ಬೆಂಗಳೂರು: ವೀರಶೈವ ಧರ್ಮದ ಪಂಚಪೀಠಗಳಲ್ಲಿ ಪ್ರಮುಖವಾದ ಕಾಶಿ ಜ್ಞಾನ ಪೀಠದ 86ನೇ ಪೀಠಾಧಿಪತಿಯಾದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ 36ನೇ ಪೀಠಾರೋಹಣ ವರ್ಧಂತಿ ಮಹೋತ್ಸವ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಸೇಳಗಿ ಗ್ರಾಮದ ಡಾ. ಶೈಲೇಶ್ ಜಗದೀಶ ಪಾಟೀಲ ಗಾರ್ಡನ್‌ನಲ್ಲಿ ನವೆಂಬರ್ 10 ರಂದು ವಿಜೃಂಭಣೆಯಿಂದ ಜರುಗಲಿದೆ.
ಬಾಗಲಕೋಟ ಜಿಲ್ಲೆಯ ಶೇಗುಣಸಿ ಗ್ರಾಮದ ಮೂಲದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಕಳೆದ 35 ವರ್ಷಗಳಿಂದ ಕಾಶಿ ಜ್ಞಾನ ಪೀಠವನ್ನು ಶ್ರದ್ಧಾ-ಭಕ್ತಿಯಿಂದ ಮುನ್ನಡೆಸುತ್ತಿದ್ದಾರೆ. ಶಕ್ತಿವಿಶಿಷ್ಟಾದ್ವೈತ ಸಿದ್ಧಾಂತದ ಆಳವಾದ ಅಧ್ಯಯನದ ಮೂಲಕ ಡಾಕ್ಟರೇಟ್ ಹಾಗೂ ಡಿ.ಲಿಟ್ ಪದವಿಗಳನ್ನು ಪಡೆದ ಇವರು, ತಮ್ಮ ಮಹಾಪ್ರಬಂಧಗಳ ಮೂಲಕ ಕಾಶಿ ಹಿಂದೂ ವಿಶ್ವವಿದ್ಯಾಲಯ ಹಾಗೂ ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯಗಳಲ್ಲಿ ಪಠ್ಯಗ್ರಂಥಗಳಾಗಿ ಸ್ಥಾನ ಪಡೆದಿದ್ದಾರೆ.
ವೀರಶೈವ ತತ್ವಶಾಸ್ತ್ರದ ಮೇರು ಕೃತಿ ‘ಶ್ರೀಸಿದ್ಧಾಂತ ಶಿಖಾಮಣಿ’ಯನ್ನು ಇವರು 20ಕ್ಕೂ ಹೆಚ್ಚು ಭಾಷೆಗಳಿಗೆ ಭಾಷಾಂತರಿಸಿ ಪ್ರಕಟಿಸಿದ್ದಾರೆ. ‘ವೀರಶೈವ ಪಂಚಸೂತ್ರಾಣಿ’ ಸೇರಿದಂತೆ ಅನೇಕ ಕೃತಿಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಲೋಕಾರ್ಪಣೆ ಮಾಡಿಸಲ್ಪಟ್ಟಿವೆ. ಅನುಭವಮಂತ ಧಾರ್ಮಿಕ ಕೃತಿಗಳ ಮೂಲಕ ವೀರಶೈವ ಧರ್ಮದ ಸಾರವನ್ನು ಜನಮಾನಸದಲ್ಲಿ ಹರಡುವ ಕೆಲಸವನ್ನು ಜಗದ್ಗುರುಗಳು ನಿರಂತರವಾಗಿ ಮಾಡುತ್ತಿದ್ದಾರೆ.
ಕಾಲಕ್ರಮದಲ್ಲಿ ದೇಶದ ಅನೇಕ ಭಾಗಗಳಲ್ಲಿ ಧರ್ಮಜಾಗೃತಿ ಯಾತ್ರೆಗಳನ್ನು ಕೈಗೊಂಡು ವೀರಶೈವ ಧರ್ಮದ ಜನಕಲ್ಯಾಣ ಆಶಯಗಳನ್ನು ಪ್ರಸಾರ ಮಾಡಿದ್ದಾರೆ. ಕಾಶಿ ಪೀಠದಿಂದ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಯೋಜನೆ ಪ್ರಾರಂಭಿಸಿ ಸುಮಾರು 500 ವಿದ್ಯಾರ್ಥಿಗಳಿಗೆ ಸಹಾಯ ನೀಡಿದ್ದಾರೆ. ಗದಗ ಹಾಗೂ ಹಾವೇರಿ ಜಿಲ್ಲೆಯ ಬಿಸನಳ್ಳಿಯಲ್ಲಿ ಗುರುಕುಲಗಳನ್ನು ಸ್ಥಾಪಿಸಿ, ವೇದ, ಸಂಸ್ಕೃತ ಹಾಗೂ ಯೋಗ ಶಿಕ್ಷಣದ ಪ್ರಚಾರ ಮಾಡಿದ್ದಾರೆ.
ಜಗದ್ಗುರುಗಳು ಮಾಸ್ಕೋ ಸೇರಿದಂತೆ ವಿದೇಶಿ ಭಕ್ತರಿಗೂ ಇಷ್ಟಲಿಂಗ ದೀಕ್ಷೆ ನೀಡಿ ಅನುಗ್ರಹಿಸಿದ್ದಾರೆ. ಕಾಶಿ ಪೀಠದಲ್ಲಿ 5 ಸಾವಿರ ಭಕ್ತರಿಗೆ ವಸತಿ ಮತ್ತು ದಾಸೋಹ ವ್ಯವಸ್ಥೆ ಕಲ್ಪಿಸಲಾಗಿದ್ದು, ಪ್ರಯಾಗರಾಜ ಶಾಖಾಮಠ ಹಾಗೂ ರಾಮೇಶ್ವರದಲ್ಲಿ ಭಕ್ತರ ವಾಸ್ತವ್ಯಕ್ಕೆ ಬೃಹತ್ ಕಟ್ಟಡ ನಿರ್ಮಾಣವಾಗುತ್ತಿದೆ.
ಪ್ರತಿ ವರ್ಷ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದ ಗಣ್ಯರನ್ನು ಪುರಸ್ಕರಿಸುವ ಪರಂಪರೆಯನ್ನು ಅವರು ಆರಂಭಿಸಿದ್ದಾರೆ.
ಬರುವ ಸೋಮವಾರದ ಮಹೋತ್ಸವದಲ್ಲಿ ಉಜ್ಜಯಿನಿಯ ಸದ್ಧರ್ಮ ಪೀಠದ ಶ್ರೀ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾದರು, ಶ್ರೀಶೈಲ ಪೀಠದ ಡಾ. ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಸೇರಿದಂತೆ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ಅನೇಕ ಶಿವಾಚಾರ್ಯ ಸ್ವಾಮೀಜಿಗಳು, ಜನಪ್ರತಿನಿಧಿಗಳು ಹಾಗೂ ಧರ್ಮಭಕ್ತರು ಭಾಗವಹಿಸಲಿದ್ದಾರೆ.











