ಇತ್ತೀಚೆಗೆ ಹಳ್ಳಿ ಹಳ್ಳಿಗಳಲ್ಲಿ ಹೊಸ ಹೊಸ ದೇವಾಲಯಗಳ ನಿರ್ಮಾಣ, ಹಳೆಯ ದೇವಾಲಯಗಳ ಜೀರ್ಣೋದ್ಧಾರ ಹೆಚ್ಚು ಹೆಚ್ಚಾಗಿ ನಡೆಯುತ್ತಿದೆ. ಇದು ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಯಲ್ಲಿ “ಕೆರೆಯಂ ಕಟ್ಟಿಸು, ದೇವಾಗಾರಮಂ ಮಾಡಿಸು” ಎಂದು ತಾಯಂದಿರು ತಮ್ಮ ಮಗುವಿಗೆ ಹಾಲುಣಿಸುವಾಗ ಮಾತೃವಾತ್ಸಲ್ಯದಿಂದ ಮಾಡಿದ ಹಾರೈಕೆಗೆ ಅನುಗುಣವಾಗಿಯೇ ಇದೆ. ಆದರೆ ದೇವಾಲಯಗಳ ಸಂಖ್ಯೆ ಹೆಚ್ಚಿದಂತೆ ನ್ಯಾಯಾಲಯಗಳ ಸಂಖ್ಯೆ ಕಡಿಮೆಯಾಗಬೇಕಾಗಿತ್ತು. ತದ್ವಿರುದ್ಧವಾಗಿ ನ್ಯಾಯಾಲಯಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ದೇವಾಲಯಗಳ ಸಂಖ್ಯೆ ಹೆಚ್ಚಾಗುತ್ತಿದೆಯೆಂದರೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ ಎಂದಷ್ಟೇ ಅರ್ಥ. ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆಯೆಂದರೆ ಸದಾಚಾರಸಂಪನ್ನರ ಸಂಖ್ಯೆ ಹೆಚ್ಚಾಗುತ್ತಿದೆಯೆಂದರ್ಥವಲ್ಲ. ದೇವಸ್ಥಾನಗಳ ಕಾರ್ಯಕ್ರಮಗಳಿಗೆ ಆಹ್ವಾನಿತರಾಗಿ ಹಳ್ಳಿಗಳಿಗೆ ಹೋದಾಗ ಭಕ್ತಿಸಂಪನ್ನರು ದಾರಿಯಲ್ಲಿ ಧೂಳಾಗದಂತೆ ನೀರು ಸಿಂಪಡಿಸಿದ್ದರೂ, ತಂಬಾಕುಪ್ರಿಯರು ಅಲ್ಲಲ್ಲಿ ತಿಂದು ಬಿಸಾಡಿದ ಪಾನ್ ಪರಾಗ್ ಪ್ಯಾಕೆಟ್ ಗಳು ವಿಜೃಂಭಿಸುತ್ತಿರುತ್ತವೆ! ಸಹಸ್ರಾರು ವರ್ಷಗಳಿಂದ ಸಜ್ಜನರು ಮತ್ತು ದುರ್ಜನರ ಮಧ್ಯೆ ನಿರಂತರ ಸಂಘರ್ಷ ನಡೆಯುತ್ತಲೇ ಬಂದಿದೆ.
ನ್ಯಾಯಾಲಯಗಳಲ್ಲಿ ಬೇಗನೆ ನ್ಯಾಯ ಸಿಗುವುದಿಲ್ಲ “ಬ್ರಹ್ಮನಷ್ಟು ಆಯುಷ್ಯ ಬೇಕು, ಕುಬೇರನಷ್ಟು ಖಜಾನೆ ಬೇಕು” ಎಂಬ ಅಪಖ್ಯಾತಿ ನ್ಯಾಯಾಲಯಗಳ ಮೇಲಿದೆ. ಇದು ವಾಸ್ತವವಾಗಿ ನ್ಯಾಯಾಲಯದ ಮೇಲಿನ ಆರೋಪ ಅಲ್ಲ, ನ್ಯಾಯಾಲಯದ ನಿಂದನೆಯೂ ಅಲ್ಲ. ಸಂತ್ರಸ್ತರು ನ್ಯಾಯಾಲಯದ ಮೆಟ್ಟಿಲೇರದೆ ಗುರುಹಿರಿಯರ ಸಮ್ಮುಖದಲ್ಲಿ ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳುವುದು ಒಳ್ಳೆಯದು ఎంబ ಹಿತನುಡಿಯ ಮಾತು. ಈ ಹಿತನುಡಿಗಳಿಗೆ ಕಿವಿಗೊಡದೆ ಅಹಂಕಾರದಿಂದ ಕೋರ್ಟು ಮೆಟ್ಟಿಲು ಏರುವವರೇ ಬಹಳ.

ಯಾವುದೇ ದೇಶದಲ್ಲಿ ಕಾನೂನುಗಳನ್ನು ರೂಪಿಸುವುದು ನಿರಪರಾಧಿಗಳನ್ನು ರಕ್ಷಿಸಲು, ಅಪರಾಧಿಗಳಿಗೆ ಶಿಕ್ಷೆ ವಿಧಿಸಲು ಮತ್ತು ಸಾಮಾಜಿಕ ಶಿಸ್ತನ್ನು ಕಾಪಾಡಲು. ಜನರ ಹಿತಕ್ಕಾಗಿ ರೂಪಿತವಾದ ಈ ಕಾನೂನುಗಳು ಅನೇಕ ವೇಳೆ ಸ್ವಹಿತಕ್ಕಾಗಿ, ದ್ವೇಷಕ್ಕಾಗಿ ದುರುಪಯೋಗವಾಗುತ್ತಿವೆ. ಇತ್ತೀಚೆಗೆ ತುಂಬಾ ದುರುಪಯೋಗವಾಗುತ್ತಿರುವ ಕಾನೂನುಗಳು ಎಂದರೆ “ಮಾಹಿತಿ ಹಕ್ಕು ಕಾಯಿದೆ”, “ದೌರ್ಜನ್ಯ ತಡೆ ಕಾಯಿದೆ” ಮತ್ತು “ವರದಕ್ಷಿಣೆ ನಿಷೇಧ ಕಾಯಿದೆ”. ಆಡಳಿತದ ಪಾರದರ್ಶಕತೆಯ ದೃಷ್ಟಿಯಿಂದ ತಂದ “ಮಾಹಿತಿ ಹಕ್ಕು ಕಾಯಿದೆ”ಯನ್ನು ಕೆಲವರು ದುರುಪಯೋಗಪಡಿಸಿಕೊಂಡು ಅದನ್ನೇ ತಮ್ಮ ದುಡಿಮೆಯ ಸುಲಭ ಬಂಡವಾಳವನ್ನಾಗಿ ಮಾಡಿಕೊಂಡಿದ್ದಾರೆ. ಮುಖ್ಯ ಮಾಹಿತಿ ಆಯುಕ್ತರು ಇತ್ತೀಚೆಗೆ ನೀಡಿರುವ ಮಾಹಿತಿಯ ಪ್ರಕಾರ ಸುಮಾರು 50 ಸಾವಿರ ಅರ್ಜಿಗಳು/ಮೇಲ್ಮನವಿಗಳು ಅವರ ಕಛೇರಿಯಲ್ಲಿ ಬಾಕಿ ಇದ್ದವು. ಅವುಗಳನ್ನು ಪರಿಶೀಲಿಸಿದಾಗ ಕೆಲವೇ ಕೆಲವರು ಒಬ್ಬೊಬ್ಬರೇ ಯಾವುದೇ ಸಾರ್ವಜನಿಕ ಹಿತಾಸಕ್ತಿ ಇಲ್ಲದೆ ಸಾವಿರಾರು ಅರ್ಜಿಗಳನ್ನು ಸಲ್ಲಿಸಿದ್ದು ಕಂಡುಬಂದಿದ್ದು ಅವರೆಲ್ಲರಿಗೂ ಒಂದು ಅರ್ಜಿಗೆ ಒಂದು ಸಾವಿರ ರೂ. ಗಳಂತೆ ಲಕ್ಷಾಂತರ ರೂ. ದಂಡ ವಿಧಿಸಿರುತ್ತಾರೆ. ಕಾನೂನನ್ನು ದುರುಪಯೋಗ ಪಡಿಸಿಕೊಂಡವರಿಗೆ ಹೀಗೆ ದಂಡ ವಿಧಿಸುವ ಪ್ರಕ್ರಿಯೆ ಎಲ್ಲ ಕಾಯಿದೆಗಳ ಅಡಿಯಲ್ಲಿಯೂ ಬಂದರೆ ಇದು ನಿಯಂತ್ರಣಕ್ಕೆ ಬರಬಹುದು. ನಮ್ಮ ಅನುಭವಕ್ಕೆ ಬಂದಂತೆ ಕಾನೂನನ್ನು ದುರುಪಯೋಗ ಪಡಿಸಿಕೊಂಡ ಒಂದೆರಡು ಪ್ರಕರಣಗಳು ಹೀಗಿವೆ:
ಹಳ್ಳಿಯ ಒಬ್ಬ ಬಡ ಯುವ ರೈತ. ಆತನ ತಂದೆ ಸುಮಾರು 60 ವರ್ಷಗಳ ಹಿಂದೆ ಒಂದು ಎಕರೆ ಜಮೀನನ್ನು ಬೇರೆಯವರಿಂದ ಖರೀದಿ ಮಾಡಿದ್ದ. ಅದಕ್ಕೂ ಮೊದಲು ಆ ಜಮೀನು ನಾಲ್ಕಾರು ಜನರ ಮಧ್ಯೆ ಮಾರಾಟ ಖರೀದಿಯಾಗಿ, ಕೊನೆಯಲ್ಲಿ ಯುವ ರೈತನ ತಂದೆ ಖರೀದಿಸಿದ್ದ. ಆತನ ಮರಣಾನಂತರ ಆ ಜಮೀನು ತಾಯಿಯ ಹೆಸರಿಗೆ ಖಾತೆಯಾಯಿತು. ಮಗನು ಕಷ್ಟಪಟ್ಟು ಆ ಜಮೀನಿನಲ್ಲಿ ಅಡಕೆ ತೋಟ ಮಾಡಿದ. ಒಳ್ಳೆಯ ಫಸಲು ಬರಲು ಆರಂಭವಾದಾಗ ಆ ಜಮೀನಿನ ಮೂಲ ಮಾಲೀಕನ ವಂಶಸ್ಥ ಆಸೆಗೆ ಬಿದ್ದು ಇದು ನಮ್ಮ ಕುಟುಂಬಕ್ಕೆ ಸೇರಿದ ಜಮೀನು. ಇದರಲ್ಲಿ ನನಗೆ ಭಾಗ ಬರಬೇಕು ಎಂದು ಕೋರ್ಟಿನಲ್ಲಿ ಕೇಸು ದಾಖಲಿಸಿದ. ಅಲ್ಲದೆ ಯುವ ರೈತನಿಗೆ ತೋಟಕ್ಕೆ ಹೋಗದಂತೆ ಅಡ್ಡಿ ಪಡಿಸತೊಡಗಿದ ಮತ್ತು ಆ ಜಮೀನಿನ ಮೇಲೆ ಯಾವ ಹಕ್ಕು ಇಲ್ಲದಿದ್ದರೂ ಯುವ ರೈತನ ವಿರುದ್ಧ ಹಿಂದುಳಿದ ವರ್ಗಕ್ಕೆ ಸೇರಿದವನಿಂದ ಜಾತಿನಿಂದನೆ (ಅಟ್ರಾಸಿಟಿ) ಕೇಸನ್ನು ದಾಖಲಿಸಿ, ಕೋರ್ಟಿಗೆ ಅಲೆದಾಡುವಂತೆ ಮಾಡಿರುತ್ತಾನೆ.
ಹಳ್ಳಿಯ ಒಂದು ಪುರಾತನ ದೇವಸ್ಥಾನ. ಈ ದೇವಸ್ಥಾನಕ್ಕೆ ಹಿಂದಿನ ಪೂರ್ವಜರು ಸುಮಾರು ಹತ್ತು ಎಕರೆ ಜಮೀನನ್ನು ದೇವತಾ ಆರಾಧನೆಗೆಂದು ಬಹಳ ವರ್ಷಗಳ ಹಿಂದೆ ಸರ್ಕಾರದಿಂದ ದೇವೋದಯ ಇನಾಂ ಮುಂಜೂರು ಮಾಡಿಸಿಕೊಂಡಿದ್ದರು. ಈ ಜಮೀನನ್ನು ಗ್ರಾಮಸ್ಥರು ಹಿಂದಿನಿಂದಲೂ ಬೆಳೆ ಹರಾಜು ಮಾಡಿ ಬಂದ ಆದಾಯದಲ್ಲಿ ದೇವರ ಕಾರ್ಯವನ್ನು ನಡೆಸಿಕೊಂಡು ಬಂದಿದ್ದರು. ದೇವರಾಜು ಅರಸ್ ರವರ ಕಾಲದಲ್ಲಿ “ಉಳುವವನೇ ಒಡೆಯ” ಎಂಬ ಹೊಸ ಕಾನೂನು ಬಂದಿದ್ದರಿಂದ ದೇವರ ಜಮೀನು ತಪ್ಪಿ ಹೋಗಬಾರದೆಂದು ಗ್ರಾಮಸ್ಥರು ಗೇಣಿ ಕಾಯಿದೆ ಅಡಿಯಲ್ಲಿ ಗ್ರಾಮದ ಹಿರಿಯ ವ್ಯಕ್ತಿಯ ಹೆಸರಿಗೆ ಖಾತೆಯಾಗುವಂತೆ ಮಾಡಿದರು. ತನ್ನ ಮೇಲೆ ವಿಶ್ವಾಸವಿಟ್ಟು ಗ್ರಾಮಸ್ಥರು ದೇವರ ಜಮೀನನ್ನು ಉಳಿಸುವ ಸಲುವಾಗಿ ಮಾಡಿದ ಪ್ರಯತ್ನದ ಲಾಭ ಪಡೆದ ಹಿರಿಯ ವ್ಯಕ್ತಿಯು ಗ್ರಾಮಸ್ಥರ ನಂಬಿಗೆಗೆ ದ್ರೋಹ ಬಗೆದ. ಕಾನೂನುತಃ ವಿವಾದಿತ ಜಮೀನು ತನ್ನ ಹೆಸರಿಗೆ ಆದಮೇಲೆ ಸ್ವಾರ್ಥಕ್ಕೆ ಒಳಗಾಗಿ ಸದರಿ ಜಮೀನು ತನ್ನದೇ ಎಂದು ಹೇಳತೊಡಗಿದ. ದೇವರ ಜಮೀನು ದೇವರಿಗೆ ಉಳಿಯದೆ ಹಾವು ಹೊಡೆದು ಹದ್ದಿಗೆ ಹಾಕಿದಂತಾಯಿತು. ವಿವಾದಿತ ಜಮೀನನ್ನು ಹಿರಿಯ ವ್ಯಕ್ತಿಯು ತನ್ನ ಮಕ್ಕಳಿಗೆ ಪಾಲುವಿಭಾಗ ಮಾಡಿಕೊಟ್ಟ, ಈತನ ವಿಶ್ವಾಸ ದ್ರೋಹಕ್ಕೆ ಗ್ರಾಮಸ್ಥರೆಲ್ಲರು ಸಿಡಿದೆದ್ದು ಸದರಿ ಜಮೀನು ದೇವರಿಗೇ ಉಳಿಯಬೇಕೆಂದು ಹೋರಾಟ ನಡೆಸಿದರು. ಸೌಹಾರ್ದಯುತವಾಗಿ ಬಗೆಹರಿಸಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಗ್ರಾಮಸ್ಥರು ತನ್ನ ಮೇಲಿನ ದ್ವೇಷದಿಂದ ದೌರ್ಜನ್ಯ ಮಾಡುತ್ತಿದ್ದಾರೆಂದು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ. ಇದರಿಂದ ಗ್ರಾಮದಲ್ಲಿ ಘರ್ಷಣೆಯಾಗಿ ಪೋಲೀಸರು ಅನೇಕರನ್ನು ಬಂಧಿಸಿ ಜೈಲಿಗೆ ಕಳುಹಿಸಿದರು. ಇಂತಹ ಅನೇಕ ಪ್ರಕರಣಗಳು ನಮ್ಮ “ಸದ್ಧರ್ಮ ನ್ಯಾಯ”ಪೀಠದಲ್ಲಿ ದಾಖಲಾಗಿದ್ದು “ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ, ಸುಳಿದು ಬೀಸುವ ಗಾಳಿ ನಿಮ್ಮ ದಾನ” ಎಂದು ದೇವರ ದಾಸಿಮಯ್ಯ ಹೇಳುವಂತೆ ಇತ್ತೀಚೆಗೆ “ದೇವಸ್ಥಾನದ ಜಮೀನಿಗೆ ದೇವರೇ ಮಾಲೀಕ” ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಮಾನ ನೀಡಿ ದೇವರಿಗೆ ಆಗುತ್ತಿದ್ದ “ಅನ್ಯಾಯ”ವನ್ನು ಕೊನೆಗೊಳಿಸಿದೆ.
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ಬಿಸಿಲು ಬೆಳದಿಂಗಳು ದಿ.17-7-2025.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ.17-7-2025.