ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಸರ್ವಧರ್ಮ ಶಾಂತಿ ಸಂದೇಶ

On: January 30, 2026 10:24 PM
Follow Us:

ಭದ್ರಾವತಿ: ಧರ್ಮಮಾರ್ಗವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ವ್ಯಕ್ತಿಯಲ್ಲಷ್ಟೇ ಅಲ್ಲ, ಸಮಗ್ರ ಸಮಾಜದಲ್ಲಿಯೂ ಸ್ನೇಹ, ಪ್ರೀತಿ, ಸಹಬಾಳ್ವೆ, ಸಮನ್ವಯತೆ ಹಾಗೂ ಸಹಿಷ್ಣುತೆ ಬೆಳೆಯಲು ಸಾಧ್ಯ ಎಂದು ಸರ್ವಧರ್ಮದ ಧಾರ್ಮಿಕ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದರು.

ಭದ್ರಾವತಿಯಲ್ಲಿ ನಡೆಯುತ್ತಿರುವ ಐತಿಹಾಸಿಕ ತರಳಬಾಳು ಹುಣ್ಣಿಮೆ ಮಹೋತ್ಸವದ ಆರನೇ ದಿನದ ಕಾರ್ಯಕ್ರಮದಲ್ಲಿ ‘ಸರ್ವಧರ್ಮ ಸಮನ್ವಯತೆ’ ವಿಷಯವಾಗಿ ನಡೆದ ಚರ್ಚಾಸಭೆಯಲ್ಲಿ ವಿವಿಧ ಧರ್ಮಗಳ ಗುರುಗಳು ತಮ್ಮ ಅನುಭವಾಧಾರಿತ ಸಂದೇಶಗಳನ್ನು ಹಂಚಿಕೊಂಡರು.

ತುಮಕೂರಿನ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಭಾರತವು ಸರ್ವಧರ್ಮ ಸಮನ್ವಯತೆ ಹಾಗೂ ಸಹಿಷ್ಣುತೆಯ ತತ್ವವನ್ನು ಮೊದಲು ಅಳವಡಿಸಿಕೊಂಡ ದೇಶವಾಗಿದ್ದು, ಆ ಮೂಲಕ ಇಡೀ ವಿಶ್ವಕ್ಕೆ ಶಾಂತಿಯ ಸಂದೇಶ ನೀಡಿದೆ ಎಂದರು.

ಸನಾತನ ಪರಂಪರೆ ವಿಶ್ವಮಾನವತೆಗೆ ದಿಕ್ಕು ತೋರಿಸಿದ್ದು, ಇಂದಿನ ಉದ್ವಿಗ್ನತೆ, ಹಿಂಸೆ, ಅಪರಾಧ, ಖಿನ್ನತೆ ಹಾಗೂ ಭಯದಿಂದ ಕೂಡಿದ ಜಗತ್ತಿನಲ್ಲಿ ಸರ್ವಧರ್ಮ ಸಹಬಾಳ್ವೆಯೇ ದಾರಿದೀಪವಾಗಿದೆ ಎಂದು ಹೇಳಿದರು. ಪ್ರತಿಯೊಂದು ಧರ್ಮವೂ ಮಾನವನ ಅಭ್ಯುದಯ ಮತ್ತು ವಿಶ್ವ ಕಲ್ಯಾಣಕ್ಕಾಗಿ ಅಸ್ತಿತ್ವದಲ್ಲಿದೆ ಎಂಬ ಸತ್ಯವನ್ನು ಮರೆಯಬಾರದು ಎಂದು ಕರೆ ನೀಡಿದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್ ಮಾತನಾಡಿ, ವಿಶ್ವದ ಕೆಲ ರಾಷ್ಟ್ರಗಳಲ್ಲಿ ಅರಾಜಕತೆ ವ್ಯಾಪಿಸುತ್ತಿರುವ ಸಂದರ್ಭದಲ್ಲಿ ಭಾರತದಲ್ಲಿಯೂ ಅದೆ ಸಂಭವಿಸಲಿದೆ ಎಂಬ ಆತಂಕ ವ್ಯಕ್ತವಾಗುತ್ತಿದೆ. ಆದರೆ, ಭಾರತೀಯರ ಮನಸ್ಸು ಸಂಯಮ, ಸಹನೆ ಮತ್ತು ಮೌಲ್ಯಾಧಾರಿತ ಬದುಕಿನ ಹಾದಿಯಲ್ಲಿ ಸಾಗಿರುವುದರಿಂದ ಭಾರತದಲ್ಲಿ ಅರಾಜಕತೆಗೆ ಅವಕಾಶವೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಧರ್ಮ ಎಂದರೆ ರಿಲಿಜನ್ ಅಲ್ಲ – ಬಿ.ಎಲ್. ಸಂತೋಷ್

ಧರ್ಮವನ್ನು ಇಂಗ್ಲಿಷ್ ಪದವಾದ ‘ರಿಲಿಜನ್’ಗೆ ಸೀಮಿತಗೊಳಿಸಲಾಗದು ಎಂದು ಬಿ.ಎಲ್. ಸಂತೋಷ್ ಸ್ಪಷ್ಟಪಡಿಸಿದರು. ರಿಲಿಜನ್‌ಗೆ ನಿರ್ದಿಷ್ಟ ಗ್ರಂಥ, ಪ್ರವಾದಿ ಮತ್ತು ಪೂಜಾ ಪದ್ಧತಿ ಇದ್ದರೆ, ಧರ್ಮವು ಜೀವನದ ಪ್ರತಿಯೊಂದು ಹಂತಕ್ಕೂ ಸಂಬಂಧಿಸಿದ ವ್ಯಾಪಕ ಅರ್ಥ ಹೊಂದಿದೆ ಎಂದರು.

ಮರ್ಯಾದಾ ಪುರುಷೋತ್ತಮ ಶ್ರೀರಾಮನ ಉದಾಹರಣೆ ನೀಡಿದ ಅವರು, ‘ಮರ್ಯಾದೆ’ ಎಂದರೆ ಗಡಿ ಎಂದು ವಿವರಿಸಿದರು. ಶ್ರೀರಾಮ ಎಂದಿಗೂ ತನ್ನ ಧಾರ್ಮಿಕ ಹಾಗೂ ನೈತಿಕ ಗಡಿಯನ್ನು ದಾಟಲಿಲ್ಲ. ಇದೇ ಸಂಯಮದ ಸಂಸ್ಕೃತಿ ಭಾರತವನ್ನು ಇಂದಿಗೂ ಉಳಿಸಿಕೊಂಡಿದೆ ಎಂದು ಹೇಳಿದರು.

ಪತಿ–ಪತ್ನಿ, ಪುತ್ರ–ಪೋಷಕರು, ವ್ಯಾಪಾರಿ, ರಾಜನಿಗೂ ತನ್ನದೇ ಆದ ಧರ್ಮವಿದೆ. ರಾಜಧರ್ಮ, ಗೃಹಸ್ಥ ಧರ್ಮ, ಸಮಾಜಧರ್ಮ ಎಲ್ಲವೂ ಧರ್ಮದ ಭಾಗಗಳೇ. ಈ ಮೌಲ್ಯಗಳನ್ನು ತಲೆಮಾರಿಗೆ ತಲೆಮಾರಿಗೆ ವರ್ಗಾಯಿಸುತ್ತಾ ಬಂದಿರುವುದೇ ಭಾರತದ ಬಲ ಎಂದು ಹೇಳಿದರು.

ಮಂಗಳೂರಿನ ಮಸ್ದರ್ ಎಜುಕೇಶನ್ ಮತ್ತು ಚಾರಿಟಿ ಸಂಸ್ಥೆಯ ಕಾರ್ಯಾಧ್ಯಕ್ಷ ಮೌಲಾನ ಅಬೂಸುಫ್ಯಾನ್ ಮದನಿ ಮಾತನಾಡಿ, ಇಂದಿನ ಸಮಾಜದಲ್ಲಿ ಸಹೋದರತ್ವ ಕ್ಷೀಣಿಸುತ್ತಿದ್ದು, ಮಾದಕ ವಸ್ತುಗಳು ಸೇರಿದಂತೆ ದುಶ್ಚಟಗಳು ಯುವ ಜನಾಂಗವನ್ನು ಕಾಡುತ್ತಿರುವುದು ದೊಡ್ಡ ಸವಾಲಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಧರ್ಮಗ್ರಂಥ ಅಧ್ಯಯನ ಮತ್ತು ಧರ್ಮಗುರುಗಳ ಮಾರ್ಗದರ್ಶನ ಪಡೆದವರು ಈ ಸಮಸ್ಯೆಗಳಿಂದ ದೂರ ಉಳಿಯುತ್ತಾರೆ ಎಂದರು. ದೇವಾಲಯ, ಮಸೀದಿ, ಚರ್ಚುಗಳ ಸಂಖ್ಯೆ ಹೆಚ್ಚಾಗುತ್ತಿರುವಂತೆಯೇ, ಮಾನವರ ಮನಸ್ಸಿನಲ್ಲೂ ಪ್ರೀತಿ ಮತ್ತು ಸ್ನೇಹ ಬೆಳೆಯಬೇಕು. ಇಲ್ಲದಿದ್ದರೆ ಧಾರ್ಮಿಕ ಸ್ಥಳಗಳಿಗೆ ತೆರಳುವುದೇ ಬೂಟಾಟಿಕೆಯಾಗುತ್ತದೆ ಎಂದು ಹೇಳಿದರು.

ಶಿವಮೊಗ್ಗ ಕ್ಯಾಥೆಡ್ರಲ್ ಚರ್ಚ್‌ನ ಸೆಕ್ರೆಡ್ ಹಾರ್ಟ್ ರೆವರೆಂಡ್ ಫಾದರ್ ಸ್ಟ್ಯಾನಿ ಡಿಸೋಜಾ ಮಾತನಾಡಿ, ಯಾವುದೇ ಧರ್ಮವೂ ದ್ವೇಷವನ್ನು ಬಿತ್ತುವುದಿಲ್ಲ; ಅದು ಸ್ನೇಹ ಮತ್ತು ಪ್ರೀತಿಯನ್ನೇ ಬಿತ್ತುತ್ತದೆ ಎಂದರು.ಏಸು ಕ್ರಿಸ್ತರು ಪ್ರೀತಿ, ತ್ಯಾಗ ಮತ್ತು ಕ್ಷಮೆಯ ಸಂದೇಶ ನೀಡಿದ್ದು, ಪ್ರೀತಿ ಇದ್ದಲ್ಲಿ ಸಹನೆ, ತಾಳ್ಮೆ ಮತ್ತು ಶಾಂತಿ ಸಹಜವಾಗಿ ಬರುತ್ತವೆ. ನಮ್ಮನ್ನು ನೋಯಿಸಿದವರನ್ನೂ ಕ್ಷಮಿಸುವ ಗುಣವೇ ಸಮಾಜವನ್ನು ಉಳಿಸುತ್ತದೆ ಎಂದು ಹೇಳಿದರು.

ದೇವರು ಅವಕಾಶ ನೀಡುತ್ತಾನೆ – ಡಿ.ಕೆ.ಶಿವಕುಮಾರ್

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ದೇವರು ಯಾರಿಗೂ ವರ ಅಥವಾ ಶಾಪ ನೀಡುವುದಿಲ್ಲ; ಅವಕಾಶ ಮಾತ್ರ ನೀಡುತ್ತಾನೆ. ಆ ಅವಕಾಶವನ್ನು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದೇ ಜೀವನದ ದಿಕ್ಕನ್ನು ನಿರ್ಧರಿಸುತ್ತದೆ ಎಂದು ಹೇಳಿದರು.

ಶ್ರಮವಿಲ್ಲದೆ ಫಲವಿಲ್ಲ ಎಂಬುದನ್ನು ಒತ್ತಿಹೇಳಿದ ಅವರು, ಉಳಿ ಪೆಟ್ಟು ಬೀಳದೆ ಕಲ್ಲು ಶಿಲೆಯಾಗದು; ಹೊಲ ಉಳುಮೆ ಆಗದೆ ಬೆಳೆ ಬೆಳೆಯದು. ಬದುಕಿನಲ್ಲಿ ಶ್ರಮಪಟ್ಟಾಗಲೇ ಯಶಸ್ಸು ದೊರಕುತ್ತದೆ ಎಂದರು.

ಅಮ್ಮನ ನೆನಪು ಪ್ರೀತಿಯ ಮೂಲ, ಗುರು ನೆನಪು ಜ್ಞಾನದ ಮೂಲ, ದೇವರ ನೆನಪು ಭಕ್ತಿಯ ಮೂಲ. ಈ ಮೂರು ನೆನಪುಗಳು ಮನುಷ್ಯತ್ವಕ್ಕೆ ಹಾಗೂ ಮೋಕ್ಷಕ್ಕೆ ಮೂಲ ಎಂದು ಹೇಳಿದರು.

ಅಲೆಕ್ಸಾಂಡರ್–ಅರಿಸ್ಟಾಟಲ್ ಕಥನವನ್ನು ಉಲ್ಲೇಖಿಸಿದ ಡಿಕೆಶಿ, ಭಾರತದಿಂದ ರಾಮಾಯಣ, ಮಹಾಭಾರತ, ಗಂಗಾಜಲ, ಕೃಷ್ಣನ ಕೊಳಲು ಹಾಗೂ ತತ್ವಜ್ಞಾನಿಯನ್ನು ತಂದರೆ ಭಾರತವನ್ನೇ ತಂದಂತಾಗುತ್ತದೆ ಎಂಬ ಅರಿಸ್ಟಾಟಲ್‌ನ ಮಾತುಗಳನ್ನು ಸ್ಮರಿಸಿದರು. ಇದೇ ನಮ್ಮ ಸಂಸ್ಕೃತಿಯ ಶಕ್ತಿ ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿ, ಎಲ್ಲ ಧರ್ಮಗಳ ಮಹಾಪುರುಷರು ನೀಡಿದ ಶಾಂತಿ, ಮಾನವೀಯತೆ ಹಾಗೂ ಸಹಬಾಳ್ವೆಯ ಸಂದೇಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಮನುಷ್ಯರಾಗಿ ಹುಟ್ಟಿದ ಮೇಲೆ ಮಾನವಧರ್ಮವನ್ನು ಮರೆಯದೆ ಪಾಲಿಸುವುದೇ ನಮ್ಮ ಕರ್ತವ್ಯ ಎಂದು ಹೇಳಿದರು.

ಸಮಾರಂಭದ ಸಾನ್ನಿಧ್ಯವನ್ನು ತರಳಬಾಳು ಜಗದ್ಗುರು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು.ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಬೆಂಗಳೂರು ಬೌದ್ಧ ಮಹಾಬೋಧಿ ಸಮಾಜದ ಶ್ರೀ ಭಿಕ್ಷು ನ್ಯಾನಾನಂದಜಿ, ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ, ಶ್ರೀಮತ್ ಸಾಧು ಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ, ಹಾಗೂ ಹಾಸ್ಯ ಭಾಷಣಗಾರ್ತಿ ಇಂದುಮತಿ ಸಾಲಿಮಠ ಸೇರಿದಂತೆ ಹಲವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Read more

ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಆಯುರ್ವೇದ ಮಹತ್ವದ ಪಾತ್ರ ವಹಿಸುತ್ತದೆ: ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ

ಹುತಾತ್ಮ ಯೋಧರ ಪತ್ನಿಯ ತ್ಯಾಗವೇ ಶ್ರೇಷ್ಠತೆ: ತರಳಬಾಳು ಜಗದ್ಗುರುಗಳ ಹೃದಯಸ್ಪರ್ಶಿ ಸಂದೇಶ

ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ವೈಯಕ್ತಿಕ–ಕುಟುಂಬ ನಿಂದನೆಗೆ ತೆರೆ ಎಳೆಯಲು ರಾಜಕೀಯ ನಾಯಕರಿಗೆ ಜಗದ್ಗುರುಗಳ ಖಡಕ್ ಸೂಚನೆ,.!

ಬೆಳ್ಳಿ ಪಲ್ಲಕ್ಕಿಯಲ್ಲಿ ಜಗದ್ಗುರುಗಳ ದರ್ಶನ: ಭದ್ರಾವತಿಯಲ್ಲಿ ತರಳಬಾಳು ಹುಣ್ಣಿಮೆಯ ವೈಭವ, ಲಕ್ಷಾಂತರ ಭಕ್ತರ ಸಮಾಗಮ

ತರಳಬಾಳು ಹುಣ್ಣಿಮೆ ಮಹೋತ್ಸವ 2026: ‘ಮನೆಯೊಳಗೆ ಧರ್ಮ, ಹೊರಗೆ ಸಂವಿಧಾನ’ – ನ್ಯಾಯಮೂರ್ತಿ ಶ್ರೀಶಾನಂದ ಸಂದೇಶ

ತರಳಬಾಳು ಹುಣ್ಣಿಮೆ ಮಹೋತ್ಸವ 2026: ಸಮೂಹ ಮಾಧ್ಯಮ ಸಮಾಜದ ದಿಕ್ಕು ನಿರ್ಧರಿಸುವ ಶಕ್ತಿಯಾಗಿದೆ: ಸಿ.ಎಸ್. ಷಡಾಕ್ಷರಿ

Leave a Comment