ನ್ಯಾಮತಿ : ನ್ಯಾಮತಿ ತಾಲೂಕು ಶರಣ ಸಾಹಿತ್ಯ ಪರಿಷತ್ತು, ತಾಲೂಕಿನ ಚಟ್ನಳ್ಳಿಯ ಬಸವಾಭಿಮಾನಿಗಳ ಆಶ್ರಯದಲ್ಲಿ, ತಾಲೂಕು ಜಾಗತಿಕ ಲಿಂಗಾಯತ ಮಹಾಸಭಾ, ರಾಷ್ಟ್ರೀಯ ಬಸವದಳ, ತಾಲೂಕು ಕದಳಿ ಮಹಿಳಾ ವೇದಿಕೆ ಹಾಗೂ ಸುರಹೊನ್ನೆಯ ಶ್ರೀ ಬಸವೇಶ್ವರ ಮಹಿಳಾ ಭಜನಾ ಸಂಘಗಳ ಸಹಕಾರದಿಂದ ವಿಶ್ವಗುರು ಬಸವೇಶ್ವರರ ಸಾನಿಧ್ಯದಲ್ಲಿ ವಚನ ಶ್ರಾವಣ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಿವಯೋಗಿ ಎಂ.ಬಿ. ಅವರು ಪ್ರಾಸ್ತಾವಿಕ ಭಾಷಣದಲ್ಲಿ, “ಅನುಭವ ಮಂಟಪದಲ್ಲಿ ಚರ್ಚಿತವಾದ ಬಸವಾದಿ ಶರಣರ ತತ್ವಸಿದ್ಧಾಂತಗಳನ್ನು ಜಗತ್ತಿನಾದ್ಯಂತ ಹರಡಲು ಸಾವಿರಾರು ಜಂಗಮರು ಮಾಡಿದ ಕೆಲಸವನ್ನು ಇಂದು ಸಂಘಟನೆಗಳು ಮುಂದುವರಿಸುತ್ತಿವೆ” ಎಂದು ಹೇಳಿದರು.

ಭದ್ರಾವತಿ ತಾಲೂಕು ಶರಣ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಬಸನಗೌಡ ಮಾಳಗಿ ಮಾತನಾಡಿ,“ಬಸವಣ್ಣ ಅಸಮಾನರಿಗೆ ಬದುಕನ್ನು ಕಟ್ಟಿಕೊಡಲು ಆಶಯಿಸಿದ್ದರು. ಶ್ರೇಷ್ಠ ಜಾತಿಯಲ್ಲಿ ಜನಿಸಿದರೂ ಸಮಾನತೆ ಬೋಧಿಸಿದ ಅವರ ಚಿಂತನೆಗಳು ಇಂದಿಗೂ ಪ್ರಸ್ತುತ. ಮುಂದಿನ ಪೀಳಿಗೆಯೂ ಅವುಗಳಿಂದ ಪ್ರೇರಿತವಾಗಲಿದೆ” ಎಂದರು.
ಶಿವಮೊಗ್ಗ ರಾಷ್ಟ್ರೀಯ ಬಸವದಳದ ಶ್ರೀಮತಿ ಶಾಂತಮ್ಮ ಅವರು, “ಇಷ್ಟಲಿಂಗ, ಶಿವಯೋಗ ಧರ್ಮ, ಸಂಹಿತೆ, ಲಾಂಛನ, ವಚನ ಗ್ರಂಥ, ಧ್ವಜ ಮತ್ತು ಪ್ರಾರ್ಥನೆಗಳನ್ನು ಇಂದಿನ ಜನತೆ ಅರಿಯಬೇಕಾಗಿದೆ” ಎಂದು ಹೇಳಿದರು.

ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷ ಎಚ್. ಮಹೇಶ್ವರಪ್ಪ ಮಾತನಾಡಿ “ಸಮಾನತೆ ಸಂಕೇತವಾದ ಇಷ್ಟಲಿಂಗ ಹಾಗೂ ಶಿವಯೋಗ ಸಾಧನೆಯಿಂದ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. ಈ ಜ್ಞಾನವನ್ನು ಅರಿಯದ ಇಂದಿನ ಪೀಳಿಗೆ ಅವನತಿಯ ಕಡೆಗೆ ಸಾಗುತ್ತಿದೆ. ಇದಕ್ಕೆ ಬಸವಪರ ಸಂಘಟನೆಗಳು ಸ್ಪಂದಿಸಬೇಕು” ಎಂದು ಮನದಟ್ಟು ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡ ಬಿ. ಚೆನ್ನೇಶ್ ಮಾತನಾಡಿ “ನಾವು ಮಾಡುವ ಕಾಯಕವೇ ನಮ್ಮನ್ನು ಕಾಪಾಡುತ್ತದೆ. ಯಾರಿಗೂ ನೋವು ಕೊಡದ, ಎಲ್ಲರನ್ನೂ ಸಮಾನರೆಂದು ಕಾಣುವ ವಚನಗಳು ಸರಿಯಾದ ಮಾರ್ಗದರ್ಶನ ನೀಡುತ್ತವೆ” ಎಂದರು.
ಶ್ರೀ ಬಾಳಪ್ಪ ವಚನ ಪ್ರಾರ್ಥನೆ ನಡೆಸಿಕೊಟ್ಟರು. ಸುರಹೊನ್ನೆಯ ಬಸವೇಶ್ವರ ಮಹಿಳಾ ಭಜನಾ ಮಂಡಳಿಯವರು ವಚನ ಭಜನೆ ಸಲ್ಲಿಸಿದರು.