ಹೊಸದಿಲ್ಲಿ: ಕಾಂಗ್ರೆಸ್ ಪಕ್ಷದ ದಿವಂಗತ ನಾಯಕ ಅಹ್ಮದ್ ಪಟೇಲ್ ಅವರ ಪುತ್ರ ಫೈಸಲ್ ಪಟೇಲ್ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರವನ್ನು ಶ್ಲಾಘಿಸಿದ್ದಾರೆ. “ದೇಶ ಸುರಕ್ಷಿತ ಕೈಯಲ್ಲಿದೆ” ಎಂದು ಹೇಳಿರುವ ಫೈಸಲ್ ಪಟೇಲ್, “ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ನಾಯಕತ್ವ ಸದೃಢವಾಗಿದೆ” ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.
ಖಾಸಗಿ ವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಫೈಸಲ್ ಪಟೇಲ್, ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆಯನ್ನು ಉಲ್ಲೇಖಿಸುತ್ತಾ, “ಸಶಸ್ತ್ರ ಪಡೆಗಳು ಉತ್ತಮ ಕೆಲಸ ಮಾಡಿವೆ ಮತ್ತು ಪ್ರಧಾನಿ ನರೇಂದ್ರ ಮೋದಿ ಉತ್ತಮ ನಾಯಕತ್ವವನ್ನು ಒದಗಿಸಿ ದೇಶವನ್ನು ಒಂದು ದೊಡ್ಡ ಬಿಕ್ಕಟ್ಟಿನಿಂದ ರಕ್ಷಿಸಿದರು” ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು.
ಇದೇ ವೇಳೆ ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ ಅವರ ಕಾರ್ಯವೈಖರಿಯನ್ನೂ ಮೆಚ್ಚಿಕೊಂಡಿರುವ ಫೈಸಲ್ ಪಟೇಲ್, “ಅವರ ಬಗ್ಗೆ ನನಗೆ ತುಂಬಾ ಗೌರವವಿದೆ. ಪ್ರಧಾನಿ ಮೋದಿ ಅವರು ಅನುಭವಿ ಅಧಿಕಾರಿಗಳನ್ನು ನಾಯಕರನ್ನಾಗಿ ಮಾಡುವಲ್ಲಿ ನಿಸ್ಸೀಮರಾಗಿದ್ದು, ಇದು ತುಂಬಾ ಒಳ್ಳೆಯ ವಿಷಯ” ಎಂದು ಹೇಳಿದ್ದಾರೆ.