ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ತರಳಬಾಳು ಹುಣ್ಣಿಮೆ ಮಹೋತ್ಸವ ಭದ್ರಾವತಿ: ಪುಸ್ತಕ–ಶಿಕ್ಷಣ–ಸಾಹಿತ್ಯದಿಂದಲೇ ಮನುಷ್ಯನ ಪರಿಪೂರ್ಣತೆ ಸಾಧ್ಯ: ಸಾಹಿತಿ ರಾಜೇಂದ್ರ ಚೆನ್ನಿ

On: January 28, 2026 6:38 PM
Follow Us:

ತರಳಬಾಳು ಹುಣ್ಣಿಮೆ ಮಹೋತ್ಸವದ ನಾಲ್ಕನೇ ದಿನ ಸಾಹಿತ್ಯ–ಶಿಕ್ಷಣದ ಮಹತ್ವದ ಅರ್ಥಪೂರ್ಣ ಚಿಂತನೆ

ಭದ್ರಾವತಿ : ವ್ಯಕ್ತಿಯೊಬ್ಬನು ಬಡತನದಲ್ಲಿದ್ದರೂ, ಸಂಕಷ್ಟಗಳ ನಡುವೆ ಬದುಕುತ್ತಿದ್ದರೂ, ಅವನನ್ನು ಮೌಲ್ಯಯುತ ಮಾನವನಾಗಿಸುವ ಶಕ್ತಿ ಶಿಕ್ಷಣಕ್ಕಿದೆ. ಮನುಷ್ಯನ ಬದುಕನ್ನು ಪರಿಪೂರ್ಣತೆಯ ಕಡೆಗೆ ಕೊಂಡೊಯ್ಯುವುದೇ ಶಿಕ್ಷಣದ ಮೂಲ ಉದ್ದೇಶ. ಆದರೆ, ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಶ್ನೆ ಕೇಳುವ ಧೈರ್ಯ ಮತ್ತು ಹಕ್ಕು ಕ್ರಮೇಣ ನಾಶವಾಗುತ್ತಿದೆ. ಶಿಕ್ಷಣದ ಹೆಸರಿನಲ್ಲಿ ಸತ್ಯಕ್ಕಿಂತ ಸುಳ್ಳುಗಳಿಗೆ ಹೆಚ್ಚು ಜಾಗ ದೊರಕುತ್ತಿರುವುದು ಅತ್ಯಂತ ವಿಷಾದಕರ ಸಂಗತಿ ಎಂದು ಖ್ಯಾತ ಸಾಹಿತಿ ರಾಜೇಂದ್ರ ಚೆನ್ನಿ ಆತಂಕ ವ್ಯಕ್ತಪಡಿಸಿದರು.

ತರಳಬಾಳು ಹುಣ್ಣಿಮೆ ಮಹೋತ್ಸವದ ನಾಲ್ಕನೇ ದಿನದಂದು ಆಯೋಜಿಸಲಾಗಿದ್ದ ‘ಸಾಹಿತ್ಯ ಮತ್ತು ಶಿಕ್ಷಣ’ ವಿಷಯಕ ಚರ್ಚೆಯಲ್ಲಿ ಅವರು ಮುಖ್ಯ ಭಾಷಣ ಮಾಡಿದರು.

12ನೇ ಶತಮಾನದ ವಚನ ಸಾಹಿತ್ಯವನ್ನು ಉದಾಹರಿಸಿದ ರಾಜೇಂದ್ರ ಚೆನ್ನಿ, ಶಿಕ್ಷಣ ಮತ್ತು ಸಾಹಿತ್ಯ ಸಮಾಜವನ್ನು ಎಷ್ಟು ಆಳವಾಗಿ ರೂಪಿಸಬಲ್ಲದು ಎಂಬುದನ್ನು ಆ ಕಾಲದ ವಚನಕಾರರು ಸ್ಪಷ್ಟವಾಗಿ ತೋರಿಸಿದ್ದಾರೆ. ಕಾಯಕ ಜೀವಿಗಳಾಗಿದ್ದ ವಚನಕಾರರು ತಮ್ಮ ಅನುಭವಗಳನ್ನೇ ಸಾಹಿತ್ಯವಾಗಿ ರೂಪಿಸಿದ್ದು, ಅವರು ಪಡೆದ ಶಿಕ್ಷಣದ ಫಲಿತಾಂಶವೇ ಆಗಿದೆ ಎಂದು ಹೇಳಿದರು.

ಅನುಭವ ಮಂಟಪದ ಪರಂಪರೆಯನ್ನು ಸ್ಮರಿಸಿದ ಅವರು, ಅಲ್ಲಿ ಸಮಾಜದ ಅಸಮಾನತೆಗಳು, ಮೂಢನಂಬಿಕೆಗಳು ಮತ್ತು ಅನ್ಯಾಯಗಳನ್ನು ಪ್ರಶ್ನಿಸುವ ಧೈರ್ಯ ಕಂಡುಬರುತ್ತದೆ. ಇಂತಹ ಪ್ರಶ್ನಿಸುವ ವಿವೇಕವನ್ನು ಇಂದಿನ ಶಿಕ್ಷಣ ವ್ಯವಸ್ಥೆಯ ಮೂಲಕ ಮಕ್ಕಳಿಗೆ ನೀಡಬೇಕಿದೆ. ಸಾಹಿತ್ಯದ ಮೂಲಕ ಮಕ್ಕಳಲ್ಲಿ ಅಂತಃಕರಣ ಜಾಗೃತಿಯಾಗಬೇಕು; ಮಾನವೀಯ ಮೌಲ್ಯಗಳು ಬೆಳೆಸಬೇಕು ಎಂದು ಒತ್ತಿ ಹೇಳಿದರು.

ಪುಸ್ತಕಗಳು ಮಗುವಿಗೆ ಜ್ಞಾನ ನೀಡುವ ಶ್ರೇಷ್ಠ ಸಾಧನವಾಗಿವೆ. ಆದರೆ, ಇತ್ತೀಚಿನ ದಿನಗಳಲ್ಲಿ ಮಕ್ಕಳು ಪುಸ್ತಕಗಳಿಂದ ದೂರವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಮನುಷ್ಯನನ್ನು ಸಂಪೂರ್ಣವಾಗಿ ರೂಪಿಸಲು ಪುಸ್ತಕ, ಶಿಕ್ಷಣ ಮತ್ತು ಸಾಹಿತ್ಯ ಅನಿವಾರ್ಯವಾಗಿವೆ ಎಂದು ರಾಜೇಂದ್ರ ಚೆನ್ನಿ ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಶರತ್ ಅನಂತಮೂರ್ತಿ, ಶಿಕ್ಷಣವೆಂದರೆ ಪಠ್ಯ ಪುಸ್ತಕದ ಪಾಠಗಳನ್ನು ಬೋಧಿಸುವುದಷ್ಟೇ ಅಲ್ಲ, ಬದುಕಿನಲ್ಲಿ ಅವುಗಳನ್ನು ಪ್ರಾಯೋಗಿಕವಾಗಿ ಅರ್ಥಮಾಡಿಕೊಡುವುದೂ ಆಗಿದೆ ಎಂದು ಹೇಳಿದರು. ಮಕ್ಕಳಲ್ಲಿ ಕೇಳುವ ಗುಣವನ್ನು ಬೆಳೆಸಬೇಕು, ಕುತೂಹಲ ಹುಟ್ಟಿಸುವ ಶಿಕ್ಷಣ ನೀಡಬೇಕು ಎಂದರು.

ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತಿ ಪ್ರಾಧ್ಯಾಪಕ ಡಾ. ಜಿ. ಪ್ರಶಾಂತ್ ನಾಯಕ ಮಾತನಾಡಿ, ಶಿಕ್ಷಣದ ಅಂತಿಮ ಗುರಿ ವಿಶ್ವಮಾನವನನ್ನು ರೂಪಿಸುವುದಾಗಿದೆ. ಆದರೆ ಇಂದಿನ ಉಡುಗೊರೆ, ಅಂಕಾಧಾರಿತ ಶಿಕ್ಷಣ ವ್ಯವಸ್ಥೆ ಮಕ್ಕಳ ಪ್ರತಿಭೆಯನ್ನು ಕೇವಲ ಅಂಕಗಳಿಂದ ಅಳೆಯುವ ಮೂಲಕ ವಿಶ್ವಮಾನವ ಆಗುವ ಮಾರ್ಗಕ್ಕೆ ಅಡ್ಡಿಯಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಈ ಕಾರಣದಿಂದಲೇ ಎಸ್.ಎಸ್.ಎಲ್.ಸಿ. ಪರೀಕ್ಷಾ ಸಮಯದಲ್ಲಿ ಕೆರೆ, ಬಾವಿಗಳ ಬಳಿ ಪೊಲೀಸರನ್ನು ನಿಯೋಜಿಸುವಂತಹ ದುಃಖದ ಪರಿಸ್ಥಿತಿ ಎದುರಾಗಿದೆ. ಮಗುವೊಂದು ತನ್ನೊಳಗಿನ ಬೆಳಕನ್ನು ತಾನೇ ಕಂಡುಕೊಳ್ಳುವಂತಹ ಶಿಕ್ಷಣ ವ್ಯವಸ್ಥೆ ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.

ಚಿಕ್ಕಮಗಳೂರು ಶಾಸಕ ಹೆಚ್.ಡಿ. ತಮ್ಮಯ್ಯ ಮಾತನಾಡಿ, ತರಳಬಾಳು ಮಠವು ಹುಣ್ಣಿಮೆ ಮಹೋತ್ಸವದ ಮೂಲಕ ಸರ್ವಧರ್ಮದ ಮುಖಂಡರನ್ನು ಒಂದೇ ವೇದಿಕೆಗೆ ಕರೆತರುವ ಮೂಲಕ ಸಾಮಾಜಿಕ ಸೌಹಾರ್ದತೆಯ ಸಂದೇಶ ನೀಡುತ್ತಿದೆ. ಜಾತಿ ವೈಷಮ್ಯ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ಎಲ್ಲ ಧರ್ಮಗಳ ನಾಯಕರನ್ನು ಒಟ್ಟುಗೂಡಿಸುವ ಪ್ರಯತ್ನ ನಿಜಕ್ಕೂ ಅವಿಸ್ಮರಣೀಯವಾಗಿದೆ ಎಂದು ಪ್ರಶಂಸಿಸಿದರು.

ಬೆಂಗಳೂರಿನ ಸಾಹಿತಿ ಡಾ. ರಾಜಪ್ಪ ದಳವಾಯಿ ಮಾತನಾಡಿ, ಶಿಕ್ಷಣವನ್ನು ಇನ್ನೂ ಸಂಪೂರ್ಣವಾಗಿ ಎಲ್ಲ ವರ್ಗಗಳಿಗೆ ತಲುಪಿಸಲು ಸಾಧ್ಯವಾಗಿಲ್ಲ. ಬಡತನವನ್ನು ನಿರ್ಮೂಲನೆ ಮಾಡುವಲ್ಲಿ ನಾವು ವಿಫಲರಾಗಿದ್ದೇವೆ. ಹಸಿವಿನ ಸೂಚ್ಯಂಕದಲ್ಲಿ 123 ದೇಶಗಳ ಪೈಕಿ ಭಾರತ 102ನೇ ಸ್ಥಾನದಲ್ಲಿರುವುದು ಆತಂಕಕಾರಿ ವಿಷಯವಾಗಿದೆ ಎಂದು ಹೇಳಿದರು.

ಇಂದಿನ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಶಾಲೆಗಳು ಸಣ್ಣ ಶಾಲೆಗಳನ್ನು ನುಂಗುವಂತಾಗಿವೆ. ಮ್ಯಾಗ್ನೆಟ್ ಶಾಲೆಗಳ ಪರಿಣಾಮವಾಗಿ ಗ್ರಾಮೀಣ ಮತ್ತು ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿ ಎದುರಿಸುತ್ತಿವೆ. ನಮ್ಮ ಶಾಲೆಗಳನ್ನು ನಾವು ಉಳಿಸಿಕೊಳ್ಳಲಾಗದ ದುಸ್ಥಿತಿಯ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು.

ಸಮಾರಂಭದ ಸಾನ್ನಿಧ್ಯವನ್ನು ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು. ಶಿವಮೊಗ್ಗದ ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ಮೈಸೂರು ಮುಕ್ತ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ. ಜ್ಯೋತಿ ಶಂಕರ್, ಸಾಧು ಸದ್ದರ್ಮ ವೀರಶೈವ ಸಂಘದ ಅಧ್ಯಕ್ಷ ಹೆಚ್.ಆರ್. ಬಸವರಾಜಪ್ಪ, ಸಾಹಿತಿ ಡಾ. ಕೆ.ವೈ. ನಾರಾಯಣಸ್ವಾಮಿ, ಚುಟುಕು ಸಾಹಿತಿ ಹೆಚ್. ದುಂಡಿರಾಜ್, ಶಿವಮೊಗ್ಗ–ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ವಿಶ್ವನಾಥ ಮುದಜ್ಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Read more

ಬೆಂಗಳೂರಿನ ಅರಮನೆ ಮೈದಾನದಲ್ಲಿ ಶ್ರೀ ವೀರಭದ್ರೇಶ್ವರ ಜಯಂತ್ಯೋತ್ಸವ: ಆದರ್ಶ ಡೆವಲಪರ್ಸ್‌ನ ಜಯಶಂಕರ್‌ಗೆ ‘ಶ್ರೀ ವೀರಭದ್ರೇಶ್ವರ ಪ್ರಶಸ್ತಿ’ ಪ್ರಧಾನ: ‘ವೀರಭದ್ರನಾಗಿ ಬದುಕಿದರೆ ಸಮಾಜ ಸುಭದ್ರವಾಗುತ್ತದೆ’: ಶ್ರೀ ರಂಭಾಪುರಿ ಜಗದ್ಗುರುಗಳು

ಪ್ರತಿಭೆಯ ಹಣೆಗೆ ವಿಭೂತಿಯಂತೆ ಹೊಳೆಯಲಿ ಸಂಸ್ಕಾರ: ಅಂಕಗಳ ಬೆನ್ನಟ್ಟುವ ಶಿಕ್ಷಣದ ಜೊತೆಗೆ ಮೌಲ್ಯಾಧಾರಿತ ಬದುಕಿಗೂ ಆದ್ಯತೆ ಅಗತ್ಯ: ಸಿದ್ಧಗಂಗಾ ಮಠದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ

ಸಂಸ್ಕಾರಯುತ ಶಿಕ್ಷಣವೇ ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ: ಶ್ರೀ ರಂಭಾಪುರಿ ಜಗದ್ಗುರುಗಳು

ಸಿರಿಗೆರೆಯಲ್ಲಿ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ 35ನೇ ಶ್ರದ್ಧಾಂಜಲಿ: ‘ತರಳಬಾಳು’ ನಮ್ಮ ಮಠದ ಸಂವಿಧಾನ!: ಸಮಾಜಮುಖಿ ಆಡಳಿತಕ್ಕೆ ಗುರುಗಳ ಆದರ್ಶ ಅನುಸರಿಸಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ತೂಕಬದ್ಧ ನಡವಳಿಕೆಗೆ ಶ್ರೀ ತರಳಬಾಳು ಜಗದ್ಗುರುಗಳ ಮೆಚ್ಚುಗೆ

ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಕಳುಹಿಸುವುದಿಲ್ಲ ಎಂಬ ಸಂಕಲ್ಪ ಮಾಡಿಕೊಳ್ಳಿ: ಮಕ್ಕಳಿಗೆ ಸಂಸ್ಕಾರ ನೀಡುವುದೇ ದಂಪತಿಗಳ ದೊಡ್ಡ ಕರ್ತವ್ಯ: ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರು

ಗುರುಗಳ ಶ್ರದ್ಧಾಂಜಲಿಗೆ ನಿಜವಾದ ಗೌರವವೆಂದರೆ ದುಶ್ಚಟಗಳಿಂದ ದೂರವಿರುವ ಸಂಕಲ್ಪ: ಬಸವಣ್ಣನವರ ವಚನವನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸಮಾಜದ ನೋವು-ನಲಿವುಗಳಿಗೆ ಸ್ಪಂದಿಸಿದ ಲಿಂ. ಶ್ರೀ ಶಿವಕುಮಾರ ಮಹಾಸ್ವಾಮೀಜಿ: ಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

Leave a Comment