ಭದ್ರಾವತಿ: ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಪ್ರತಿ ವರ್ಷ ಅತಿಥಿಯಾಗಿ ಭಾಗವಹಿಸುವ ಅವಕಾಶ ದೊರಕುತ್ತಿರುವುದು ನನ್ನ ಪೂರ್ವಜನ್ಮದ ಪುಣ್ಯ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದರು.
ಸರ್ವಧರ್ಮ ಸಮಾನತೆ ಹಾಗೂ ಮಾನವೀಯ ಮೌಲ್ಯಗಳನ್ನು ಸಾರುವ ಇಂತಹ ಮಹತ್ವದ ಮಹೋತ್ಸವದಲ್ಲಿ ನಮ್ಮಂತಹ ಸಣ್ಣ ನೌಕರರ ಸಂಘಟನೆಯ ಅಧ್ಯಕ್ಷನನ್ನೇ ಆಹ್ವಾನಿಸಿ ವೇದಿಕೆಯಲ್ಲಿ ಮಾತನಾಡುವ ಅವಕಾಶವನ್ನು ಪೂಜ್ಯ ಗುರುಗಳು ಕಲ್ಪಿಸಿರುವುದು ಕೇವಲ ವೈಯಕ್ತಿಕ ಗೌರವವಲ್ಲ; ಇಡೀ ರಾಜ್ಯದ ಆರು ಲಕ್ಷ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬಗಳನ್ನು ಒಳಗೊಂಡಂತೆ ಸುಮಾರು 25 ಲಕ್ಷ ಜನರ ಗೌರವಕ್ಕೆ ಸಮಾನವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಪೂಜ್ಯ ಗುರುಗಳು ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ವಿಶಾಲ ದೃಷ್ಟಿಕೋನ ಹೊಂದಿದ್ದು, ಸರ್ವಧರ್ಮ ಸಮಾನತೆ ಹಾಗೂ ಎಲ್ಲರೂ ಸಮಾನರು ಎಂಬ ಮಾನವೀಯ ತತ್ವವನ್ನು ಪ್ರತಿದಿನದ ಹುಣ್ಣಿಮೆ ಮಹೋತ್ಸವಗಳ ಮೂಲಕ ಸಮಾಜದ ಮುಂದೆ ಇಡುತ್ತಾ, ರಾಜ್ಯದಲ್ಲಿ ಕ್ರಾಂತಿಕಾರಕ ಚಿಂತನೆಗಳಿಗೆ ದಾರಿ ಮಾಡಿಕೊಡುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.
ಇಂತಹ ಮಹತ್ವದ ವೇದಿಕೆಯಲ್ಲಿ ‘ಸಮೂಹ ಮಾಧ್ಯಮಗಳು ಸಮಾಜದ ಮೇಲೆ ಬೀರುವ ಪರಿಣಾಮ’ ಎಂಬ ವಿಷಯದ ಕುರಿತು ಮಾತನಾಡುವ ಅವಕಾಶ ದೊರೆತಿರುವುದು ವಿಶೇಷ ಗೌರವದ ವಿಷಯವಾಗಿದೆ ಎಂದು ತಿಳಿಸಿದರು.

ಇಂದಿನ ಸಮಾಜದಲ್ಲಿ ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗದಂತೆ ಮಾಧ್ಯಮವೂ ಮತ್ತೊಂದು ಪ್ರಮುಖ ಅಂಗವಾಗಿ ರೂಪುಗೊಂಡಿದ್ದು, ಮಾನವ ಸಮಾಜದ ಬೆಳವಣಿಗೆಯಲ್ಲಿ ಸಂವಹನವು ಪ್ರಮುಖ ಪಾತ್ರ ವಹಿಸಿಕೊಂಡು ಬಂದಿದೆ. ಕಾಲಕ್ರಮೇಣ ಸಂವಹನ ಸಾಧನಗಳು ಅಭಿವೃದ್ಧಿ ಹೊಂದಿದಂತೆ ಸಮಾಜವೂ ರೂಪಾಂತರಗೊಂಡಿದ್ದು, ಈ ಸಂವಹನ ಸಾಧನಗಳಲ್ಲಿ ಸಮೂಹ ಮಾಧ್ಯಮ ಪ್ರಮುಖ ಸ್ಥಾನ ಪಡೆದುಕೊಂಡಿದೆ ಎಂದು ಅವರು ಹೇಳಿದರು.
ಸರ್ಕಾರದ ಯೋಜನೆಗಳು, ಕಾನೂನುಗಳು, ಸಾಮಾಜಿಕ ಸಮಸ್ಯೆಗಳು, ಆರೋಗ್ಯ ಮತ್ತು ಶಿಕ್ಷಣ ಸಂಬಂಧಿತ ಮಾಹಿತಿಯನ್ನು ಜನಸಾಮಾನ್ಯರಿಗೆ ತಲುಪಿಸುವ ಮೂಲಕ ಸಮೂಹ ಮಾಧ್ಯಮಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುತ್ತಿವೆ. ಭ್ರಷ್ಟಾಚಾರ ಮತ್ತು ಅನ್ಯಾಯಗಳ ವಿರುದ್ಧ ಧ್ವನಿಯಾಗುವ ಮೂಲಕ ಆಡಳಿತ ವ್ಯವಸ್ಥೆಯನ್ನು ಸದಾ ಎಚ್ಚರದಲ್ಲಿಡುವ ಜವಾಬ್ದಾರಿಯನ್ನೂ ಮಾಧ್ಯಮಗಳು ಹೊತ್ತಿವೆ ಎಂದರು.

ಆದರೆ ಇಂದಿನ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳ ದುರ್ಬಳಕೆ, ಸುಳ್ಳು ಸುದ್ದಿ, ಅಪಪ್ರಚಾರ ಮತ್ತು ದ್ವೇಷ ಭಾಷೆ ಸಮಾಜದ ಸೌಹಾರ್ದತೆಗೆ ಧಕ್ಕೆ ತರುತ್ತಿರುವುದು ಚಿಂತಾಜನಕವಾಗಿದೆ. ಮಕ್ಕಳಿಗೆ ಮೊಬೈಲ್ ಕೊಟ್ಟರೆ ಮಾತ್ರ ಊಟ ಮಾಡುವ, ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲೇ ಹೆಚ್ಚು ಸಮಯ ಕಳೆಯುವ ಸ್ಥಿತಿ ಅವರ ಭವಿಷ್ಯದ ಕುರಿತು ಗಂಭೀರ ಚಿಂತನೆಗೆ ಕಾರಣವಾಗಿದೆ ಎಂದು ಹೇಳಿದರು.
ಸಮೂಹ ಮಾಧ್ಯಮಕ್ಕೆ ಅಪಾರ ಶಕ್ತಿ ಇರುವಂತೆ ಅದರ ಜವಾಬ್ದಾರಿಯೂ ಅಷ್ಟೇ ಹೆಚ್ಚಾಗಿದೆ. ಸತ್ಯ, ನೈತಿಕತೆ ಮತ್ತು ಸಮಾಜ ಹಿತವೇ ಮಾಧ್ಯಮದ ಮಾರ್ಗಸೂಚಿಯಾಗಬೇಕು. ಭೀಭತ್ಸ, ಅಶ್ಲೀಲ, ಕೋಮು ಸೌಹಾರ್ದತೆ ಕದಡುವ ಹಾಗೂ ಅರ್ಧಸತ್ಯದ ಸುದ್ದಿಗಳಿಗೆ ದೂರವಿದ್ದು, ಸಮಾಜವನ್ನು ಒಗ್ಗೂಡಿಸುವ ಮತ್ತು ದೇಶ ಕಟ್ಟುವ ವಿಚಾರಗಳಿಗೆ ಹೆಚ್ಚು ಒತ್ತು ನೀಡಬೇಕು ಎಂದು ಅವರು ಮನವಿ ಮಾಡಿದರು.
Breaking ಮತ್ತು Shocking News ಗಳಿಗಷ್ಟೇ ಸೀಮಿತವಾಗದೆ, ಸಕಾರಾತ್ಮಕ ಚಿಂತನೆಗಳು, ಉತ್ತಮ ಕೆಲಸಗಳು ಹಾಗೂ ಸಮಾಜಮುಖಿ ಕಾರ್ಯಗಳಿಗೆ ಹೆಚ್ಚಿನ ಪ್ರಚಾರ ನೀಡಿದರೆ ರಾಜ್ಯ ಮತ್ತು ದೇಶದಲ್ಲಿ ನೆಮ್ಮದಿ ಹಾಗೂ ಸೌಹಾರ್ದತೆಯ ವಾತಾವರಣ ನಿರ್ಮಾಣವಾಗಲಿದೆ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.











