ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಜನವರಿ 6ಕ್ಕೆ ಡಿಕೆ ಶಿವಕುಮಾರ್ ಸಿಎಂ? – ಇಕ್ಬಾಲ್ ಹುಸೇನ್ ಸ್ಫೋಟಕ ಹೇಳಿಕೆ, ದೆಹಲಿಯಲ್ಲಿ ಮತಗಳ್ಳತನ ವಿರೋಧಿ ಹೋರಾಟದ ಮಧ್ಯೆ ರಾಜಕೀಯ ತಾಪಮಾನ ಏರಿಕೆ

On: December 13, 2025 10:13 PM
Follow Us:

ರಾಮನಗರ / ನವ ದೆಹಲಿ: ರಾಜ್ಯ ರಾಜಕಾರಣದಲ್ಲಿ ಮತ್ತೆ ‘ಕುರ್ಚಿ ಕದನ’ದ ಚರ್ಚೆಗೆ ಬಿರುಸುಗಾಳಿ ಬೀಸಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಜನವರಿ 6ರಂದು ಮುಖ್ಯಮಂತ್ರಿ ಆಗುವ ಶೇಕಡಾ 99ರಷ್ಟು ವಿಶ್ವಾಸ ಇದೆ ಎಂದು ಶಾಸಕ ಇಕ್ಬಾಲ್ ಹುಸೇನ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನವರಿ 6 ಮತ್ತು ಜನವರಿ 9 ಡಿಕೆಶಿಗೆ ಅದೃಷ್ಟದ ದಿನಗಳು. ಲಕ್ಕಿ ನಂಬರ್ ಎಂದೇ ಹೇಳಬಹುದು ಎಂದು ಸ್ಪಷ್ಟವಾಗಿ ಹೇಳಿದರು.

ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬುದು ನಮ್ಮ ಸ್ಪಷ್ಟ ಬೇಡಿಕೆ. ಪಕ್ಷಕ್ಕಾಗಿ ಅವರು ನಡೆಸಿದ ಹೋರಾಟ, ಶ್ರಮ ಮತ್ತು ತ್ಯಾಗಕ್ಕೆ ಪ್ರತಿಫಲ ಸಿಗಬೇಕು. ಈ ಬಗ್ಗೆ ಹೈಕಮಾಂಡ್ ಸ್ಪಂದಿಸುತ್ತಿದೆ ಎಂಬ ವಿಶ್ವಾಸ ನಮಗಿದೆ ಎಂದು ಇಕ್ಬಾಲ್ ಹುಸೇನ್ ತಿಳಿಸಿದರು.
“ನಮ್ಮಲ್ಲಿ ಯಾವುದೇ ಬಣ ರಾಜಕೀಯ ಇಲ್ಲ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರೂ ರಾಜ್ಯದ ಆಸ್ತಿ. ಆದರೆ ಈಗ ಡಿಕೆಶಿಗೆ ಅವಕಾಶ ಕೊಡಬೇಕು ಎಂಬುದು ರಾಜ್ಯದ ಜನರು ಹಾಗೂ ಶಾಸಕರ ಮನವಿ” ಎಂದರು.

ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ನಾಯಕತ್ವ ಬದಲಾವಣೆ ಇಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಇಕ್ಬಾಲ್ ಹುಸೇನ್, ಯಾರು ಏನೇ ಹೇಳಿಕೊಂಡರೂ ಡಿಕೆಶಿ ಸಿಎಂ ಆಗೋದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. “ನಮ್ಮ ಬಳಿ 140ಕ್ಕೂ ಹೆಚ್ಚು ಶಾಸಕರಿದ್ದಾರೆ. ಸಂಖ್ಯಾಬಲದ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ಶಿಸ್ತಿನ ಪಕ್ಷ. ಅಂತಿಮ ತೀರ್ಮಾನಕ್ಕೆ ವರಿಷ್ಠರ ಮಾತಿಗೆ ನಾವು ಬದ್ಧ” ಎಂದು ಹೇಳಿದರು.

ಇದೇ ವೇಳೆ, ಮತಗಳ್ಳತನ ವಿರುದ್ಧ ಕಾಂಗ್ರೆಸ್ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಲು ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಾನೂ ದೆಹಲಿಗೆ ತೆರಳುತ್ತಿದ್ದೇನೆ ಎಂದು ಇಕ್ಬಾಲ್ ಹುಸೇನ್ ಹೇಳಿದರು. ಪ್ರತಿ ಕ್ಷೇತ್ರದಿಂದ ಕಾರ್ಯಕರ್ತರು ಮತ್ತು ಮುಖಂಡರು ತೆರಳಿ ಹೋರಾಟಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ. ನಾವು ವರಿಷ್ಠರನ್ನು ಪ್ರತ್ಯೇಕವಾಗಿ ಭೇಟಿ ಮಾಡುವುದಿಲ್ಲ. ನಮ್ಮ ಮನವಿಯನ್ನು ಈಗಾಗಲೇ ಅವರಿಗೆ ತಲುಪಿಸಿದ್ದೇವೆ. ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಇನ್ನೊಂದೆಡೆ, ಮತಗಳ್ಳತನ ವಿರೋಧಿ ಹೋರಾಟದಲ್ಲಿ ಭಾಗವಹಿಸಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶನಿವಾರ ರಾತ್ರಿ ನವದೆಹಲಿಗೆ ಆಗಮಿಸಿದರು. ಕರ್ನಾಟಕ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕ ಸೇರಿ ದೇಶದ ಹಲವು ರಾಜ್ಯಗಳಲ್ಲಿ ಮತಗಳ್ಳತನ ನಡೆದಿದೆ ಎಂದು ಆರೋಪಿಸಿದರು. “ಒಂದೇ ಮನೆಯಲ್ಲಿ 80 ಮತದಾರರು ಇದ್ದ ಉದಾಹರಣೆಗಳಿವೆ. ಮೃತಪಟ್ಟವರ ಹೆಸರುಗಳು ಇನ್ನೂ ಮತಪಟ್ಟಿಯಲ್ಲಿ ಮುಂದುವರೆದಿವೆ. ಈ ಬಗ್ಗೆ ನಮ್ಮ ನಾಯಕ ರಾಹುಲ್ ಗಾಂಧಿ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಆದರೆ ಸಮರ್ಪಕ ಉತ್ತರ ಇನ್ನೂ ಸಿಕ್ಕಿಲ್ಲ” ಎಂದು ಡಿಕೆಶಿ ಹೇಳಿದರು.

ಪ್ರಜಾಪ್ರಭುತ್ವ ಉಳಿಸುವ ಉದ್ದೇಶದಿಂದ ಹಾಗೂ ಮತಗಳ್ಳತನದ ವಿರುದ್ಧ ಜಾಗೃತಿ ಮೂಡಿಸಲು ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಸೇರಿ ದೇಶದ ವಿವಿಧ ರಾಜ್ಯಗಳಿಂದ ಸಾವಿರಾರು ಕಾರ್ಯಕರ್ತರು ಮತ್ತು ನಾಯಕರು ಭಾಗವಹಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.

ಸೋನಿಯಾ ಗಾಂಧಿ ಭೇಟಿಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್, “ನಾಳೆ ಮಧ್ಯಾಹ್ನ ಇಂದಿರಾ ಭವನದಲ್ಲಿರುವ ಕಾಂಗ್ರೆಸ್ ಕಚೇರಿಗೆ ಹೋಗುತ್ತೇವೆ. ಅಲ್ಲಿ ಪಕ್ಷದ ನಾಯಕರೊಂದಿಗೆ ಚರ್ಚೆ ನಡೆಯಲಿದೆ. ಎಲ್ಲರೂ ಅಲ್ಲಿ ಸಿಗುತ್ತಾರೆ” ಎಂದರು. ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದ ಸಮನ್ಸ್ ವಿಚಾರದಲ್ಲಿ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಬೇಕಿರುವುದರಿಂದ ಸಮಯದ ಕೊರತೆ ಇದೆ ಎಂದೂ ಹೇಳಿದರು.

ಒಟ್ಟಾರೆ, ಜನವರಿ 6ರ ದಿನಾಂಕವನ್ನು ಕೇಂದ್ರವಾಗಿಸಿಕೊಂಡು ರಾಜ್ಯ ರಾಜಕಾರಣದಲ್ಲಿ ಕುತೂಹಲ, ನಿರೀಕ್ಷೆ ಮತ್ತು ಊಹಾಪೋಹಗಳು ಗರಿಷ್ಠ ಮಟ್ಟ ತಲುಪಿವೆ. ಡಿಕೆ ಶಿವಕುಮಾರ್ ಸಿಎಂ ಆಗುವ ಬಗ್ಗೆ ಶಾಸಕರ ಬಹಿರಂಗ ಹೇಳಿಕೆಗಳು ಹಾಗೂ ದೆಹಲಿಯಲ್ಲಿ ನಡೆಯುತ್ತಿರುವ ರಾಜಕೀಯ ಚಟುವಟಿಕೆಗಳು, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಒಳಗಿನ ತೀರ್ಮಾನ ರಾಜ್ಯ ರಾಜಕೀಯದ ದಿಕ್ಕನ್ನೇ ಬದಲಾಯಿಸಬಹುದೇ ಎಂಬ ಪ್ರಶ್ನೆಯನ್ನು ಎತ್ತಿವೆ.

K.M.Sathish Gowda

Join WhatsApp

Join Now

Facebook

Join Now

Leave a Comment