasingly trapped in various forms of madness — hatred, jealousy, war hysteria, and emotional instability.

While some are consumed by conflict, others merely watch these crises as entertainment. Swamiji warned that such tendencies are dangerous signs of an unhealthy civilization.


UNESCO’s Vision and Basavanna’s Philosophy

Quoting the opening line of UNESCO’s Constitution established in 1945, Swamiji reminded the audience:

“Since wars begin in the minds of men, it is in the minds of men that the defences of peace must be constructed.”

He explained that both war and peace originate in the human mind.

Swamiji noted that Basavanna, as early as the 12th century, focused not merely on punishing criminals but on transforming human consciousness itself. Through moral and spiritual transformation, Basavanna converted Kalyana into a land of peace and harmony.


A Peaceful Administration Under Basavanna

Swamiji recalled that Basavanna served as the Prime Minister under King Bijjala of the Kalyana Chalukya Empire. During Basavanna’s tenure, the kingdom witnessed peace and remained free from wars.

This, Swamiji said, proves that wherever spiritually awakened minds exist, peace naturally flourishes.


Anubhava Mantapa: The World’s Earliest Democratic Model

In an era dominated by monarchy, Basavanna established the revolutionary Anubhava Mantapa, a spiritual and social parliament where values mattered more than royal authority.

Modern scholars, Swamiji noted, recognize Anubhava Mantapa as the world’s first model of democracy.


Kayaka: Giving Divinity to Labor

According to the principles of Anubhava Mantapa, every individual had the moral responsibility to work honestly for their livelihood. However, work was not to be driven by selfishness; it had to be rooted in integrity and devotion. This sacred concept became known as Kayaka.


Dasoha: The Culture of Sharing

Similarly, one should not consume the fruits of labor selfishly. Wealth and resources had to be shared with society in the spirit of humility and service. This ideal was called Dasoha.

The Sharanas elevated both labor and distribution to the level of divinity through the immortal ideals:

“Kayakave Kailasa” — Work itself is Kailasa (heaven)
“Dasohave Deva Dhama” — Selfless sharing is the abode of God


Human Dignity and Equality

Swamiji further explained that Anubhava Mantapa envisioned a society where every human being could fulfill their basic needs with dignity.

Recalling the famous saying of senior Taralabalu Jagadguru Sri Shivakumara Shivacharya Mahaswamiji:

“One who has a stomach must eat,
One who has strength must work,
One who has intellect must study.”

Swamiji added a profound spiritual extension:

“One who has a soul must seek union with the Supreme.”

Thus, food, labor, education, and spiritual realization were considered fundamental rights of every human being.


Timeless Relevance of Vachanas in the 21st Century

Though Anubhava Mantapa belonged to the 12th century, Swamiji emphasized that its values remain deeply relevant in the 21st century.

Quoting renowned critic Dr. O. L. Nagabhushan Swamy, he stated that Vachanas possess a timeless quality because they arise from authentic human experience and address the core truths of human existence.

Therefore, Basavanna’s teachings continue to offer meaningful guidance even today.


Basava Philosophy: The Need of the Modern World

Swamiji concluded that modern civilization has dangerously normalized moral decline and loss of values. In such times, the teachings of Basavanna and the Sharanas are not merely historical ideals but urgent necessities for humanity.


A Message of Global Peace from Germany

At a time when the world faces a severe crisis of values, Sri Dr. Basava Marulasiddha Swamiji’s efforts in spreading Basava philosophy on German soil stand as a matter of pride for Indian culture and humanity at large.

His inspiring message, echoing across Europe, emerged as a powerful call for inner transformation, compassion, and global peace. Devotees across the world pray that this divine message may guide humanity toward harmony and universal brotherhood.

On this occasion, the Deputy Mayor of Erlangen, Frau Eva Lienhart, the Ambassador of India to Germany, Ajit Vinayak Gupte, Indologist and Professor of South Asian Studies Prof. Dr. Robert J. Zydenbos, Vishwa Hindu Parishad Europe representative Rahul Narayan, President of Aisiri Foundation, Chikkamagaluru, Rohan Bhargavapuri, and office bearers of Basava Samiti Europe were present.

K.M.Sathish Gowda

Join WhatsApp

Join Now

Facebook

Join Now

Read more

​”ಇತಿಹಾಸ ಬದಲಿಸಲಾಗದು, ಮೂಲ ಮರೆಯದಿರಿ: ಸೌಹಾರ್ದತೆ ಮತ್ತು ಮೌಲ್ಯಯುತ ಸಮಾಜ ನಿರ್ಮಾಣಕ್ಕೆ ಶಿವಮೊಗ್ಗದಲ್ಲಿ ಪಂಚಪೀಠಗಳ ಜಗದ್ಗುರುಗಳ ಪಂಚಸೂತ್ರ ನುಡಿಗಳು”

ಶಿವಮೊಗ್ಗದ ಅಡ್ಡಪಲ್ಲಕ್ಕಿ ಮಹೋತ್ಸವ ಮತ್ತು ಧರ್ಮಜಾಗೃತಿ ಸಮಾವೇಶದಲ್ಲಿ ಸದ್ದು ಮಾಡಿದ ಆಯನೂರು ಮಂಜುನಾಥ್ ಹೇಳಿಕೆ: “ನಾನು ಒಪ್ಪಿಕೊಳ್ಳುವ ಏಕೈಕ ನಾಯಕ ಬಿ.ಎಸ್. ಯಡಿಯೂರಪ್ಪ ಮಾತ್ರ”

​ಪಂಚಪೀಠದ ಜಗದ್ಗುರುಗಳ ಪಾದಸ್ಪರ್ಶದಿಂದ ಮಲೆನಾಡು ಪಾವನ: ಶಿವಮೊಗ್ಗದ ಐತಿಹಾಸಿಕ ಉತ್ಸವದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಹರ್ಷ

ಕಣ್ತುಂಬಿಕೊಂಡರೆ ಸಾಕು ಜನ್ಮ ಪಾವನ: ಮಲೆನಾಡ ಹೆಬ್ಬಾಗಿಲಿನಲ್ಲಿ ಇತಿಹಾಸ ನಿರ್ಮಿಸಿದ ಅಡ್ಡಪಲ್ಲಕ್ಕಿ ಮಹೋತ್ಸವ; ಭಕ್ತಿ ಸಾಗರದಲ್ಲಿ ತೇಲಿದ ಶಿವಮೊಗ್ಗ ಜನತೆ

ಗಾಂಧಿಬಜಾರ್ ಬಸವೇಶ್ವರ ದೇವಸ್ಥಾನದಲ್ಲಿ ಸಿದ್ಧತೆಗಳ ಪರಿಶೀಲನೆ: ಅಡ್ಡಪಲ್ಲಕ್ಕಿ ಮಹೋತ್ಸವ ಯಶಸ್ಸಿಗೆ ಸಿ.ಎಸ್. ಷಡಾಕ್ಷರಿ ಕರೆ

ಮಲೆನಾಡು ಕಾಯುತ್ತಿದ್ದ ಆ ಐತಿಹಾಸಿಕ ಕ್ಷಣ ಬಂದೇ ಬಿಟ್ಟಿತು.!: ಶಿವಮೊಗ್ಗದಲ್ಲಿ ಇಂದು ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವದ ಧಾರ್ಮಿಕ ಕ್ರಾಂತಿ

Leave a Comment