ಬೆಂಗಳೂರು, ಸೆ. 15 – “ಪ್ರತಾಪ್ ಸಿಂಹರಿಗೆ ಅವರ ಪಕ್ಷದಲ್ಲಿ ಟಿಕೆಟ್ ನೀಡಿಲ್ಲ. ಹೀಗಾಗಿ ತಾವು ರಾಜಕೀಯವಾಗಿ ಬದುಕಿದ್ದೇನೆ ಎಂದು ತೋರಿಸಿಕೊಳ್ಳುವ ಯತ್ನ ಮಾಡುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ,” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ವಿಧಾನಸೌಧ ಬಳಿ ಮಾತನಾಡಿದ ಅವರು, ನಾಡಹಬ್ಬ ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರಿಗೆ ಆಹ್ವಾನ ನೀಡಿದ ಸರ್ಕಾರದ ನಿರ್ಧಾರದ ವಿರುದ್ಧ ಪ್ರತಾಪ್ ಸಿಂಹ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಹೈಕೋರ್ಟ್ ವಜಾಗೊಳಿಸಿರುವುದನ್ನು ಸ್ವಾಗತಿಸಿದರು.
“ನ್ಯಾಯ ಪೀಠದಿಂದ ನ್ಯಾಯ ಸಿಕ್ಕಿದೆ. ನಮ್ಮ ನ್ಯಾಯಾಂಗ ವ್ಯವಸ್ಥೆಗೆ ನಾವು ತಲೆಬಾಗುತ್ತೇವೆ. ನಮ್ಮದು ಪ್ರಜಾಪ್ರಭುತ್ವದ ವ್ಯವಸ್ಥೆ. ಇಂದು ನಾವು ಪ್ರಜಾಪ್ರಭುತ್ವ ದಿನ ಆಚರಿಸುತ್ತಿದ್ದೇವೆ. ಮತವು ಬುಲೆಟ್ಗಿಂತ ಶಕ್ತಿಶಾಲಿ. ಜನರ ಬಹುಮತದಿಂದ ಆರಿಸಿಕೊಂಡಿರುವ ಸರ್ಕಾರದ ತೀರ್ಮಾನ ಇದು,” ಎಂದು ಡಿಕೆಶಿ ಹೇಳಿದರು.
ಡಿ.ಕೆ.ಶಿವಕುಮಾರ್ ಮುಂದುವರಿದು, “ನಮ್ಮ ಸಂವಿಧಾನ ಸಮಾನತೆಯ ಸಂದೇಶ ಸಾರುತ್ತದೆ. ಎಲ್ಲಾ ಧರ್ಮಗಳಿಗೂ ಅವಕಾಶ ಕಲ್ಪಿಸಿದೆ. ಚಾಮುಂಡೇಶ್ವರಿ ದೇವಿಗೆ ಪ್ರಾರ್ಥಿಸಬೇಡಿ, ಚಾಮುಂಡಿ ಬೆಟ್ಟಕ್ಕೆ ಬರಬೇಡಿ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ನಾವು ಸಂವಿಧಾನಬದ್ಧ ನಿರ್ಧಾರ ತೆಗೆದುಕೊಂಡಿದ್ದೇವೆ. ಪ್ರತಾಪ್ ಸಿಂಹ ಸೇರಿದಂತೆ ಬಿಜೆಪಿ ನಾಯಕರು ಸಂವಿಧಾನವನ್ನು ಸರಿಯಾಗಿ ಓದಲಿ. ಆಗ ತಮ್ಮ ಹಕ್ಕು ಏನೆಂಬುದು ಅರ್ಥವಾಗುತ್ತದೆ,” ಎಂದು ಹೇಳಿದರು.
ಬಿಜೆಪಿಯ ಮೇಲೆ ಟೀಕೆಗೈದ ಡಿಕೆಶಿ, “ಬಿಜೆಪಿಗರಿಗೆ ಸಂವಿಧಾನದ ಮೇಲೆ ಗೌರವವಿಲ್ಲ. ಆದರೆ ನಾವು ಸಂವಿಧಾನ ಹಾಗೂ ಎಲ್ಲಾ ವರ್ಗಗಳ ರಕ್ಷಣೆ ಮಾಡುವ ಕೆಲಸ ಮಾಡುತ್ತಿದ್ದೇವೆ. ನ್ಯಾಯಾಲಯವೂ ಸಂವಿಧಾನದ ಮೇಲೆ ನಡೆಯುತ್ತದೆ. ನಾವು ಪ್ರಮಾಣ ವಚನ ಸ್ವೀಕರಿಸುವುದೇ ಸಂವಿಧಾನದ ಹೆಸರಿನಲ್ಲಿ,” ಎಂದು ಸ್ಪಷ್ಟಪಡಿಸಿದರು.