ಭದ್ರಾವತಿ (ಶಿವಮೊಗ್ಗ): ಮಾನವೀಯತೆ, ಶಾಂತಿ ಹಾಗೂ ಸಾಮಾಜಿಕ ಸೌಹಾರ್ದತೆಯ ಸಂದೇಶ ಸಾರುವ ತರಳಬಾಳು ಹುಣ್ಣಿಮೆ ಮಹೋತ್ಸವವು ಭದ್ರಾವತಿಯಲ್ಲಿ ಭಕ್ತಿಭಾವ, ಸಾಂಸ್ಕೃತಿಕ ವೈಭವ ಮತ್ತು ಅಭಿವೃದ್ಧಿ ಭರವಸೆಗಳೊಂದಿಗೆ ಶನಿವಾರ ಭವ್ಯವಾಗಿ ಆರಂಭವಾಯಿತು. ಶತಮಾನಗಳ ಇತಿಹಾಸ ಹೊಂದಿರುವ ತರಳಬಾಳು ಪರಂಪರೆ ಸಮಾಜವನ್ನು ಸನ್ಮಾರ್ಗದತ್ತ ಕೊಂಡೊಯ್ಯುವ ದೀಪಸ್ತಂಭವಾಗಿದ್ದು, ಈ ಮಹೋತ್ಸವವು ಆ ಪರಂಪರೆಯ ಜೀವಂತ ಸಾಕ್ಷಿಯಾಗಿದೆ.

ವಿಐಎಸ್‌ಎಲ್ ಪುನಶ್ಚತನಕ್ಕೆ ₹5,000 ಕೋಟಿ ಭರವಸೆ
ಮಹೋತ್ಸವದ ವೇದಿಕೆಯಲ್ಲಿ ಮಾತನಾಡಿದ ಕೇಂದ್ರ ಉಕ್ಕು ಹಾಗೂ ಬೃಹತ್ ಕೈಗಾರಿಕೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ, ಭದ್ರಾವತಿಯ ವಿಶ್ವೇಶರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ (ವಿಐಎಸ್‌ಎಲ್) ಪುನಶ್ಚತನಕ್ಕೆ ಭಾರತೀಯ ಉಕ್ಕು ಪ್ರಾಧಿಕಾರ (ಎಸ್‌ಎಐಎಲ್) ₹5,000 ಕೋಟಿ ಅನುದಾನ ನೀಡಲು ನಿರ್ಧರಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರೂ ಈ ಯೋಜನೆಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಘೋಷಿಸಿದರು.

“ಎರಡೂವರೆ ತಿಂಗಳೊಳಗೆ ಕಾರ್ಖಾನೆಗೆ ದೊಡ್ಡಮಟ್ಟದ ಕಾಯಕಲ್ಪ ಆರಂಭವಾಗಲಿದೆ. ಇದರಲ್ಲಿ ಯಾವುದೇ ಸಂಶಯ ಬೇಡ,” ಎಂದು ಸ್ಪಷ್ಟ ಭರವಸೆ ನೀಡಿದ ಅವರು, ಹಣಕಾಸು ಸಚಿವರ ಸಹಿ ಮಾತ್ರ ಬಾಕಿ ಇದ್ದು, ಶೀಘ್ರದಲ್ಲೇ ಅಧಿಕೃತ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದರು. ಭದ್ರಾವತಿ ಸೇರಿದಂತೆ ರಾಜ್ಯದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಅಗತ್ಯ ಸಹಕಾರ ನೀಡಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ತರಳಬಾಳು ಜಗದ್ಗುರುಗಳ ಸಂದೇಶ
ತರಳಬಾಳು ಜಗದ್ಗುರು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, “ಸರ್ಕಾರದ ಗ್ಯಾರಂಟಿಗಳಿಗಿಂತ ಜನರಿಗೆ ದುಡಿಯುವ ಗ್ಯಾರಂಟಿ ಅತ್ಯಂತ ಮುಖ್ಯ. ಕೆಲಸದ ಅವಕಾಶಗಳು ಸಿಕ್ಕರೆ ಜನರಿಗೆ ಬೇರೆ ಯಾವುದೂ ಬೇಡ,” ಎಂದು ಅರ್ಥಪೂರ್ಣ ಸಂದೇಶ ನೀಡಿದರು.
1923ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಆರಂಭವಾದ ವಿಐಎಸ್‌ಎಲ್ ಕಾರ್ಖಾನೆ, ರಾಜಪ್ರಭುತ್ವದಲ್ಲಿ ಸ್ಥಾಪನೆಯಾಗಿ ಇಂದು ಪ್ರಜಾಪ್ರಭುತ್ವದಲ್ಲಿ ಹಾಳುಹಂಪೆಯಾಗಿರುವುದು ನೋವಿನ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದ ಶ್ರೀಗಳು, ಕಾರ್ಖಾನೆ ಆವರಣದ 100–150 ಎಕರೆ ಪ್ರದೇಶಕ್ಕೆ ಬೇಲಿ ಅಳವಡಿಸಿ ಮತ್ತೆ ಕಸದ ರಾಶಿಯಾಗದಂತೆ ಕ್ರಮ ಕೈಗೊಳ್ಳುವಂತೆ ಸಚಿವರಿಗೆ ಸೂಚಿಸಿದರು.

ಸಿರಿಗೆರೆ ಮಠದಿಂದ ₹5 ಕೋಟಿ ನೆರವು
ವಿಐಎಸ್‌ಎಲ್ ಪುನಶ್ಚತನಕ್ಕೆ ಸಿರಿಗೆರೆಯ ತರಳಬಾಳು ಮಠದಿಂದ ₹5 ಕೋಟಿ ನೀಡುವುದಾಗಿ ಶಿವಾಚಾರ್ಯ ಸ್ವಾಮೀಜಿ ಘೋಷಿಸಿದರು. ಮಹೋತ್ಸವದ ಕಾಣಿಕೆ ಸಂಗ್ರಹದಲ್ಲಿ ಉಳಿದ ಹಣಕ್ಕೆ ಮಠದಿಂದ ಇನ್ನಷ್ಟು ನೆರವು ಸೇರಿಸಿ ಕೊಡುವುದಾಗಿ ತಿಳಿಸಿದರು. ಮುಂಬರುವ ಕೇಂದ್ರ ಬಜೆಟ್‌ನಲ್ಲಿ ಕಾರ್ಖಾನೆ ಪುನಶ್ಚತನಕ್ಕೆ ಅಗತ್ಯ ಹಣಕಾಸು ವ್ಯವಸ್ಥೆ ಮಾಡುವಂತೆ ಸಚಿವ ಕುಮಾರಸ್ವಾಮಿಯವರಿಗೆ ಮನವಿ ಮಾಡಿದರು.
ವಚನಗಾಯನ ಮತ್ತು ಸಾಂಸ್ಕೃತಿಕ ವೈಭವ
ಮಹೋತ್ಸವದ ಅಂಗವಾಗಿ ವಚನಗಾಯನ, ಭಕ್ತಿ ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಶರಣ ಸಂಸ್ಕೃತಿಯ ಮೌಲ್ಯಗಳನ್ನು ಜನಮನಕ್ಕೆ ತಲುಪಿಸುತ್ತಿವೆ. ಸಿರಿಗೆರೆಯಿಂದ ಭದ್ರಾವತಿಗೆ ಯುವಕರು ಬೈಕ್‌ಗಳಲ್ಲಿ ನಡೆಸಿದ ಭವ್ಯ ಮೆರವಣಿಗೆ ವಿಶೇಷ ಗಮನ ಸೆಳೆದಿತು. ಈ ಸಂದರ್ಭ ರಾಷ್ಟ್ರಕವಿ ಕುವೆಂಪು ಅವರ “ಹಿಂದೆ ಒಬ್ಬ ಗುರು ಇದ್ದ, ಮುಂದೆ ಒಂದು ಗುರಿ ಇತ್ತು, ಸಾಗುತ್ತಿತ್ತು ರಣಧೀರರ ದಂಡು”
ಎಂಬ ಸಾಲುಗಳು ನೆನಪಿಗೆ ಬಂದವು ಎಂದು ಶ್ರೀಗಳು ಹೇಳಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ, ಗೋವಿಂದ ಕಾರಜೋಳ, ಶಾಸಕರಾದ ಬಿ.ಪಿ. ಹರೀಶ್, ಎಂ. ಚಂದ್ರಪ್ಪ, ಶಿವಗಂಗಾ ಬಸವರಾಜ್, ಬಿ.ಕೆ. ಸಂಗಮೇಶ್, ಶಾರದಾ ಪೂರ್ಯಾ ನಾಯ್ಕ್, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಭದ್ರಾವತಿ ನಗರಸಭೆ ಅಧ್ಯಕ್ಷೆ ಗೀತಾ ರಾಜಕುಮಾರ್, ಮಾಜಿ ಸಚಿವ ಸಾರಾ ಮಹೇಶ್ ಸೇರಿದಂತೆ ಅನೇಕ ಗಣ್ಯರು ಹಾಗೂ ಸಾವಿರಾರು ಭಕ್ತರು ಭಾಗವಹಿಸಿದ್ದರು.
ಭಕ್ತಿ, ಸಂಸ್ಕೃತಿ ಮತ್ತು ಕೈಗಾರಿಕಾ ಅಭಿವೃದ್ಧಿಯ ಸಂಗಮವಾಗಿ ರೂಪುಗೊಂಡಿರುವ ತರಳಬಾಳು ಹುಣ್ಣಿಮೆ ಮಹೋತ್ಸವ – 2026, ಭದ್ರಾವತಿಯ ಪುನರುತ್ಥಾನಕ್ಕೆ ಹೊಸ ಆಶಾಕಿರಣ ಮೂಡಿಸಿದೆ.











