ವೈರಲ್ ವಿಡಿಯೋದಲ್ಲಿ ನದಿಗೆ ಬಿದ್ದ ಯುವಕನ ಹೆಂಡತಿಯೇ ತಳ್ಳಿದಳೆಂಬ ಆರೋಪ. ಆದರೆ, ಹೆಂಡತಿ ಹೇಳುವುದೇ ಬೇರೆ. ಫೋಟೋ ತೆಗೆಯುವಾಗ ಆಯತಪ್ಪಿ ಬಿದ್ದಿದ್ದಾರಂತೆ ಗಂಡ. ಇಬ್ಬರ ಕುಟುಂಬಗಳ ರಾಜಿ ಪಂಚಾಯಿತಿಯ ನಡುವೆಯೂ ಗಂಡ ಡಿವೋರ್ಸ್ ಕೊಡುವುದಾಗಿ ಪಟ್ಟು ಹಿಡಿದಿದ್ದಾನೆ.
ಅದು ಇಡೀ ಕರ್ನಾಟಕದಲ್ಲೇ ಟ್ರೋಲ್ ಆದ ವಿಡಿಯೋ. ಒಬ್ಬ ಯುವಕ ನದಿಯ ಮೇಲಿನ ಬ್ರಿಡ್ಜ್‌ನಿಂದ ಬಿದ್ದು ಭೋರ್ಗರೆದು ಹರಿಯುವ ನದಿಯಲ್ಲಿ ಈಜಿಕೊಂಡು ಹೋಗಿ ಬಂಡೆಯ ಮೇಲೆ ಕೂತಿರುತ್ತಾನೆ. ಅವನನ್ನ ರಕ್ಷಿಸಲು ಸ್ಥಳೀಯರು ಹರಸಾಹಸ ಮಾಡುತ್ತಿರುತ್ತಾರೆ. ಅಲ್ಲಿಂದ ಅವನದ್ದು ಒಂದೇ ಕೂಗು. ಅವಳು ತಳ್ಳಿಬಿಟ್ಟಳು ಬ್ರೋ. ಅವಳನ್ನ ಹಿಡಿರಿ ಅನ್ನೋದಷ್ಟೇ ಅವನ ಮಾತು. ಇನ್ನೂ ಆತನನ್ನ ರಕ್ಷಣೆ ಮಾಡಿದ ಮೇಲೆ ಆತ ಹೆಳಿದ್ದು ನಂಬಿಕೆ ದ್ರೋಹ ಬ್ರೋ ಅಂತ.
ಇದೊಂದು ವಿಡಿಯೋ ಇತ್ತಿಚೆಗೆ ಸಖತ್ ವೈರಲ್ ಆಗಿತ್ತು. ಹೆಂಡತಿಯೇ (ಗದ್ದೆಮ್ಮ) ಗಂಡನನ್ನ (ತಾತಪ್ಪ) ನದಿಗೆ ತಳ್ಳಿಬಿಟ್ಟಳು ಅಂತ ಸುದ್ದಿಯಾಗಿತ್ತು. ಇವತ್ತು ಆ ಗಂಡ ಹೆಂಡತಿ ಇಬ್ಬರೂ ಆ ವಿಡಿಯೋ ಬಗ್ಗೆ ಮಾತನಾಡಿದ್ದಾರೆ. ಹಾಗಾದರೆ ಆವತ್ತು ಆ ಬ್ರಿಡ್ಜ್ ಮೇಲೆ ನಡೆದಿದ್ದೇನು.? ನಿಜಕ್ಕೂ ಗಂಡನನ್ನ ಹೆಂಡತಿ ನೂಕಿಬಿಟ್ಟಳಾ..? ಆಕೆ ಹೇಳ್ತಿರೋದೇನು.? ಒಂದು ವಿಚಿತ್ರ ಫ್ಯಾಮಿಲಿ ಮ್ಯಾಟರೇ ಇವತ್ತಿನ ಎಫ್.ಐ.ಆರ್.
ಮದುವೆಯಾಗಿ ಮೂರು ತಿಂಗಳು ಸಹ ಆಗಿಲ್ಲ. ಆಗಲೇ ದಂಪತಿಗಳ ನಡುವೆ ಚಿಕ್ಕ-ಪುಟ್ಟ ವಿಚಾರಕ್ಕೂ ಕಲಹ ಶುರುವಾಗಿದ್ದು, ಪತ್ನಿ ಪತಿಯನ್ನೇ ಕೊಲ್ಲುವುದಕ್ಕೆ ಸ್ಕೆಚ್ ಹಾಕಿದ್ದು, ಹತ್ತಾರು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗದ ಕಾರಣ, ಪೊಲೀಸರು ಕೂಡ ನಾವು ಹೆಲ್ಪ್ಲೆಸ್ ಅಂತ ಹೇಳಿಬಿಟ್ಟಿದ್ದಾರೆ. ಇಬ್ಬರ ರಾಜಿ ಪಂಚಾಯಿತಿಯೂ ನಡೆದರೂ ಆತ ಗಂಡ ಮಾತ್ರ ನಾನು ಡಿವೋರ್ಸ್ ಕೊಡುವುದಾಗಿ ಹೇಳಿದ್ದಾನೆ.
ಒಂದು ವೇಳೆ ಡಿವೋರ್ಸ್ ಕೊಡದಿದ್ದರೆ ಹೆಂಡತಿಯನ್ನು ಪುನಃ ಜೀವನ ಮಾಡುವುದಕ್ಕೆ ಜೊತೆಗೆ ಕರೆದುಕೊಂಡು ಹೋಗು ಎಂದು ಹೇಳಿದರೆ ಪೊಲೀಸ್ ಠಾಣೆಗೆ ಕೊಲೆ ಪ್ರಯತ್ನದ ದೂರು ಕೊಡುವುದಾಗಿ, ಹೆಂಡತಿ ಮನೆಯವರನ್ನೆಲ್ಲ ಜೈಲಿಗೆ ಕಳುಹಿಸುವುದಾಗಿ ಎಚ್ಚರಿಕೆ ರವಾನಿಸಿದ್ದಾನೆ. ನನಗೆ ಹೆಂಡತಿ ಜೊತೆಯಲ್ಲಿ ಜೀವನ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಎರಡೂ ಕುಟುಂಬದವರ ರಾಜಿ ಪಂಚಾಯಿತಿ ವೇಳೆ ಸ್ಪಷ್ಟಪಡಿಸಿದ್ದಾನೆ. ಈ ಮೂಲಕ ತನ್ನ ದಾಂಪತ್ಯ ಜೀವನವನ್ನು ಕೇವಲ 3 ತಿಂಗಳಿಗೆ ಕೊನೆಗೊಳಿಸಲು ಮುಂದಾಗಿದ್ದಾರೆ.
ಆದರೆ, ಆತನ ಹೆಂಡತಿ ಮಾತ್ರ ನಾನ್ಯಾಕೆ ಅವರನ್ನು ನದಿಗೆ ತಳ್ಳಲಿ. ಅವರೇ ಫೋಟೋ ತೆಗೆಯುವಾಗ ಆಯತಪ್ಪಿ ಬಿದ್ದಿದ್ದಾರೆ. ನೀವು ವಿಡಿಯೋ ಫೋಟೋ ನೋಡಿದರೆ ಗೊತ್ತಾಗುತ್ತದೆ. ನಾನು ಏನು ಹೇಳಿದರೂ ನೀವು ಕೇಳದೇ ಆಪರಾಧಿ ಸ್ಥಾನದಲ್ಲಿ ಕೂರಿಸುವ ಪ್ರಯತ್ನ ಮಾಡಿದ್ದೀರಿ ಎಂದು ಅಳಲು ತೋಡಿಕೊಂಡಿದ್ದಾರೆ. ಇನ್ನು ಆ ಯುವತಿಯ ತಾಯಿಯೂ ಕೂಡ ನಾವು ಲಕ್ಷಾಂತರ ರೂ. ಹಣ ಖರ್ಚು ಮಾಡಿ ಮಗಳನ್ನು ಗಂಡನ ಮನೆಗೆ ಕಳಿಸಿದರೆ 3 ತಿಂಗಳಿಗೆ ಮನೆಗೆ ವಾಪಸ್ ಬಂದಿದ್ದಾಳೆ. ಮುಂದೆ ಏನು ಬರುತ್ತದೆಯೋ ನಾವು ಅದನ್ನು ಎದುರಿಸಲು ಸಿದ್ಧ ಎಂದು ತಾಯಿ ಹೇಳಿದ್ದಾರೆ.
ಅಸಲಿಗೆ ಯುವತಿ ಹೇಳಿದ್ದೇನು?
ನಾವು ಏಪ್ರಿಲ್ 18 ರಂದು ಮದುವೆ ಆಗಿದ್ದು, ಮೂರು ತಿಂಗಳು ಆಗಿದೆ. ನಾವು ಸುರಪುರದಿಂದ ಶಕ್ತಿನಗರಕ್ಕೆ ಬೈಕ್ ಹೊರಟಿದ್ದೆವು. ಬ್ರಿಡ್ಜ್ ಬಂದ ಬಳಿಕ ಫೋಟೋ ತೆಗೆದುಕೊಳ್ಳೋಣ ಎಂದು ನಿಲ್ಲಿಸಿದ್ದೇವೆ. ಫೋಟೋ ತೆಗೆದುಕೊಂಡಿದ್ದೇವೆ. ನಾನು ಆತನನ್ನು ತಳ್ಳಿಲ್ಲ. ಕಾಲು ಜಾರಿ ಬಿದ್ದಿದ್ದಾನೆ. ಬಳಿಕ ನನ್ನ ಮೇಲೆ ಸುಳ್ಳು ಹೇಳುತ್ತಿದ್ದಾನೆ. ಬಿದ್ದ ನಂತರ ಈಜುತ್ತ ಹೋಗಿ ಕೂತಿದ್ದಾನೆ. ನದಿಯಲ್ಲಿ ನೀರು ಆಳವಾಗಿ ಇರಲಿಲ್ಲ. ನದಿ ಮಧ್ಯೆ ಹೋಗಿ ಕುಳಿತುಕೊಂಡಿದ್ದಾನೆ. ಇದೀಗ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾನೆ ಎಂದು ಯುವತಿ ಹೇಳಿದರು.
ಈ ಮೊದಲು ನಮ್ಮಿಬ್ಬರ ಮಧ್ಯೆ ಯಾವುದೇ ಜಗಳವಾಗಿಲ್ಲ. ಈಗ್ಯಾಕೆ ಹೀಗೆ ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. ನೀರಿನಿಂದ ಅವರನ್ನು ರಕ್ಷಣೆ ಮಾಡಿದ ನಂತರ, ನಾನು ಅವರ ಬೈಕ್‌ನಲ್ಲಿ ಹೋಗಲು ಮುಂದಾದರೂ ಅವರು ಕೂರಿಸಿಕೊಳ್ಳಲಿಲ್ಲ. ಅಲ್ಲಿದ್ದ ಇಬ್ಬರು ಅಣ್ಣಂದಿರು ನನ್ನನ್ನು ಗಂಡನ ಮನೆಗೆ ಬಿಟ್ಟು ಬಂದರು. ಅವರೆಲ್ಲ ಹೋದ ಮೇಲೆ ನೀನೇ ನನ್ನನ್ನು ನದಿಗೆ ತಳ್ಳಿದ್ದು ಎಂದು ಗಲಾಟೆ ಮಾಡಿ, ಪುನಃ ತವರು ಮನೆಗೆ ತಂದು ಬಿಟ್ಟು ಹೋಗಿದ್ದಾರೆ. ನಾವಿಬ್ಬರೂ ಸಂಬಂಧಿಕರು. ಅವರು ನನಗೆ ಅತ್ತೆ ಮಗನಾಗಬೇಕು. ನಾನು 8ನೇ ತರಗತಿ ಓದಿದ್ದೇನೆ. ನನ್ನ ಅತ್ತೆ ಮಗನೇ ಆಗಿದ್ದರಿಂದ ಮದುವೆ ಮಾಡಿ ಕೊಟ್ಟಿದ್ದಾರೆ. ಈಗ ನಾನು ಆತನಿಗೆ ಬೇಡ ಎಂದು ಹೇಳುತ್ತಿದ್ದಾನೆ ಎಂದು ಯುವತಿ ಅಳಲು ತೋಡಿಕೊಂಡರು.