ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಸಂಪತ್ತು ಮತ್ತು ಸಮೃದ್ಧಿಯ ಸಂಕೇತ… ದೀಪಾವಳಿ

On: October 20, 2025 2:45 PM
Follow Us:

ದೀಪಾವಳಿ ಬೆಳಕಿನ ಹಬ್ಬ. ಈ ಹಬ್ಬದ ನಂಟು ರಾಮಾಯಣ ಹಾಗೂ ಮಹಾಭಾರತದ ಕಥೆಗಳ ಹಿನ್ನೆಲೆಯೊಂದಿಗೆ ಬೆಸೆದುಕೊಂಡಿದೆ. ಕತ್ತಲೆಯಿಂದ ಬೆಳಕಿನ ಕಡೆಗೆ, ಅಜ್ಞಾನದಿಂದ ಜ್ಞಾನದ ಕಡೆಗೆ ಎಂಬ ಸಂದೇಶವನ್ನು ಸಾರುವ ಹಬ್ಬವೇ ದೀಪಾವಳಿ. ನಮ್ಮ ಮಲೆನಾಡು ಪ್ರದೇಶದಲ್ಲಿ ಈ ಹಬ್ಬವು ವಿಶೇಷವಾಗಿ ಸಡಗರದಿಂದ ಆಚರಿಸಲ್ಪಡುತ್ತದೆ. ಹಳ್ಳಿಗಳಲ್ಲಿ ಸಂಪತ್ತು ಮತ್ತು ಸಮೃದ್ಧಿಯ ಸಂಕೇತವಾಗಿ ಭಕ್ತಿ ಮತ್ತು ಪೂಜ್ಯಭಾವದಿಂದ ಈ ಹಬ್ಬವನ್ನು ಆಚರಿಸುವುದು ವಾಡಿಕೆಯಾಗಿದೆ.

ಹಬ್ಬ ಮೆಟ್ಟುವ ಮುನ್ನ, ಅಂದ್ರೆ ಅಮಾವಾಸ್ಯೆ ಮುಂಚೆ, ಸುಮಾರು ಇಪ್ಪತ್ತು ದಿನಗಳ ಹಿಂದೆ ಮನೆಯನ್ನು ಸ್ವಚ್ಛಗೊಳಿಸುವುದು, ಮನೆಗೆ ಬಣ್ಣಸುಣ್ಣ ಹಾಕುವುದು ಪ್ರಾರಂಭವಾಗುತ್ತದೆ. ಕೊಟ್ಟಿಗೆಗಳು ಇದ್ದರೆ ಹೊಸ ಮಣ್ಣನ್ನು ಹಾಕಿ ಶುದ್ಧಗೊಳಿಸದೆ ದೀಪಾವಳಿ ಆರಂಭವಾಗದು. ಹಿಂದಿನ ಕಾಲದಲ್ಲಿ ಮಣ್ಣುಮನೆಗಳು ಮತ್ತು ಒಲೆಗಳು ಸಾಮಾನ್ಯವಾಗಿದ್ದವು. ಅವುಗಳಿಗೆ ಹೊಸ ಮಣ್ಣನ್ನು ಬಳಸಿ ಒಲೆ ಮಾಡುವುದು, ದೀಪಾವಳಿಗೆ ಹೊಸ ಒಲೆಯಲ್ಲಿ ಅಡುಗೆ ಮಾಡುವುದು ವಾಡಿಕೆ ಆಗಿತ್ತು.

ಆಗಿನ ಹಬ್ಬ ಅಂದ್ರೆ ಎಲ್ಲಾ ಹೊಸದಾಗಿ ಆಗಿರಬೇಕು. ದೀಪಾವಳಿ ವಿಶೇಷ ಮತ್ತು ವಿಜೃಂಭಣೆಯ ಹಬ್ಬವಾಗಿದೆ. ಸಾಮಾನ್ಯವಾಗಿ ಐದು ದಿನ ನಾವು ದೀಪಾವಳಿ ಆಚರಿಸುತ್ತೇವೆ. ನರಕ ಚತುರ್ದಶಿ ದಿನ ಹೊಸ ನೀರನ್ನು ತುಂಬುವುದು. ಅದನ್ನು ಹಬ್ಬಕ್ಕೆ ಬಳಸಲು ಎಲ್ಲಾ ಅಣಿ ಮಾಡಲಾಗುತ್ತದೆ. ಮಾರ್ನೆ ದಿನ ಲಕ್ಷ್ಮಿ ಪೂಜೆ. ಸಂಜೆಯಾದರೆ ಎಲ್ಲರೂ ಲಕ್ಷ್ಮಿಗೆ ಅಲಂಕಾರ ಮಾಡಿ, ವಿವಿಧ ಅಡುಗೆ ಮಾಡುವ ಮೂಲಕ ಪೂಜೆ ನೆರವೇರಿಸುತ್ತಾರೆ.

ಈ ದಿನ ‘ಹೊಸತು’ ತರುವ ಸಂಪ್ರದಾಯವಿದೆ. ರೈತರು ತಮ್ಮ ಬೆಳೆದ ಬೆಳೆಯಲ್ಲಿ ಹೊಸದಾಗಿ ಬಂದ ಭತ್ತದ ತೆನೆಗೆ ಬೆಳಗಿನ ಜಾವ, ಗೋಧೂಳಿ ಸಮಯದಲ್ಲಿ ಪೂಜೆ ಮಾಡಿ, ಅದನ್ನು ಮನೆಗೆ ತರುತ್ತಾರೆ. ಹಿಂದೆ ಜನರು ಬೆಳಗ್ಗೆ ಎದ್ದು ಮುಂಚೆ ಹುಲ್ಲು ಕಿತ್ತು, ತಂಪು ಚಳಿ ಸಹಿಸಿ ಹೊಸದು ತಂದವರಂತೆ. ಮೈಮೇಲೆ ಟವಲ್, ಬಿಳಿ ಪಂಚೆ ಧರಿಸಿ, ನಡುಗುವ ಚಳಿಯಲ್ಲಿ ಗದ್ದೆಯ ಚಿಕ್ಕ ಬದುಗಳ ಮೇಲೆ ನಡೆದು ತರಬೇಕು. ಈ ‘ಹೊಸತು’ ಕುರಿತ ಪೂಜ್ಯತೆ ಮತ್ತು ಧನ್ಯತೆಯ ಭಾವ ಈಗಲೂ ಮುಂದುವರಿಯುತ್ತಿದ್ದು, ನಮ್ಮ ಸುಸಂಸ್ಕೃತಿಯ ಸಂಕೇತವಾಗಿದೆ.

ಈ ಸಂದರ್ಭದಲ್ಲಿ ಗೃಹಿಣಿಯರು ತಲೆ ತುಂಬಾ ಸೆರಗು ಹೊತ್ತುಕೊಂಡು ಮಾತನಾಡದೆ ಅಕ್ಕಿ, ಕಾಳನ್ನು ಸೇರಿಸಿ ಪಾಯಸವನ್ನು ತಯಾರಿಸುತ್ತಾರೆ. ಈ ಹೊಸದು ಅನ್ನೋದು ಆ ಮನೆಯ ಸಂಬಂಧಿಸಿದ ಜನರೇ ತಿನ್ನುವಂತೆ ಇರುತ್ತದೆ. ಇದು ಮನೆಯ ಸಂಪತ್ತು, ಸಮೃದ್ಧಿ, ಲಕ್ಷ್ಮಿಯ ಸಂಕೇತವಾಗಿದೆ. ನಂತರ ಗೋ ಪೂಜೆ ನಡೆಯುತ್ತದೆ. ಹಿಂದಿನ ಕಾಲದಲ್ಲಿ ರೈತರ ಮನೆಯಲ್ಲಿ ಹಸುಗಳು ತುಂಬಾ ಇದ್ದವು. ಹಸುಗಳಿಗೆ ಒಂಟರ, ಕೋಡು, ಕುಂಚ ಹೀಗೆ ಅಲಂಕಾರ ಮಾಡಲಾಗುತ್ತದೆ. ಹಸುಗಳ ಮೈಮೇಲೆ ಗೆಜ್ಜೆ, ಜೇಡ, ಕೆಂಪು ಮಣ್ಣಿನಿಂದ ಗುನ್ನ ಹಾಕಿ, ಕೊರಳಿಗೆ ಗೆಜ್ಜೆ, ಗಂಟೆ, ಹಾರ ಇಟ್ಟು ಅಲಂಕಾರ ಮಾಡಲಾಗುತ್ತದೆ. ಅವರ ನೈವೇದ್ಯಕ್ಕೆ ಹಾಲು, ಸಕ್ಕರೆ, ತುಪ್ಪ, ಬಾಳೆಹಣ್ಣು ಸೇರಿಸಿ ಸಿಹಿ ಅಡುಗೆ ನೀಡಲಾಗುತ್ತಿತ್ತು. ವರ್ಷಪೂರ್ತಿ ರೈತರಿಗೆ ಸಹಕರಿಸಿದ ಜಾನುವಾರುಗಳಿಗೆ ಧನ್ಯವಾದ ಸಲ್ಲಿಸುವ ವಿಧಿಯೇ ಇದು.

ಇದಾದ ನಂತರ ನಮ್ಮೂರಿನಲ್ಲಿ ‘ಕೆರ್ಕುಲು’ ಪದ್ಧತಿ ನಡೆಯುತ್ತದೆ. ಹಳೆಲೆಟೆಕಾಯಿ, ಸೌತೆಕಾಯಿ ಜಾತಿಯ ಕಹಿಯಾದ ಐದು ಪುಟ್ಟದಾದ ಕಾಯಿ ಮನೆ ಮುಂದೆ ಅಂಗಳದಲ್ಲಿ ಕೆಮ್ಮಣ್ಣು ಮತ್ತು ಜೇಡಿಯಿಂದ ಗೋಲಾಕಾರವಾಗಿ ಚಿತ್ರಿಸಿ, ಮಧ್ಯದಲ್ಲಿ ಸಗಣಿ ಉಂಡೆ ಇಟ್ಟು, ಕಳಶ ಪೂಜೆ ನಡೆಸಲಾಗುತ್ತದೆ. ಈ ಪದ್ಧತಿಯನ್ನು ಗಣೇಶನ ಸ್ಮರಣೆಯಂತೆ ನಡೆಸುತ್ತಾರೆ. ರಾತ್ರಿ ಅಡುಗೆ ಎಲ್ಲಾ ಪೂರ್ಣವಾದ ಮೇಲೆ ನೈವೇದ್ಯವಾಗುತ್ತದೆ. ತರತರ ಸಿಹಿ ತಿಂಡಿಗಳು, ಹಬ್ಬದ ಅಡುಗೆ, ಮನೆ ಮಂದಿಗೆ ಹೊಸ ಬಟ್ಟೆ, ಪಟಾಕಿ—ಇವು ದೀಪಾವಳಿಯ ವಿಶೇಷ ಅಂಶಗಳು.

ಸಂಜೆಯಾಗುತ್ತಲೇ ಅಲಂಕಾರ ಮಾಡಿದ ಜೋಡಿ ಎತ್ತುಗಳನ್ನು (ಹಿಂದೆ ಅಲಂಕಾರ ಮಾಡಿದ ಎತ್ತಿನ ಗಾಡಿಗಳಂತೆ) ದೇವಸ್ಥಾನಕ್ಕೆ ಕರ್ಕೊಂಡು ಹೋಗುತ್ತಾರೆ. ಚೆನ್ನಾಗಿ ಅಲಂಕಾರ ಮಾಡಿದ ಜೋಡಿಗೆ ಬಹುಮಾನ ನೀಡಲಾಗುತ್ತದೆ. ಬೆಳಿಗ್ಗೆಯಿಂದ ಹೆಣ್ಣುಮಕ್ಕಳು ಹಬ್ಬದ ಅಡುಗೆ ತಯಾರಿಯಲ್ಲಿ ತೊಡಗಿದರೆ, ಗಂಡಸರು ಅಂಗಳದಲ್ಲಿರುವ ತುಳಸಿಗೆ ಚಪ್ರ ಹಾಕಿ ತೋರಣ ಹಾಕಿ ಹೂವಿನಿಂದ ಅಲಂಕಾರ ಮಾಡುತ್ತಾರೆ. ತಮ್ಮ ಬೆಳೆದ ತರಕಾರಿ ಮತ್ತು ಹಣ್ಣುಗಳನ್ನು ದಾರಿಯಲ್ಲಿ ನೇತಬಿಟ್ಟು ಅಲಂಕಾರ ಮಾಡುತ್ತಾರೆ. ತುಳಸಿಯ ಸುತ್ತಲೂ, ಮನೆ ಮುಂದೆ ದೀಪದ ಅಲಂಕಾರ ಮಾಡಿ ಪೂಜೆ ವಿಜೃಂಭಣೆಯಿಂದ ನೆರವೇರಿಸುತ್ತದೆ. ಘಂಟೆ, ಜಾಕಟೆ, ಶಂಕು ಇತ್ಯಾದಿ ಅನಿವಾರ್ಯ. ಒಕ್ಕಲಿಗ ರೈತರು ಇದನ್ನು ಲಕ್ಷ್ಮಿ ಪೂಜೆ ಎಂದೇ ಪರಿಗಣಿಸುತ್ತಾರೆ.

ಮನೆಯಲ್ಲಿರುವ ಕೊಟ್ಟಿಗೆ, ಆಯುಧಗಳು, ಬತ್ತದ ಕಣಜಕ್ಕೆ ಹೀಗೆ ನೈವೇದ್ಯ ಸಲ್ಲಿಸುವ ಪದ್ಧತಿ ಇದೆ. ಎಲ್ಲ ಕಾರ್ಯ ಪೂರ್ಣಗೊಂಡ ಬಳಿಕ ರಾತ್ರಿ ಹತ್ತು ಗಂಟೆಗೆ ಹಬ್ಬದ ಊಟ ಮಾಡಲಾಗುತ್ತದೆ. ದೀಪಾವಳಿ ದಿನ ದೀಪಗಳು, ಆಕಾಶ ಬುಟ್ಟಿಗಳು ಜಗಮಗಿಸುತ್ತವೆ; ಪಟಾಕಿ ಸದ್ದು ಹಬ್ಬದ ಉಲ್ಲಾಸವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಮುಂದಿನ ದಿನ ‘ಕರಿ’, ಅದರ ನಂತರ ‘ವಸ್ತ್ರಡುಕು’ ಹಬ್ಬ ಆಚರಿಸಲಾಗುತ್ತದೆ.

ಹಬ್ಬದ ಸಮಯದಲ್ಲಿ ಆಂಟಿಗಳು ಮನೆಮನೆಗೆ ದೀಪ ಹತ್ತಿಸಿ ಪೂಜೆ ಮಾಡಿ, ಎಲ್ಲರ ಮನಸ್ಸು ಮತ್ತು ಮನೆಯನ್ನು ಬೆಳಕಿನೊಂದಿಗೆ ಆಭಿಷೇಕಿಸುತ್ತಿದ್ದರು. ಈ ಪದ್ಧತಿ ಈಗ ಮಾಯವಾಗಿದೆ. ನನ್ನ ಅಮ್ಮ ದೀಪಾವಳಿ ಹಬ್ಬದ ಸಂಪ್ರದಾಯವನ್ನು ಚೆನ್ನಾಗಿ ವರ್ಣಿಸುತ್ತಾರೆ. ದೀಪಾವಳಿ ಹಬ್ಬ ಎಲ್ಲರ ಮನಸ್ಸಿನ ಕತ್ತಲೆಯನ್ನು ಓಡಿಸಿ, ಬೆಳಕಿನ ಶುಭ-ಸಂತೋಷವನ್ನು ನೀಡುವ ಹಬ್ಬವಾಗಿದೆ. ರೈತರ ಪರಿಶ್ರಮದ ಸಂಕೇತವಾಗಿ ಸಂಪತ್ತು ಮತ್ತು ಸಮೃದ್ಧಿಯು, ಮನೆಮಂದಿಗೆ ಸಂತೋಷವನ್ನು ನೀಡುವ ಹಬ್ಬ—ಅದು ದೀಪಾವಳಿ ಹಬ್ಬವೇ.

K.M.Sathish Gowda

Join WhatsApp

Join Now

Facebook

Join Now

Leave a Comment