ಜನವಿರೋಧಿ ದುಷ್ಟ ದುರಹಂಕಾರದ ರಾಕ್ಷಸೀ ಗುಣಸ್ವಭಾವಗಳ ನಿವಾರಣೆಗಾಗಿಯೇ ಶಿವಸಂಕಲ್ಪದಿಂದ ಅವತಾರವಾದ ವಿರಾಟರೂಪಿ ವೀರಭದ್ರ ದೇವರು ಅಪಾರ ಶಕ್ತಿಶಾಲಿ ಎಂದು ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದ್ದಾರೆ.
ಅವರು ಭಾದ್ರಪದ ಮಾಸದ ಮೊದಲ ಮಂಗಳವಾರ ಕಾಶಿ ಪೀಠದಲ್ಲಿ ನಡೆದ ಶ್ರೀವೀರಭದ್ರ ದೇವರ ಜಯಂತಿ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು. ಈ ವೇಳೆ ಮಾತನಾಡಿದ ಶ್ರೀಜಗದ್ಗುರು, ದಕ್ಷಬ್ರಹ್ಮನು ಹಮ್ಮಿಕೊಂಡಿದ್ದ ಶಿವನಿಂದಕ ಯಜ್ಞವನ್ನು ಧ್ವಂಸಗೊಳಿಸುವ ಸಂದರ್ಭ, ಯಜ್ಞ ಕುಂಡದಲ್ಲಿದ್ದ ಉರಿಯ ಅಗ್ನಿಯನ್ನು ಶ್ರೀವೀರಭದ್ರ ದೇವರು ತಮ್ಮ ಪಾದಗಳಿಂದ ತುಳಿದು ಶಾಂತಗೊಳಿಸಿದರು. ಅದರ ಪ್ರತೀಕವಾಗಿ ಇಂದಿಗೂ ಗುಗ್ಗಳ ಮಹೋತ್ಸವದಲ್ಲಿ ಪುರವಂತರು ಅಗ್ನಿಕುಂಡದ ಬೆಂಕಿಯನ್ನು ಪಾದಗಳಿಂದ ತುಳಿದು ಕಾರ್ಯಕ್ರಮ ಆರಂಭಿಸುವ ಪರಂಪರೆ ಮುಂದುವರಿದಿದೆ ಎಂದರು.

ಗುಗ್ಗಳ ಮಹೋತ್ಸವದಲ್ಲಿ ಶಸ್ತ್ರಧಾರಣೆಯ ಪದ್ಧತಿ ಇದ್ದರೂ, ಈ ವೇಳೆ ಪುರವಂತರಿಗೆ ಹಾಗೂ ಭಕ್ತರಿಗೆ ಯಾವುದೇ ರೀತಿಯ ಗಾಯ, ನೋವು ಅಥವಾ ಆರೋಗ್ಯ ಸಮಸ್ಯೆ ಉಂಟಾಗದೇ ಇರುವುದನ್ನು ಗಮನಿಸಿದಾಗ, ಶ್ರೀವೀರಭದ್ರ ದೇವರ ಅಪಾರ ಶಕ್ತಿಸಂಚಯ ಮತ್ತು ದೈವ ಮಹಿಮೆ ಸ್ಪಷ್ಟವಾಗುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ, ಕಾಶಿ ಪೀಠದಲ್ಲಿ ಪಂಚಪೀಠಗಳ ಮೂಲ ಆಚಾರ್ಯರು ಹಾಗೂ ಗೋತ್ರ ಪುರುಷರ ಜಯಂತಿಗಳು ಮತ್ತು ಸಾಂಪ್ರದಾಯಿಕ ಹಬ್ಬಗಳನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುವ ಪರಂಪರೆ ಜೀವಂತವಾಗಿದೆ ಎಂದು ಹೇಳಿದರು.
ವಿಶೇಷ ಪೂಜೆ
ಮಂಗಳವಾರ ಪ್ರಾತಃಕಾಲದಲ್ಲಿ ಶ್ರೀಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಸ್ವತಃ ಶ್ರೀ ವೀರಭದ್ರ ದೇವರಿಗೆ ಏಕಾದಶ ಮಹಾರುದ್ರಾಭಿಷೇಕ, ನೂರೊಂದು ಬಿಲ್ವಾರ್ಚನೆ ಸೇರಿದಂತೆ ವಿಶೇಷ ಪೂಜೆಯನ್ನು ನೆರವೇರಿಸಿದರು.
ಪಾಲ್ಗೊಂಡ ಭಕ್ತರು
ಈ ಮಹೋತ್ಸವದಲ್ಲಿ ಪ್ರೊ. ರೇವಣಸಿದ್ಧ ಸಾಬಾದೆ ಮತ್ತು ನಲಿನಿ ಚಿಲುಮೆ ಭಾಷಣ ಮಾಡಿದರು. ಶಿವಮೂರ್ತಿ ಹಿರೇಮಠ, ಶಿವಾನಂದ ಹಿರೇಮಠ ಹಾಗೂ ವಿನಾಯಕ ಸೇರಿದಂತೆ ಕರ್ನಾಟಕ, ಉತ್ತರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಳ ನೂರಾರು ಭಕ್ತರು ಧಾರ್ಮಿಕ ಭಾವಭರಿತವಾಗಿ ಭಾಗವಹಿಸಿದರು.
ಉತ್ತರಪ್ರದೇಶದ ವಾರಾಣಾಸಿ ನಗರದಲ್ಲಿರುವ ಕಾಶಿ ಜ್ಞಾನ ಪೀಠದಲ್ಲಿ ಹಮ್ಮಿಕೊಂಡಿದ್ದ ಶ್ರೀವೀರಭದ್ರ ಜಯಂತಿ ಮಹೋತ್ಸವವು ಭಕ್ತರ ಭಕ್ತಿಭಾವದಿಂದ ಅದ್ದೂರಿಯಾಗಿ ನೆರವೇರಿತು.