ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಶರಣರ ವಚನಗಳಲ್ಲಿ ಇಂದಿನ ಆಡಳಿತಕ್ಕೆ ದಾರಿ: ಕುವೆಂಪು ರಂಗಮಂದಿರದಲ್ಲಿ ಅರ್ಥಪೂರ್ಣ ಸಂವಾದ

On: March 25, 2026 7:56 PM
Follow Us:

ಶಿವಮೊಗ್ಗ: ನಗರದ ಕುವೆಂಪು ರಂಗಮಂದಿರದಲ್ಲಿ ನಡೆದ ಶರಣ ಸಾಹಿತ್ಯ ಸಮ್ಮೇಳನದ ಅಂಗವಾಗಿ “ಆಡಳಿತ ಮತ್ತು ವಚನ ಸಾಹಿತ್ಯ” ವಿಷಯ ಕುರಿತ ಸಂವಾದ ಕಾರ್ಯಕ್ರಮ ಚಿಂತನೆಗೆ ದಾರಿ ಮಾಡಿಕೊಟ್ಟಿತು. 12ನೇ ಶತಮಾನದಲ್ಲೇ ಶರಣರು ರಚಿಸಿದ ವಚನಗಳಲ್ಲಿ ಇಂದಿನ ಆಡಳಿತ ವ್ಯವಸ್ಥೆಯ ಅನೇಕ ಸಮಸ್ಯೆಗಳಿಗೆ ಸ್ಪಷ್ಟ ಉತ್ತರಗಳು ಅಡಕವಾಗಿವೆ ಎಂಬುದು ಕಾರ್ಯಕ್ರಮದ ಮುಖ್ಯ ಆಶಯವಾಗಿ ಹೊರಹೊಮ್ಮಿತು.

“ಕಾಯಕವೇ ಕೈಲಾಸ”, “ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜಿದೊಡೆಂತಯ್ಯ”, “ಕಳಬೇಡ, ಕೊಲಬೇಡ, ಹುಸಿಯ ನುಡಿಯಬೇಡ” ಇಂತಹ ವಚನಗಳನ್ನು ಉಲ್ಲೇಖಿಸುತ್ತ ಸಂವಾದವನ್ನು ಆರಂಭಿಸಿದ ಅಧಿಕಾರಿಗಳು, ಶರಣರ ತತ್ವಗಳು ಇಂದಿಗೂ ಎಷ್ಟು ಪ್ರಸ್ತುತವೆಂಬುದನ್ನು ವಿಶ್ಲೇಷಿಸಿದರು.

ಜಿಲ್ಲಾಧಿಕಾರಿ ಪ್ರಭುದೇವ ಕವಳಿಕಟ್ಟಿ ಮಾತನಾಡಿ, ಕಾಯಕನಿಷ್ಠೆ, ಪ್ರತಿಯೊಬ್ಬ ವ್ಯಕ್ತಿಯಿಗೂ ಹಾಗೂ ಪ್ರತಿಯೊಂದು ಕೆಲಸಕ್ಕೂ ಗೌರವ, ನಿಷ್ಪಕ್ಷಪಾತತೆ ಮತ್ತು ನಿಸ್ವಾರ್ಥತೆ ಎಂಬ ಮೌಲ್ಯಗಳನ್ನು ಶರಣರು 12ನೇ ಶತಮಾನದಲ್ಲೇ ವಚನಗಳ ಮೂಲಕ ಬೋಧಿಸಿದ್ದಾರೆ ಎಂದರು. ಇಂತಹ ಮೌಲ್ಯಗಳನ್ನು ಇಂದಿನ ಸಮಾಜ ಸಂಪೂರ್ಣವಾಗಿ ಅಳವಡಿಸಿಕೊಳ್ಳಲು ವಿಫಲವಾಗಿದೆ ಎಂಬುದು ವಿಷಾದನೀಯ ಎಂದು ಅವರು ಅಭಿಪ್ರಾಯಪಟ್ಟರು.

“ವಚನಗಳನ್ನು ಎಲ್ಲರೂ ಅರ್ಥಮಾಡಿಕೊಂಡು ಬದುಕಿನಲ್ಲಿ ಅನುಸರಿಸಿದ್ದರೆ ಇಂದಿನ ಆಡಳಿತ ವ್ಯವಸ್ಥೆಯಲ್ಲಿ ಸಮಸ್ಯೆಗಳೇ ಇರಲಿಲ್ಲ. ನಮ್ಮ ಮಾತಿನಲ್ಲಿ ವಚನ ಇರದಿದ್ದರೂ ನಮ್ಮ ನಡೆ-ನುಡಿಯಲ್ಲಿ ವಚನಗಳ ಮೌಲ್ಯ ಪ್ರತಿಬಿಂಬಿಸಬೇಕು” ಎಂದು ಅವರು ಹೇಳಿದರು.

ದಾಸೋಹದ ಅರ್ಥವನ್ನು ವಿವರಿಸಿದ ಅವರು, ಕೇವಲ ಅನ್ನಪಾನ ನೀಡುವುದೇ ದಾಸೋಹವಲ್ಲ; ಅತಿಥಿಗಳಿಗೆ ನಿಸ್ವಾರ್ಥವಾಗಿ ತಮ್ಮನ್ನು ತಾವು ಸಮರ್ಪಿಸುವ ಮನೋಭಾವವೇ ನಿಜವಾದ ದಾಸೋಹ ಎಂದು ತಿಳಿಸಿದರು. ಇಂತಹ ಮಹತ್ವದ ಮೌಲ್ಯಗಳು ಯುವಪೀಳಿಗೆಗೆ ತಲುಪಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.

ಜಿಲ್ಲಾ ರಕ್ಷಣಾಧಿಕಾರಿ ಬಿ. ನಿಖಿಲ್ ಮಾತನಾಡಿ, ಶರಣರ ವಚನ ಸಂಸ್ಕೃತಿ ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಮೂಲ ತತ್ವಗಳನ್ನು ಜಗತ್ತಿಗೆ ಪರಿಚಯಿಸಿತು ಎಂದರು. ಮಹಿಳಾ ಸಮಾನತೆಯ ಬಗ್ಗೆ ಶರಣರು ನೀಡಿದ ಸಂದೇಶವು ಆಧುನಿಕ ಸಮಾಜಕ್ಕೂ ಮಾರ್ಗದರ್ಶಕವಾಗಿದೆ ಎಂದು ಹೇಳಿದರು.

“ಗಡ್ಡ-ಮೀಸೆ ಹೊರತುಪಡಿಸಿದರೆ ಮಹಿಳೆ ಮತ್ತು ಪುರುಷನ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂಬ ವಚನದ ಅರ್ಥ, ಮಹಿಳೆಯ ಸಾಮರ್ಥ್ಯವನ್ನು ಒತ್ತಿ ಹೇಳುತ್ತದೆ” ಎಂದು ಅವರು ಅಭಿಪ್ರಾಯಪಟ್ಟರು. ಇದೇ ವೇಳೆ “ಬೆಟ್ಟದ ಮೇಲೆ ಮನೆಯ ಮಾಡಿ ಮೃಗಗಳಿಗೆ ಅಂಜಿದರೆ ಹೇಗೆ” ಎಂಬ ವಚನವನ್ನು ಉಲ್ಲೇಖಿಸಿ, ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಧೈರ್ಯದಿಂದ ಎದುರಿಸುವ ಮನೋಭಾವ ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು.

“ಸ್ಥಾವರಕ್ಕಳಿವುಂಟು, ಜಂಗಮಕ್ಕಿಲ್ಲ” ಎಂಬ ವಚನವನ್ನು ಉದಾಹರಿಸಿ, ಸರ್ಕಾರಿ ಅಧಿಕಾರಿಗಳು ಚಲನೆಯಲ್ಲಿರುವ ಜವಾಬ್ದಾರಿಯುತ ಆಡಳಿತವನ್ನು ಅನುಸರಿಸಬೇಕು ಎಂದು ಹೇಳಿದರು.

ಮಹಾನಗರಪಾಲಿಕೆ ಆಯುಕ್ತ ಮಾಯಣ್ಣಗೌಡ ಮಾತನಾಡಿ, “ಕಳಬೇಡ, ಕೊಲಬೇಡ, ಹುಸಿಯ ನುಡಿಯಬೇಡ” ಎಂಬ ವಚನದ ತತ್ವಗಳು ಭಾರತದ ವಿದೇಶಾಂಗ ನೀತಿಗಳಲ್ಲಿಯೂ ಪ್ರತಿಫಲಿಸುತ್ತವೆ ಎಂದು ಹೇಳಿದರು. ಅಲಿಪ್ತತೆ, ತಟಸ್ಥತೆ ಮತ್ತು ಪಂಚಶೀಲ ತತ್ವಗಳ ಮೂಲಕ ಭಾರತವು ಶಾಂತಿಯನ್ನು ಕಾಪಾಡುವ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದರು.

“ನಾವು ಯಾರ ಮೇಲೂ ದಾಳಿ ಮಾಡುವುದಿಲ್ಲ; ಶಾಂತಿಯನ್ನು ಉಳಿಸುವುದು ನಮ್ಮ ಧ್ಯೇಯ. ಈ ಮನೋಭಾವ ಶರಣರ ವಚನ ಸಂಸ್ಕೃತಿಯಲ್ಲೇ ಅಡಕವಾಗಿದೆ” ಎಂದು ಅವರು ಹೇಳಿದರು.

ಭಾರತದಲ್ಲಿ ವೇದ, ಉಪನಿಷತ್ತುಗಳು ಸೇರಿದಂತೆ ಅನೇಕ ಮಹತ್ತರ ಗ್ರಂಥಗಳು ಇದ್ದರೂ, ಜನಸಾಮಾನ್ಯರಿಗೆ ಹತ್ತಿರವಾದದ್ದು ಶರಣರ ಸರಳ ಮತ್ತು ಸುಗಮವಾದ ವಚನ ಸಾಹಿತ್ಯವೇ ಎಂಬುದನ್ನು ಅವರು ಉಲ್ಲೇಖಿಸಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಶುಭಾ ಮರವಂತೆ ಅವರು ವಚನಗಳ ಸೂಕ್ತ ಉದಾಹರಣೆಗಳನ್ನು ನೀಡುತ್ತ ಸಂವಾದವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಸಮ್ಮೇಳನದ ಅಧ್ಯಕ್ಷರಾದ ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹಾಗೂ ಡಾ. ಶ್ರೀ ಬಸವಮರುಳಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಈ ಸಂವಾದವು ಶರಣರ ವಚನಗಳು ಕೇವಲ ಸಾಹಿತ್ಯವಲ್ಲ, ಇಂದಿನ ಆಡಳಿತ ವ್ಯವಸ್ಥೆಗೆ ಮಾರ್ಗದರ್ಶಕವಾದ ಮೌಲ್ಯಪೂರ್ಣ ಜೀವನ ದರ್ಶನವೆಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಿತು.

K.M.Sathish Gowda

Join WhatsApp

Join Now

Facebook

Join Now

Leave a Comment