ಹೊಸದಿಲ್ಲಿ: ದೇಶದಲ್ಲಿ ಜನರ ಸಂಖ್ಯೆ ಹೇಗೆ ಹೆಚ್ಚಾಗುತ್ತಿದೆಯೋ ಅದೇ ಪ್ರಮಾಣದಲ್ಲಿ ಬೀದಿ ನಾಯಿಗಳ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಕೆಲವು ತಿಂಗಳ ಹಿಂದೆ ಬೀದಿ ನಾಯಿಗಳಿಗೆ ಬಿರಿಯಾನಿ ಕೊಡಬೇಕು ಎಂಬ ನಿರ್ಧಾರ ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿತ್ತು. ಈ ಬೆಳವಣಿಗೆ ನಡುವೆ ಈಗ ದೆಹಲಿ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ.
ಹೌದು, ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್) ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿಯನ್ನು ಪರಿಹರಿಸಲು ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಿದೆ. ಎಂಸಿಡಿ ದತ್ತಾಂಶ ಮತ್ತು ಇತ್ತೀಚಿನ ಸಮೀಕ್ಷೆಗಳ ಪ್ರಕಾರ, ದೆಹಲಿಯೊಂದರಲ್ಲೇ ಸುಮಾರು 10 ಲಕ್ಷ ಬೀದಿ ನಾಯಿಗಳಿವೆ ಎಂದು ಅಂದಾಜಿಸಲಾಗಿದೆ. 2023 ರಲ್ಲಿ ಕೇವಲ 4.7 ಲಕ್ಷ ನಾಯಿಗಳಿಗೆ ಮಾತ್ರ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

ದೆಹಲಿ, ನೋಯ್ಡಾ ಮತ್ತು ಗುರುಗ್ರಾಮ್‌ಗಳಲ್ಲಿ ಆರು ವಾರಗಳಲ್ಲಿ 5,000 ಬೀದಿ ನಾಯಿಗಳನ್ನು ಸೆರೆಹಿಡಿಯುವ ಕಾರ್ಯವನ್ನು ಪ್ರಾರಂಭಿಸಲು ಸುಪ್ರೀಂ ಕೋರ್ಟ್ ಆದೇಶಿಸಿದೆ. ಹೆಚ್ಚಿನ ಅಪಾಯದ ವಸತಿ ಪ್ರದೇಶಗಳಿಗೆ ಆದ್ಯತೆ ನೀಡಬೇಕು. ಎಂಟು ವಾರಗಳಲ್ಲಿ ಸಾಕಷ್ಟು ಸಿಬ್ಬಂದಿ ಮತ್ತು ಸಿಸಿಟಿವಿ ಕಣ್ಗಾವಲು ಹೊಂದಿರುವ ಮೀಸಲಾದ ನಾಯಿ ಆಶ್ರಯಗಳನ್ನು ಸ್ಥಾಪಿಸಲು ಪೀಠವು ಆದೇಶಿಸಿದೆ.
ರಾಜಧಾನಿಯ ಸುತ್ತಮುತ್ತ ಇರುವ ಬೀದಿನಾಯಿಗಳನ್ನು ಸ್ಥಳಾಂತರಿಸಿ ಎಂದು ಕೆಲ ದಿನಗಳ ಹಿಂದೆ ಸುಪ್ರೀಂಕೋರ್ಟ್ ಹೇಳಿತ್ತು. ಈ ತೀರ್ಪು ಪ್ರಾಣಿ ಪ್ರಿಯರು ಹಾಗೂ ಎನ್‌ಜಿಒಗಳ ವಿರೋಧಕ್ಕೆ ಕಾರಣವಾಗಿದೆ. ಇದಕ್ಕೆ ಸಂಬಂಧಿಸಿಲಾದ ಅರ್ಜಿ ವಿಚಾರಣೆಯಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳು ಬೀದಿ ನಾಯಿಗಳ ಸಮಸ್ಯೆಯನ್ನು ಪರಿಶೀಲಿಸುವುದಾಗಿ ಹೇಳಿದ್ದಾರೆ.
ಅಡ್ಡಿಪಡಿಸಿದವರ ವಿರುದ್ಧ ಕ್ರಮದ ಎಚ್ಚರಿಕೆ: ಇದೇ ವೇಳೆ, ನಾಯಿ ದಾಳಿ ಪ್ರಕರಣಗಳನ್ನು ನಿಭಾಯಿಸಲು ಹಲವಾರು ನಿರ್ದೇಶನಗಳನ್ನು ನೀಡಿದ ಸುಪ್ರೀಂ, ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯು ಬೀದಿ ನಾಯಿಗಳನ್ನು ನಗರದಲ್ಲಿ ಹಿಡಿದು ಆಶ್ರಯ ತಾಣಕ್ಕೆ ಸಾಗಿಸಲು ಅಡ್ಡಿ ಪಡಿಸಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ. ಬೀದಿ ನಾಯಿಗಳನ್ನು ಶ್ವಾನ ಕೇಂದ್ರಗಳಲ್ಲಿ ಇರಿಸಬೇಕು ಹೊರತು ಬೀದಿಗಳು, ಜನವಸತಿ ಪ್ರದೇಶಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಬಿಡಬಾರದು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.

ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಬೀದಿನಾಯಿ ಕಾಟ: ಸುಪ್ರೀಂ ಆದೇಶ ರಾಜ್ಯದಲ್ಲಿ ಜಾರಿಗೆ ಶಾಸಕರ ಒತ್ತಾಯ
ಬೀದಿ ನಾಯಿಗಳಿಗೆ ಪ್ರತ್ಯೇಕ ವಸತಿ ವ್ಯವಸ್ಥೆ ಕಲ್ಪಿಸಿ ಎಂದು ಸುಪ್ರೀಂಕೋರ್ಟ್ ನೀಡಿದ ಆದೇಶವು, ಜರುಗುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಪ್ರತಿಧ್ವನಿಸಿತು. ಬೀದಿ ನಾಯಿಗಳ ಹಾವಳಿ ತಡೆಗೆ ಸರ್ಕಾರ ಕ್ರಮ ಕೈಗೊಳ್ಳುವ ಕುರಿತು ವಿಧಾನಸಭೆಯಲ್ಲಿ ಇಂದು ಜೆಡಿಎಸ್, ಬಿಜೆಪಿ ನಾಯಕರು ಧ್ವನಿ ಎತ್ತಿದರು.
ಶೂನ್ಯ ವೇಳೆಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್ ಬಾಬು ಅವರು ಈ ವಿಚಾರವನ್ನು ಪ್ರಸ್ತಾಪಿಸಿ, ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಸುಪ್ರೀಂಕೋರ್ಟ್ ಮೂರು ನಗರಗಳಿಗೆ ಸೀಮಿತವಾಗಿ ತೀರ್ಪು ನೀಡಿದೆ. ಅದನ್ನು ನಮ್ಮ ರಾಜ್ಯ ಸರ್ಕಾರವೂ ಅಳವಡಿಸಿಕೊಳ್ಳಬೇಕು. ಬೆಂಗಳೂರು ಸೇರಿದಂತೆ ಇತರ ಕಡೆಗಳಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಿಸಬೇಕು ಎಂದು ಆಗ್ರಹಿಸಿದರು.
2 ಲಕ್ಷ ಮಂದಿಗೆ ನಾಯಿ ಕಡಿತ: ಇದಕ್ಕೆ ಧ್ವನಿಗೂಡಿಸಿದ ಬಿಜೆಪಿ ಶಾಸಕ ಸುರೇಶ್ ಕುಮಾರ್ ಬೆಂಗಳೂರಿನಲ್ಲಿ 2 ಲಕ್ಷ ಜನರಿಗೆ ಬೀದಿ ನಾಯಿ ಕಡಿತವಾಗಿದೆ. 18 ಮಂದಿ ರೇಬಿಸ್‌ನಂತಹ ಮಾರಕ ರೋಗಗಳಿಗೆ ತುತ್ತಾಗಿದ್ದಾರೆ. ಶೀಘ್ರವೇ ನಾಯಿಗಳ ಹಾವಳಿ ವಿರುದ್ಧ ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇದೇ ವೇಳೆ, ಮಾಜಿ ಡಿಸಿಎಂ ಡಾ.ಸಿ.ಎನ್. ಅಶ್ವತ್ಥನಾರಾಯಣ ಮಾತನಾಡಿ, ಬೀದಿ ನಾಯಿಗಳಿಗೆ ಪ್ರತ್ಯೇಕ ವಸತಿ ವ್ಯವಸ್ಥೆ ಕಲ್ಪಿಸಲು ಪ್ರಾಣಿ ಪ್ರಿಯರು ಅಡ್ಡಪಡಿಸುತ್ತಾರೆ ಎಂದಾದರೆ ಬೀದಿ ನಾಯಿಗಳನ್ನು ಅವರ ಮನೆಯ ಮುಂದೆಯೇ ಬಿಡಬೇಕು. ಜನರಿಗೆ ಕಂಟಕವಾಗಿರುವ ವಿಷಯದ ಬಗ್ಗೆ ಆಡಳಿತ ದಿಟ್ಟ ಕ್ರಮ ಜರುಗಿಸಬೇಕು. ಬೆಂಗಳೂರು ಮಹಾನಗರ ಪಾಲಿಕೆಯಿಂದ (ಬಿಬಿಎಂಪಿ) ಚಿಕನ್ ಬಿರಿಯಾನಿ ಹಾಕುವ ಯೋಜನೆ ಪ್ರಸ್ತಾಪಿಸಿದೆ. ಇದರ ಬದಲಾಗಿ ಬೀದಿ ನಾಯಿಗಳ ಹಾವಳಿಯನ್ನು ಮೊದಲು ನಿಯಂತ್ರಿಸಬೇಕು ಎಂದು ಒತ್ತಾಯಿಸಿದರು.