ತುಮಕೂರು: ಸಮಾಜ ಸೇವೆ, ಶಿಕ್ಷಣ ದಾಸೋಹ ಮತ್ತು ಆಧ್ಯಾತ್ಮಿಕ ಪರಂಪರೆಯ ಸಮನ್ವಯದ ಪ್ರತಿರೂಪವಾಗಿರುವ ಸಿದ್ಧಗಂಗಾ ಮಠ ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ತಿಳಿಸಿದ್ದಾರೆ.

ಸಿದ್ಧಗಂಗಾ ಮಠದ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿ ಅವರ 119ನೇ ಜನ್ಮದಿನೋತ್ಸವ ಅಂಗವಾಗಿ ಮಠದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಠದ ಸೇವಾ ಕಾರ್ಯಗಳನ್ನು ಹೃದಯಪೂರ್ವಕವಾಗಿ ಶ್ಲಾಘಿಸಿದರು. ಇದೇ ವೇಳೆ ಮಠಕ್ಕೆ ಭೇಟಿ ನೀಡಿದ ರಾಷ್ಟ್ರಪತಿ, ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ಪೂಜೆ ಸಲ್ಲಿಸಿ ಗೌರವ ಅರ್ಪಿಸಿದರು.
“ಸಿದ್ಧಗಂಗಾ ಮಠ ಮಾನವೀಯತೆಯ ಜೀವಂತ ಮಾದರಿ; ದಯವೇ ಧರ್ಮದ ಮೂಲ” – ರಾಷ್ಟ್ರಪತಿ ದ್ರೌಪದಿ ಮುರ್ಮು
ರಾಷ್ಟ್ರಪತಿ ಮಾತನಾಡಿ, “ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿರುವುದು ನನಗೆ ಅಪಾರ ಸಂತೋಷ ತಂದಿದೆ. ಬಡ ಹಾಗೂ ಅನಾಥ ಮಕ್ಕಳಿಗೆ ಶಿಕ್ಷಣ, ಆಶ್ರಯ ಮತ್ತು ಅನ್ನದಾಸೋಹ ನೀಡುವ ಮೂಲಕ ಮಠವು ಮಾನವೀಯತೆಯ ಮಾದರಿಯಾಗಿದೆ. ‘ದಯವೇ ಧರ್ಮದ ಮೂಲ’ ಎಂಬ ಸಂದೇಶವನ್ನು ಆಚಾರದಲ್ಲಿ ತೋರಿಸಿರುವ ಈ ಮಠ ನಿಜಕ್ಕೂ ಸೇವಾ ಪರಂಪರೆಯ ಹೆಗ್ಗುರುತು,” ಎಂದು ಹೇಳಿದರು.
ಇನ್ನಷ್ಟು ಮಾತನಾಡಿದ ಅವರು, ಬಸವಣ್ಣ ಅವರು ಹಾಕಿಕೊಟ್ಟ ಮಾನವೀಯ ಮೌಲ್ಯಗಳ ದಾರಿಯಲ್ಲಿ ಸಿದ್ಧಗಂಗಾ ಮಠ ನಡೆದುಕೊಳ್ಳುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

“ಸ್ವಾಮೀಜಿಗಳ ಜೀವನವೇ ಪವಾಡ”: ಶ್ರೀ ಸಿದ್ದಲಿಂಗ ಸ್ವಾಮೀಜಿ
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, “ವೀರಶೈವ-ಲಿಂಗಾಯತ ಮಠಗಳಲ್ಲಿ ಸಿದ್ಧಗಂಗಾ ಮಠ ಮುಂಚೂಣಿಯಲ್ಲಿದ್ದು, ಶಿವಕುಮಾರ ಸ್ವಾಮೀಜಿಗಳ ಜೀವನವೇ ಒಂದು ಪವಾಡ. ಬಡ ಮಕ್ಕಳಿಗೆ ಮತ್ತು ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವುದೇ ಅವರ ಜೀವನದ ಮುಖ್ಯ ಗುರಿಯಾಗಿತ್ತು,” ಎಂದು ಹೇಳಿದರು.
ಶಿವಕುಮಾರ ಶ್ರಿಗಳ ಸೇವೆಗೆ ಗಣ್ಯರಿಂದ ಗೌರವ ನಮನ
ಈ ಸಂದರ್ಭದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಮಾತನಾಡಿ, “ಮಾನವತಾ ಕಲ್ಯಾಣಕ್ಕಾಗಿ ಶಿವಕುಮಾರ ಶ್ರಿಗಳು ಸಲ್ಲಿಸಿದ ಸೇವೆ ಅನನ್ಯವಾಗಿದೆ. ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ತತ್ವವನ್ನು ಅವರು ಜೀವನದಲ್ಲಿ ಅಳವಡಿಸಿಕೊಂಡಿದ್ದರು,” ಎಂದು ಹೇಳಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅಭಿಪ್ರಾಯ ವ್ಯಕ್ತಪಡಿಸಿ, “ಶಿವಕುಮಾರ ಸ್ವಾಮೀಜಿಗಳು ಅನಾಥ ಮಕ್ಕಳಿಗೆ ತಂದೆಯಾಗಿ, ಮಾನವೀಯತೆಯ ಜೀವಂತ ಪ್ರತಿರೂಪವಾಗಿದ್ದರು. ಅವರು ಸಾಮಾನ್ಯ ವ್ಯಕ್ತಿಯಿಂದ ಮಹಾನ್ ವ್ಯಕ್ತಿತ್ವವಾಗಿ ಬೆಳೆದವರು,” ಎಂದು ಹೇಳಿದರು.

ರಾಜ್ಯದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮಾತನಾಡಿ, “ತ್ರಿವಿಧ ದಾಸೋಹದ ಮೂಲಕ ಸಿದ್ಧಗಂಗಾ ಮಠವು ಕೇವಲ ಧಾರ್ಮಿಕ ಕ್ಷೇತ್ರವಾಗಿಯೇ ಅಲ್ಲ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ರಾಂತಿಯ ಕೇಂದ್ರವಾಗಿಯೂ ರೂಪುಗೊಂಡಿದೆ,” ಎಂದು ಕೊಂಡಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿ. ಸೋಮಣ್ಣ ಅವರು, “ನಾಡನ್ನು ಉದ್ಧರಿಸಿದ ಮಹಾ ಚೇತನರಾದ ಶಿವಕುಮಾರ ಮಹಾಸ್ವಾಮೀಜಿಗಳಿಗೆ ನನ್ನ ಅನಂತ ಪ್ರಣಾಮಗಳು. ಅವರೊಂದಿಗೆ ಕಳೆದ ಕ್ಷಣಗಳು ಹಾಗೂ ನೀಡಿದ ಮಾರ್ಗದರ್ಶನ ಇಂದು ಕೂಡ ನಮ್ಮನ್ನು ಪ್ರೇರೇಪಿಸುತ್ತಿವೆ” ಎಂದು ಭಾವನಾತ್ಮಕವಾಗಿ ಹೇಳಿದರು.
ಸಿದ್ಧಗಂಗಾ ಮಠವು ಕೇವಲ ಧಾರ್ಮಿಕ ಕೇಂದ್ರವಲ್ಲ; ಅದು ಮಾನವೀಯತೆ, ಸಮಾನತೆ ಮತ್ತು ಸೇವೆಯ ಜೀವಂತ ಪ್ರತೀಕವಾಗಿದೆ. ಮಹಾಸ್ವಾಮೀಜಿಗಳ ತತ್ವಗಳು ಇಂದಿಗೂ ಅನೇಕ ಮಂದಿಗೆ ದಾರಿದೀಪವಾಗಿದ್ದು, ಅವರ ಸ್ಮರಣೆ ಶಾಶ್ವತವಾಗಿ ಬೆಳಗುತ್ತಲೇ ಇರುತ್ತದೆ ಎಂದು ನೆನಪಿಸಿದರು.

ರಾಷ್ಟ್ರಪತಿ ದ್ರೌಪದಿ ಮುರ್ಮ ರವರಿಗೆ ಬಸವಣ್ಣನ ಮೂರ್ತಿ ಉಡುಗೊರೆ
ಕಾರ್ಯಕ್ರಮದ ಅಂಗವಾಗಿ ಸಿದ್ಧಗಂಗಾ ಮಠದ ಪರವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಿದ್ದಲಿಂಗ ಸ್ವಾಮೀಜಿ ಅವರು ಬಸವಣ್ಣನ ಮೂರ್ತಿಯನ್ನು ಉಡುಗೊರೆಯಾಗಿ ನೀಡಿ ಗೌರವಿಸಿದರು.
ಸಿದ್ಧಗಂಗಾ ಮಠವು ಅನೇಕ ದಶಕಗಳಿಂದ ಶಿಕ್ಷಣ, ಅನ್ನದಾಸೋಹ ಮತ್ತು ಆಶ್ರಯದ ಮೂಲಕ ಲಕ್ಷಾಂತರ ಜನರ ಬದುಕಿಗೆ ಬೆಳಕು ನೀಡುತ್ತಿದೆ. ಶಿವಕುಮಾರ ಸ್ವಾಮೀಜಿಗಳ ತ್ಯಾಗಮಯ ಜೀವನ ಮತ್ತು ಸೇವಾ ಪರಂಪರೆ ಇಂದು ದೇಶಕ್ಕೆ ಮಾದರಿಯಾಗಿ ಉಳಿದಿದ್ದು, ಮಠದ ಈ ಕಾರ್ಯಗಳು ಮುಂದಿನ ಪೀಳಿಗೆಗೂ ಪ್ರೇರಣೆಯಾಗಲಿವೆ.

ಗಣ್ಯರ ಉಪಸ್ಥಿತಿ
ಈ ಭವ್ಯ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ, ರಾಜ್ಯ ಗೃಹ ಸಚಿವ ಜಿ. ಪರಮೇಶ್ವರ್, ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಅನೇಕ ಮುಖಂಡರು, ಕಾರ್ಯಕರ್ತರು ಮತ್ತು ಅಸಂಖ್ಯಾತ ಭಕ್ತರು ಭಾಗವಹಿಸಿದ್ದರು.











