ಬಾಳೆಹೊನ್ನೂರು: ಸಾಸಿವೆಯಷ್ಟು ಸುಖಕ್ಕೆ ಸಾವಿರದಷ್ಟು ದು:ಖ. ಆ ಸಾಸಿವೆಯಷ್ಟು ಸುಖಕ್ಕಾಗಿ ಶ್ರಮಿಸಿದರೂ ಕೆಲವರಿಗೆ ದೊರಕದು. ಹುಟ್ಟು ಸಹಜವಾದರೂ ಮರಣ ನಿಶ್ಚಿತವಾಗಿದೆ. ಹುಟ್ಟು ಸಾವುಗಳ ಮಧ್ಯದ ಬದುಕು ಶ್ರೀಮಂತಗೊಳ್ಳಲು ಪ್ರಯತ್ನಿಸಬೇಕಾಗುತ್ತದೆ. ಮಾಡಿದ ಸತ್ಕಾರ್ಯಗಳ ನೆನಹು ಮಾತ್ರ ಶಾಶ್ವತವಾಗಿರುತ್ತದೆ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಜರುಗಿದ ಲಿಂ.ಶ್ರೀ ರಂಭಾಪುರಿ ವೀರರುದ್ರಮುನಿ ಜಗದ್ಗುರುಗಳವರ ಪುಣ್ಯ ಸ್ಮರಣೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಯಾವ ಸಂಪತ್ತಿಗಾಗಿ ಈ ಜೀವ ಜಗತ್ತು ಬದುಕುತ್ತಿದೆಯೋ ಆ ಸಂಪತ್ತಿನ ಪ್ರಾಪ್ತಿಗಾಗಿ ಮನುಷ್ಯ ಶ್ರಮಪಡಬೇಕಾಗುತ್ತದೆ. ದೇವರು ಮನುಷ್ಯನಿಗೆ ಎರಡು ಕೈ ಕೊಟ್ಟಿದ್ದಾನೆ. ಒಂದು ಕೈ ನಮ್ಮನ್ನು ಕಾಪಾಡಿಕೊಳ್ಳಲು ಇನ್ನೊಂದು ಕೈ ನಮ್ಮನ್ನು ನಂಬಿದವರನ್ನು ಕಾಪಾಡಲು ಎಂಬುದನ್ನು ಮನುಷ್ಯ ಮರೆಯಬಾರದು. ಹುಟ್ಟಿದ ಮೇಲೆ ಮರಣ ಇರುವುದು ಸತ್ಯ. ಆದರೂ ಮನುಷ್ಯ ಮರೆತು ನಿಜ ದಾರಿಯಲ್ಲಿ ನಡೆಯುವವರೂ ಬಹಳ ವಿರಳ. ಸತ್ತು ಹೋದ ಮನುಷ್ಯನನ್ನು ತಮ್ಮ ತಪಸ್ಸಿನ ಶಕ್ತಿಯಿಂದ ಬದುಕಿಸಿದ ಮಹಾತ್ಮರನ್ನು ಕಾಣುತ್ತೇವೆ. ಅಂಥ ಮಹಾತ್ಮರೂ ಕೂಡಾ ಕಾಲ ಗರ್ಭದಲ್ಲಿ ಕಣ್ಮರೆಯಾಗಿದ್ದಾರೆ. ಯಾವ ಪರಮಾತ್ಮನಿಂದ ಈ ಜೀವಾತ್ಮ ಅಗಲಿ ಬಂದಿದ್ದಾನೆ. ಆ ಜೀವಾತ್ಮ ಮತ್ತೆ ಪರಮಾತ್ಮನಲ್ಲಿ ಒಂದಾಗುವುದಕ್ಕೆ ಲಿಂಗೈಕ್ಯರೆಂದು ಕರೆದಿದ್ದಾರೆ. ಭೌತಿಕ ಬದುಕಿನಲ್ಲಿ ಮನುಷ್ಯ ಏನೆಲ್ಲ ಸಂಪತ್ತು ಸಂಪನ್ಮೂಲ ಸಂಪಾದಿಸಿದರೂ ಜೊತೆಗೆ ಯಾವುದೂ ಬರಲಾರದು. ಅವರವರು ಮಾಡಿದ ಪುಣ್ಯದ ಶಕ್ತಿ ಮಾತ್ರ ಒಳ್ಳೆಯ ಹೆಸರನ್ನು ತರಲು ಸಾಧ್ಯವಾಗುವುದು. ಲಿಂ. ಶ್ರೀ ರಂಭಾಪುರಿ ವೀರರುದ್ರಮುನಿ ಜಗದ್ಗುರುಗಳವರು ತಮ್ಮ ಬದುಕಿನುದ್ದಕ್ಕೂ ಸಮಾಜ ಮುಖಿಯಾಗಿ ಮತ್ತು ಧರ್ಮ ಮುಖಿಯಾಗಿ ಕಾರ್ಯ ನಿರ್ವಹಿಸಿರುವುದನ್ನು ಕಾಣುತ್ತೇವೆ. ರಚನಾತ್ಮಕ ಮತ್ತು ಗುಣಾತ್ಮಕ ಕಾರ್ಯಗಳ ಮೂಲಕ ನಮ್ಮೆಲ್ಲರ ಮನದಾಳದಲ್ಲಿ ಸದಾ ಅವರ ನೆನಹು ಉಳಿದಿದೆ ಎಂದರು.

ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಯಾವುದೋ ಪುಣ್ಯ ಫಲದಿಂದ ನಾವಿಲ್ಲಿ ಸೇರಿದ್ದೇವೆ. ಪುಣ್ಯ ತೀರಿದ ಮರು ಗಳಿಗೆಯಲ್ಲಿ ಪರಮಾತ್ಮನ ಕರೆಗೆ ಓಗೊಟ್ಟು ಹೋಗುವುದು ಅನಿವಾರ್ಯ. ಮನುಷ್ಯ ಜೀವನದಲ್ಲಿ ಮಾಡಿದ ಒಳ್ಳೆಯ ಕಾರ್ಯಗಳು ಮಾತ್ರ ಸದಾ ನೆನಪಿನಲ್ಲಿ ಇರುತ್ತವೆ. ಲಿಂ. ಶ್ರೀ ರಂಭಾಪುರಿ ವೀರರುದ್ರಮುನಿ ಜಗದ್ಗುರುಗಳು ಸರಳತೆಯ ಸಾಕಾರ ಮೂರ್ತಿಗಳಾಗಿದ್ದರು ಎಂದರು.
ಈ ಪವಿತ್ರ ಸಮಾರಂಭದಲ್ಲಿ ಚಿಕ್ಕಮಗಳೂರು ಶಂಕರ ದೇವರ ಮಠದ ಚಂದ್ರಶೇಖರ ಶಿವಾಚಾರ್ಯರು, ಬೇರುಗಂಡಿ ಬೃಹನ್ಮಠದ ರೇಣುಕ ಮಹಂತ ಶಿವಾಚಾರ್ಯರು, ಹುಡುಗಿ ಹಿರೇಮಠದ ಸೋಮೇಶ್ವರ ಶಿವಾಚಾರ್ಯರು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು. ಆಲ್ದೂರು ವೀರಶೈವ ಸಮಾಜದ ಅಧ್ಯಕ್ಷ ಕೆ.ಎಸ್.ಮಹೇಶ, ಗೌರವಾಧ್ಯಕ್ಷರಾದ ಬಿ.ಬಿ.ರೇಣುಕಾರ್ಯ, ಇ.ಸಿ.ಉಮೇಶ್. ಪ್ರಧಾನ ಕಾರ್ಯದರ್ಶಿ ಯಲಗುಡಿಗ ಹರೀಶ್ ಹಾಗೂ ಗಂಗಾಧರಯ್ಯ, ಬಸವರಾಜ ಬಿ.ಆರ್., ಕೆ.ಎಸ್.ನಂದೀಶ, ಬಸವರಾಜ ಬಿ., ಪ್ರಶಾಂತ, ನಂದೀಶ ಬನ್ನೂರು, ಶಂಕರೇಗೌಡ, ಕುಮಾರ್, ನವೀನ್ ಮಹೇಶ್, ದಾಕ್ಷಾಯಿಣಿ ಬಸವರಾಜ, ಪ್ರೇಮಾ, ಮಂಗಳ ಶಶಿಧರ ಹಾಗೂ ಮಹಾರಾಷ್ಟçದ ಸೊಲ್ಲಾಪುರ, ಬಾರ್ಸಿ, ವೈರಾಗ್, ಪುಣೆ ನಗರದಿಂದ ಬಂದ ಭಕ್ತರು ಸೇರಿದಂತೆ ನಾಡಿನ ಭಕ್ತರು ಪಾಲ್ಗೊಂಡಿದ್ದರು.

ಬೆಳಿಗ್ಗೆ ಲಿಂಗೈಕ್ಯ ಜಗದ್ಗುರುಗಳ ಗದ್ದುಗೆಗೆ ವಿಶೇಷ ಪೂಜೆ ಹಾಗೂ ಶ್ರೀ ಜಗದ್ಗುರು ರುದ್ರಮುನೀಶ್ವರ ವಸತಿ ಪ್ರೌಢ ಶಾಲೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಜರುಗಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶ್ರೀ ರಂಭಾಪುರಿ ವೀರರುದ್ರಮುನೀಶ್ವರ ವಸತಿ ಪ್ರೌಢ ಶಾಲೆಯಲ್ಲಿ ಓದುವ ಹೆಚ್ಚು ಅಂಕ ಪಡೆದಿರುವ ಮೂವರು ವಿದ್ಯಾರ್ಥಿಗಳಿಗ ಪ್ರತಿಭಾ ಪುರಸ್ಕಾರ ನೀಡಲಾಯಿತು. ಆಲ್ದೂರು ಹೋಬಳಿಯ ವೀರಶೈವ ಸಮಾಜದಿಂದ ಅನ್ನ ದಾಸೋಹ ಸೇವೆ ಜರುಗಿತು.