ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಶರಣ ಸಾಹಿತ್ಯದ ಬೆಳಕಿನಲ್ಲಿ – ನ್ಯಾಮತಿಯಲ್ಲಿ ಸಾರ್ಥಕ ದಿನ

On: September 7, 2025 11:20 PM
Follow Us:

ಮಾನವತಾವಾದಿ ಶರಣರ ಸಂದೇಶಗಳನ್ನು ಜನಸಾಮಾನ್ಯರಿಗೆ ತಲುಪಿಸಲು, ವಚನ ಸಾಹಿತ್ಯದ ಪ್ರಸಾರ – ಪ್ರಚಾರಕ್ಕಾಗಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತನ್ನು ಹುಟ್ಟುಹಾಕಿದ ಡಾ. ಶ್ರೀ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು ನಿಜಕ್ಕೂ ಮಹಾನ್ ದೃಷ್ಟಿವಂತರು. ಸಮಾಜ ಸುಧಾರಣೆಗೆ ಶರಣ ತತ್ವವನ್ನು ಬಲವಾಗಿ ಅಳವಡಿಸಿದ ಅವರ ಕಾರ್ಯಚಟುವಟಿಕೆಗಳನ್ನು ನೆನೆದು, ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರತಿಯೊಬ್ಬರೂ ಗೌರವ ಸಲ್ಲಿಸಿದರು.

ನ್ಯಾಮತಿ : ನ್ಯಾಮತಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಹಾಗೂ ತಾ.ಕದಳಿ ಮಹಿಳಾ ವೇದಿಕೆ ಸಹಯೋಗದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಾದ, ಸುತ್ತೂರು ಮಹಾಸಂಸ್ಥಾನ ಮಠದ ಜಗದ್ಗುರು ಡಾ. ಶ್ರೀ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 110ನೇ ಜಯಂತ್ಯೋತ್ಸವ ಅಂಗವಾಗಿ “ಸಂಸ್ಥಾಪಕರ ದಿನ – ಉಪನ್ಯಾಸ ಕಾರ್ಯಕ್ರಮ” ಇತ್ತೀಚೆಗೆ ಜರುಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ನ್ಯಾಮತಿ ತಹಶೀಲ್ದಾರ್ ಎಂಪಿ ಕವಿರಾಜ್ ಮಾತನಾಡಿ –“ಶರಣರ ತತ್ವ ಸಿದ್ಧಾಂತಕ್ಕೆ ತಕ್ಕಂತೆ ಬಾಳಿದ ಮಹನೀಯರು ದೇವರಾಗಿದ್ದಾರೆ. ನಾವು ಶರಣರಂತೆ ಬದುಕಲು ಸಾಧ್ಯವಾಗದಿದ್ದರೂ, ಅವರ ವಿಚಾರಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಂಡರೆ ಮುಂದಿನ ಪೀಳಿಗೆಗೆ ದಾರಿ ತೋರುತ್ತದೆ. ಈ ದಾರಿಯಲ್ಲಿ ಶರಣ ಸಾಹಿತ್ಯ ಪರಿಷತ್ತು ಸುತ್ತೂರು ಶ್ರೀಗಳ ಪ್ರೇರಣೆಯಿಂದ ಶ್ರೇಷ್ಠ ಸೇವೆಯನ್ನು ಮಾಡುತ್ತಿದೆ. ಬಸವಣ್ಣನವರ ಆದರ್ಶ ಅಳಿಯದ ಶಾಶ್ವತ ದೀಪ” ಎಂದರು.

ಶ್ರೀಮತಿ ಲತಾ ಸಂತೋಷ್ ಕುಮಾರ್ ಉಪನ್ಯಾಸ ನೀಡಿದ ಅವರು,“ಶರಣ ಚಳುವಳಿಯಿಂದ ಜನರ ಆಡುವ ಭಾಷೆಯಾದ ಕನ್ನಡದಲ್ಲಿ ವಚನ ಸಾಹಿತ್ಯ ಮೂಡಿತು. ಅದು ಕೇವಲ ಭಕ್ತಿಯಲ್ಲ, ದಾರ್ಶನಿಕ, ಸಾಮಾಜಿಕ ಸಂದೇಶಗಳನ್ನು ಕೂಡ ಹೊತ್ತು ತಂದಿತು. ಶರಣ ಸಾಹಿತ್ಯ ಪರಿಷತ್ತನ್ನು ಹುಟ್ಟುಹಾಕಿದ ಸುತ್ತೂರು ಶ್ರೀಗಳ ಕೊಡುಗೆ ಅಪಾರ. ಇಂದಿಗೂ ಶರಣ ಸಾಹಿತ್ಯದ ಪ್ರಚಾರದಲ್ಲಿ ಅವರ ಪ್ರೇರಣೆ ಬೆಳಕು ಹರಡುತ್ತಿದೆ” ಎಂದರು.

ಅಧ್ಯಕ್ಷತೆಯನ್ನು ವಹಿಸಿದ ಪರಿಷತ್ತಿನ ಅಧ್ಯಕ್ಷ ಶಿವಯೋಗಿ ಎಂ.ಬಿ ಮಾತನಾಡಿ“ನ್ಯಾಮತಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಶರಣ ಪರಂಪರೆಯ ಗುರುತುಗಳು ಇನ್ನೂ ಜೀವಂತವಾಗಿವೆ. ಈ ಪರಂಪರೆಯನ್ನು ಜನಸಾಮಾನ್ಯರ ನಡುವೆ ಹರಡುವ ಜವಾಬ್ದಾರಿಯನ್ನು ಶರಣ ಸಾಹಿತ್ಯ ಪರಿಷತ್ತು ನಿಭಾಯಿಸುತ್ತಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ಎಚ್. ಮಹೇಶ್ವರಪ್ಪ ವಹಿಸಿದರು. ಶ್ರೀಮತಿ ಕವಿತಾ ವೀರೇಶ್ ಸ್ವಾಗತ ಕೋರಿದರು. ಶ್ರೀಮತಿ ಅಂಬಿಕಾ ಸುಭಾಷ್ ಚಂದ್ರ ಶರಣು ಸಮರ್ಪಣೆ ಸಲ್ಲಿಸಿದರು. ಸುರಹೊನ್ನೆಯ ಶ್ರೀ ಬಸವೇಶ್ವರ ಮಹಿಳಾ ಭಜನಾ ಸಂಘದ ಸದಸ್ಯರು ಪ್ರಾರ್ಥನೆ ನಡೆಸಿಕೊಟ್ಟರು. ಕಾರ್ಯಕ್ರಮವನ್ನು ನಾಗರಾಜ್ ಪಿ.ಜಿ ಸುಂದರವಾಗಿ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ವಚನ, ಉಪನ್ಯಾಸ ಮತ್ತು ಭಜನೆಗಳ ಸಂಯೋಜನೆ ಜನಮನದಲ್ಲಿ ಭಕ್ತಿಭಾವದ ಸವಿಯನ್ನು ಮೂಡಿಸಿತು.

K.M.Sathish Gowda

Join WhatsApp

Join Now

Facebook

Join Now

Leave a Comment