ಮೈಸೂರು: “ಶಿಕ್ಷಣದಿಂದ ಮಾತ್ರ ನಮ್ಮ ಜ್ಞಾನದ ವಿಕಾಸವಾಗುತ್ತದೆ. ಅದು ನಮಗೆ ಸ್ವಾತಂತ್ರ್ಯ, ಸ್ವಾಭಿಮಾನ ಮತ್ತು ಜವಾಬ್ದಾರಿಯುತ ಜೀವನವನ್ನು ಕೊಡುತ್ತದೆ. ಪ್ರತಿಯೊಬ್ಬರೂ ಶಿಕ್ಷಣ ಪಡೆಯಲೇಬೇಕು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮೈಸೂರಿನ ವರುಣ ಕೆರೆಯ ಪಕ್ಕದಲ್ಲಿರುವ ಶ್ರೀ ಶಿವರಾತ್ರಿ ರಾಜೇಂದ್ರ ನಗರದಲ್ಲಿ ಆಯೋಜಿಸಿದ್ದ ಶ್ರೀ ಶಿವರಾತ್ರಿ ರಾಜೇಂದ್ರ ಅನುಭವ ಮಂಟಪ ಹಾಗೂ ಸಂಘದ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಜೆಎಸ್ಎಸ್ ಹಳೆಯ ವಿದ್ಯಾರ್ಥಿಗಳ ಶ್ಲಾಘನೀಯ ಕಾರ್ಯ: ಜೆಎಸ್ಎಸ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಸೇರಿ ಗೃಹ ನಿರ್ಮಾಣ ಸಂಘವನ್ನು ಸ್ಥಾಪಿಸಿ, ಹಿಂದೆ ಖರೀದಿಸಿದ ದರದಲ್ಲಿಯೇ ನಿವೇಶನಗಳನ್ನು ಹಂಚಿಕೆ ಮಾಡಿರುವುದು ಸಹಕಾರ ಸಂಘಗಳ ಇತಿಹಾಸದಲ್ಲೇ ಪ್ರಥಮ ಎಂದು ಸಿಎಂ ಶ್ಲಾಘಿಸಿದರು. “ಈ ಸೇವಾ ಕಾರ್ಯ ಮಾಡಿದ ಸಂಘದ ಸದಸ್ಯರಿಗೆ ಅಭಿನಂದನೆಗಳು” ಎಂದು ಹೇಳಿದರು.
ಬಸವಣ್ಣನವರ ಅನುಭವ ಮಂಟಪ ಮಾದರಿ: ಸಮಾಜ ಜಾತಿ ವ್ಯವಸ್ಥೆಯಿಂದ ಕೂಡಿರುವುದರಿಂದ ಹಿಂದಿನ ದಿನಗಳಲ್ಲಿ ಶೂದ್ರ ಜನಾಂಗ ಮತ್ತು ಮಹಿಳೆಯರು ಶಿಕ್ಷಣದಿಂದ ವಂಚಿತರಾಗಿದ್ದರು. ಆದರೆ ಬಸವಣ್ಣನವರ ಕಾಲದಲ್ಲಿ ಮಹಿಳೆಯರಿಗೆ ಶಿಕ್ಷಣದ ಹಕ್ಕು ದೊರೆತಿತ್ತು ಎಂದು ಸಿಎಂ ನೆನಪಿಸಿದರು.

“ಅದಕ್ಕಾಗಿ ‘ಅನುಭವ ಮಂಟಪ’ ಎಂದೇ ಹೆಸರಿಸಲಾಯಿತು. ಇದು ಜಗತ್ತಿನ ಮೊದಲ ಸಂಸತ್ತು. ಇಲ್ಲಿ ಜಾತಿ-ಧರ್ಮಗಳ ವ್ಯತ್ಯಾಸ ಇರಲಿಲ್ಲ. ಎಲ್ಲರೂ ಸಾಮಾಜಿಕ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳುತ್ತಿದ್ದರು” ಎಂದು ಹೇಳಿದರು.
ಸಿದ್ದರಾಮಯ್ಯನ ನೆನಪು: “ನಾನು ಮುಖ್ಯಮಂತ್ರಿಯಾಗಿದ್ದಾಗ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಕಡ್ಡಾಯಗೊಳಿಸಿದ್ದೆ. ಈ ಬಾರಿ ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕರೆಂದು ಘೋಷಿಸಿದ್ದೇನೆ” ಎಂದು ಸಿಎಂ ನೆನಪಿಸಿಕೊಂಡರು.
ಜಾತ್ಯತೀತ ಸಮಾಜ ನಿರ್ಮಾಣದ ಆಶಯ: “ಪೂಜ್ಯ ರಾಜೇಂದ್ರ ಸ್ವಾಮೀಜಿಗಳು ಅಕ್ಷರ ದಾಸೋಹ, ಅನ್ನದಾಸೋಹಕ್ಕಾಗಿ ಪ್ರಸಿದ್ಧರು. ದಾಸೋಹ ಎಂದರೆ ಉತ್ಪಾದನೆ ಮಾಡಿ ಹಂಚುವುದು. ಇದೇ ಬಸವಣ್ಣನವರ ಸಂದೇಶ. ಜಾತಿ, ವರ್ಗ ರಹಿತ ಸಮಾಜ ನಿರ್ಮಾಣವಾಗಬೇಕು. ಎಲ್ಲರೂ ಮನುಷ್ಯರಾಗಿ ಬದುಕಬೇಕು. ಸಂವಿಧಾನದ ಆಶಯವೂ ಅದೇ” ಎಂದು ಸಿಎಂ ಹೇಳಿದರು.