ದೆಹಲಿ: ಜೂಜಾಟ, ಬೆಟ್ಟಿಂಗ್ ಸೇರಿದಂತೆ ಆನ್‌ಲೈನ್ ಗೇಮಿಂಗ್‌ನಿಂದ ಪ್ರತಿ ವರ್ಷ ದೇಶದಲ್ಲಿ ಅಂದಾಜು 45 ಕೋಟಿ ಜನರು ಸುಮಾರು 20,000 ಕೋಟಿ ರೂ.ಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎನ್ನು ಆಘಾತಕಾರಿ ಮಾಹಿತಿಯನ್ನು ಸರ್ಕಾರಿ ಮೂಲಗಳು ಬಹಿರಂಗಪಡಿಸಿವೆ. ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆ 2025 ಅನ್ನು ಲೋಕಸಭೆ ಅಂಗೀಕರಿಸುವ ಮೊದಲು ಈ ಬಗ್ಗೆ ಮಾಹಿತಿ ನೀಡಲಾಯಿತು. ಆನ್‌ಲೈನ್ ಗೇಮಿಂಗ್ ವೇದಿಕೆಗಳನ್ನು ನಿಯಂತ್ರಿಸುವ ಉದ್ದೇಶದಿಂದ ಮಂಡಿಸಲಾದ ಆನ್‌ಲೈನ್ ಗೇಮಿಂಗ್ ಮಸೂದೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಆನ್‌ಲೈನ್ ಗೇಮಿಂಗ್ ಉತ್ತೇಜನ ಮತ್ತು ನಿಯಂತ್ರಣ ಮಸೂದೆ-2025 ಅನ್ನು ಸಂಸತ್‌ನಲ್ಲಿ ಮಂಡಿಸಲಾಯಿತು.
ಆನ್‌ಲೈನ್ ಬೆಟ್ಟಿಂಗ್ ಅನ್ನು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸುವುದು, ಹಣ ಆಧಾರಿತ ಎಲ್ಲ ಆನ್‌ಲೈನ್ ಗೇಮ್‌ಗಳನ್ನು ನಿಷೇಧಿಸುವುದು, ಆನ್‌ಲೈನ್ ಗೇಮಿಂಗ್‌ಗೆ ಸಂಬಂಧಿಸಿದ ಹಣಕಾಸು ವ್ಯವಹಾರ ನಡೆಸಲು ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಅನುಮತಿ ನಿಷೇಧಿಸುವ ಗುರಿಯನ್ನು ಇದು ಹೊಂದಿದೆ.
ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಮಂಡಿಸಿದ ಹೊಸ ಮಸೂದೆಯು, ಜೂಜಾಟದ ಅಪ್ಲಿಕೇಶನ್ (Gambling apps)ಗೆ ದಂಡ ವಿಧಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಒಳಗೊಂಡಿದೆ. ಈ ಪ್ರಸ್ತಾವಿತ ಕಾನೂನು ಇ-ಸ್ಪೋರ್ಟ್ಸ್ ಮತ್ತು ಹೊರಾಂಗಣ ಆಟಗಳನ್ನು ಪ್ರೋತ್ಸಾಹಿಸಲೂ ಪ್ರಯತ್ನಿಸುತ್ತದೆ ಎಂದು ಮೂಲಗಳು ತಿಳಿಸಿವೆ.