ಹೊಂಬಾಳೆ ಫಿಲ್ಮ್ಸ್ ಘೋಷಣೆ – ಸಿಂಗಲ್ ಸ್ಕ್ರೀನ್ 99 ರೂ., ಮಲ್ಟಿಪ್ಲೆಕ್ಸ್ 150 ರೂ.
ಬೆಂಗಳೂರು, ಅ. 30: ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಹೊಂಬಾಳೆ ಫಿಲ್ಮ್ಸ್ ತನ್ನ ಬೃಹತ್ ಹಿಟ್ ಸಿನಿಮಾ ‘ಕಾಂತಾರ ಚಾಪ್ಟರ್ 1’ಗೆ ವಿಶೇಷ ಕೊಡುಗೆ ಘೋಷಿಸಿದೆ. ಪ್ರೇಕ್ಷಕರ ಅಪಾರ ಬೆಂಬಲಕ್ಕೆ ಧನ್ಯವಾದವಾಗಿ ಚಿತ್ರಮಂದಿರದ ಟಿಕೆಟ್ ದರಗಳನ್ನು ಗಣನೀಯವಾಗಿ ಇಳಿಸಲಾಗಿದೆ. ಅಕ್ಟೋಬರ್ 31ರಿಂದ ಸಿಂಗಲ್ ಸ್ಕ್ರೀನ್‌ನಲ್ಲಿ ಟಿಕೆಟ್ ದರ 99 ರೂ. ಮತ್ತು ಮಲ್ಟಿಪ್ಲೆಕ್ಸ್‌ನಲ್ಲಿ 150 ರೂ. ನಿಗದಿಪಡಿಸಲಾಗಿದೆ.
ರಿಷಬ್ ಶೆಟ್ಟಿ ಅವರ ನಿರ್ದೇಶನ ಹಾಗೂ ನಟನೆಯಲ್ಲಿ ಮೂಡಿಬಂದಿರುವ ಈ ಚಿತ್ರ ಅಕ್ಟೋಬರ್ 2ರಂದು ಬಿಡುಗಡೆಯಾಗಿ ಬರೀ ಕರ್ನಾಟಕದಲ್ಲಿಯೇ ₹250 ಕೋಟಿ ರೂ.ಗೂ ಹೆಚ್ಚು ಗಳಿಕೆ ಮಾಡಿದೆ. ವಿಶ್ವದಾದ್ಯಂತ ₹850 ಕೋಟಿ ರೂ. ದಾಟಿ, ಈ ವರ್ಷ ಅತಿಹೆಚ್ಚು ಗಳಿಸಿದ ಭಾರತೀಯ ಚಿತ್ರವಾಗಿ ದಾಖಲೆ ಬರೆದಿದೆ. ಮಣ್ಣಿನ ಪರಂಪರೆ, ಭಕ್ತಿಭಾವ ಮತ್ತು ಸಂಸ್ಕೃತಿಯನ್ನು ಹೊತ್ತ ಈ ಚಿತ್ರ ಕನ್ನಡ ಚಿತ್ರರಂಗದ ಹೊಸ ಮೈಲಿಗಲ್ಲಾಗಿದೆ.
ವಿದೇಶಿ ಭಾಷೆಗಳಲ್ಲಿ ನಾಳೆ ಬಿಡುಗಡೆ
‘ಕಾಂತಾರ ಚಾಪ್ಟರ್ 1’ ಈಗ ಇಂಗ್ಲಿಷ್ ಮತ್ತು ಸ್ಪಾನಿಷ್ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಅಕ್ಟೋಬರ್ 31ರಿಂದ ಈ ಆವೃತ್ತಿಗಳು ತೆರೆಗೆ ಬರುವುದರಿಂದ ತುಳುನಾಡ ಸಂಸ್ಕೃತಿ ಮತ್ತು ಭಾರತೀಯ ಆಚಾರ-ವಿಚಾರಗಳು ಜಾಗತಿಕ ಪ್ರೇಕ್ಷಕರಿಗೂ ತಲುಪಲಿವೆ.
1000 ಕೋಟಿ ಕ್ಲಬ್ ಸೇರುವ ಮುನ್ನೋಟ
ಈಗಾಗಲೇ 850 ಕೋಟಿಗೂ ಹೆಚ್ಚು ಗಳಿಸಿರುವ ಚಿತ್ರ, ವಿದೇಶಿ ಭಾಷಾ ರಿಲೀಸ್ ಬಳಿಕ ₹1000 ಕೋಟಿ ಕ್ಲಬ್ ಸೇರುವ ಸಾಧ್ಯತೆಯಿದೆ. ಇದೇ ದಿನ ಅಕ್ಟೋಬರ್ 31ರಂದು ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋಯಲ್ಲಿ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಸ್ಟ್ರೀಮಿಂಗ್ ಆಗಲಿದೆ. ಹಿಂದಿ ಆವೃತ್ತಿಯ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸುವ ಸಾಧ್ಯತೆ ಇದೆ.
ಚಿತ್ರದಲ್ಲಿ ರಿಷಬ್ ಶೆಟ್ಟಿ ಅವರಿಗೆ ಜೋಡಿಯಾಗಿ ರುಕ್ಮಿಣಿ ವಸಂತ್, ಜೊತೆಗೆ ಜಯರಾಮ್, ಗುಲ್ಸನ್ ದೇವಯ್ಯ, ರಾಕೇಶ್ ಪೂಜಾರಿ, ಪ್ರಮೋದ್ ಶೆಟ್ಟಿ ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.











