ಬೀಜಿಂಗ್: ಚೀನಾದ ಟಿಯಾಂಜಿನ್‌ನಲ್ಲಿ ನಡೆದ 25ನೇ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯ ಸಮಗ್ರ ಅಧಿವೇಶನದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಯೋತ್ಪಾದನೆಯ ವಿರುದ್ಧ ಗಟ್ಟಿಯಾದ ಸಂದೇಶವನ್ನು ನೀಡಿದ್ದಾರೆ. ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಉಪಸ್ಥಿತರಿದ್ದ ಸಭೆಯಲ್ಲಿ, “ಭಯೋತ್ಪಾದಕ ಸಂಘಟನೆಗಳಿಗೆ ಕೆಲವು ರಾಷ್ಟ್ರಗಳು ನೀಡುತ್ತಿರುವ ಬಹಿರಂಗ ಬೆಂಬಲವನ್ನು ಇನ್ನು ಮುಂದೆ ಸಹಿಸಿಕೊಳ್ಳಲಾಗುವುದಿಲ್ಲ” ಎಂದು ಪ್ರಧಾನಿ ಮೋದಿ ಕಟುವಾಗಿ ಪ್ರಶ್ನಿಸಿದರು.
ಮೋದಿ ಅವರು, “ಭಯೋತ್ಪಾದನೆ ಯಾವುದೇ ಒಂದು ದೇಶದ ಭದ್ರತೆಗೆ ಮಾತ್ರವಲ್ಲ, ಇಡೀ ಮಾನವೀಯತೆಗೆ ಬೆದರಿಕೆಯಾಗಿದೆ. ಕಳೆದ ನಾಲ್ಕು ದಶಕಗಳಿಂದ ಭಾರತ ಭಯೋತ್ಪಾದನೆಯ ಹೊಡೆತವನ್ನು ಅನುಭವಿಸುತ್ತಿದೆ. ಇತ್ತೀಚೆಗೆ ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಮತ್ತೆ ಭಯೋತ್ಪಾದನೆಯ ಕೆಟ್ಟ ಮುಖವನ್ನು ತೋರಿಸಿದೆ” ಎಂದು ಹೇಳಿದರು.
ಈ ಸಂದರ್ಭ ಭಾರತಕ್ಕೆ ಬೆಂಬಲವಾಗಿ ನಿಂತ ಸ್ನೇಹಪರ ರಾಷ್ಟ್ರಗಳಿಗೆ ಅವರು ಧನ್ಯವಾದ ಅರ್ಪಿಸಿದರು. ಅಲ್-ಖೈದಾ ಹಾಗೂ ಇತರ ಸಂಯೋಜಿತ ಉಗ್ರ ಸಂಘಟನೆಗಳ ವಿರುದ್ಧ ಇತ್ತೀಚೆಗೆ ಜಂಟಿ ಮಾಹಿತಿ ಅಭಿಯಾನ ಕೈಗೊಂಡಿರುವುದನ್ನು ಉಲ್ಲೇಖಿಸಿದ ಮೋದಿ, ಎಸ್‌ಸಿಒದ ಪ್ರಾದೇಶಿಕ ಭಯೋತ್ಪಾದನಾ ವಿರೋಧಿ ರಚನೆ (RATS) ಅಡಿಯಲ್ಲಿ ಭಾರತವು ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಗಳಲ್ಲಿ ಮುಂಚೂಣಿಯಲ್ಲಿದೆ ಎಂದು ಹೇಳಿದರು.
“ಭಯೋತ್ಪಾದನೆಗೆ ಯಾವ ರೂಪ, ಯಾವ ಬಣ್ಣ ಇದ್ದರೂ ನಾವು ಅದನ್ನು ಒಟ್ಟಾಗಿ ವಿರೋಧಿಸಬೇಕು. ಮಾನವೀಯತೆಯ ರಕ್ಷಣೆಯೇ ನಮ್ಮೆಲ್ಲರ ಮೊದಲ ಕರ್ತವ್ಯ” ಎಂದು ಮೋದಿ ಶೃಂಗಸಭೆಯಲ್ಲಿ ಸ್ಪಷ್ಟ ಸಂದೇಶ ನೀಡಿದರು.
ಸಭೆಯ ಹೊರತಾಗಿ ಪ್ರಧಾನಮಂತ್ರಿ ಮೋದಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ವಿಶೇಷ ಮಾತುಕತೆ ನಡೆಸಿದರು.