“ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ” ಎಂಬ ಗೀತೆ ಮೊಳಗಿದಂತೆ, ಧರ್ಮಸ್ಥಳದಲ್ಲಿ ಇಂದು ನಡೆದ “ನಮ್ಮ ನಡಿಗೆ ಧರ್ಮದೆಡೆಗೆ, ಧರ್ಮಸ್ಥಳ ಚಲೋ” ಕಾರ್ಯಕ್ರಮ ಸಮರಭೂಮಿಯನ್ನು ನೆನಪಿಸಿತು. ಧರ್ಮಸ್ಥಳದ ವಿರುದ್ಧ ನಡೆದಿರುವುದಾಗಿ ಆರೋಪಿಸಲಾದ ಷಡ್ಯಂತ್ರಗಳ ವಿರುದ್ಧ ಧ್ವನಿ ಎತ್ತಿದ ಬಿಜೆಪಿ ನಾಯಕ ಬಿ.ವೈ. ವಿಜಯೇಂದ್ರ ಅವರು, “ಧರ್ಮಯುದ್ಧ ಅಂತ್ಯ ಕಂಡುವರೆಗೂ ಹೋರಾಟ ನಿಲ್ಲದು” ಎಂದು ಘೋಷಿಸಿದರು.
ವಿಜಯೇಂದ್ರ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಹಿಂದೂ ವಿರೋಧಿ, ಧರ್ಮ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನವನ್ನು ಗುರಿಯಾಗಿಸಿಕೊಂಡಿರುವ ಕಾಂಗ್ರೆಸ್ ಸರ್ಕಾರದ ಕುತಂತ್ರವನ್ನು ಜನತೆ ಬಯಲು ಮಾಡಲಿದ್ದಾರೆ ಎಂದು ಹೇಳಿದರು.

ಅನಾಮಿಕ ದೂರು ಆಧರಿಸಿ SIT ರಚಿಸಿ ತನಿಖೆ ನಡೆಸುವ ಕಾಂಗ್ರೆಸ್ ಸರ್ಕಾರದ ಹಿಂದಿನ ಉದ್ದೇಶ ಧರ್ಮಸ್ಥಳದ ಪಾವಿತ್ರ್ಯ ಕುಗ್ಗಿಸುವ ಕುತಂತ್ರ ಮಾತ್ರವಲ್ಲದೆ, ವಿದೇಶಿ ಶಕ್ತಿಗಳ ಕೈವಾಡವೂ ಇರಬಹುದು ಎಂದು ವಿಜಯೇಂದ್ರ ಶಂಕೆ ವ್ಯಕ್ತಪಡಿಸಿದರು. ಈ ಹಿನ್ನಲೆಯಲ್ಲಿ CBI ಅಥವಾ NIA ತನಿಖೆಯೊಂದೇ ಶಾಶ್ವತ ಪರಿಹಾರ ಎಂದರು.

ಸಮಾವೇಶದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಜಗದೀಶ್ ಶೆಟ್ಟರ್, ಪ್ರತಿಪಕ್ಷ ನಾಯಕ ಆರ್. ಅಶೋಕ್, ಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯ ಸಹ ಉಸ್ತುವಾರಿ ಸುಧಾಕರ ರೆಡ್ಡಿ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸಚಿವರು ಬಿ.ಶ್ರೀರಾಮುಲು, ಸಿ.ಟಿ.ರವಿ, ಸುನಿಲ್ ಕುಮಾರ್, ಸಂಸದ ಹಾಗೂ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ, ಧರ್ಮಸ್ಥಳ ಚಲೋ ರಾಜ್ಯ ಸಂಚಾಲಕ ಎಸ್.ಆರ್. ವಿಶ್ವನಾಥ್ ಹಾಗೂ ಅನೇಕ ಶಾಸಕರು, ಮಾಜಿ ಶಾಸಕರು, ಪಕ್ಷದ ಮುಖಂಡರು, ಹಿಂದೂ ಸಂಘಟನೆಗಳ ಕಾರ್ಯಕರ್ತರು, ಸಾವಿರಾರು ಭಕ್ತರು ಹಾಜರಿದ್ದರು.