ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ರಾಜಕೀಯ ವೈಯಕ್ತಿಕ ನಿಂದನೆಗೆ ಸ್ಪಷ್ಟ ತಾಕೀತು,.! ಗಣ್ಯ ನಾಯಕರಿಗೆ ಸಂಯಮ, ಸಂಸ್ಕೃತಿ, ಸೌಹಾರ್ದದ ಪಾಠ ಹೇಳಿದ ತರಳಬಾಳು ಜಗದ್ಗುರು ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು
ಭದ್ರಾವತಿ: ಭದ್ರಾವತಿಯಲ್ಲಿ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವದ ಕೊನೆಯ ದಿನದ ಕಾರ್ಯಕ್ರಮದಲ್ಲಿ ಸಮಾಜಕ್ಕೆ ಮಹತ್ವದ ಸಂದೇಶವೊಂದನ್ನು ನೀಡುವ ಮೂಲಕ ತರಳಬಾಳು ಜಗದ್ಗುರು ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ರಾಜಕೀಯ ವಲಯದಲ್ಲಿ ಹೆಚ್ಚಾಗುತ್ತಿರುವ ವೈಯಕ್ತಿಕ, ಕುಟುಂಬ ಹಾಗೂ ಪರಸ್ಪರ ನಿಂದನೆ ಸಂಸ್ಕೃತಿಗೆ ಸ್ಪಷ್ಟವಾದ ತಾಕೀತು ನೀಡಿದರು.

ಶಾಸಕ, ಸಚಿವ, ಮಾಜಿ ಸಂಸದರಿಗೆ ನೇರ ಉಪದೇಶ ನೀಡಿ ವೈಯಕ್ತಿಕ ಜೀವನ ಹಾಗೂ ಕುಟುಂಬದ ಬಗ್ಗೆ ಅವಹೇಳನಕ್ಕೆ ಬ್ರೇಕ್ ಹಾಕಿದ ಪರಮಪೂಜ್ಯ ಶ್ರೀಗಳು
ಕಾರ್ಯಕ್ರಮದಲ್ಲಿ ಹರಿಹರ ಶಾಸಕ ಬಿ.ಪಿ.ಹರೀಶ್, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ವೇಳೆ ಪರಮಪೂಜ್ಯ ಜಗದ್ಗುರುಗಳು, ರಾಜಕೀಯ ಭಿನ್ನಾಭಿಪ್ರಾಯಗಳು ಸಹಜವಾದರೂ, ಅವು ವೈಯಕ್ತಿಕ ಜೀವನ, ಕುಟುಂಬ ಹಾಗೂ ಮಾನವೀಯ ಮೌಲ್ಯಗಳಿಗೆ ಧಕ್ಕೆಯಾಗುವ ಮಟ್ಟಕ್ಕೆ ಇಳಿಯಬಾರದು ಎಂಬುದನ್ನು ಖಡಕ್ ಶಬ್ದಗಳಲ್ಲಿ ತಿಳಿಸಿದರು.

ಸಂಯಮ, ಸೌಹಾರ್ದ ಮತ್ತು ಸಂಸ್ಕೃತಿಯ ರಾಜಕೀಯಕ್ಕೆ ಕರೆ ನೀಡಿ ಗಣ್ಯ ನಾಯಕರಿಗೆ ಪೀಠದಿಂದ ಸ್ಪಷ್ಟ ಸಂದೇಶ
ಮೊದಲು ಶಾಸಕ ಬಿ.ಪಿ. ಹರೀಶ್ ಅವರನ್ನು ತಮ್ಮ ಸದ್ಧರ್ಮ ಸಿಂಹಾಸನ ಪೀಠದ ಬಳಿಗೆ ಕರೆಸಿ, ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬಳಸಲಾಗುತ್ತಿರುವ ಭಾಷೆ ಹಾಗೂ ಶಾಮನೂರು ಕುಟುಂಬದ ಕುರಿತು ನಡೆದ ವೈಯಕ್ತಿಕ ಟೀಕೆಗಳ ಬಗ್ಗೆ ಸ್ಪಷ್ಟವಾಗಿ ಮಾತನಾಡಿದರು. “ನೀನು ಮಠದ ಶಿಷ್ಯ. ನಿನ್ನ ಬಗ್ಗೆ ನನಗೆ ಒಳ್ಳೆಯ ಅಭಿಪ್ರಾಯ ಇದೆ. ನೀನು ಒಳ್ಳೆಯವನು. ಆದರೆ ಈ ರೀತಿಯ ವೈಯಕ್ತಿಕ ನಿಂದನೆ, ಕೆಟ್ಟ ಭಾಷೆ ಸರಿಯಲ್ಲ. ಇನ್ನು ಮುಂದೆ ಈ ರೀತಿಯ ಘಟನೆಗಳು ಮರುಕಳಿಸಬಾರದು” ಎಂದು ತಿಳಿ ಮಾತಿನಲ್ಲಿ, ದೃಢವಾಗಿ ತಾಕೀತು ಮಾಡಿದರು. ಇದಕ್ಕೆ ಶಾಸಕ ಹರೀಶ್ ಅವರು ಪೂಜ್ಯ ಗುರುಗಳ ಪಾದಗಳಿಗೆ ನಮಸ್ಕರಿಸಿ, ಅವರ ಮಾತುಗಳನ್ನು ಗೌರವದಿಂದ ಸ್ವೀಕರಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿನ ಕೆಟ್ಟ ಭಾಷೆಗೂ ತಾಕೀತು; ರಾಜಕೀಯ ವಿರೋಧಕ್ಕೂ ಮಿತಿ ಬೇಕೆಂದ ಜಗದ್ಗುರುಗಳು
ಇದೇ ವೇಳೆ ವೇದಿಕೆಯಲ್ಲಿ ಉಪಸ್ಥಿತರಿದ್ದ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೂ ಪರಮಪೂಜ್ಯರು ನೇರವಾಗಿ ತಿಳುವಳಿಕೆ ನೀಡಿದರು. “ನೀವು ಕೂಡ ಇನ್ನು ಮುಂದೆ ವೈಯಕ್ತಿಕ ನಿಂದನೆಗೆ ಅವಕಾಶ ಕೊಡಬಾರದು. ನಿಮ್ಮ ಸುತ್ತಮುತ್ತ ಇರುವವರು, ಸಂಬಂಧಿಕರೂ ಕೂಡ ಈ ರೀತಿ ವರ್ತಿಸಬಾರದು”ಎಂದು ಸಲಹೆ ನೀಡಿದರು. ಸೌಹಾರ್ದದ ವಾತಾವರಣದಲ್ಲಿ ಮಾತನಾಡುತ್ತಾ, “ಹೆಣ್ಣು-ಗಂಡು ಸಂಬಂಧ ಮಾಡಿಕೊಂಡರೆ ಎಲ್ಲವೂ ಸರಿಯಾಗಬಹುದು” ಎಂದು ಹಾಸ್ಯಮಿಶ್ರಿತವಾಗಿ ಹೇಳಿ, ರಾಜಕೀಯ ವಿರೋಧಕ್ಕೂ ಮಿತಿಯಿರಬೇಕು ಎಂಬ ಸಂದೇಶವನ್ನು ನೀಡಿದರು.

ಅಲ್ಲದೇ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಅವರನ್ನು ಕೂಡ ಪೀಠದ ಬಳಿಗೆ ಕರೆಸಿ, ಶಾಮನೂರು ಕುಟುಂಬದೊಂದಿಗೆ ಇರುವ ಮಾವ–ಅಳಿಯಂದಿರ ಸಂಬಂಧವನ್ನು ಉಲ್ಲೇಖಿಸಿ, “ನೀವುಗಳು ಸಾರ್ವಜನಿಕವಾಗಿ ಕಿತ್ತಾಡಿಕೊಳ್ಳುವುದು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದಿಲ್ಲ. ಸಂಬಂಧಗಳನ್ನು ಗೌರವಿಸಿ, ಸಂಯಮದಿಂದ ನಡೆದುಕೊಳ್ಳಿ. ಇಲ್ಲಿಯೂ ಸಹ ಹೆಣ್ಣು–ಗಂಡು ಸಂಬಂಧ ಮಾಡಿಕೊಂಡರೆ ಸಮಸ್ಯೆಗಳು ಸರಿಯಾಗಬಹುದು” ಎಂದು ಅರ್ಥಪೂರ್ಣ ಮಾತುಗಳಲ್ಲಿ ಉಪದೇಶಿಸಿದರು.

ಸಮಸ್ಯೆಗಳಿದ್ದರೆ ಮಠಕ್ಕೆ ಬನ್ನಿ ಎಂದು ರಾಜಕೀಯ ನಾಯಕರಿಗೆ ಆಶೀರ್ವಚನ ಹಾಗೂ ತಾಕೀತು
ಈ ಸಂದರ್ಭದಲ್ಲಿ ಪೂಜ್ಯ ಗುರುಗಳು,“ರಾಜಕೀಯವಾಗಿ ನೀವುಗಳು ಏನೇ ಬೇಕಾದರೂ ಮಾಡಿಕೊಳ್ಳಿ. ಆದರೆ ವೈಯಕ್ತಿಕ ನಿಂದನೆ, ಕುಟುಂಬದ ಬಗ್ಗೆ ಅವಹೇಳನ ಮಾಡುವುದನ್ನು ನಾವು ಒಪ್ಪುವುದಿಲ್ಲ. ರಾಜಕೀಯ ಸಂಸ್ಕಾರದಿಂದ, ಸೌಜನ್ಯದಿಂದ ನಡೆಯಬೇಕು. ಯಾವುದೇ ಸಮಸ್ಯೆಯಿದ್ದರೂ ನಮ್ಮ ಮಠಕ್ಕೆ ಬನ್ನಿ, ನನ್ನ ಬಳಿ ಬನ್ನಿ” ಎಂದು ಎಲ್ಲರಿಗೂ ಆಶೀರ್ವಚನ ನೀಡಿದರು.
ಭಕ್ತರ ಚಪ್ಪಾಳೆ–ಜಯಘೋಷಗಳ ನಡುವೆ ರಾಜಕೀಯ ನಿಂದನೆ ಸಂಸ್ಕೃತಿಗೆ ತರಳಬಾಳು ಪೀಠದ ಕಠಿಣ ಸೂಚನೆ
ಪೂಜ್ಯ ಜಗದ್ಗುರುಗಳ ಈ ನೇರ, ನಿಷ್ಠುರ ಆದರೆ ಮಾನವೀಯ ಸಂದೇಶಕ್ಕೆ ಕಾರ್ಯಕ್ರಮದಲ್ಲಿ ನೆರೆದಿದ್ದ ಸಾವಿರಾರು ಭಕ್ತರು ಚಪ್ಪಾಳೆ, ಶಿಳ್ಳೆ ಹಾಗೂ ಜಯಘೋಷಗಳೊಂದಿಗೆ ಸಂಭ್ರಮ ವ್ಯಕ್ತಪಡಿಸಿದರು. ರಾಜಕೀಯ ನಾಯಕರಿಗೂ ಸಹ ಸಮಾಜದ ಹಿತದ ದೃಷ್ಟಿಯಿಂದ ತಿಳಿ ಮಾತು ಹೇಳುವ ಧೈರ್ಯ ಮತ್ತು ತಾಕತ್ತು ತರಳಬಾಳು ಮಠಕ್ಕಿದೆ ಎಂಬುದನ್ನು ಈ ಘಟನೆ ಮತ್ತೊಮ್ಮೆ ಸಾಬೀತು ಮಾಡಿತು.
ಸಮಾಜದಲ್ಲಿ ಶಾಂತಿ, ಸೌಹಾರ್ದ, ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಉಳಿಸುವಲ್ಲಿ ತರಳಬಾಳು ಮಠ ಹಾಗೂ ಪರಮಪೂಜ್ಯ ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಪಾತ್ರ ಎಷ್ಟು ಮಹತ್ವದ್ದು ಎಂಬುದನ್ನು ಈ ಘಟನೆಯು ಸ್ಪಷ್ಟವಾಗಿ ತೋರಿಸಿತು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ, ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಚಿವರಾದ ದಿನೇಶ್ ಗುಂಡೂರಾವ್, ಹೊನ್ನಾಳಿ ಶಾಸಕ ಶಾಂತನಗೌಡ, ತರೀಕೆರೆ ಶಾಸಕ ಶ್ರೀನಿವಾಸ್, ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್, ಸಾಧು ಸದ್ಧರ್ಮ ವೀರಶೈವ ಸಮಾಜದ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಸೇರಿದಂತೆ ಹಲವು ಗಣ್ಯರು ಹಾಗೂ ಭಕ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.











