ಬೆಂಗಳೂರು: ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ: ಚಾಪ್ಟರ್ 1’ ಚಲನಚಿತ್ರವು ಬಿಡುಗಡೆಯ ನಂತರ ಪ್ರೇಕ್ಷಕರ ಕುತೂಹಲ, ನಿರೀಕ್ಷೆ ಮತ್ತು ಹೋಲಿಕೆಯ ನಡುವೆ ಸುದ್ದಿ ತರಂಗ ಸೃಷ್ಠಿಸಿದೆ. ‘ಕಾಂತಾರ’ಮೊದಲ ಭಾಗದ ಯಶಸ್ಸಿನ ಮೆರುಗು ಈ ಚಿತ್ರಕ್ಕೂ ಬೆನ್ನೆಲುಬಾಗಿದೆ. ದೈವ, ಕಾಡು, ಸಂಪ್ರದಾಯ ಮತ್ತು ರಕ್ತಸಿಕ್ತ ಯುದ್ಧಭೂಮಿ all in one ಎನ್ನುವ ರೀತಿಯ ಭಾವನಾತ್ಮಕ ಹಾಗು ದೃಶ್ಯಾತ್ಮಕ ನಿರೂಪಣೆ ಚಿತ್ರದಲ್ಲಿ ಕಾಣಿಸಿಕೊಂಡಿದೆ.
ಕದಂಬರ ಕಾಲದ ಹಿನ್ನೆಲೆ
ಕಥಾನಕ ಕದಂಬರ ಯುಗಕ್ಕೆ ಸೇರಿದದ್ದು. ಒಂದು ಭಾಗದಲ್ಲಿ ಕಾಡಿನ ಜನಾಂಗ, ಮತ್ತೊಂದರಲ್ಲಿ ಶ್ರೇಯಾಂಕಿತ ರಾಜಾಧಿಕಾರ. ಭೂಮಿ, ಕಾಡು, ಸಂಪತ್ತು ಮತ್ತು ಆಳ್ವಿಕೆ ಎಂಬ ನಾಲ್ಕು ಅಂಶಗಳ ಸುತ್ತ ಕಥೆ ಹೆಣೆದಿದ್ದು, ಜನಾಂಗ ಮತ್ತು ರಾಜವಂಶದ ನಡುವೆ ಹರಿಯುವ ಸಂಘರ್ಷ ಚಿತ್ರದಲ್ಲೇ ಬೆಳಕಿಗೆ ಬರುತ್ತದೆ.

ರಿಷಬ್ ಶೆಟ್ಟಿಯ ‘ಬೆರ್ಮೆ’ ಪಾತ್ರ
ಚಿತ್ರದ ಪ್ರಧಾನ ಪಾತ್ರ ‘ಬೆರ್ಮೆ’ಯಾಗಿ ರಿಷಬ್ ಶೆಟ್ಟಿ ಬಹುಪಾಲು ಪರದೆ ಸಮಯ ಕಾಯ್ದುಕೊಂಡಿದ್ದಾರೆ. ಕಾಂತಾರವನ್ನು ಕಾಯುವ, ದೈವದ ಅಧಿಪತ್ಯದಲ್ಲಿ ಬದುಕುವ ಪಾತ್ರಕ್ಕೆ ಅವರು ತೋರಿದ ಸಮರ್ಪಣೆ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಡ್ಯೂಪ್ ಇಲ್ಲದೆ ಮಾಡಿದ ಸಾಹಸ ದೃಶ್ಯಗಳು, ದೈವಪಾತ್ರದ ಹಾವಭಾವ ಮತ್ತು ಶಕ್ತಿಶಾಲಿ ಅಭಿನಯ ಅವರಿಗೆ ಮತ್ತಷ್ಟು ಅಂಕ ಸೇರ್ಪಡೆ ಮಾಡಿದೆ.
ನಟರ ಕಾಣಿಕೆ
ಯುವ ರಾಣಿ ಪಾತ್ರದಲ್ಲಿ ರುಕ್ಮಿಣಿ ವಸಂತ್ ಅವರು ಛಾಯಾಗ್ರಹಣದ ಪ್ರತೀ ದೃಶ್ಯದಲ್ಲೂ ತಮ್ಮ ಸೌಂದರ್ಯ ಮತ್ತು ಅಭಿನಯದ ಮೂಲಕ ಮೆಚ್ಚುಗೆ ಪಡೆದಿದ್ದಾರೆ.
ಗುಲ್ಶನ್ ದೇವಯ್ಯ ಅಭಿನಯಿಸಿದ ಕುಲಶೇಖರ ಪಾತ್ರ ತಕ್ಕಮಟ್ಟಿಗೆ ಇದ್ದರೂ ಗಾಢತೆಯ ಕೊರತೆ ಕಾಣುತ್ತದೆ.ಜಯರಾಮ್, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮಿನಾಡ್, ದೀಪಕ್ ರೈ ಪಣಜೆ ಮೊದಲಾದವರು ಚಿತ್ರಕ್ಕೆ ಬೇಕಾದ ತೂಕ ನೀಡಿರುವರು.ರಾಕೇಶ್ ಪೂಜಾರಿ ಪಾತ್ರ ಗಮನ ಸೆಳೆದಿದೆ.

ತಾಂತ್ರಿಕ ಮೆರಗು
ವಿಎಫ್ಎಕ್ಸ್ ಚಿತ್ರಕ್ಕೇ ಪ್ರಾಣ. ಹುಲಿ, ಕಾಡು ಮತ್ತು ಜೀವಿಗಳ ದೃಶ್ಯ ನೈಜತೆಯ ಮಟ್ಟಕ್ಕೆ ತಲುಪಿದೆ. ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣ ಚಿತ್ರಕ್ಕೆ ವಿಶಿಷ್ಟ ಮೌಲ್ಯ ತಂದಿದೆ. ಹಿಂದಿನ ಶತಮಾನದ ಸನ್ನಿವೇಶಗಳಿಗೆ ಸರಿಹೊಂದುವ ವಸ್ತ್ರ ವಿನ್ಯಾಸ ಗಮನಾರ್ಹ.
ಸಂಗೀತದಲ್ಲಿ ನಿರಾಸೆ
ಅಜನೀಶ್ ಲೋಕನಾಥ್ ಈ ಚಿತ್ರಕ್ಕೆ ಹೊಸ ಸಂಗೀತ ಸಂಯೋಜನೆ ನೀಡದೆ, ‘ಕಾಂತಾರ’ ಚಿತ್ರದ ಎರಡು ಹಾಡುಗಳನ್ನು ಮರುಬಳಕೆ ಮಾಡಿದ್ದಾರೆ. ಇದು ಪ್ರೇಕ್ಷಕರ ನಿರೀಕ್ಷೆಗೆ ಬಣ್ಣ ಹಚ್ಚದ ಅಂಶ.
ಗಟ್ಟಿ ದೃಶ್ಯಗಳು, ಆದರೆ ಲಾಜಿಕ್ ಪ್ರಶ್ನೆ
ಚಿತ್ರದ ಓಪನಿಂಗ್ ದೃಶ್ಯ ಅದ್ಭುತ. ಇಂಟರ್ವಲ್ಗೂ ಮುನ್ನ ಬರುವ ಫೈಟ್ ಸನ್ನಿವೇಶ ಕ್ಲೈಮ್ಯಾಕ್ಸ್ ಭಾವನೆ ಮೂಡಿಸುತ್ತದೆ. ಕೆಲವು ದೃಶ್ಯಗಳಲ್ಲಿ ತಾರ್ಕಿಕತೆಯ ಅಲ್ಪ ಉಪಸ್ಥಿತಿ ಕಂಡುಬರುತ್ತದೆ. “ಕಾಡಿಗೆ ನಡೆದು ಹೋದರೆ ಒಂದು ದಿನ” ಎಂದು ಆರಂಭದಲ್ಲಿ ಹೇಳಿದರೂ, ಅಂತ್ಯದಲ್ಲಿ ನಾಯಕ ಕ್ಷಣಗಳಿಂದ ಕಾಡಿನಲ್ಲಿ ಕಾಣಿಸಿಕೊಳ್ಳುವ ಸನ್ನಿವೇಶ ಪ್ರಶ್ನೆಗೆ ಕಾರಣವಾಗಿದೆ.
ಹೋಲಿಕೆ ತಪ್ಪಲಿಲ್ಲ
‘ಕಾಂತಾರ’ ಚಿತ್ರದಲ್ಲಿದ ಸಮತೋಲನ ಮತ್ತು ಸಾಂಸ್ಕೃತಿಕ ಅಸ್ತಿತ್ವವು ಈ ಭಾಗದಲ್ಲಿ ಸ್ವಲ್ಪ ಕುಗ್ಗಿದೆ. ಫೈಟ್ ಸೀಕ್ವೆನ್ಸ್ಗಳು ಹೆಚ್ಚಾಗಿ ಕಾಣಿಸಿಕೊಂಡಿದ್ದು, ಕಥಾನಕದ ಬಿಗಿತಕ್ಕೆ ಸ್ವಲ್ಪ ಹೊಗ್ಗುಂಟಾಗಿದೆ. ಯುದ್ಧದ ಸನ್ನಿವೇಶಗಳು ‘ಬಾಹುಬಲಿ’ ನೆನಪಿಗೆ ತಂದಿವೆ.
ಮುಂದಿನ ಭಾಗಕ್ಕೆ ಸುಳಿವು
ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ‘ಕಾಂತಾರ: ಚಾಪ್ಟರ್ 2’ ಬರುವ ಸೂಚನೆ ಸಿಕ್ಕಿದ್ದು, ಮುಂದಿನ ಕಥಾಹಂದರ ಯಾವ ದಾರಿ ಹಿಡಿಯುತ್ತದೆ ಎಂಬ ಕುತೂಹಲ ಉಳಿಸಿದೆ.
ಒಟ್ಟು ಅಭಿಪ್ರಾಯ
- ದೈವೀಯತೆ, ಸಂಪ್ರದಾಯ ಮತ್ತು ದೃಶ್ಯ ವೈಭವ – ಚಿತ್ರಕ್ಕೆ ಬಲವಾದ ಅಂಶ
- ಅಭಿನಯ, ವಿಸ್ಮಯಕಾರಿ ವಿಸ್ತಾರ ದೃಶ್ಯಗಳು, ಛಾಯಾಗ್ರಹಣ – ಪ್ರಮುಖ ಪ್ಲಸ್
- ಸಂಗೀತದಲ್ಲಿ ಹೊಸತನದ ಕೊರತೆ
- ತಾರ್ಕಿಕ ತಪ್ಪುಗಳು ಮತ್ತು ಅತಿಯಾದ ಫೈಟ್ ದೃಶ್ಯಗಳು
‘ಕಾಂತಾರ: ಚಾಪ್ಟರ್ 1’ ದಂತಕಥೆಯ ಅದ್ದೂರಿತನವನ್ನು ದೃಷ್ಟಿಪಡುವ ಪ್ರಯತ್ನ, ಆದರೆ ಕಥೆಯ ದಟ್ಟತೆ ಮತ್ತು ನವೀನತೆಯಲ್ಲಿ ಕೆಲವು ಕುಸಿತಗಳೊಂದಿಗೆ ಪ್ರಕಟವಾಗಿರುವ ಸತ್ಯ.