ನವದೆಹಲಿ, ಸೆಪ್ಟೆಂಬರ್ 09: ಭಾರತದ ಉಪ ರಾಷ್ಟ್ರಪತಿ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಬಿಜೆಪಿ ನೇತೃತ್ವದ ಎನ್ಡಿಎ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇಂಡಿಯಾ ಮೈತ್ರಿ ಕೂಟದ ಅಭ್ಯರ್ಥಿ ಬಿ. ಸುದರ್ಶನ ರೆಡ್ಡಿ ವಿರುದ್ಧ 452 ಮತಗಳ ಅಂತರದಲ್ಲಿ ಗೆಲುವು ದಾಖಲಿಸಿ ನೂತನ ಉಪ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ.
ಒಟ್ಟು 781 ಮತಗಳ ಪೈಕಿ 768 ಮತಗಳು ಚಲಾವಣೆಯಾದರೆ, ಎನ್ಡಿಎ ಅಭ್ಯರ್ಥಿ ರಾಧಾಕೃಷ್ಣನ್ ಪರವಾಗಿ 452 ಮತಗಳು ಬಿದ್ದಿವೆ. ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಗೆಲುವಿಗೆ ಕನಿಷ್ಠ 377 ಮತಗಳ ಅಗತ್ಯವಿದ್ದರೆ, ನಿರೀಕ್ಷೆಗೂ ಮೀರಿ ಹೆಚ್ಚಿನ ಮತಗಳನ್ನು ಪಡೆದು ರಾಧಾಕೃಷ್ಣನ್ ಅಭೂತಪೂರ್ವ ಜಯ ಸಾಧಿಸಿದ್ದಾರೆ.
ಬಿಜೆಡಿ ಹಾಗೂ ಬಿಆರ್ಎಸ್ ಪಕ್ಷಗಳು ಮತದಾನದಿಂದ ದೂರ ಉಳಿದಿದ್ದರೆ, ಒಟ್ಟು 13 ಸಂಸದರು ಮತದಾನದಲ್ಲಿ ಭಾಗವಹಿಸಿರಲಿಲ್ಲ. ಇಂಡಿಯಾ ಒಕ್ಕೂಟದ ಸಂಸದರಲ್ಲಿ ಕೆಲವರು ಎನ್ಡಿಎ ಅಭ್ಯರ್ಥಿ ಪರ ಮತ ಚಲಾಯಿಸಿದ ಪರಿಣಾಮ, ವಿರೋಧ ಪಕ್ಷಕ್ಕೆ ಭಾರಿ ಮುಖಭಂಗ ಉಂಟಾಗಿದೆ.
ಬೆಂಬಲ ನೀಡಿದ ಪಕ್ಷಗಳು:
ರಾಧಾಕೃಷ್ಣನ್ ಪರವಾಗಿ ಬಿಜೆಪಿ, ಜೆಡಿಯು, ಶಿವಸೇನೆ, ಟಿಡಿಪಿ, ಎನ್ಸಿಪಿ, ಎಜಿಪಿ, ಲೋಕ ಜನಶಕ್ತಿ ಪಕ್ಷ, ಆರ್ಎಲ್ಡಿ, ಜೆಡಿಎಸ್, ಎಐಎಡಿಎಂಕೆ ಸೇರಿದಂತೆ ಹಲವು ಮೈತ್ರಿಕೂಟಗಳು ಮತ ಚಲಾಯಿಸಿದವು. ಜೊತೆಗೆ ವೈಎಸ್ಆರ್ಸಿಪಿ ಕೂಡ ಎನ್ಡಿಎ ಅಭ್ಯರ್ಥಿಗೆ ಬೆಂಬಲ ನೀಡಿತು.
ಮತ್ತೊಂದೆಡೆ, ಸುದರ್ಶನ ರೆಡ್ಡಿಗೆ ಕಾಂಗ್ರೆಸ್, ಡಿಎಂಕೆ, ಎಸ್ಪಿ, ಟಿಎಂಸಿ, ಜೆಎಂಎಂ, ಎಎಪಿ, ಆರ್ಜೆಡಿ, ಶಿವಸೇನೆ (ಯುಬಿಟಿ), ಎಡಪಕ್ಷಗಳು ಹಾಗೂ ಇತರರು ಬೆಂಬಲ ನೀಡಿದ್ದರು.
ಮತ ಎಣಿಕೆ ಪ್ರಕ್ರಿಯೆ:
ಬೆಳಗ್ಗೆ 10 ಗಂಟೆಗೆ ಆರಂಭವಾದ ಮತದಾನ ಸಂಜೆ 5ಕ್ಕೆ ಮುಕ್ತಾಯವಾಯಿತು. ಸಂಜೆ 6ರಿಂದ ಮತ ಎಣಿಕೆ ಆರಂಭವಾಗಿ, ರಾತ್ರಿ 7.30ಕ್ಕೆ ಫಲಿತಾಂಶವನ್ನು ರಾಜ್ಯಸಭಾ ಪ್ರಧಾನ ಕಾರ್ಯದರ್ಶಿ ಪಿಸಿ ಮೋದಿ ಘೋಷಿಸಿದರು.
ಈಗಾಗಲೇ ಉಪ ರಾಷ್ಟ್ರಪತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಜಗದೀಪ್ ಧನ್ಕರ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ರಾಧಾಕೃಷ್ಣನ್ ಭರ್ಜರಿ ಬಹುಮತದೊಂದಿಗೆ ಗೆಲುವು ಸಾಧಿಸಿದರು.