ಶಿವಮೊಗ್ಗ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ), ಮಹಾನಗರ ಪಾಲಿಕೆ ಘಟಕ ಹಾಗೂ ಜಿಲ್ಲಾ ಮಾಧ್ಯಮ ಘಟಕ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿರುವ ವಚನ ಗಾಯನ ಸ್ಪರ್ಧೆಗೆ ಇಂದು ಸಂಸದರಾದ ಶ್ರೀ ಬಿ.ವೈ. ರಾಘವೇಂದ್ರ ಅವರು ಅಧಿಕೃತವಾಗಿ ಚಾಲನೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶರಣರ ವಚನಗಳು ಕೇವಲ ಸಾಹಿತ್ಯವಷ್ಟೇ ಅಲ್ಲ, ಸಮಾಜಕ್ಕೆ ದಾರಿದೀಪವಾಗಿರುವ ಜೀವನ ಮೌಲ್ಯಗಳ ಸಂಕೇತಗಳಾಗಿವೆ. ಇಂತಹ ವಚನ ಸಾಹಿತ್ಯವನ್ನು ಉಳಿಸಿ, ಬೆಳೆಸಿ ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು. ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಈ ರೀತಿಯ ಕಾರ್ಯಕ್ರಮಗಳು ಸಂಸ್ಕೃತಿಯ ನಿರಂತರತೆಯನ್ನು ಕಾಪಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ ಎಂದರು.

ಶರಣರ ವಚನ ಸಾಹಿತ್ಯವನ್ನು ಜನಮಾನಸಕ್ಕೆ ಇನ್ನಷ್ಟು ಸಮೀಪವಾಗಿಸುವುದು, ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಹಾಗೂ ಧಾರ್ಮಿಕ–ಸಾಂಸ್ಕೃತಿಕ ಮೌಲ್ಯಗಳನ್ನು ಉಳಿಸಿ ಬೆಳೆಸುವ ಸದುದ್ದೇಶದಿಂದಲೇ ಈ ವಚನ ಗಾಯನ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಿವಮೊಗ್ಗ ಮಹಾನಗರ ಪಾಲಿಕೆ ಘಟಕ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾದ ರಾಜಶೇಖರ್ ಹೆಚ್.ಕೆ. ತಿಳಿಸಿದರು.
ಸ್ಪರ್ಧೆಯಲ್ಲಿ ವಿವಿಧ ವಯೋಮಾನದ ಕಲಾವಿದರು ಉತ್ಸಾಹದಿಂದ ಭಾಗವಹಿಸಿದ್ದು, ಶರಣರ ವಚನಗಳನ್ನು ಗಾಯನದ ಮೂಲಕ ಪ್ರಸ್ತುತಪಡಿಸಿ ವಚನಾಸಕ್ತರ ಮೆಚ್ಚುಗೆಗೆ ಪಾತ್ರರಾದರು. ವಚನ ಗಾಯನದ ಮೂಲಕ ಬಸವತತ್ವ, ಸಮಾನತೆ, ಶ್ರಮ ಮತ್ತು ಮಾನವೀಯ ಮೌಲ್ಯಗಳನ್ನು ಸಮಾಜಕ್ಕೆ ತಲುಪಿಸುವ ಪ್ರಯತ್ನ ಶ್ಲಾಘನೀಯವಾಗಿದೆ ಎಂದು ಗಣ್ಯರು ಅಭಿಪ್ರಾಯಪಟ್ಟರು.
ಕಾರ್ಯಕ್ರಮವು ಭಕ್ತಿಭಾವ, ಸಂಸ್ಕೃತಿ ಮತ್ತು ಸಂಗೀತದ ಸುಂದರ ಸಂಗಮವಾಗಿ ಮೂಡಿ, ಶರಣರ ಸಂದೇಶವನ್ನು ಹೊಸ ಉತ್ಸಾಹದೊಂದಿಗೆ ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಯಿತು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯರಾದ ಶ್ರೀ ರುದ್ರೇಗೌಡ್ರು, ಮಹಾಸಭೆಯ ಮುಖಂಡರಾದ ಶ್ರೀ ಸಂತೋಷ್ ಬಳ್ಳೇಕೆರೆ, ಶ್ರೀ ರಾಜಶೇಖರ್ ಹೆಚ್.ಕೆ, ಶ್ರೀ ರುದ್ರಮುನಿ, ಶ್ರೀ ಯೋಗೇಶ್, ಸೋಮಶೇಖರ್, ಅರುಣ್, ಸತೀಶ್ ಮುಂಚೆಮನೆ, ಉಮೇಶ್ ಕತ್ತಿಗೆ ಸೇರಿದಂತೆ ಉಪಸ್ಥಿತರಿದ್ದರು.











