ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಕಾಂಗ್ರೆಸ್ ಭವನಕ್ಕೆ 31 ನಿವೇಶನ ಮಂಜೂರು ವಿವಾದ: ಕಾನೂನುಬಾಹಿರ ಭೂ ಕಬಳಿಕೆ ಆರೋಪ – ಛಲವಾದಿ ನಾರಾಯಣಸ್ವಾಮಿ ಖಂಡನೆ

On: February 17, 2026 3:01 PM
Follow Us:

ಬೆಂಗಳೂರು: ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರವು ಬಡವರಿಗೆ ಮನೆ, ಭೂರಹಿತರಿಗೆ ಭೂಮಿ ನೀಡುವ ಬದಲಿಗೆ ತಾನೇ ಭೂಮಿ ಕಬಳಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತೀವ್ರವಾಗಿ ಆರೋಪಿಸಿದರು. ಸರ್ಕಾರದ ಈ ನಡೆ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದ್ದು, ಕಾನೂನು ಉಲ್ಲಂಘನೆಯ ಸ್ಪಷ್ಟ ಉದಾಹರಣೆಯಾಗಿದೆ ಎಂದು ಅವರು ಖಂಡಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, “ಸರ್ಕಾರವೇ ಭೂ ಕಬಳಿಕೆಯಲ್ಲಿ ನಿರತವಾಗಿದೆ. ತಾಲ್ಲೂಕು, ಜಿಲ್ಲೆ, ಮಂಡಲ, ಪಂಚಾಯಿತಿ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿಗಳಿಗೆ ಲೀಸ್ ಹೆಸರಿನಲ್ಲಿ ನಿವೇಶನಗಳನ್ನು ಮಂಜೂರು ಮಾಡಿರುವುದು ಗಂಭೀರ ವಿಷಯ” ಎಂದು ಹೇಳಿದರು.

ಮಾರುಕಟ್ಟೆ ಮೌಲ್ಯದ ಕೇವಲ ಶೇ.5ಕ್ಕೆ ನಿವೇಶನ ಮಂಜೂರು?

ಚಿಕ್ಕಬಳ್ಳಾಪುರದಲ್ಲಿ 3,404 ಚದರ ಮೀಟರ್ ವ್ಯಾಪ್ತಿಯ, ರೂ. 4.08 ಕೋಟಿ ಮೌಲ್ಯದ ನಿವೇಶನವನ್ನು ಕೇವಲ ರೂ. 20.42 ಲಕ್ಷಕ್ಕೆ ಮಂಜೂರು ಮಾಡಲಾಗಿದೆ ಎಂದು ಅವರು ಆರೋಪಿಸಿದರು. ಇದು ಮಾರುಕಟ್ಟೆ ಮೌಲ್ಯದ ಕೇವಲ ಶೇ.5ರಷ್ಟೇ ಎಂದು ಹೇಳಿದರು. ಇದೇ ರೀತಿಯಲ್ಲಿ ಬಾದಾಮಿ, ಕೊಪ್ಪಳ, ಮಂಡ್ಯ, ಗೌರಿಬಿದನೂರು, ಮಾನ್ವಿ, ಶಹಾಪುರ, ಲಿಂಗಸುಗೂರು, ತುಮಕೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಕೋಟ್ಯಾಂತರ ರೂ. ಮೌಲ್ಯದ ನಿವೇಶನಗಳನ್ನು ಅತೀ ಕಡಿಮೆ ದರದಲ್ಲಿ ಕಾಂಗ್ರೆಸ್ ಪಕ್ಷದ ಭವನ ಟ್ರಸ್ಟ್‌ಗೆ ನೀಡಲಾಗಿದೆ ಎಂದು ದೂರಿದರು.

ಹುಬ್ಬಳ್ಳಿ-ಧಾರವಾಡದಲ್ಲಿ ದರವೇ ನಿಗದಿ ಮಾಡದೆ ನಾಗರಿಕ ಸೌಲಭ್ಯ ನಿವೇಶನಗಳನ್ನು ಮಂಜೂರು ಮಾಡಿರುವುದು ಮತ್ತೊಂದು ದೊಡ್ಡ ಅನಿಯಮ ಎಂದು ಹೇಳಿದರು. ಅಧಿಕಾರಿಗಳು ಈ ಮಂಜೂರಾತಿ ಕಾನೂನುಬಾಹಿರವೆಂದು ಅಭಿಪ್ರಾಯಪಟ್ಟಿದ್ದರೂ, ಸಚಿವ ಸಂಪುಟದಲ್ಲಿ ವಿಶೇಷ ಅನುಮೋದನೆ ನೀಡಿ ಮಂಜೂರು ಮಾಡಲಾಗಿದೆ ಎಂದು ದಾಖಲೆಗಳನ್ನು ಉಲ್ಲೇಖಿಸಿ ವಿವರಿಸಿದರು.

31 ನಿವೇಶನಗಳ ಭೂ ಕಬಳಿಕೆ ಆರೋಪ

ಕಂದಾಯ ಇಲಾಖೆಯಿಂದ 5 ಮತ್ತು ಪುರಸಭೆ ಹಾಗೂ ಸ್ಥಳೀಯ ಸಂಸ್ಥೆಗಳಿಂದ 26 ನಿವೇಶನಗಳು ಸೇರಿ ಒಟ್ಟು 31 ನಿವೇಶನಗಳನ್ನು ಕಾಂಗ್ರೆಸ್ ಪಕ್ಷ ಪಡೆದಿದೆ ಎಂದು ಅವರು ಆರೋಪಿಸಿದರು. “ಇವು ನಾವು ಸೃಷ್ಟಿಸಿದ ದಾಖಲೆಗಳಲ್ಲ, ಸರ್ಕಾರದಿಂದಲೇ ಪಡೆದ ಅಧಿಕೃತ ದಾಖಲೆಗಳು” ಎಂದು ಹೇಳಿದರು.

ಈ ಎಲ್ಲಾ ನಿವೇಶನಗಳನ್ನು ತಕ್ಷಣ ವಾಪಸ್ ಪಡೆಯಬೇಕು. ಇಲ್ಲವಾದರೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಅಧಿಕಾರ ದುರುಪಯೋಗದ ವಿರುದ್ಧ ಹೋರಾಟ

“ರಾಜಕೀಯ ಪಕ್ಷಗಳಿಗೆ ಒಂದು ನಿವೇಶನ ಪಡೆಯಲು ಅವಕಾಶವಿರಬಹುದು. ಆದರೆ ತಾಲ್ಲೂಕು, ಮಂಡಲ, ಜಿಲ್ಲಾಮಟ್ಟದಲ್ಲಿ ಭಾರಿ ಪ್ರಮಾಣದಲ್ಲಿ ಸರ್ಕಾರಿ ಜಮೀನು ಪಡೆದುಕೊಳ್ಳುವುದು ಸರಿಯಲ್ಲ. ಇದು ಅಧಿಕಾರ ದುರುಪಯೋಗ ಮತ್ತು ಕಾನೂನಿನ ದೊಡ್ಡ ಲೋಪ” ಎಂದು ಅವರು ಕಿಡಿಕಾರಿದರು.

ಬಿಜೆಪಿ ಅನೇಕ ಕಡೆಗಳಲ್ಲಿ ಖಾಸಗಿ ಜಾಗ ಖರೀದಿಸಿ ಕಚೇರಿ ನಿರ್ಮಿಸಿಕೊಂಡಿದೆ. ಆದರೆ ಸರ್ಕಾರಿ ಭೂಮಿಯನ್ನು ಕಬಳಿಸಿಲ್ಲ ಎಂದು ಹೋಲಿಕೆ ನೀಡಿದರು.

ಪರಿಶಿಷ್ಟ ಜಾತಿ-ವರ್ಗಗಳ ವಿರುದ್ಧ ದ್ರೋಹ?

ಎಸ್‌ಇಪಿ-ಟಿಎಸ್‌ಪಿ ನಿಧಿಗಳ ಬಳಕೆ ಕುರಿತೂ ಸರ್ಕಾರದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅವರು, ಕಳೆದ ಮೂರು ವರ್ಷಗಳಲ್ಲಿ ಸುಮಾರು ರೂ. 39 ಸಾವಿರ ಕೋಟಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಲಾಗಿದೆ ಎಂದು ಆರೋಪಿಸಿದರು. ಪರಿಶಿಷ್ಟ ಜಾತಿ ಮತ್ತು ವರ್ಗಗಳ ಅಭಿವೃದ್ಧಿಗೆ ಮೀಸಲಾಗಿದ್ದ ಹಣವನ್ನು ಬೇರೆ ಉದ್ದೇಶಗಳಿಗೆ ವರ್ಗಾಯಿಸುವುದು ದ್ರೋಹ ಮತ್ತು ಅನ್ಯಾಯ ಎಂದು ಹೇಳಿದರು.

ಸರ್ಕಾರವು 2.84 ಲಕ್ಷ ಹುದ್ದೆಗಳನ್ನು ಭರ್ತಿ ಮಾಡದೆ ಯುವಜನರಿಗೆ ಅನ್ಯಾಯ ಮಾಡುತ್ತಿದೆ. ಅಭಿವೃದ್ಧಿಯ ಕೊರತೆ, ಭ್ರಷ್ಟಾಚಾರ ಮತ್ತು ಅಧಿಕಾರದ ದುರುಪಯೋಗ ರಾಜ್ಯದ ಆಡಳಿತದ ಗುರುತುಗಳಾಗಿವೆ ಎಂದು ಟೀಕಿಸಿದರು.

ನಿವೇಶನಗಳನ್ನು ವಾಪಸ್ ಪಡೆಯಲು ಆಗ್ರಹ

“ಕಾನೂನು ಇಲಾಖೆ ತಕ್ಷಣ ಪರಿಶೀಲನೆ ನಡೆಸಬೇಕು. ಮಂಜೂರಾದ ಎಲ್ಲ ನಿವೇಶನಗಳನ್ನು ವಾಪಸ್ ಪಡೆಯಬೇಕು. ಇಲ್ಲವಾದರೆ ನ್ಯಾಯಾಲಯದ ಮೆಟ್ಟಿಲೇರಲು ನಾವು ಸಿದ್ಧ” ಎಂದು ಅವರು ಘೋಷಿಸಿದರು.

ರಾಜ್ಯದ ಆಡಳಿತವು ಜನಪರವಾಗಿರಬೇಕು; ಪಕ್ಷಪರವಾಗಿರಬಾರದು. ಸರ್ಕಾರಿ ಸಂಪತ್ತು ಸಾರ್ವಜನಿಕ ಹಿತಕ್ಕಾಗಿ ಬಳಸಬೇಕು, ರಾಜಕೀಯ ಪಕ್ಷಗಳ ಲಾಭಕ್ಕಾಗಿ ಅಲ್ಲ ಎಂದು ಅವರು ಖಂಡನೆ ವ್ಯಕ್ತಪಡಿಸಿದರು.

K.M.Sathish Gowda

Join WhatsApp

Join Now

Facebook

Join Now

Leave a Comment