ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಆಧ್ಯಾತ್ಮ ಸಾಧನೆಗೂ ಭಗವಂತನ ಸ್ಮರಣೆಗೆ ಸಮಯವಿಲ್ಲದ ಬದುಕು: ಶ್ರೀ ರಂಭಾಪುರಿ ಜಗದ್ಗುರುಗಳ ಕಳವಳ

On: January 21, 2026 11:20 PM
Follow Us:

ಭಾಲ್ಕಿ : ಇಂದಿನ ಮಾನವನ ಬದುಕು ಭೌತಿಕ ಸಂಪತ್ತಿನ ಹಂಬಲದಲ್ಲಿ ತಲ್ಲೀನವಾಗಿದ್ದು, ಅಪಾರ ಸೌಕರ್ಯಗಳು ಇದ್ದರೂ ಮನಶಾಂತಿ ಮಾತ್ರ ದೂರವಾಗುತ್ತಿದೆ. ಹಣ ಸಂಪಾದನೆ, ಅದನ್ನು ಉಳಿಸಿಕೊಳ್ಳುವುದು, ವೈಭವದ ಜೀವನ ನಡೆಸುವುದು ಇವೆಲ್ಲಕ್ಕೂ ಸಮಯ ಮೀಸಲಿಟ್ಟಿರುವ ಮಾನವನು, ಆಧ್ಯಾತ್ಮ ಸಾಧನೆ ಹಾಗೂ ಭಗವಂತನ ಸ್ಮರಣೆಗೆ ಸಮಯವೇ ಇಲ್ಲದಂತಾಗಿದೆ ಎಂದು ಶ್ರೀ ರಂಭಾಪುರಿ ಪೀಠದ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯರು ಕಳವಳ ವ್ಯಕ್ತಪಡಿಸಿದರು.

ಅವರು ಬುಧವಾರ ತಾಲ್ಲೂಕಿನ ಮೇಹಕರ ಕಟ್ಟಿಮನಿ ಹಿರೇಮಠದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ತಮ್ಮ 35ನೇ ವರ್ಷದ ಪೀಠಾರೋಹಣ ವರ್ಧಂತಿ ಮಹೋತ್ಸವದ ಧರ್ಮಸಭೆಯಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಭೌತಿಕ ಜೀವನದಲ್ಲಿ ಸಮೃದ್ಧಿ ಮಾತ್ರ ಸಾಕಾಗುವುದಿಲ್ಲ. ಅಂತರ್ಮನದ ಶುದ್ಧತೆ, ಆತ್ಮಸಂತೃಪ್ತಿ ಮತ್ತು ಮೌಲ್ಯಾಧಾರಿತ ಬದುಕು ಅಗತ್ಯವಿದೆ. ಸತ್ಯ, ಸೌಂದರ್ಯ ಮತ್ತು ಸಂಸ್ಕೃತಿಯ ಅರಿವಿನಿಂದ ಮಾನವನ ಬದುಕು ಬೆಳಗಬೇಕು. ಸಕಲ ಜೀವಿಗಳ ಕಲ್ಯಾಣವನ್ನು ಬಯಸುವ ವೀರಶೈವ ಧರ್ಮವು ಯುಗಯುಗಾಂತರಗಳಿಂದ ಉದ್ಭವ, ಉತ್ಥಾನ, ಪುನರುತ್ಥಾನ ಹಾಗೂ ಜಾಗೃತಿ ಎಂಬ ನಾಲ್ಕು ಹಂತಗಳಲ್ಲಿ ನಿರಂತರವಾಗಿ ಸಮಾಜವನ್ನು ಮಾರ್ಗದರ್ಶನ ಮಾಡುತ್ತ ಬಂದಿದೆ ಎಂದು ಜಗದ್ಗುರುಗಳು ವಿವರಿಸಿದರು.

ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸುವ ಶಕ್ತಿ ಧರ್ಮಕ್ಕಷ್ಟೇ ಇರುವುದರಿಂದ, ಧರ್ಮ ಮತ್ತು ಸಂಸ್ಕೃತಿಯ ಸಂರಕ್ಷಣೆ ಅತೀ ಅವಶ್ಯಕವಾಗಿದೆ. ತಮ್ಮ ಪೀಠಾರೋಹಣದ 34 ವರ್ಷಗಳನ್ನು ಪೂರ್ಣಗೊಳಿಸಿ 35ನೇ ವರ್ಷದಲ್ಲಿ ಸೇವೆ ಮುಂದುವರಿಸುತ್ತಿರುವುದು ಪೂರ್ವಾಚಾರ್ಯರ ಕೃಪೆ ಮತ್ತು ಭಕ್ತರ ಆಶೀರ್ವಾದದ ಫಲವೆಂದು ಜಗದ್ಗುರುಗಳು ಕೃತಜ್ಞತೆ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಧರ್ಮ–ಸಂಸ್ಕೃತಿ ಹಾಗೂ ಪರಂಪರೆಯ ವಿಕಾಸಕ್ಕಾಗಿ ಇನ್ನಷ್ಟು ಶ್ರಮಿಸುವ ಸಂಕಲ್ಪವನ್ನೂ ವ್ಯಕ್ತಪಡಿಸಿದರು.

ಸಭೆಗೆ ಅಧ್ಯಕ್ಷತೆ ವಹಿಸಿದ್ದ ಮೇಹಕರ ಹಿರೇಮಠದ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, “ಬೆಂಕಿಯಲ್ಲಿ ಸುಡುತ್ತಿರುವ ಚಿನ್ನ ಇನ್ನಷ್ಟು ಹೊಳಪಾಗುವಂತೆ, ಸಜ್ಜನರ ಜೀವನವೂ ತಪಸ್ಸು ಮತ್ತು ತ್ಯಾಗದಿಂದ ಇನ್ನಷ್ಟು ಶ್ರೇಷ್ಠವಾಗುತ್ತದೆ. ಅರ್ಥವಿಲ್ಲದ ಬದುಕು, ಆಚರಣೆ ಇಲ್ಲದ ಜೀವನ ಹಾಗೂ ಹೃದಯಸಾಮರಸ್ಯವಿಲ್ಲದ ನಡವಳಿಕೆ ಮಾನವನಿಗೆ ಶೋಭಿಸುವುದಿಲ್ಲ” ಎಂದು ಹೇಳಿದರು.

ಶ್ರೀ ರಂಭಾಪುರಿ ಜಗದ್ಗುರುಗಳ ಪೀಠಾರೋಹಣದ 35ನೇ ವರ್ಷದ ವರ್ಧಂತಿ ಮಹೋತ್ಸವ ಮೇಹಕರ ಹಿರೇಮಠದಲ್ಲಿ ಅತ್ಯಂತ ಭಕ್ತಿಭಾವ ಮತ್ತು ವೈಭವದಿಂದ ನಡೆಯುತ್ತಿರುವುದು ಭಕ್ತರ ಪಾಲಿಗೆ ಅಪಾರ ಸೌಭಾಗ್ಯವಾಗಿದೆ. ಮುಂದಿನ ದಿನಗಳಲ್ಲಿ ಅವರ ಪೀಠಾರೋಹಣದ ಸುವರ್ಣ ಮಹೋತ್ಸವ ಹಾಗೂ ಜನ್ಮ ಶತಮಾನೋತ್ಸವಗಳನ್ನು ಆಚರಿಸುವ ಭಾಗ್ಯ ದೊರಕಲಿ ಎಂದು ಭಕ್ತರು ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಹಿರೇಮಠದ ಹಿರಿಯ ವಯೋವೃದ್ಧರಾದ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿಗಳು ಜ್ಯೋತಿ ಬೆಳಗಿಸಿ ಧರ್ಮಸಭೆಯನ್ನು ಉದ್ಘಾಟಿಸಿದರು. ಸಮಾರಂಭದಲ್ಲಿ ವಿವಿಧ ಮಠಾಧೀಶರು, ಶಿವಾಚಾರ್ಯರು ಹಾಗೂ ಗಣ್ಯರು ಭಾಗವಹಿಸಿ ಜಗದ್ಗುರುಗಳಿಗೆ ಗೌರವ ಸಲ್ಲಿಸಿದರು. 35 ದೀಪಗಳನ್ನು ಪ್ರಜ್ವಲಿಸುವ ಮೂಲಕ ಪೀಠಾರೋಹಣ ವರ್ಧಂತಿಯನ್ನು ಸ್ಮರಿಸಲಾಯಿತು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಜಗದ್ಗುರುಗಳು ಆಶೀರ್ವದಿಸಿದರು. ಭಕ್ತಿಗೀತೆ, ಸ್ವಾಗತ ಭಾಷಣ, ನಿರೂಪಣೆ ಹಾಗೂ ಮಹಾಪೂಜೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ನಂತರ ಗ್ರಾಮದಿಂದ ಹಿರೇಮಠದವರೆಗೆ ಜಗದ್ಗುರುಗಳ ಬೆಳ್ಳಿ ಅಡ್ಡಪಲ್ಲಕ್ಕಿ ಮೆರವಣಿಗೆ ಭಕ್ತಿಭಾವದಿಂದ ನಡೆಯಿತು. ಮಹಿಳೆಯರ ಆರತಿ, ಭಜನೆ, ಸಾಂಸ್ಕೃತಿಕ ತಂಡಗಳ ಭಾಗವಹಿಸುವಿಕೆ ಉತ್ಸವಕ್ಕೆ ವಿಶೇಷ ಮೆರುಗು ನೀಡಿತು.

K.M.Sathish Gowda

Join WhatsApp

Join Now

Facebook

Join Now

Read more

ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಆಯುರ್ವೇದ ಮಹತ್ವದ ಪಾತ್ರ ವಹಿಸುತ್ತದೆ: ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ

ಹುತಾತ್ಮ ಯೋಧರ ಪತ್ನಿಯ ತ್ಯಾಗವೇ ಶ್ರೇಷ್ಠತೆ: ತರಳಬಾಳು ಜಗದ್ಗುರುಗಳ ಹೃದಯಸ್ಪರ್ಶಿ ಸಂದೇಶ

ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ವೈಯಕ್ತಿಕ–ಕುಟುಂಬ ನಿಂದನೆಗೆ ತೆರೆ ಎಳೆಯಲು ರಾಜಕೀಯ ನಾಯಕರಿಗೆ ಜಗದ್ಗುರುಗಳ ಖಡಕ್ ಸೂಚನೆ,.!

ಬೆಳ್ಳಿ ಪಲ್ಲಕ್ಕಿಯಲ್ಲಿ ಜಗದ್ಗುರುಗಳ ದರ್ಶನ: ಭದ್ರಾವತಿಯಲ್ಲಿ ತರಳಬಾಳು ಹುಣ್ಣಿಮೆಯ ವೈಭವ, ಲಕ್ಷಾಂತರ ಭಕ್ತರ ಸಮಾಗಮ

ತರಳಬಾಳು ಹುಣ್ಣಿಮೆ ಮಹೋತ್ಸವ 2026: ‘ಮನೆಯೊಳಗೆ ಧರ್ಮ, ಹೊರಗೆ ಸಂವಿಧಾನ’ – ನ್ಯಾಯಮೂರ್ತಿ ಶ್ರೀಶಾನಂದ ಸಂದೇಶ

ತರಳಬಾಳು ಹುಣ್ಣಿಮೆ ಮಹೋತ್ಸವ 2026: ಸಮೂಹ ಮಾಧ್ಯಮ ಸಮಾಜದ ದಿಕ್ಕು ನಿರ್ಧರಿಸುವ ಶಕ್ತಿಯಾಗಿದೆ: ಸಿ.ಎಸ್. ಷಡಾಕ್ಷರಿ

Leave a Comment