ಬಾಕ್ಸ್ ಆಫೀಸ್‌ನಲ್ಲಿ ಮಂಕಾಗಿದ್ದ ಸ್ಯಾಂಡಲ್‌ವುಡ್ ಇದೀಗ ಮೈಕೊಡವಿ ನಿಂತಿದೆ. ಈ ವರ್ಷದ ದ್ವಿತೀಯಾರ್ಧ ಏನಿದ್ದರೂ ತನ್ನದೆ ಎನ್ನುವ ಸ್ಪಷ್ಟ ಸಂದೇಶ ರವಾನಿಸಿದೆ. ಹೊಸಬರ ‘ಸು ಫ್ರಮ್ ಸೋ’ ಚಿತ್ರ ಅಂತಹದ್ದೊಂದು ಮ್ಯಾಜಿಕ್ ಮಾಡುವಲ್ಲಿ ಸಫಲವಾಗಿದೆ. ಕಳೆದ ವಾರ ರಿಲೀಸ್ ಆದ ಈ ಸಿನಿಮಾ 8 ದಿನ ಕಳೆದ ಬಳಿಕವೂ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದ್ದು, ಪರಭಾಷೆಗಳ ಸ್ಟಾರ್ ಚಿತ್ರಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿದೆ. ಈ ಅಪ್ಪಟ ನೆಲದ ಕಥೆ ಜನರನ್ನು ಆಕರ್ಷಿಸುತ್ತಿದೆ. ಮೂಲಗಳ ಪ್ರಕಾರ ಈ ಸಿನಿಮಾ 8 ದಿನಗಳಲ್ಲಿ ಒಟ್ಟು 27 ಕೋಟಿ ರೂ. ಗಳಿಸಿದೆ.
ಯಾವುದೇ ಸ್ಟಾರ್‌ಗಳಿಲ್ಲದೆ, ಅಬ್ಬರದ ಪ್ರಚಾರವಿಲ್ಲದೆ ತೆರೆಗೆ ಬಂದ ಈ ಚಿತ್ರ ಕರಾವಳಿ ಕರ್ನಾಟಕದ ಕಥೆ ಹೇಳುತ್ತದೆ. ಅದಕ್ಕಿಂತ ಹೆಚ್ಚಾಗಿ ಅಲ್ಲಿನ ಜನ ಜೀವನವನ್ನೇ ಚಿತ್ರತಂಡ ತೆರೆಮೇಲೆ ತಂದಿದೆ. ಜತೆಗೆ ಕರಾವಳಿ ಭಾಷೆಯ ಸೊಗಡನ್ನು ಸರಿಯಾಗಿ ಬಳಸಿಕೊಂಡಿದೆ. ಕರಾವಳಿಯ ಮರ್ಲೂರು ಮತ್ತು ಸೋಮೇಶ್ವರ ಎನ್ನುವ ಹಳ್ಳಿಯಲ್ಲಿ ಜನ ಜೀವಿಸುವ ರೀತಿಗೆ ನಿರ್ದೇಶಕ ಜೆ.ಪಿ. ತುಮಿನಾಡ್ ಸಿನಿಮಾ ಸ್ಪರ್ಶ ನೀಡಿದ್ದಾರೆ.