ಬೆಂಗಳೂರು: ಬ್ರಹ್ಮ ಶ್ರೀ ನಾರಾಯಣ ಗುರುಗಳ ಚಿಂತನೆ, ಹೋರಾಟಗಳು ಇಡೀ ಸಮಾಜದ ಆಸ್ತಿಯಾಗಿದ್ದು, ಯಾವುದೂ ಒಂದು ಸಮುದಾಯ ಅಥವಾ ಜಾತಿಗೆ ಮಾತ್ರ ಸೀಮಿತವಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಗರದ ರವೀಂದ್ರ ಕಲಾ ಕ್ಷೇತ್ರದಲ್ಲಿ ಆಯೋಜಿಸಿದ್ದ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾರಾಯಣ ಗುರುಗಳು ಜಾತಿ ವ್ಯಸ್ಥೆ, ಮೂಢನಂಬಿಕೆ, ಅಂಧಶ್ರದ್ಧೆ ವಿರುದ್ಧ ಹೋರಾಟ ನಡೆಸಿದ್ದು, “ವಿದ್ಯೆಯಿಂದ ಸ್ವತಂತ್ರರಾಗಿರಿ” ಎಂಬ ಸಂದೇಶವನ್ನು ಸಮಾಜಕ್ಕೆ ನೀಡಿದವರು ಎಂದು ಸಿದ್ದರಾಮಯ್ಯ ಹೇಳಿದರು. ದೇವಾಲಯ ಪ್ರವೇಶ ನಿರಾಕರಿಸಿದ ಕಾಲದಲ್ಲಿ, “ದೇವಾಲಯವನ್ನು ನಿಮ್ಮ ಬಳಿಗೆ ಕರೆತರುವ ಪ್ರಯತ್ನ ಮಾಡಿ” ಎಂದು ನಾರಾಯಣ ಗುರುಗಳು ತಿಳಿಸಿದ ಬಗ್ಗೆ ಅವರು ನೆನಪಿಸಿಕೊಂಡರು.
1885ರಲ್ಲಿ ನಾರಾಯಣಗುರುಗಳು ಮೊದಲ ದೇವಾಲಯ ಕಟ್ಟಿದ್ದು, ನಂತರ 150ಕ್ಕೂ ಹೆಚ್ಚು ದೇವಸ್ಥಾನಗಳನ್ನು ನಿರ್ಮಿಸಿ ಪೂಜಾರಿಗಳಿಗೂ ತರಬೇತಿ ನೀಡುವ ವ್ಯವಸ್ಥೆ ರೂಪಿಸಿದ್ದರು. “ಒಂದು ಜಾತಿ, ಒಂದು ಮತ, ಒಂದು ದೇವರು” ಎಂಬ ಸಂದೇಶವನ್ನು ಅವರು ನೀಡಿದರು ಎಂದು ಸಿಎಂ ಹೇಳಿದರು.

ಸಮಾಜದಲ್ಲಿ ನಿಜವಾದ ಸ್ವಾತಂತ್ರ್ಯ ಬರಬೇಕಾದರೆ ಶಕ್ತಿಹೀನರನ್ನು ಶಕ್ತಿಶಾಲಿಗಳನ್ನಾಗಿ ಮಾಡಬೇಕು ಎಂದು ಅವರು ಅಭಿಪ್ರಾಯಪಟ್ಟರು. ಬಸವಣ್ಣ, ನಾರಾಯಣಗುರುಗಳ ಕಾಲದಿಂದಲೂ ಜಾತಿ ವರ್ಗ ಬೇಡವೆಂದು ಹೇಳಿದ್ದರೂ ಅದು ಇಂದಿಗೂ ಉಳಿದಿದೆ. ಇದನ್ನು ಹೋಗಲಾಡಿಸಲು ಸಮಾಜ ಆರ್ಥಿಕ, ಸಾಮಾಜಿಕವಾಗಿ ಸ್ವಾವಲಂಬಿಯಾಗಬೇಕಿದೆ.
“ವೈದ್ಯ, ಇಂಜಿನಿಯರ್, ವಿಜ್ಞಾನಿಯಾಗುವುದು ಯಾರೊಬ್ಬರ ಸ್ವತ್ತು ಅಲ್ಲ. ಎಲ್ಲರಿಗೂ ಸಾಮರ್ಥ್ಯವಿದೆ. ನಾನು ಕುರುಬ ಸಮುದಾಯದಲ್ಲಿ ಹುಟ್ಟಿದ್ದರೂ ಮುಖ್ಯಮಂತ್ರಿಯಾಗಿದ್ದೇನೆ. ಅವಕಾಶಗಳನ್ನು ಬಳಕೆ ಮಾಡಿಕೊಳ್ಳುವುದರ ಮೇಲೆಯೇ ಸಾಧನೆ ಅವಲಂಬಿತವಾಗಿದೆ” ಎಂದು ಸಿದ್ದರಾಮಯ್ಯ ಉದಾಹರಣೆ ನೀಡಿದರು.
ಸರ್ಕಾರವು ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಒದಗಿಸಲು ಬದ್ಧವಾಗಿದೆ. ಪೋಷಕರು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕಲಿಸುವುದು ಅತಿ ಮುಖ್ಯವಾದ ಕರ್ತವ್ಯ ಎಂದು ಅವರು ಹಿತವಚನ ಹೇಳಿದರು. “ವಿದ್ಯೆಯಿಲ್ಲದೆ ದೇವರಾಜ ಅರಸು, ಬಂಗಾರಪ್ಪ, ವೀರಪ್ಪ ಮೊಯ್ಲಿ, ಎಸ್.ಎಂ. ಕೃಷ್ಣ, ದೇವೇಗೌಡ ಅವರುಗಳಂತ ಮುಖ್ಯಮಂತ್ರಿಗಳು ಹುಟ್ಟಿರಲಿಲ್ಲ” ಎಂದು ಹೇಳಿದರು.

ಸರ್ಕಾರವು ಸುಮಾರು 31 ಜಯಂತಿಗಳನ್ನು ಆಚರಿಸುತ್ತಿದ್ದು, ಅದರಲ್ಲಿ 15 ಜಯಂತಿ ಆಚರಣೆ ನಮ್ಮ ಸರ್ಕಾರ ಜಾರಿಗೆ ತಂದಿದೆ. 2016ರಲ್ಲಿ ನಾರಾಯಣ ಗುರು ಜಯಂತಿ ಆಚರಣೆಯನ್ನೂ ಪ್ರಾರಂಭಿಸಿದ್ದು ನಮ್ಮದೇ ಸರ್ಕಾರ ಎಂದು ಅವರು ತಿಳಿಸಿದರು.
ಈಡಿಗ–ಬಿಲ್ಲವ ಸಮಾಜದ ಅಭಿವೃದ್ಧಿಗೆ ಭವನ, ಹಾಸ್ಟೆಲ್ ನಿರ್ಮಾಣಕ್ಕೆ ಜಾಗ ಒದಗಿಸಲಾಗಿದ್ದು, ನಿಗಮಗಳಿಗೆ ಅನುದಾನ ನೀಡಲಾಗುವುದು. ದೇವರಾಜ ಅರಸು ನಿಗಮದಲ್ಲಿ 10 ಕೋಟಿ ರೂಪಾಯಿ ಮೀಸಲಿಡಲಾಗಿದ್ದು, ಸ್ವತಂತ್ರ ನಿಗಮಗಳಾಗಿ ನೋಂದಣಿ ಮಾಡುವ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
“ನಿಮ್ಮ ಸಮುದಾಯದ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವುದೇ ನಾರಾಯಣ ಗುರುಗಳಿಗೆ ಸಲ್ಲಿಸುವ ನಿಜವಾದ ಗೌರವ. ನಾನು ಸದಾ ಸಾಮಾಜಿಕ ನ್ಯಾಯಕ್ಕಾಗಿ ಬದ್ಧನಾಗಿದ್ದು, ನನ್ನ ರಾಜಕೀಯ ಜೀವನವನ್ನೇ ಅದಕ್ಕಾಗಿ ಮುಡಿಪಾಗಿಟ್ಟಿದ್ದೇನೆ” ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಆರ್ಯ ಈಡಿಗ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ ವಿಖ್ಯಾತಾನಂದ ಸ್ವಾಮೀಜಿಯವರು ಹಾಗೂ ನಾರಾಯಣ ಗುರು ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ ರೇಣುಕಾನಂದ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ, ಮಾಜಿ ಸಚಿವರಾದ ಹೆಚ್.ಎಂ.ರೇವಣ್ಣ, ಹಿರಿಯ ಪತ್ರಕರ್ತರಾದ ದಿನೇಶ್ ಅಮೀನ್ ಮಟ್ಟು, ಸಮುದಾಯದ ಮುಖಂಡರಾದ ತಿಮ್ಮೇಗೌಡರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.