ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಶಿವಮೊಗ್ಗದಲ್ಲಿ ಮೇ 17ರಂದು ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಉತ್ಸವ: ಸಕಲ ಸಿದ್ಧತೆ – ಸಹಕಾರಕ್ಕೆ ಮಠಾಧೀಶರು ಹಾಗೂ ಸಮಿತಿ ಮನವಿ

On: April 19, 2026 7:52 PM
Follow Us:

ಶಿವಮೊಗ್ಗ: ನಗರದಲ್ಲಿ ಮೇ 17 ರಂದು ನಡೆಯಲಿರುವ ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಉತ್ಸವವನ್ನು ಯಶಸ್ವಿಯಾಗಿ ನೆರವೇರಿಸಲು ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ಮಳಲಿ ಮಠದ ಡಾ. ಶ್ರೀ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಅವರು ಮನವಿ ಮಾಡಿದರು.

ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಉತ್ಸವ ಸಮಿತಿ ವತಿಯಿಂದ ಧರ್ಮಜಾಗೃತಿ ಸಭೆ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ನಡೆಯಲಿರುವ ಕೃತಜ್ಞತಾ ಕಾರ್ಯಕ್ರಮದ ಪೂರ್ವ ಸಿದ್ಧತಾ ಸಭೆ ಭಾನುವಾರ ನಗರ ಬೆಕ್ಕಿನ ಕಲ್ಮಠದ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಉತ್ಸವದ ಮಹತ್ವವನ್ನು ವಿವರಿಸಿದರು.

ಅವರು ಮಾತನಾಡುತ್ತಾ, “ಈ ಉತ್ಸವದ ಬಗ್ಗೆ ನಕಾರಾತ್ಮಕವಾಗಿ ಮಾತನಾಡುವುದು ಸರಿಯಲ್ಲ. ಸಮಾಜದ ಪ್ರತಿಯೊಬ್ಬರೂ ಗೌರವಪೂರ್ವಕವಾಗಿ ಭಾಗವಹಿಸಬೇಕು. ಇದು ಯಾವುದೇ ವ್ಯಕ್ತಿಯ ವೈಯಕ್ತಿಕ ಉತ್ಸವವಲ್ಲ; ಇದು ಪಂಚ ತತ್ವಗಳ ಮತ್ತು ಪಂಚ ಸೂತ್ರಗಳ ಪ್ರತೀಕಾತ್ಮಕ ಉತ್ಸವವಾಗಿದೆ. ಅನಾದಿಕಾಲದಿಂದಲೂ ನಡೆಯುತ್ತಿರುವ ಈ ಸಂಪ್ರದಾಯ ಸಮಾಜಕ್ಕೆ ಶ್ರೇಯಸ್ಸು ತರುತ್ತದೆ,” ಎಂದು ಹೇಳಿದರು.

ಉತ್ಸವದ ಯಶಸ್ಸಿಗೆ ಸಂಪನ್ಮೂಲ, ಸಂಘಟನೆ ಮತ್ತು ಜವಾಬ್ದಾರಿ ಎಂಬ ಮೂರೂ ಅಂಶಗಳು ಅತ್ಯಂತ ಮುಖ್ಯವಾಗಿವೆ ಎಂದು ಹೇಳಿದ ಅವರು, ಪ್ರತಿಯೊಂದು ಉಪಸಮಿತಿಗೂ ಸ್ಪಷ್ಟವಾದ ಕರ್ತವ್ಯಗಳನ್ನು ನೀಡಲಾಗಿದ್ದು, ಅವುಗಳನ್ನು ನಿಷ್ಠೆಯಿಂದ ನಿರ್ವಹಿಸಿದರೆ ಉತ್ಸವ ಸುಗಮವಾಗಿ ನಡೆಯಲಿದೆ ಎಂದು ಅಭಿಪ್ರಾಯಪಟ್ಟರು.

ಬಿಳಕ ಮಠದ ಶ್ರೀ ರಾಚೋಟೇಶ್ವರ ಸ್ವಾಮೀಜಿ ಮಾತನಾಡಿ, ಅಡ್ಡಪಲ್ಲಕ್ಕಿ ಉತ್ಸವದ ರೂಪುರೇಷೆ ಪೂರ್ಣಗೊಂಡಿದ್ದು, ಮೇ 17 ರಂದು ಮಧ್ಯಾಹ್ನ 3 ಗಂಟೆಗೆ ಗಾಂಧಿಬಜಾರಿನ ಬಸವೇಶ್ವರ ದೇವಸ್ಥಾನದಿಂದ ಮೆರವಣಿಗೆ ಆರಂಭವಾಗಲಿದೆ ಎಂದು ತಿಳಿಸಿದರು. ಮೆರವಣಿಗೆ ಶಿವಪ್ಪನಾಯಕ ವೃತ್ತ, ಎಎ ವೃತ್ತ, ಗೋಪಿ ವೃತ್ತ, ದುರ್ಗಿಗುಡಿ, ಜೈಲ್ ವೃತ್ತದ ಮೂಲಕ ಅಲ್ಲಮಪ್ರಭು ಮೈದಾನಕ್ಕೆ ಸಾಗಲಿದೆ ಎಂದು ವಿವರಿಸಿದರು.

ಮೆರವಣಿಗೆಯಲ್ಲಿ ನೂರು ಜನ ಮುತ್ತೈದೆಯರು ಪೂರ್ಣಕುಂಭದೊಂದಿಗೆ ಭಾಗವಹಿಸಲಿದ್ದು, ಪ್ರತಿಯೊಬ್ಬ ಶ್ರೀಗಳ ಮುಂದೆ ಎರಡು ವೀರಗಾಸೆ ತಂಡಗಳು ಹಾಗೂ ಡೊಳ್ಳು ಸೇರಿದಂತೆ ವಿವಿಧ ಕಲಾ ತಂಡಗಳು ಪ್ರದರ್ಶನ ನೀಡಲಿವೆ. ಮೈದಾನಕ್ಕೆ ಮೆರವಣಿಗೆ ಆಗಮಿಸಿದ ಬಳಿಕ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಗೌರವಿಸಲಾಗುವುದು ಮತ್ತು ನಂತರ ಧರ್ಮಸಭೆ ನಡೆಯಲಿದೆ ಎಂದು ಅವರು ಹೇಳಿದರು.

ಉತ್ಸವ ಸಮಿತಿ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಮಾತನಾಡಿ, ದೇಣಿಗೆ ಸಂಗ್ರಹ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಸುಮಾರು 450 ಚಂದಾ ಪುಸ್ತಕಗಳನ್ನು ವಿತರಿಸಲಾಗಿದೆ. ಇನ್ನೂ ವಾರ್ಡ್ ಮಟ್ಟದ ಸಭೆಗಳು ಬಾಕಿಯಿದ್ದು, ದಾಸೋಹ, ಅಲಂಕಾರ, ಮೆರವಣಿಗೆ ಹಾಗೂ ವೇದಿಕೆ ಸೇರಿದಂತೆ ವಿವಿಧ ಉಪಸಮಿತಿಗಳು ಚರ್ಚಿಸಿ ಅಂತಿಮ ನಿರ್ಧಾರಗಳನ್ನು ಕೈಗೊಳ್ಳಬೇಕಿದೆ ಎಂದು ತಿಳಿಸಿದರು.

ಸಮಿತಿಯ ಕಾರ್ಯಚಟುವಟಿಕೆಗಳ ಕುರಿತು ಮಾತನಾಡಿದ ಅವರು, ವಾಟ್ಸಾಪ್ ಗ್ರೂಪ್‌ಗಳಲ್ಲಿ ಅನಗತ್ಯ ಚರ್ಚೆಗಳನ್ನು ಮಾಡುವುದನ್ನು ತಪ್ಪಿಸಬೇಕು. ಅಗತ್ಯವಿದ್ದರೆ ಅಂತಹವರನ್ನು ಗುಂಪಿನಿಂದ ತೆಗೆದುಹಾಕಲಾಗುತ್ತದೆ ಎಂದು ಎಚ್ಚರಿಸಿದರು.

ಆಯನೂರು ಮಂಜುನಾಥ್ ಮಾತನಾಡಿ, ಇದು ಕೆಲವೇ ಜನರ ಕಾರ್ಯಕ್ರಮವಲ್ಲ. ಎಲ್ಲರೂ ಸೇರಿ ಭಾಗವಹಿಸಬೇಕು. ಅಲಂಕಾರ ಹಾಗೂ ವ್ಯವಸ್ಥೆಯನ್ನು ಉತ್ತಮವಾಗಿ ನಿರ್ವಹಿಸಬೇಕು ಎಂದು ಸಲಹೆ ನೀಡಿದರು. ಕೆಲಸವನ್ನು ಹೇಳುವುದರಲ್ಲಿ ನಾವು ಮುಂದೆ ಆದರೆ ಅದನ್ನು ಮಾಡುವಲ್ಲಿ ಹಿಂಜರಿಯಬಾರದು ಎಂದು ಅವರು ಹೇಳಿದರು.

ಸಮಿತಿ ಖಜಾಂಚಿ ಎಸ್.ಪಿ. ದಿನೇಶ್ ಮಾಹಿತಿ ನೀಡುತ್ತಾ, 600 ಚಂದಾ ಪುಸ್ತಕಗಳು ಸಿದ್ಧವಾಗಿದ್ದು, ಸುಮಾರು 30 ಲಕ್ಷ ರೂಪಾಯಿ ಸಂಗ್ರಹದ ಗುರಿ ಇಡಲಾಗಿದೆ. ಈಗಾಗಲೇ 450 ಪುಸ್ತಕಗಳ ಮೂಲಕ ಸಂಗ್ರಹ ಕಾರ್ಯ ನಡೆಯುತ್ತಿದ್ದು, ಗ್ರಾಮಾಂತರ ಭಾಗದ ಮಹಿಳೆಯರು ಹಣ ಸಂಗ್ರಹಿಸಿ ಸಹಕಾರ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು.

ಸಮಾಜದ ಏಕತೆ ಕುರಿತು ಮಾತನಾಡಿದ ಅವರು, “ನಾವು ಬೇರೆ, ನೀವು ಬೇರೆ ಎಂಬ ಮನೋಭಾವವನ್ನು ಬಿಟ್ಟು ಎಲ್ಲರೂ ಒಂದಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಬೇರೆ ಸಮುದಾಯದವರು ನೋಡುವಂತೆ ಯಾವುದೇ ಅಸಹಜ ಸ್ಥಿತಿ ಉಂಟಾಗಬಾರದು,” ಎಂದು ಮನವಿ ಮಾಡಿದರು.

ಡಾ. ಧನಂಜಯ ಸರ್ಜಿ ಮಾತನಾಡಿ, ಎಲ್ಲರನ್ನು ಒಳಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದು ಎಲ್ಲರ ಜವಾಬ್ದಾರಿ ಎಂದು ಹೇಳಿದರು. ಹಣ ಸಂಗ್ರಹ ಈಗ ಕಷ್ಟದ ವಿಷಯವಲ್ಲ, ಆದರೆ ಕಾರ್ಯಕ್ರಮದ ಅಚ್ಚುಕಟ್ಟುತನ ಮುಖ್ಯವಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ವಿರೂಪಾಕ್ಷಪ್ಪ, ಟಿ.ಬಿ. ಜಗದೀಶ್, ರೇಣುಕಾರಾಧ್ಯ, ಚನ್ನಯ್ಯ, ಎಂ.ಆರ್. ಪ್ರಕಾಶ್, ಶಾಂತಾ ಆನಂದ, ಅನಿತಾ ರವಿಶಂಕರ್, ಬಳ್ಳೇಕೆರೆ ಸಂತೋಷ್, ರುದ್ರಮುನಿ ಸಜ್ಜನ್, ಎಚ್.ಸಿ. ಯೋಗೀಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Leave a Comment