ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟ ದರ್ಶನ್ ಮತ್ತು ಆತನ ಸಹಚರರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಪ್ರಕರಣದ ಆರೋಪಿಗಳಿಗೆ ಹೈಕೋರ್ಟ್ ನೀಡಿದ್ದ ಜಾಮೀನನ್ನು ರದ್ದುಗೊಳಿಸುವಂತೆ ಕೋರಿ ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಹೆಚ್ಚುವರಿ ಅಫಿಡವಿಟ್ ಸಲ್ಲಿಸಿದ್ದು, ಆರೋಪಿಗಳ ವಿರುದ್ಧ ಪ್ರಬಲ ಸಾಕ್ಷ್ಯಾಧಾರಗಳ ಸರಮಾಲೆಯನ್ನೇ ಮುಂದಿಟ್ಟಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಹೈಕೋರ್ಟ್ ನೀಡಿದ್ದ ಜಾಮೀನು ರದ್ದು ಮಾಡದಂತೆ ಸುಪ್ರೀಂ ಕೋರ್ಟ್‌ಗೆ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಲಿಖಿತ ರೂಪದ ಕಾರಣಗಳನ್ನು ನೀಡಿದ್ದಾರೆ. ಪ್ರಕರಣದಲ್ಲಿ ನಟ ದರ್ಶನ್ ಸೇರಿ ಇತರೆ ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ಡಿಸೆಂಬರ್‌ನಲ್ಲಿ ಜಾಮೀನು ನೀಡಿತ್ತು. ಇದನ್ನು ಪ್ರಶ್ನಿಸಿ ಬೆಂಗಳೂರು ಪೊಲೀಸರು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಈ ಬಗ್ಗೆ ಇತ್ತೀಚೆಗೆ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಜಾಮೀನು ನೀಡಲು ಹೈಕೋರ್ಟ್ ನೀಡಿರುವ ಕಾರಣಗಳು ಸಮಂಜಸವಾಗಿಲ್ಲ. ಹೈಕೋರ್ಟ್ ತನ್ನ ವಿವೇಚನೆ ಸೂಕ್ತವಾಗಿ ಬಳಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತ್ತು. ಸದ್ಯ ವಿಚಾರಣೆ ಮುಂದೂಡಿಕೆಯಾಗಿದ್ದು, ತೀರ್ಪು ನೀಡುವುದು ಬಾಕಿ ಇದೆ.
ಇನ್ನೊಂದೆಡೆ ರೇಣುಕಾಸ್ವಾಮಿ ಕೊಲೆ ಕೇಸ್‌ನ ಆರೋಪಿ 2 ನಟ ದರ್ಶನ್ ಹಾಗೂ ಆರೋಪಿ 1 ಪವಿತ್ರಾ ಗೌಡ ಪರ ವಕೀಲರು ಸುಪ್ರೀಂ ಕೋರ್ಟ್ ಲಿಖಿತ ರೂಪದ ವಾದ ಸಲ್ಲಿಸಿದ್ದು, ಜಾಮೀನು ಯಾಕೆ ರದ್ದು ಮಾಡಬಾರದು ಎಂಬುದಕ್ಕೆ ಹಲವು ಕಾರಣಗಳನ್ನು ನೀಡಿದ್ದಾರೆ. ಅದರಲ್ಲಿ ಸಾಕ್ಷಿ ಕೊರತೆ ಎಂಬ ಅಂಶವನ್ನು ದರ್ಶನ್ ಪರ ವಕೀಲರು ನೀಡಿದ್ದರೆ, ಇತ್ತ ಪವಿತ್ರಾ ಗೌಡ ಅವರು ಕುಟುಂಬ ಕಾರಣ ನೀಡಿದ್ದಾರೆ.