ದಾವಣಗೆರೆ: ಶರಣೆಯರ ವಚನಗಳ ಅಧ್ಯಯನ ಮತ್ತು ಗಾಯನದ ಮಹತ್ವವನ್ನು ಪ್ರತಿಪಾದಿಸುವ ಉದ್ದೇಶದಿಂದ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆಯ ತಾಲ್ಲೂಕು ಹಾಗೂ ಜಿಲ್ಲಾ ಘಟಕಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಮಟ್ಟದ ವಚನೋತ್ಸವ ತರಬೇತಿ ಶಿಬಿರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನ್ಯಾಮತಿ ಗುರು ಶಿಷ್ಯರ ಸಂಗಮ ಟ್ರಸ್ಟಿನ ಉಪಾಧ್ಯಕ್ಷ ಬಿ. ಹೆಚ್. ಮಂಜಪ್ಪ ಅವರು,“12ನೇ ಶತಮಾನದ ಶರಣರ ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಮೊದಲ ಪ್ರಾತಿನಿಧ್ಯ ಸಿಕ್ಕಿತು. ಆ ವಚನಸಾಹಿತ್ಯವನ್ನು ಶತಮಾನಗಳ ಬಳಿಕ ಪುನರುಜ್ಜೀವನಗೊಳಿಸಿರುವುದು ಹೆಮ್ಮೆಯ ಸಂಗತಿ. ವಚನಗಳನ್ನು ಕೇವಲ ಓದುವುದಲ್ಲ, ಅನುಷ್ಠಾನಗೊಳಿಸುವ ಕಾರ್ಯ ನಮ್ಮಲ್ಲಿ ನಡೆಯಬೇಕು” ಎಂದು ಸಲಹೆ ನೀಡಿದರು.
ಕದಳಿ ಮಹಿಳಾ ವೇದಿಕೆಯ ಜಿಲ್ಲಾ ಘಟಕದ ಗೌರವ ಸಲಹೆಗಾರ ಯಶಾ ದಿನೇಶ್ ಮಾತನಾಡಿ,
“ದಾವಣಗೆರೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಶರಣೆಯರ ವಚನಗಳ ಗಾಯನ ತರಬೇತಿ ಶಿಬಿರಗಳನ್ನು ಆಯೋಜಿಸಿ, ಜಿಲ್ಲಾ ಕೇಂದ್ರದಲ್ಲಿ ಸಮಾರೋಪ ಕಾರ್ಯಕ್ರಮ ನಡೆಯಲಿದೆ” ಎಂದು ತಿಳಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷೆ ಮಮತಾ ನಾಗರಾಜ ರವರು ಮಾತನಾಡಿ, “ಬಸವಣ್ಣನವರನ್ನು ಕೇವಲ ಪೂಜಿಸುವುದಲ್ಲ, ಅವರ ವಚನಗಳನ್ನು ಕಲಿತು ಜೀವನದಲ್ಲಿ ಅನುಷ್ಠಾನಗೊಳಿಸುವುದು ಮುಖ್ಯ. ವಚನಗಳ ಅಭ್ಯಾಸ ಪ್ರತಿದಿನದ ನಿತ್ಯ ಕ್ರಮವಾಗಬೇಕು. ಮಕ್ಕಳಿಗೆ ವಚನಗಳ ಮಹತ್ವ ತಿಳಿಸುವ ಜವಾಬ್ದಾರಿ ಪೋಷಕರದಾಗಿದೆ,” ಎಂದು ಹೇಳಿದರು. ಅವರು ಇದೇ ವೇಳೆ ಕದಳಿ ವೇದಿಕೆಯ ಚಟುವಟಿಕೆಗಳಿಗೆ ₹5000 ನೆರವು ನೀಡಿದರು.
ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಬಿ. ಶಿವಯೋಗಿ, ಕದಳಿ ಮಹಿಳಾ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷೆ ಅಂಬಿಕಾ ಬಿದರಕಟ್ಟೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.











