ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್, ಪವಿತ್ರಾ ಗೌಡ ಮತ್ತು ಇತರರಿಗೆ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ಗುರುವಾರ (ಆ.14) ರದ್ದುಪಡಿಸಿದೆ.
ದರ್ಶನ್ ಮತ್ತು ಇತರರಿಗೆ ಕರ್ನಾಟಕ ಹೈಕೋರ್ಟ್ ಡಿಸೆಂಬರ್ 13, 2024ರಂದು ಜಾಮೀನು ನೀಡಿದ್ದನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ರಾಜ್ಯ ಸರ್ಕಾರದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಆರ್. ಮಹಾದೇವನ್ ಅವರ ಸುಪ್ರೀಂ ಕೋರ್ಟ್ ಪೀಠ, ಜುಲೈ 24, 2025ರಂದು ತೀರ್ಪು ಕಾಯ್ದಿರಿಸಿತ್ತು. ಈ ತೀರ್ಪನ್ನು ಗುರುವಾರ ಪ್ರಕಟಿಸಿದ್ದು, ದರ್ಶನ್, ಪವಿತ್ರಾ ಗೌಡ, ನಾಗರಾಜು ಆರ್, ಅನು ಕುಮಾರ್, ಲಕ್ಷ್ಮಣ್ ಎಂ. ಜಗದೀಶ್ ಮತ್ತು ಪ್ರದೂಶ್ ಅವರ ಜಾಮೀನು ರದ್ದುಪಡಿಸಿ ಆದೇಶಿಸಿದೆ.
ತೀರ್ಪು ಕಾಯ್ದಿರಿಸಿದ ಸಂದರ್ಭದಲ್ಲಿ, ದರ್ಶನ್ ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎಂಬ ಇಬ್ಬರು ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ದೃಢೀಕರಿಸಲು ಯಾವುದೇ ಪುರಾವೆಗಳಿವೆಯೇ? ಎಂದು ನ್ಯಾಯ ಪೀಠ ರಾಜ್ಯ ಸರ್ಕಾರವನ್ನು ಪ್ರಶ್ನಿಸಿತ್ತು. ಇದೇ ವೇಳೆ ದರ್ಶನ್ ಅವರಿಗೆ ಜಾಮೀನು ನೀಡುವಲ್ಲಿ ಹೈಕೋರ್ಟ್‌ನ ವಿವೇಚನೆಯ ಬಳಕೆಯ ಬಗ್ಗೆ ಪೀಠವು ಗಂಭೀರ ಕಳವಳಗಳನ್ನು ವ್ಯಕ್ತಪಡಿಸಿತ್ತು.
ಕರ್ನಾಟಕ ಹೈಕೋರ್ಟ್ ನಟ ದರ್ಶನ್ ಅವರಿಗೆ ಜಾಮೀನು ನೀಡುವಲ್ಲಿ ತನ್ನ ವಿವೇಚನೆಯನ್ನು ಬಳಸಿದ ರೀತಿ ತನಗೆ ಮನವರಿಕೆಯಾಗಿಲ್ಲ ಎಂದು ನ್ಯಾಯಾಧೀಶರು ಮೌಖಿಕವಾಗಿ ಹೇಳಿದ್ದರು. ಹೈಕೋರ್ಟ್ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಏಕೆ ಹಸ್ತಕ್ಷೇಪ ಮಾಡಬಾರದು? ಎಂಬುದಕ್ಕೆ ಉತ್ತಮ ಕಾರಣಗಳನ್ನು ನೀಡುವಂತೆ ದರ್ಶನ್ ಪರ ವಕೀಲರನ್ನು ಮೌಖಿಕವಾಗಿ ಪ್ರಶ್ನಿಸಿದ್ದರು.
ಹೈಕೋರ್ಟ್ ಆರೋಪಿಗಳ ಪರವಾಗಿ, ಅವರನ್ನು ಖುಲಾಸೆಗೊಳಿಸುವಂತ ಆದೇಶ ನೀಡಿದೆ ಎಂದು ನ್ಯಾಯಮೂರ್ತಿ ಜೆ.ಬಿ ಪಾರ್ದಿವಾಲಾ ಅವರು ಮೌಖಿವಾಗಿ ಹೇಳಿದ್ದರು.
ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿಗಳಾದ ದರ್ಶನ್, ಪವಿತ್ರಾ ಗೌಡ, ಅನು ಕುಮಾರ್, ಲಕ್ಷ್ಮಣ್ ಎಂ, ವಿ ವಿನಯ್, ಜಗದೀಶ್, ಪ್ರದೂಷ್ ಎಸ್ ರಾವ್ ಮತ್ತು ನಾಗರಾಜು ಆರ್ ಜಾಮೀನು ಕೋರಿ ಆರಂಭದಲ್ಲಿ ಬೆಂಗಳೂರಿನ ಸೆಷನ್ಸ್ ಕೋರ್ಟ್ ಮೊರೆ ಹೋಗಿದ್ದರು. ಸೆಷನ್ಸ್ ಕೋರ್ಟ್ ಜಾಮೀನು ನೀಡಲು ನಿರಾಕರಿಸಿದಾಗ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು.