ನ್ಯಾಮತಿ, ಸೆಪ್ಟೆಂಬರ್ 09: ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಬಸವ ಸಂಸ್ಕೃತಿ ಅಭಿಯಾನದ ಪ್ರಚಾರ ವಾಹನಕ್ಕೆ ತಾಲ್ಲೂಕಿನಲ್ಲಿ ಚಾಲನೆ ನೀಡಲಾಯಿತು.
ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಅವರಗೆರೆ ರುದ್ರಮುನಿ ಮಾತನಾಡಿ, “ಬಸವಣ್ಣನವರು ಕರ್ನಾಟಕದಷ್ಟೇ ಅಲ್ಲ, ವಿಶ್ವದ ಸಾಂಸ್ಕೃತಿಕ ನಾಯಕರು. ರಾಜಕೀಯ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಪರಿವರ್ತನೆ ತಂದವರು. ಅವರ ವಚನ ಸಂವಿಧಾನದ ಆದರ್ಶಗಳನ್ನು ಜನಮನಕ್ಕೆ ತಲುಪಿಸುವ ಅಗತ್ಯವಿದೆ” ಎಂದು ಅಭಿಪ್ರಾಯಪಟ್ಟರು.

ರಾಜ್ಯದಾದ್ಯಂತ ಲಿಂಗಾಯತರ ಸಂಘಟನೆ ಬಲಪಡಿಸುವ ಉದ್ದೇಶದಿಂದ ಬಸವ ಸಂಸ್ಕೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಮಹೇಶ್ವರಪ್ಪ ತಿಳಿಸಿದರು. ಇದೇ ಸೆಪ್ಟೆಂಬರ್ 15ರಂದು ದಾವಣಗೆರೆಯಲ್ಲಿ ನಡೆಯುವ ಮಹಾ ಅಭಿಯಾನದಲ್ಲಿ ತಾಲ್ಲೂಕಿನ ಬಸವಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಹಾಲಾರಾಧ್ಯ, ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಬಿ. ಶಿವಯೋಗಿ, ನಿಕಟಪೂರ್ವ ಅಧ್ಯಕ್ಷ ಜಿ. ನಿಜಲಿಂಗಪ್ಪ, ಎನ್.ಜೆ. ಶಂಭುಲಿಂಗ, ಕದಳಿ ವೇದಿಕೆ ಅಧ್ಯಕ್ಷೆ ಅಂಬಿಕಮ್ಮ ಬಿದರಕಟ್ಟೆ, ಪ್ರಚಾರ ಸಮಿತಿಯ ವಿ.ಬಿ. ಮಂಜುನಾಥ, ಕಡ್ಲೆಬಾಳು ಪ್ರಕಾಶ, ಕಸಾಪ ಪದಾಧಿಕಾರಿಗಳು ಹಾಗೂ ಲಿಂಗಾಯತ ಮಹಾಸಭಾದ ಕಾರ್ಯಕರ್ತರು ಉಪಸ್ಥಿತರಿದ್ದರು.