ನವದೆಹಲಿ,: ಚುನಾವಣಾ ಆಯೋಗವು ಮತ ಕಳ್ಳತನದಲ್ಲಿ ಭಾಗಿಯಾಗಿದೆ ಎಂಬುದಕ್ಕೆ ನಮ್ಮ ಬಳಿ ಪುರಾವೆಗಳಿವೆ. ಇಂತಹ ಅಕ್ರಮದಲ್ಲಿ ಚುನಾವಣಾ ಆಯೋಗದಲ್ಲಿ ಭಾಗಿಯಾಗಿರುವ ಯಾರನ್ನೂ ನಾವು ಸುಮ್ಮನೆ ಬಿಡುವುದಿಲ್ಲ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸ್ಫೋಟಕ ಹೇಳಿಕೆ ನೀಡಿದ್ದರು. ಆದರೆ, ಇದಕ್ಕೆ ಪ್ರತಿಕ್ರಿಯಿಸಿರುವ ಚುನಾವಣಾ ಆಯೋಗ, “ಪ್ರತಿದಿನ ಮಾಡಲಾಗುವ ಇಂತಹ ಆಧಾರರಹಿತ ಆರೋಪಗಳನ್ನು ಚುನಾವಣಾ ಆಯೋಗ ನಿರ್ಲಕ್ಷಿಸುತ್ತದೆ. ಪದೇ ಪದೇ ಬೆದರಿಕೆಗಳ ಹೊರತಾಗಿಯೂ ನ್ಯಾಯಯುತವಾಗಿ ಮತ್ತು ಪಾರದರ್ಶಕವಾಗಿ ಕೆಲಸ ಮಾಡುತ್ತಿರುವ ಎಲ್ಲಾ ಚುನಾವಣಾ ಅಧಿಕಾರಿಗಳಿಗೆ ಕೂಡ ಇಂತಹ ಹೇಳಿಕೆಯನ್ನು ನಿರ್ಲಕ್ಷಿಸುವಂತೆ ಸೂಚಿಸುತ್ತದೆ” ಎಂದು ತಿಳಿಸಿದೆ.
ಭಾರತೀಯ ಚುನಾವಣಾ ಆಯೋಗ ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಮತದಾರರ ವಂಚನೆಯ ಗಂಭೀರ ಆರೋಪವನ್ನು ದೃಢವಾಗಿ ತಿರಸ್ಕರಿಸಿದೆ. ಆ ಆರೋಪ “ಆಧಾರರಹಿತ” ಮತ್ತು “ಬೇಜವಾಬ್ದಾರಿಯುವತವಾದುದು” ಎಂದು ಆಯೋಗ ಟೀಕಿಸಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಮತ ಕಳ್ಳತನಕ್ಕೆ ಇಸಿಐ ನೇರವಾಗಿ ಸಹಕರಿಸುತ್ತಿದೆ ಎಂದು ಆರೋಪಿಸಿದ್ದರು. ಇತ್ತೀಚೆಗೆ ಬಿಹಾರದಲ್ಲಿ ನಡೆಸಲಾದ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ಉಲ್ಲೇಖಿಸಿದ ಅವರು, ಚುನಾವಣಾ ಆಯೋಗದ ಕ್ರಮಗಳು ಆಡಳಿತಾರೂಢ ಬಿಜೆಪಿಯ ಪರವಾಗಿದೆ ಎಂದು ಹೇಳಿದ್ದರು.