ನವದೆಹಲಿ: ದೇಶದ ಶೇ. 40ರಷ್ಟು ಮುಖ್ಯಮಂತ್ರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳಿದ್ದು, ಶೇ. 33ರಷ್ಟು ಮಂದಿ ಕೊಲೆಯತ್ನ, ಅಪಹರಣ, ಲಂಚ ಮತ್ತು ಕ್ರಿಮಿನಲ್ ಬೆದರಿಕೆಯಂತಹ ಗಂಭೀರ ಅಪರಾಧಗಳಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿದ್ದಾರೆ.ಎಂಬ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಹಾಗೂ ರಾಷ್ಟ್ರೀಯ ಚುನಾವಣಾ ಕಾವಲು ಸಂಸ್ಥೆ ಬಿಡುಗಡೆ ಮಾಡಿದ ವರದಿ ಬೆಳಕಿಗೆ ಬಂದಿದೆ.
ವರದಿ ಪ್ರಕಾರ ಪ್ರಸ್ತುತ ದೇಶದ 30 ಮುಖ್ಯಮಂತ್ರಿಗಳಲ್ಲಿ 12 ಮಂದಿ (ಶೇ.40) ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿ ಪಟ್ಟಿಯಲ್ಲಿದ್ದಾರೆ. ಇವರಲ್ಲಿ 10 ಮಂದಿ (ಶೇ.33) ಕೊಲೆಯತ್ನ, ಅಪಹರಣ, ಲಂಚ ಹಾಗೂ ಕ್ರಿಮಿನಲ್ ಬೆದರಿಕೆಯಂತಹ ಗಂಭೀರ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

ಪ್ರಮುಖ ಸಿಎಂ ಗಳ ಮೇಲಿನ ಪ್ರಕರಣಗಳು:
- ತೆಲಂಗಾಣ ಸಿಎಂ ರೇವಂತ್ ರೆಡ್ಡಿ – 89 ಪ್ರಕರಣಗಳು
- ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ – 47 ಪ್ರಕರಣಗಳು
- ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು – 19 ಪ್ರಕರಣಗಳು
- ಕರ್ನಾಟಕ ಸಿಎಂ ಸಿದ್ದರಾಮಯ್ಯ – 13 ಪ್ರಕರಣಗಳು
- ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ – 5 ಪ್ರಕರಣಗಳು
- ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ – 4 ಪ್ರಕರಣಗಳು
- ಹಿಮಾಚಲ ಸಿಎಂ ಸುಖ್ವಿಂದರ್ ಸಿಂಗ್ ಸುಖು – 4 ಪ್ರಕರಣಗಳು
- ಕೇರಳ ಸಿಎಂ ಪಿಣರಾಯಿ ವಿಜಯನ್ – 2 ಪ್ರಕರಣಗಳು
- ಪಂಜಾಬ್ ಸಿಎಂ ಭಗವಂತ್ ಮಾನ್ – 1 ಪ್ರಕರಣ
ಹೊಸ ಮಸೂದೆ ವಿವಾದ
ಇತ್ತ, ಕೇಂದ್ರ ಸರ್ಕಾರವು ಇತ್ತೀಚೆಗೆ ಮಂಡಿಸಿರುವ ಮಸೂದೆ ಪ್ರಕಾರ, ಪ್ರಧಾನ ಮಂತ್ರಿ, ಮುಖ್ಯಮಂತ್ರಿಗಳು ಹಾಗೂ ಸಚಿವರು ಗಂಭೀರ ಅಪರಾಧ ಪ್ರಕರಣಗಳಲ್ಲಿ ಕನಿಷ್ಠ 5 ವರ್ಷ ಜೈಲು ಶಿಕ್ಷೆಗೆ ಗುರಿಯಾಗುವ ಆರೋಪ ಹೊಂದಿದ್ದರೆ ಮತ್ತು 30 ದಿನಗಳಿಗಿಂತ ಹೆಚ್ಚು ಕಾಲ ಬಂಧನದಲ್ಲಿದ್ದರೆ, ಅವರನ್ನು ವಜಾಗೊಳಿಸುವ ಅವಕಾಶ ಕಲ್ಪಿಸಲಾಗಿದೆ.
ವಿರೋಧ ಪಕ್ಷಗಳ ಟೀಕೆ
ಈ ಮಸೂದೆಗೆ ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದು ಬಿಜೆಪಿಯೇತರ ಆಡಳಿತದ ರಾಜ್ಯಗಳನ್ನು ಅಸ್ಥಿರಗೊಳಿಸಲು ಮಾಡಿರುವ ಪ್ರಯತ್ನ ಎಂದು ಆರೋಪಿಸಿದೆ.
ಕಾಂಗ್ರೆಸ್ ಸಂಸದ ಅಭಿಷೇಕ್ ಮನು ಸಿಂಘ್ವಿ ತಮ್ಮ ಪ್ರತಿಕ್ರಿಯೆಯಲ್ಲಿ ಚುನಾವಣೆಯಲ್ಲಿ ಸೋಲಿಸಲು ಸಾಧ್ಯವಾಗದಿರುವ ನಾಯಕರನ್ನು ಅನಿಯಂತ್ರಿತ ಬಂಧನದ ಮೂಲಕ ವಜಾಗೊಳಿಸುವುದು ಕೇಂದ್ರದ ಉದ್ದೇಶ ಎಂದು ಟೀಕಿಸಿದ್ದಾರೆ.
ಒಟ್ಟಿನಲ್ಲಿ, ದೇಶದ ಸಿಎಂ ಗಳಲ್ಲಿ ಬಹುಮಂದಿ ಗಂಭೀರ ಅಪರಾಧ ಪ್ರಕರಣಗಳಲ್ಲಿ ಆರೋಪಿ ಪಟ್ಟಿಯಲ್ಲಿರುವುದು ಹಾಗೂ ಈ ನಡುವೆ ಕೇಂದ್ರ ಮಂಡಿಸಿರುವ ಮಸೂದೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.